Round Table India
You Are Reading
ಆದಿವಾಸಿಗಳ ಸಾಕ್ಷಿಪ್ರಜ್ಞೆ ಜೇನುಕುರುಬರ ಸೋಮಣ್ಣ
0
Assertion

ಆದಿವಾಸಿಗಳ ಸಾಕ್ಷಿಪ್ರಜ್ಞೆ ಜೇನುಕುರುಬರ ಸೋಮಣ್ಣ

somanna2

 

ಜನರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಿತಿ & ಡಾ. ಎ ಎಸ್ ಪ್ರಭಾಕರ

 

ಆತ್ಮೀಯರೇ,

ನಾಡಿನ ತಳಸಮುದಾಯಗಳ ಸಾಕ್ಷಿಪ್ರಜ್ಞೆಯೊಬ್ಬರೆಂದೇ ಹೇಳಬಹುದಾದ *ಜೇನುಕುರುಬರ ಸೋಮಣ್ಣ* ಅವರಿಗೆ ಲಾಭಿಕೋರ, ಭ್ರಷ್ಟವ್ಯವಸ್ಥೆಯು ಅನ್ಯಾಯವೆಸಗಿ, ಅಪಮಾನಿಸಿದೆ. ಈ ಸಲದ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಆದವರ ಪಟ್ಟಿಯಲ್ಲಿ ಆದಿವಾಸಿ ಸಾಧಕ, ಅವಿರತ ಹೋರಾಟಗಾರ, ಅದ್ಭುತ ಪ್ರತಿಭಾವಂತ ಸೋಮಣ್ಣ ಅವರ ಹೆಸರಿತ್ತು. ಇದನ್ನು ನೋಡಿ ನಾಡಿನ ನೂರಾರು ಪ್ರಜ್ಞಾವಂತ ಮನಸುಗಳು ಸಂತಸಗೊಂಡು ಸೋಮಣ್ಣ ಅವರಿಗೆ ಅಭಿನಂದನೆ ಸಲ್ಲಿಸಿದವು. ಅದರೆ, ಕಾಣದ ಕೈಗಳು ಇದ್ದಕ್ಕಿದ್ದಂತೆ ಸೋಮಣ್ಣ ಹೆಸರನ್ನು ಪಟ್ಟಿಯಿಂದ ತೆಗೆದುಹಾಕಿದ್ದು, ಅವರಿಗೆ ಪ್ರಶಸ್ತಿ ನೀಡದೇ ಹೋದದ್ದು ತೀರಾ ಆಘಾತಕಾರಿಯಾಗಿದೆ.
ಹೆಗ್ಗಡದೇವನಕೋಟೆಯ ಮತ್ತ ಹಾಡಿಯ ಜೇನುಕುರುಬರ ಸಮುದಾಯದ ಸೋಮಣ್ಣ ಯಾವ ಪ್ರಶಸ್ತಿ ಬಯಸಿದವರಲ್ಲ, ಅದಕ್ಕಾಗಿ ಕೆಲಸ ಮಾಡಿದವರಲ್ಲ, ಅದಕ್ಕಾಗಿ ಲಾಭಿಯನ್ನೂ ಮಾಡಿದವರಲ್ಲ. ಆದರೆ, ಇಂತಹ ತಳಸಮುದಾಯದ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡಿ ತನ್ನ ಬಗೆಗೆ ಉತ್ತಮ ಅಭಿಪ್ರಾಯ ರೂಪಿಸಿಕೊಳ್ಳಬಯಸುವ ಸರ್ಕಾರವೇ ಸೋಮಣ್ಣ ಅವರ ಹೆಸರನ್ನು ಘೋಷಿಸಿ ಕೊನೆಗೆ ಕಿತ್ತುಹಾಕುವ ಮೂಲಕ ಎಲ್ಲಾ ತಳಸಮುದಾಯಗಳನ್ನು ಹಾಗೂ ನಾಡಿನ ಪ್ರಜ್ಞಾವಂತರನ್ನು ಅಪಮಾನಿಸುವ ಕೆಲಸ ಮಾಡಿರುವುದು ಅತ್ಯಂತ ನೋವಿನ ವಿಷಯ.

somanna2

 

ಈ ಸಂದರ್ಭದಲ್ಲಿ ಇಂತಹ ಪ್ರಶಸ್ತಿ ಪುರಸ್ಕಾರಗಳ ಔಚಿತ್ಯವೇನೆಂದು ಕೇಳಬೇಕಿದೆ. ಇವುಗಳ ಮಾನದಂಡವೇನೆಂದು ಕೇಳಬೇಕಿದೆ.

ನಮ್ಮ ಜೇನುಕುರುಬರ ಸೋಮಣ್ಣ ಅವರಿಗೆ ಈ ಲಾಭಿಕೋರ ವ್ಯವಸ್ಥೆಯಿಂದ ಆಗಿರುವ ಅನ್ಯಾಯ ಹಾಗೂ ಅಪಮಾನಕ್ಕೆ ಒಂದು ಸಾತ್ವಿಕ ಪ್ರತಿರೋಧ ಸೂಚಿಸಿ ಸೋಮಣ್ಣನವರಂತಹ ಚೇತನವೊಂದಕ್ಕೆ ನಮ್ಮ ಬೆಂಬಲ ಸೂಚಿಸಬೇಕಿದೆ. ಇದಕ್ಕಾಗಿ *ಇದೇ ಬರುವ ನವೆಂಬರ್12 ನೇ ತಾರೀಖಿನಂದು ಸೋಮಣ್ಣ ಅವರ ಹಾಡಿ ಇರುವ ಹೆಗ್ಗಡದೇವನ ಕೋಟೆಗೆ ನಾವೆಲ್ಲಾ ಹೋಗಿ ಸೋಮಣ್ಣ ಅವರಿಗೆ ಅವರ ಹಾಡಿಗಳ ಜನರ ಸಮ್ಮುಖದಲ್ಲಿ ಜನರಾಜ್ಯೋತ್ಸವ ಪ್ರಶಸ್ತಿ ನೀಡೋಣ.*

 ಇದಕ್ಕಾಗಿ ನಾಡಿನಾದ್ಯಂತ ಇರುವ ಸಹೃದಯರು, ಪ್ರಜ್ಞಾವಂತರು ನೀಡುವ ದೇಣಿಗೆಯಿಂದಲೇ ಒಂದು ಪ್ರಶಸ್ತಿ ಮೊತ್ತ ಹಾಗೂ ಫಲಕಗಳನ್ನು ನೀಡಿ ಈ ಹೋರಾಟಗಾರನನ್ನು ಗೌರವಿಸೋಣ; ಆ ಮೂಲಕ ಆದಿವಾಸಿ ಜನರ ಬದುಕನ್ನು ಸುಸ್ಥಿರಗೊಳಿಸಲು ತನ್ನ ಜೀವನ ಮುಡುಪಿಟ್ಟಿರುವ ಸೋಮಣ್ಣ ಅವರ ಪ್ರಯತ್ನಗಳ ಜೊತೆಯಾಗಿ ನಿಲ್ಲೋಣ. 

*ಇದಕ್ಕಾಗಿ, ನಾವೆಲ್ಲಾ ವೈಯಕ್ತಿಕವಾಗಿ ಹಾಗೂ ನಮ್ಮ ಆಪ್ತಲಯದಿಂದ ಈ ಜನರಾಜ್ಯೋತ್ಸ ಪ್ರಶಸ್ತಿಗಾಗಿ ತಲಾ ಗರಿಷ್ಠ ಒಂದು ಸಾವಿರ ರೂಪಾಯಿ, ಕನಿಷ್ಠ ಎಷ್ಟಾದರೂ ಆದೀತು – ದೇಣಿಗೆ ಸಂಗ್ರಹಿಸಿ ಈ ಪ್ರಶಸ್ತಿ ನೀಡೋಣ*. ಈ ಪ್ರಯತ್ನದಲ್ಲಿ ನಿಮ್ಮ ಕೈಜೋಡಿಸಿ, ಬನ್ನಿ ಜೊತೆಯಾಗಿ.

 *ಸೋಮಣ್ಣ ಅವರಿಗೆ ನೀಡುವ ಜನರಾಜ್ಯೋತ್ಸವ ಪ್ರಶಸ್ತಿಗಾಗಿ ಕೆಳಕಂಡ ಬ್ಯಾಂಕ್ ಖಾತೆಗೆ ನಿಮ್ಮ ದೇಣಿಗೆ ನೀಡಲು ಕೋರಿಕೆ :

ಖಾತೆ ಹೆಸರು: B.R.Bhaskar Prasad
ಅಕೌಂಟ್ ನಂಬರ್: 20081830969
IFSC: SBIN0013284
Banch- ನೆಲಮಂಗಲ

 ಆಯೋಜನೆ: ಜನರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಿತಿ

~~~~~

*ಆದಿವಾಸಿಗಳ ಸಾಕ್ಷಿಪ್ರಜ್ಞೆ ಜೇನುಕುರುಬರ ಸೋಮಣ್ಣನಿಗೆ ಆಗಿರುವ ಅನ್ಯಾಯ, ಅವಮಾನ ನಮಗೆಲ್ಲರಿಗೂ ಆಗಿರುವ ಅನ್ಯಾಯ, ಅವಮಾನ* 

 

“ರಾಜಕಾರಣ ಸೌಂದರ್ಯ ಕಲ್ಪನೆಯನ್ನು ರೂಪಿಸಬಲ್ಲದು, ಅಧಿಕಾರ ಕೂಡ ಚಂದವಾಗಿಯೇ ಕಾಣಿಸುತ್ತದೆ. ಅದರಲ್ಲೂ ಎಣಿಯೇ ಇಲ್ಲದ ಅಧಿಕಾರ”
              ಡಾ. ರಾಮಮನೋಹರ ಲೋಹಿಯಾ

ಗೆಳೆಯರೇ,

somanna1ಕರ್ನಾಟಕ ಸರ್ಕಾರ ಪ್ರತಿವರ್ಷ ರಾಜ್ಯೋತ್ಸವ ಪ್ರಶಸ್ತಿಯನ್ನು ರಾಜ್ಯದ ವಿವಿಧ ಕ್ಷೇತ್ರಗಳ ಗಣ್ಯರಿಗೆ ನೀಡುತ್ತಾ ಬಂದಿದೆ. ಈ ಪ್ರಶಸ್ತಿಗಳನ್ನು ನೀಡುವ ಸರ್ಕಾರ ಯಾವ ಯಾವ ಮಾನದಂಡಗಳನ್ನ ಅನುಸರಿಸಿ ಪ್ರಶಸ್ತಿ ನೀಡುತ್ತದೆ ಎಂಬುದು ಇನ್ನೂ ನಿಗೂಢ. ಸರ್ಕಾರ ಈ ವರ್ಷ ಪ್ರಕಟಿಸಿದ ರಾಜ್ಯೋತ್ಸವ ಪುರಸ್ಕೃತರ ಮೊದಲ ಪಟ್ಟಿಯಲ್ಲಿ (ಸರ್ಕಾರಿ ಆದೇಶ ಸಂಖ್ಯೆ: ಕಸಂವಾ:341;ಕಸಧ;2016, ದಿ: 28.10.2016 ರಂದು) ಜೇನುಕುರುಬರ ಮುಖಂಡ ಹೆಗ್ಗಡದೇವನ ಕೋಟೆಯ *ಮತ್ತ ಹಾಡಿಯ ಸೋಮಣ್ಣ* ಅವರ ಹೆಸರಿತ್ತು. ಇದನ್ನು ನೋಡಿ ಸೋಮಣ್ಣ ಅವರನ್ನು ಎರಡು ದಶಕಗಳಿಂದ ಬಲ್ಲ ನನ್ನಂತಹ ಅನೇಕರಿಗೆ ಅಪಾರ ಸಂತೋಷವೂ ಆಯ್ತು. ದೃಶ್ಯ ಮಾಧ್ಯಮಗಳು ಸೋಮಣ್ಣ ಅವರ ಕುರಿತು ಬ್ರೇಕಿಂಗ್ ನ್ಯೂಸ್ ಸಹ ಮಾಡಿದವು. ಸೋಮಣ್ಣಗೆ ಪ್ರಶಸ್ತಿ ಬಂದ ವಿಷಯ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಪಸರಿಸಿತು. 30ನೇ ತಾರೀಕು ಕನ್ನಡ ಸಂಸ್ಕೃತಿ ಇಲಾಖೆಯ ಅಧಿಕಾರಿಯೊಬ್ಬರು ಸೋಮಣ್ಣಗೆ ದೂರವಾಣಿ ಕರೆ ಮಾಡಿ, ಅವರ ಜೀವನ ವಿವರಗಳನ್ನು ಮೇಲ್ ಮುಖಾಂತರ ತರಿಸಿಕೊಂಡಿದ್ದಾರೆ. ಆದರೆ, ಅಕ್ಟೋಬರ್ 31ರ ದಿನಪತ್ರಿಕೆಗಳಲ್ಲಿ ಪ್ರಕಟವಾದ ಪ್ರಶಸ್ತಿ ಪುರಸ್ಕೃತರ ಪಟ್ಟಿಯಲ್ಲಿ ಸೋಮಣ್ಣನವರ ಹೆಸರೇ ಇರಲಿಲ್ಲ. ಅನುಮಾನದಿಂದ ವಿಚಾರಿಸಲಾಗಿ ಮುಖ್ಯಮಂತ್ರಿಗಳ ಕಛೇರಿಯಿಂದಾಗಲಿ, ಕನ್ನಡ ಸಂಸ್ಕೃತಿ ಇಲಾಖೆಯಿಂದಾಗಲಿ ಯಾವ ಸರಿಯಾದ ಉತ್ತರ ಸಿಕ್ಕಿಲ್ಲ. ಇದರಿಂದ ಆಘಾತಗೊಂಡ ಸೋಮಣ್ಣನವರ ಹಿತೈಷಿಗಳು ಮತ್ತು ಗೆಳೆಯರು ಕನ್ನಡ ಸಂಸ್ಕೃತಿ ಇಲಾಖೆಯವರಿಗೆ ಜೋರು ಮಾಡಿದಾಗ ‘ಸೋಮಣ್ಣ ಎಂಬ ಹೆಸರಿನ ಒಬ್ಬ ವ್ಯಕ್ತಿಗೆ ಹಿಂದಿನ ವರ್ಷ ಪ್ರಶಸ್ತಿ ಕೊಡಲಾಗಿದೆ. ಆ ಹೆಸರೇ ಈಗ ಮತ್ತೆ ಪಟ್ಟಿಯಲ್ಲಿ ಕಣ್ತಪ್ಪಿನಿಂದಾಗಿ ಪ್ರಕಟವಾಗಿದೆ’ ಎಂಬ ಹಸಿಸುಳ್ಳನ್ನು ಕನ್ನಡ ಸಂಸ್ಕೃತಿ ಇಲಾಖೆಯವರು ನೀಡಿದ್ದಾರೆ. ಜೊತೆಗೆ, ಪ್ರಶಸ್ತಿ ಪುರಸ್ಕೃತರ ಹೊಸ ಪಟ್ಟಿಯನ್ನು ನೀಡಿ ಕೈ ತೊಳೆದುಕೊಂಡಿದ್ದಾರೆ. ಪ್ರಶಸ್ತಿ ಪುರಸ್ಕೃತರ ಹಳೆಯ ಪಟ್ಟಿಯಲ್ಲಿ ಕ್ರಮಸಂಖ್ಯೆ 36 ರಲ್ಲಿ ಸೋಮಣ್ಣ – ಹೆಗ್ಗಡದೇವನಕೋಟೆ ಹೆಸರಿತ್ತು, ಹೊಸ ಪಟ್ಟಿಯಲ್ಲಿ ಅದೇ ಕ್ರಮಸಂಖ್ಯೆಯಲ್ಲಿ ಬೀದರಿನ ಯಾವುದೂ ‘ಟೀಂ ಯುವ’ ಎಂಬ ಸಂಸ್ಥೆಗೆ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ.

ಸೋಮಣ್ಣ ಮತ್ತು ಅವರನ್ನು ಬಲ್ಲ ನನ್ನಂತಹ ಅನೇಕರಿಗೆ ಸಹಜವಾಗಿಯೇ ನೋವಾಗಿದೆ. ಆದರೆ, ಸೋಮಣ್ಣ ಫೋನ್ ಮಾಡಿ ನಮ್ಮನ್ನೇ ಸಮಾಧಾನಪಡಿಸಿದರು! ‘ಸಾ, ನಮ್ಮ ಹಾಡಿತಾವ ಬಂದುಬುಡಿ ಇಲ್ಲೆ ಮರದ ಬುಡದಲ್ಲಿ ಮಾಂಸ ಬೇಯಿಸ್ಕೊಂಡು ಊಟ ಮಾಡೋವ’ ಎಂದು ತಮಾಷೆ ಮಾಡಿ, ಸೋಮಣ್ಣ ನಮ್ಮನ್ನು ನಗಿಸಿ ತಾವೂ ನಕ್ಕರು.

 ಸೋಮಣ್ಣ ಅನೇಕರಂತೆ, ಈ ಪ್ರಶಸ್ತಿಗೆ ಅರ್ಜಿ ಹಾಕಿರಲಿಲ್ಲ, ಪ್ರಶಸ್ತಿಯ ಕುರಿತು ಅವರಿಗೆ ಸಹಜವಾಗಿಯೇ ಯಾವ ಮೋಹಗಳೂ ಇಲ್ಲ. ಪ್ರಶಸ್ತಿಗಳ ಹಂಬಲದಲ್ಲಿ ಸೋಮಣ್ಣ ಯಾವ ಕೆಲಸಗಳಲ್ಲೂ ತೊಡಗಿಕೊಂಡವರಲ್ಲ. ರಾಜೀವ್ ಗಾಂಧೀ ರಾಷ್ಟ್ರೀಯ ಉದ್ಯಾನದಿಂದ ಒಕ್ಕಲೆದ್ದ ಬುಡಕಟ್ಟು ಹಾಡಿಗಳಿಗೆ ಕಾಲ್ನಡಿಗೆಯಲ್ಲಿ ತಿರುಗಾಡಿ ಅವರ ಕಷ್ಟಗಳಲ್ಲಿ ಭಾಗಿಯಾಗುತ್ತಿರುವ ಸೋಮಣ್ಣ ಯಾವ ಪ್ರಶಸ್ತಿಗಳ ಕನಸು ಕಾಣಬೇಕು?

ಎರಡು ವರ್ಷಗಳ ಹಿಂದೆ ಹುಣಸೂರಿನಲ್ಲಿ ಏರ್ಪಡಿಸಿದ್ದ ಬುಡಕಟ್ಟು ಜ್ಞಾನ ಪರಂಪರೆ ಕುರಿತ ಕಮ್ಮಟದಲ್ಲಿ ಸ್ಥಳೀಯ ಅರಣ್ಯಾಧಿಕಾರಿಯನ್ನು ಜೇನುಕುರುಬರ ಇನ್ನೊಬ್ಬ ಹಿರಿಯ ಚಿಕ್ಕಯ್ಯನೊಂದಿಗೆ ಸೇರಿ, ಈತ ತನ್ನ ತೀಕ್ಷ್ಣ ಪ್ರತಿಭಟನೆಯಿಂದಲೇ ಬಾಯಿ ಮುಚ್ಚಿಸಿದ್ದರು. ಖ್ಯಾತ ಅರಣ್ಯ ತಜ್ಞ, ಪರಿಸರವಾದಿ, ನ.ಯಲ್ಲಪ್ಪರೆಡ್ಡಿಯವರನ್ನ ತನ್ನ ಅಪಾರ ತಿಳುವಳಿಕೆಯಿಂದ ದಿಗ್ಬ್ರಮೆಗೀಡುಮಾಡಿದ್ದರು. ಸೋಮಣ್ಣ ಆದಿವಾಸಿಗಳ ಅಖಂಡ ಪ್ರಜ್ಞೆ, ಹರಿತ ಮುನ್ನೋಟ, ಜಟಿಲ ಮನಸ್ಥಿತಿ ಮತ್ತು ತಪ್ತ ಅಂತರಾಳಗಳನ್ನು ಏಕೀಭವಿಸಿದಂತಿದ್ದಾರೆ. ಸೋಮಣ್ಣ ಮತ್ತು ಚಿಕ್ಕಯ್ಯ ತಮ್ಮ ತಂಡದ ಆದಿವಾಸಿ ಹಿರಿಯರೊಂದಿಗೆ ಸೇರಿ ಇಡೀ ಐದು ದಿನಗಳ ಕಮ್ಮಟವನ್ನು ಆವರಿಸಿಕೊಂಡಿದ್ದರು. ಅರಣ್ಯಕ್ಕೆ ಸಂಬಂಧಿಸಿದ ಕಾನೂನುಗಳು ಇವರನ್ನು ದಿಕ್ಕಾಪಾಲಾಗಿಸಿವೆ. ಸ್ಥಳೀಯ ಅಧಿಕಾರಸ್ಥ ಸಮುದಾಯಗಳು, ಯಾವ ಒಳನೋಟಗಳು ಇಲ್ಲದ ಸರಕಾರಗಳು, ಎನ್ಜಿಓಗಳು ಯಾವೂ ಸೋಮಣ್ಣನ ತಾಯ್ನೆಲವನ್ನು ಆತನಿಗೆ ಉಳಿಸಿಕೊಟ್ಟಿಲ್ಲ. ಎಲ್ಲೆಂದರಲ್ಲಿ ಒಕ್ಕಲೆದ್ದು ಈಗ ಹೆದ್ದಾರಿಯೊಂದರ ಪಕ್ಕ ಕಣಿವೆಯಲ್ಲಿ ಜೇನುಕುರುಬರ ಹಾಡಿಗಳಿಗೆ ಜಾಗ ತೋರಿಸಲಾಗಿದೆ.

ಸೋಮಣ್ಣ ಅವರ ಸಂಕ್ಷಿಪ್ತ ಪರಿಚಯ

ದಿ:01.06.1957ರಲ್ಲಿ ಜನಿಸಿದ ಸೋಮಣ್ಣ ಶಾಲೆಯ ಸಾಂಪ್ರದಾಯಿಕ ಶಿಕ್ಷಣ ಪಡೆದವನಲ್ಲ. ತಂದೆ ಕುನ್ನಯ್ಯನಿಗಿದ್ದ ತೀವ್ರ ಬಡತನದಿಂದ ಸೋಮಣ್ಣ ತನ್ನ ಹಾಡಿಗೆ ಸೀಮಿತವಾಗಬೇಕಿದ್ದವನು, ಅದನ್ನು ಮೀರಿ ಬೆಳೆದ. ಕಳೆದ ಮೂರ್ನಾಲ್ಕು ದಶಕಗಳಿಂದ ಸೋಮಣ್ಣ ಭೂರಹಿತ ಆದಿವಾಸಿಗಳನ್ನು ಸಂಘಟಿಸಿದ್ದಾನೆ. ಸ್ಥಳೀಯ ಪ್ರಗತಿಪರ ಹೋರಾಟಗಾರರ ಜೊತೆಗೂಡಿ ಕಟ್ಟಿದ ‘ರಾಜ್ಯ ಮೂಲನಿವಾಸಿ ವೇದಿಕೆಯ’ ಅಧ್ಯಕ್ಷನಾಗಿ ಕಾರ್ಯನಿರ್ವಹಿಸಿದ ಸೋಮಣ್ಣ ತನ್ನ ಸಾಂಘಿಕ ಪ್ರಯತ್ನದಿಂದಾಗಿ ಆದಿವಾಸಿಗಳಿಗೆ ಸರಿಸುಮಾರು ಆರು ಸಾವಿರ ಎಕರೆ ಕೃಷಿ ಭೂಮಿ ದೊರಕಿಸಿಕೊಟ್ಟಿದ್ದಾರೆ. ರಾಜೀವ್ ಗಾಂಧಿ ರಾಷ್ಟ್ರೀಯ ಉದ್ಯಾನ ವ್ಯಾಪ್ತಿಯ ನಾಗರಹೊಳೆ ಮತ್ತು ಕಾಕನಕೋಟೆ ಅರಣ್ಯ ಪ್ರದೇಶದಿಂದ ಒಕ್ಕಲೆದ್ದ ಆದಿವಾಸಿಗಳನ್ನು ಸೋಮಣ್ಣ ಸಂಘಟಿಸಿ, ಪುನರ್ವಸತಿಗಾಗಿ ಅನೇಕ ಚಳುವಳಿಗಳನ್ನು ರೂಪಿಸಿದ್ದಾರೆ. ಸರ್ಕಾರ ಬೇಕಾಬಿಟ್ಟಿಯಾಗಿ, ದೌರ್ಜನದ ಮೂಲಕ ಒಕ್ಕಲೆಬ್ಬಿಸಿದ ಆದಿವಾಸಿಗಳಿಗೆ ಈ ಸೋಮಣ್ಣ ಅಂತರಂಗದ ಬಂಧು.

1989ರಿಂದಲೇ ಸೋಮಣ್ಣ ಸ್ಥಳಾಂತರಗೊಂಡು ದಿಕ್ಕೆಟ್ಟು ಹೋದ ಜೇನುಕುರುಬ, ಬೆಟ್ಟಕುರುಬ, ಎರವ ಮತ್ತು ಸೋಲಿಗರನ್ನು ಸಂಘಟಿಸಿ ಪುನರ್ವಸತಿಗಾಗಿ ಹೋರಾಡುತ್ತಲೇ ಬಂದಿದ್ದಾರೆ. ಆದರೆ, ನಮ್ಮ ಪರಂಪರೆಯ ಮೂಲ ಬೇರುಗಳಂತಿರುವ ಆದಿವಾಸಿಗಳಿಗೆ ಮಾತ್ರ ಘನತೆಯುಳ್ಳ ಪುನರ್ವಸತಿ ಮಾತ್ರ ದೊರಕಿಲ್ಲ. ಸೋಮಣ್ಣ ಈ ಕಾರಣಕ್ಕಾಗಿ ಸುಮ್ಮನೆ ಕುಳಿತವನೂ ಅಲ್ಲ. ಚಳುವಳಿಯ ದಾರಿಯ ಜೊತೆಗೆ ಕಾನೂನು ಹೋರಾಟಕ್ಕೂ ಮುಂದಾದ. ಒಕ್ಕಲೆದ್ದ ಆದಿವಾಸಿಗಳ ಪರ ಸಾರ್ವಜನಿಕ ಹಿತಾಸಕ್ತಿ ಆಧಾರದ ಮೇಲೆ ಹೈಕೋರ್ಟ ಮೊರೆ ಹೋದರು. ಹೈಕೋರ್ಟ, ಒಕ್ಕಲೆದ್ದ ಆದಿವಾಸಿಗಳ ಸಾಮಾಜಿಕಾರ್ಥಿಕ ಸ್ಥಿತಿಗತಿಗಳನ್ನು ಅಧ್ಯಯನ ಮಾಡಲು ಏಕವ್ಯಕ್ತಿ ಆಯೋಗವನ್ನು ಪ್ರೊ. ಮುಜಫರ್ ಅಸಾದಿಯವರ ಹೆಸರಲ್ಲಿ ರಚಿಸಿತು. ಪ್ರೊ. ಅಸಾದಿ ನೀಡಿದ ವರದಿಯನ್ನಾಧರಿಸಿ ಹೈಕೋರ್ಟ ಆದಿವಾಸಿಗಳ ಪುನರ್ವಸತಿಯನ್ನು ಗೌರವಾನ್ವಿತವಾಗಿ ಕೈಗೊಳ್ಳಬೇಕೆಂದು ರಾಜ್ಯ ಸರ್ಕಾರಕ್ಕೆ ಆದೇಶ ನೀಡಿದೆ. ಆದರೆ, ಹೈಕೋರ್ಟ ಆದೇಶ ಕಡತದ ಪಾಲಾಗಿ ಹುಳು ತಿನ್ನುತ್ತಿದೆ. ಹೈಕೋರ್ಟ ಆದೇಶದ ಮೂಲಕ ಸೋಮಣ್ಣನಿಗೆ ನೈತಿಕ ಜಯ ಸಿಕ್ಕಿದೆ.

ಸ್ಥಳಾಂತರಗೊಂಡ ಆದಿವಾಸಿಗಳಿಗೆ ಪಡಿತರ ಚೀಟಿ ದೊರಕಿಸಿ ಕೊಟ್ಟು, ಆದಿವಾಸಿಗಳ ಪ್ರದೇಶದಲ್ಲಿ ನ್ಯಾಯಬೆಲೆ ಅಂಗಡಿಗಳನ್ನು ತೆರೆದು ಬಡ ಗಿರಿಜನರಿಗೆ ಆಹಾರದ ಕೊರತೆ ನೀಗುವಂತೆ ಮಾಡಿದ್ದರಲ್ಲಿ ಸೋಮಣ್ಣನ ಪಾತ್ರ ಹಿರಿದು. ಸೋಮಣ್ಣ ಅವರದು ಕೇವಲ ಶುಷ್ಕ ಸಮಾಜಸೇವಕನ ವ್ಯಕ್ತಿತ್ವವಲ್ಲ. ಸದಾ ನಗುವ, ಜೊತೆಗಿದ್ದವರನ್ನು ನಗೆಯ ಕಡಲಲ್ಲಿ ಮುಳುಗೇಳಿಸುವ ಸೋಮಣ್ಣ ಬಂಡವಾಳಶಾಹಿಗಳ ವಿರುದ್ಧವೂ ತೊಡೆತಟ್ಟಿದ್ದಾರೆ. ನಾಗರಹೊಳೆ ದಟ್ಟಾರಣ್ಯದಲ್ಲಿ ಬಂಡವಾಳಶಾಹಿಗಳು ಕಟ್ಟಲು ಹೊರಟಿದ್ದ ತಾಜ್ ಹೋಟೆಲ್ ನಿರ್ಮಾಣದ ವಿರುದ್ಧವೂ ಸೋಮಣ್ಣ ಹೋರಾಡಿದ್ದಾರೆ. ಆ ಭಾಗದ ಆದಿವಾಸಿ ಮತ್ತು ಪ್ರಗತಿಪರರ ಜೊತೆ ಹೋರಾಟಕ್ಕಿಳಿದ ಸೋಮಣ್ಣ ತಾಜ್ ಹೋಟೆಲ್ ನಿರ್ಮಾಣ ರದ್ದಾಗುವವರೆಗೂ ಸುಮ್ಮನಾಗಲಿಲ್ಲ. ಮೇಧ ಪಾಟ್ಕರ್ ಜೊತೆ ಸೇರಿ ಸೋಮಣ್ಣ ನರ್ಮದಾ ಬಚಾವ್ ಆಂದೋಲನದ ಭಾಗವಾಗಿ ದುಡಿದಿದ್ದಾರೆ. ಇದಲ್ಲದೆ ಪಶ್ಚಿಮಘಟ್ಟ ಉಳಿಸುವ ಸಲುವಾಗಿ ಕೈಗೊಂಡ ಗೋವಾ ಕನ್ಯಾಕುಮಾರಿ ಕಾಲ್ನಡಿಗೆ ಜಾತಾದಲ್ಲಿ ಸೋಮಣ್ಣ ಮುಂಚೂಣಿಯಲ್ಲಿದ್ದವರು. 2008ರಿಂದ ಜಾರಿಗೆ ಬಂದ ಅರಣ್ಯವಾಸಿಗಳ ಪಾರಂಪರಿಕ ಹಕ್ಕುಗಳ ಸಮಿತಿಯಲ್ಲಿ ಸೋಮಣ್ಣ ಸಕ್ರೀಯನಾಗಿ ಆದಿವಾಸಿಗಳ ಪರ ಹೋರಾಡುತ್ತಲೇ ಇದ್ದಾರೆ. 1991ರಲ್ಲಿ ಫಿಲಿಫೈನ್ಸ ದೇಶದಲ್ಲಿ ನಡೆದ ಆದಿವಾಸಿಗಳ ಮೇಳದಲ್ಲಿ ಸೋಮಣ್ಣ ಕರ್ನಾಟಕದ ಬುಡಕಟ್ಟು ಸಮುದಾಯಗಳನ್ನು ಪ್ರತಿನಿಧಿಸಿ ಭಾಗವಹಿಸಿದ್ದ.

ಇದೆಲ್ಲದರ ಜೊತೆ ಸೋಮಣ್ಣ ಆದಿವಾಸಿಗಳ ವಿಷಾದ ಮತ್ತು ಚಿಂತನೆಗಳ ಫಲವಾಗಿ ರೂಪುಗೊಂಡ ಅನುಭಾವಿಯಂತೆ ಬದುಕುತ್ತಿದ್ದಾನೆ. ಸದಾ ನಗುವ, ನಗಿಸುತ್ತಲೇ ಇರುವ ಸೋಮಣ್ಣ ಅವರಲ್ಲಿ ತಪ್ತ ಅನುಭಾವಿಯ ಗುಣ ಸ್ವಭಾವಗಳಿವೆ. ಸರಿಸುಮಾರು ಅರ್ಧ ಶತಮಾನದಿಂದ ಅರಣ್ಯ ಮತ್ತು ಆದಿವಾಸಿಗಳ ಮೇಲೆ ಕಣ್ಣೆದುರು ನಡೆದ ಮತ್ತು ನಡೆಯುತ್ತಲೇ ಇರುವ ‘ನಾಗರಿಕ’ ಜಗತ್ತಿನ ಕ್ರೌರ್ಯವನ್ನು ಸೋಮಣ್ಣ ಕೇವಲ ತನ್ನ ಮುಗುಳ್ನಗೆಯಿಂದಲೇ ಮುಖಾಮುಖಿ ಮಾಡುತ್ತಾರೆ. ಅರಣ್ಯಾಧಿಕಾರಿಗಳ ಮೇಲಿನ ಅವನ ಕ್ರೋಧ, ಮಾತು ಬೆಳೆಯ ಬೆಳೆಯುತ್ತಲೇ ಅವನ ತಾಯ್ತನದ ಒರತೆಯಲ್ಲಿ ಅಮೃತವಾಗಿ ಹರಿದು ಬಿಡುತ್ತದೆ. ತನ್ನ ಮೂಲ ನೆಲೆ, ದೈವ, ತನ್ನ ಹೀರಿಕರ ಆತ್ಮಗಳು, ಒಡನಾಡಿದ್ದ ಮರ ಗಿಡ ಹೂವುಗಳು, ಸಹ ಜೀವನ ನಡೆಸಿದ್ದ ಕಾಡು ಪ್ರಾಣಿಗಳು ಇವ್ಯಾವು ಈಗ ಸೋಮಣ್ಣನ ಜೊತೆಗಿಲ್ಲ. ಪ್ರಭುತ್ವ ಈತನನ್ನು ವಂಚಿಸಿದೆ, ಎದುರಾಎದುರೇ ಮೋಸಮಾಡಿ ಆತನ ಮೂಲ ನೆಲೆಯಿಂದ ಎತ್ತಿ ಬಿಸಾಡಿದೆ. ದಿಕ್ಕಾಪಾಲಾದ ಆದಿವಾಸಿಗಳು ಕಾಡಂಚಿನ ಪುಟ್ಟ ಜಾಗಗಳಲ್ಲಿ, ನಗರಗಳ ಕೊಳೆಗೇರಿಗಳಲ್ಲಿ ಬದುಕುತ್ತಿದ್ದಾರೆ. ಒಕ್ಕಲೇಳುವಾಗ ಪ್ರಭುತ್ವ ಕೊಟ್ಟ ಭರವಸೆಗಳು ಭ್ರಮೆಗಳಾಗಿ ಹೋಗಿವೆ. ಪ್ರಾಣಿಗಳೂ ವಾಸಿಸಲು ಯ್ಯೋಗ್ಯವಾಗಿಲ್ಲದ ಸ್ಥಳಗಳಲ್ಲಿ ಆದಿವಾಸಿಗಳು ಬದುಕುತ್ತಿದ್ದಾರೆ. ಆದಿವಾಸಿಗಳಿಂದ ಎಲ್ಲವನ್ನೂ ಕಿತ್ತುಕೊಂಡು ಪ್ರಭುತ್ವ ಈ ಸಮುದಾಯಗಳನ್ನು ವಂಚಿಸುತ್ತಲೇ ಬಂದಿದೆ. ಇಂದೂ ಸಹ ರಾಜ್ಯೋತ್ಸವ ಪ್ರಶಸ್ತಿಯನ್ನು ಕೊಟ್ಟಂತೆ ಮಾಡಿ ಸೋಮಣ್ಣಗೆ ವಂಚನೆ ಮಾಡಲಾಗಿದೆ. ಇದಕ್ಕೆ ಕಾರಣಗಳು ತಿಳಿದಿಲ್ಲ. ಸಾಮಾಜಿಕ ನ್ಯಾಯದ ಪರವಾಗಿರುವ ನಮ್ಮ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರಿಗೆ ಒಬ್ಬ ತಳಸಮುದಾಯದ ಮಹಾನ್ ಸಾಧಕ ಜೇನುಕುರುಬರ ಸೋಮಣ್ಣ ಅವರಿಗೆ ತಮ್ಮ ಸರ್ಕಾರದಿಂದಲೇ ಆಗಿಹೋದ ಈ ಅನ್ಯಾಯ ಮತ್ತು ಅಪಮಾನದ ಬಗ್ಗೆ ತಿಳಿದಿದಿಯೋ ಇಲ್ಲವೋ ನಾನರಿಯೆ. ಆದರೆ ಇದು ತಳಸಮುದಾಯಗಳ ಪರವಾದ ಚಿಂತನೆಗಳಿರುವ ಎಲ್ಲರಿಗೂ ನೋವುಂಟುಮಾಡುವ ವಿಚಾರ ಎಂದೇ ಭಾವಿಸಿದ್ದೇನೆ. ಮಾನ್ಯ ಮುಖ್ಯಮಂತ್ರಿಗಳು ಈ ಕೂಡಲೇ ಇದರಲ್ಲಿ ಆಗಿರುವ ಅನ್ಯಾಯವನ್ನು ಸರಿಪಡಿಸುವ ನಿಟ್ಟಿನಲ್ಲಿ ಏನಾದರೂ ಮಾಡೋಣ. ಜತೆಗೂಡಿ.

ಇಂತಿ ವಿಶ್ವಾಸದಿಂದ,

 ಡಾ. ಎ ಎಸ್ ಪ್ರಭಾಕರ

 ಬುಡಕಟ್ಟು ಅಧ್ಯಯನ ವಿಭಾಗ

ಕನ್ನಡ ವಿಶ್ವವಿದ್ಯಾಲಯ, ಹಂಪಿ

~~~