Round Table India
You Are Reading
ದಲಿತ ಕೆಳಜಾತಿಗಳ ಹೊಸ ತಲೆಮಾರಿನ ನಡೆಗಳು
0
Features

ದಲಿತ ಕೆಳಜಾತಿಗಳ ಹೊಸ ತಲೆಮಾರಿನ ನಡೆಗಳು

arun j

 

Dr ಅರುಣ್ಜೋಳದಕೂಡ್ಲಿಗಿ (Arun Joladkudligi)

arun jಕನ್ನಡ ವರ್ಡನೆಟ್ ಯೋಜನೆಯ ಭಾಗವಾಗಿ 2010 ರಲ್ಲಿ ಸೆಮಿನಾರೊಂದಕ್ಕೆ ಮುಂಬೈ ಐಐಟಿ ಕ್ಯಾಂಪಸ್ಸಿಗೆ ಹೋಗಿದ್ದೆ. ಕ್ಯಾಂಪಸ್ಸಿನ ಹೈಟೆಕ್ ವಾತಾವರಣ, ಐಐಟಿಯ ವಿದ್ಯಾರ್ಥಿಗಳ ಸಿರಿವಂತಿಕೆ, ಹಗಲನ್ನು ನಾಚಿಸುವಂತಹ ರಾತ್ರಿಯ ಜಗಮಗಿಸುವ ಬೆಳಕು ನನ್ನಂಥವರನ್ನು ಬೆರಗುಗೊಳಿಸಿದ್ದವು. ಉತ್ತರ ಕರ್ನಾಟಕದ ಕೆಳಸಮುದಾಯದ ಮಕ್ಕಳು ಇಂಥಹ ಕಡೆ ಕಲಿಯುವುದು ಯಾವಾಗ ಎನ್ನುವ ನಿರಾಸೆಯೊಂದು ನನ್ನಲ್ಲಿ ಮೂಡಿತು. ರಾತ್ರಿ ವಿದ್ಯಾರ್ಥಿಗಳ ಹಾಸ್ಟೆಲಿಗೆ ಹೋದಾಗ ಕರ್ನಾಟಕದ ಆರು ಹುಡುಗರು ಬೇಟಿಯಾದರು. ವಿಚಾರಿಸಲಾಗಿ ಬಿಟೆಕ್, ಎಂಟೆಕ್, ಎಂಜಿನಿಯರಿಂಗ್ ಮಾಡುವ ಇವರು ಬೆಳಗಾವಿ, ದಾವಣಗೆರೆ, ಮೈಸೂರು, ಬೆಂಗಳೂರಿನ ಮೇಲ್ಜಾತಿಗೆ ಸೇರಿದ ಮೇಲ್ವರ್ಗದವರು. ಮರುದಿನ ಸೆಮಿನಾರು ಹಾಲಿಗೆ ಸ್ವಲ್ಪ ದೂರದಲ್ಲಿ ಕಟ್ಟಡ ಕಾಮಗಾರಿ ನಡೆಯುತ್ತಿತ್ತು. ಆ ಕಡೆಯಿಂದ ಕನ್ನಡ ಮಾತು ಕೇಳಿ ಪುಳಕಗೊಂಡು ವಿಚಾರಿಸಿದರೆ, ಕಾಮಗಾರಿ ಕೆಲಸದಲ್ಲಿದ್ದ ಐವತ್ತಕ್ಕೂ ಹೆಚ್ಚಿನವರು ಉತ್ತರ ಕರ್ನಾಟಕದವರು. ಅದರಲ್ಲಿ 20 ಕ್ಕೂ ಹೆಚ್ಚಿನ ಯುವಕರು ದೇವದುರ್ಗ ಮತ್ತು ಗದಗ ಭಾಗದ ಬೇರೆ ಬೇರೆ ಹಳ್ಳಿಗಳವರು. ಅವರಲ್ಲಿ ಬಹುಪಾಲು ದಲಿತರು ಮತ್ತು ಕೆಳಜಾತಿಗೆ ಸೇರಿದವರು. ಅವರುಗಳೆಲ್ಲಾ ಹತ್ತನೇ ತರಗತಿಯ ಒಳಗೆ ತಮ್ಮ ಶಿಕ್ಷಣವನ್ನು ಮೊಟುಕುಗೊಳಿಸಿಕೊಂಡವರು.

ಇದು ಕರ್ನಾಟಕದ ಯುವಜನತೆಯ ಎರಡು ಪ್ರಮುಖ ವೈರುಧ್ಯಗಳನ್ನು ಕಾಣಿಸುವಂತಿತ್ತು. ಮೇಲ್ಜಾತಿಗೆ ಸೇರಿದ ನಗರಕೇಂದ್ರಿತ ಯುವಕರು ಅತ್ಯಾಧುನಿಕ ತಾಂತ್ರಿಕ ಶಿಕ್ಷಣ ಕಲಿಯಲು ಮುಂಬೈ ಐಐಟಿಗೆ ಬಂದಿದ್ದರೆ, ದಲಿತ ಕೆಳಜಾತಿ ಯುವಕರು ಬಹುದೂರದಿಂದ ಹೊಟ್ಟೆಪಾಡಿನ ಕೂಲಿಗಾಗಿ ವಲಸೆ ಬಂದಿದ್ದರು. ಈ ಚಿತ್ರ ನನ್ನನ್ನು ಈಗಲೂ ಕಾಡುತ್ತಿದೆ. ಈ ವೈರುಧ್ಯವನ್ನು ಸ್ವಲ್ಪ ಬದಲಾವಣೆಯೊಂದಿಗೆ ಭಾರತಕ್ಕೂ ಅನ್ವಯಿಸಬಹುದಾಗಿದೆ. ಕರ್ನಾಟಕದ ಸಂದರ್ಭದಲ್ಲಿ ದಲಿತ ಕೆಳಜಾತಿಗಳ ಯುವ ಸಮುದಾಯದವನ್ನು ಅರ್ಥಮಾಡಿಕೊಳ್ಳಲು ಈ ವೈರುಧ್ಯ ತೋರು ಬೆರಳಿನಂತೆ ಕಾಣುತ್ತಿದೆ.
**

ಇದೀಗ ಭಾರತ ‘ಯಂಗ್ ಇಂಡಿಯಾ’. ಹೀಗಾಗಿ ಬಹುರಾಷ್ಟ್ರೀಯ ಕಂಪನಿಗಳು ಭಾರತದಲ್ಲಿ ಬಂಡವಾಳ ಹೂಡುವಿಕೆಯ ಕಾರಣಗಳಲ್ಲಿ ಇದು ಪ್ರಭಾವಿ ಅಂಶವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ದಿ, ಮೇಕ್ ಇನ್ ಇಂಡಿಯಾದ ಮಾತುಗಳು ಯಂಗ್ ಇಂಡಿಯಾವನ್ನು ಸುತ್ತುವರಿದಿವೆ. ಈ ಮಾತಿಗೆ ಮರುಳಾಗಿ ಸಾಮಾಜಿಕ ಜಾಲತಾಣಗಳಲ್ಲಿ ಮೋದಿ ಅಭಿಮಾನಿ ಯುವಜನತೆ ಹೆಚ್ಚಿರುವಂತೆ ಪೇಯ್ಡ್ ಜನಪ್ರಿಯತೆಯನ್ನು ರೂಪಿಸಿದೆ. 18 ರಿಂದ 59ರ ಒಳಗಿನ ವಯೋಮಾನದ ದುಡಿಯುವ ವರ್ಗ ಇದೀಗ ಭಾರತದಲ್ಲಿ ಹೆಚ್ಚಿದೆ, ಇದು ಇನ್ನು 20 ವರ್ಷಗಳ ಕಾಲ ಹೀಗೆ ಮುಂದುವರಿಯುತ್ತದೆ, ಹಾಗಾಗಿ ಭಾರತ ಅಭಿವೃದ್ಧಿಯನ್ನು ಹೊಂದಲು ಇದು ಸಕಾಲ ಎನ್ನುವುದು ಆರ್ಥಿಕ ತಜ್ಞರ ಅಭಿಮತ. 2011 ರ ಭಾರತದ ಜನಗಣತಿಯ ಒಟ್ಟು ಜನಸಂಖ್ಯೆಯಲ್ಲಿ ಸರಾಸರಿ ಹೆಚ್ಚಿರುವ ವಯೋಮಾನ 24 ವರ್ಷದ ಯುವಜನತೆ. ಹಾಗಾಗಿ ಭಾರತ ಇಂದು ನಿಜಾರ್ಥದಲ್ಲಿ ‘ಯಂಗ್ ಇಂಡಿಯಾ’.

ಈ ಅರ್ಥದಲ್ಲಿ ಭಾರತ ಚೀನಾಕ್ಕಿಂತ ಯಂಗ್ ಆಗಿದೆ. ಈ ಸರಾಸರಿಯನ್ನು ತೆಗೆದುಕೊಂಡರೆ ಭಾರತದಲ್ಲಿ ಟೀನ್ ಏಜ್ ಸ್ಟೇಟ್ ಅಂದರೆ ಮೆಘಾಲಯ. ಇಲ್ಲಿನ ಸರಾಸರಿ ವಯೋಮಾನ 19 ವರ್ಷ. ಈ ಸರಾಸರಿ ಬಿಹಾರ ಮತ್ತು ಉತ್ತರ ಪ್ರದೇಶದಲ್ಲಿ 20 ವರ್ಷವಾಗಿದ್ದರೆ, ಕೇರಳದ್ದು 31 ವರ್ಷ. ಈ ನೆಲೆಯಲ್ಲಿ ಕರ್ನಾಟಕವನ್ನು ನೋಡಿದರೆ ಯಂಗ್ ಇಂಡಿಯಾಕ್ಕೆ ಸಮೀಪದಲ್ಲಿದೆ. ಇಲ್ಲಿನ ಸರಾಸರಿ ವಯೋಮಾನ 26 ವರ್ಷ. ಅಂದರೆ ಕರ್ನಾಟಕದಲ್ಲಿಯೂ ಸರಾಸರಿ ‘ಯುವಜನತೆ’ ಹೆಚ್ಚಿದೆ. ಹಾಗಾಗಿ ಇಂದು ಈ ಯುವಜನತೆಯ ನಡೆಗಳನ್ನು ನಾವಿಂದು ಹೆಚ್ಚು ಚರ್ಚೆಗೆ ಒಳಗುಮಾಡಬೇಕಿದೆ. ಅಂತೆಯೇ ಅಭಿವೃದ್ಧಿಯ ಭಾಗವಾಗಿ ಈ ಜನತೆಯನ್ನು ಬಳಸಿಕೊಳ್ಳಲು ಚಿಂತಿಸಿದಂತೆ, ಆರೋಗ್ಯಕರ ಸಮಾಜ ನಿರ್ಮಾಣ ಮಾಡಲು ಈ ವಲಯವನ್ನು ರೂಪಿಸಬೇಕಿದೆ. ಮುಖ್ಯವಾಗಿ ಜಾತಿವಾದಿಗಳಾಗದಂತೆಯೂ, ಧಾರ್ಮಿಕ ಮೂಲಭೂತವಾದಿಗಳಾಗದಂತೆಯೂ, ಸಿನಿಕರಾಗದಂತೆಯೂ ಸಂವಿಂಧಾನದ ಆಶಯಗಳಿಗೆ ಬದ್ಧರಾಗುವಂತೆ ವೈಚಾರಿಕ ಅರಿವನ್ನು ಮೂಡಿಸಿ ಸೂಕ್ಷ್ಮಗೊಳಿಸುವ ಬಗ್ಗೆ ಗಂಭೀರವಾಗಿ ಚರ್ಚೆ ಮಾಡಬೇಕಿದೆ. ಈ ಅಂಶವನ್ನು ಗಮನದಲ್ಲಿಟ್ಟುಕೊಂಡು ಕರ್ನಾಟಕದ ದಲಿತ ಕೆಳಜಾತಿಗಳ ಯುವಜನತೆಯ ಚಲನೆಗಳನ್ನು ಗುರುತಿಸುವ ಸಣ್ಣ ಪ್ರಯತ್ನ ಈ ಬರಹ.

2011ರ ಜನಗಣತಿಯ ಪ್ರಕಾರ ಕರ್ನಾಟಕದ ಒಟ್ಟು ಶಿಕ್ಷಿತರ ಪ್ರಮಾಣ 4,10,29,323 ರಷ್ಡಿದ್ದಾರೆ. ಇದರಲ್ಲಿ ಗಂಡಸರು 82.85% ರಷ್ಡಿದ್ದರೆ, ಹೆಣ್ಣುಮಕ್ಕಳು 68.13% ರಷ್ಡಿದ್ದಾರೆ. ಒಟ್ಟು ಶೇಕಡವಾರು ಶಿಕ್ಷಣದ ಪ್ರಮಾಣ 75.60. ರಷ್ಟಿದೆ. ಇದರ ಅಂದಾಜಿನಲ್ಲಿ ಕರ್ನಾಟಕದ ಒಟ್ಟಾರೆ ದಲಿತ ಕೆಳಜಾತಿಗಳ ಯುವಜನತೆಯ ಶಿಕ್ಷಣದ ಶೇ 50 ರಷ್ಟಿರಬಹುದು. ಈ ಯುವಜನತೆಯ ಶಿಕ್ಷಣದ ಪ್ರಮಾಣ ಕರ್ನಾಟಕದ ಪ್ರಾದೇಶಿಕವಾರು ಏರುಪೇರಾಗುವುದಿದೆ. ಉದಾಹರಣೆಗೆ ದಕ್ಷಿಣ ಕರ್ನಾಟಕದ ಮೈಸೂರು ಭಾಗದಲ್ಲಿ ಹೆಚ್ಚಿದ್ದರೆ, ಹೈದರಾಬಾದ್ ಕರ್ನಾಟಕದ ದೇವದುರ್ಗ ಮುಂತಾದ ಕಡೆಗಳಲ್ಲಿ ಕಡಿಮೆ ಇದೆ. ಇದರಲ್ಲಿ ಹುಡುಗಿಯರ ಶಿಕ್ಷಣದ ಪ್ರಮಾಣ ಗಂಡಿಗಿಂತ ಸಾಮಾನ್ಯವಾಗಿ ಇಳಿಮುಖವಾಗಿರುತ್ತದೆ. ಇಂತಹ ಗ್ರಾಮಜಗತ್ತಿನ ದಲಿತ ಕೆಳಜಾತಿ ಯುವಜನತೆಯ ನಡೆಗಳನ್ನು ಸೂಕ್ಷ್ಮವಾಗಿ ಗುರುತಿಸಬೇಕಿದೆ. ಈ ಸಮುದಾಯವನ್ನು ವೈಚಾರಿಕ ವಲಯದೊಳಗೆ ಒಳಗುಮಾಡಿಕೊಳ್ಳುವ ಪ್ರಕ್ರಿಯೆಗಳನ್ನು ಹಿಂದೆಂದಿಗಿಂತಲೂ ಇಂದು ಹೆಚ್ಚಾಗಿ ಮಾಡಬೇಕಿದೆ.
**
ಸಾಮಾನ್ಯವಾಗಿ ಪರಿಶಿಷ್ಟ ಜಾತಿ, ಪಂಗಡ, ಓಬಿಸಿ ಒಳಗೊಂಡ ಕೆಳ ಸಮುದಾಯಗಳ 18 ರಿಂದ 30-35 ರ ವರೆಗಿನ ಯುವ ಸಮುದಾಯದ ಚಲನೆಗಳನ್ನು ಸೂಕ್ಷ್ಮವಾಗಿ ಅರಿಯಬೇಕಿದೆ. ಈ ಚಲನೆಗಳಲ್ಲಿ ಒಂದಷ್ಟು ಸಮಾನ ಎಳೆಗಳಿರುವಂತೆ ಪ್ರಾದೇಶಿಕ ಫರಕುಗಳೂ ಭಿನ್ನತೆಗಳೂ ಇವೆ. ಬಹಳ ಮುಖ್ಯವಾಗಿ ಈ ಯುವ ಸಮುದಾಯದಲ್ಲಿ ಹತ್ತನೇ ತರಗತಿಯ ಒಳಗೇ ತಮ್ಮ ಓದನ್ನು ನಿಲ್ಲಿಸಿದ ಒಂದು ಗುಂಪು, ಎಸ್.ಎಸ್.ಎಲ್.ಸಿ ಮತ್ತು ಪಿಯು ಹಂತದ ಓದನ್ನು ಮುಗಿಸಿ ನಿರುದ್ಯೋಗಿಗಳಾಗಿರುವವರು, ಪಿಯು ನಂತರ ಪದವಿ ಹಂತದಲ್ಲಿ ಅರೆಬರೆ ಓದಿ ಓದನ್ನು ಮಟುಕಾಗಿಸಿರುವವರು, ಸ್ನಾತಕೋತ್ತರ ಹಂತದ ಪದವಿ ಮುಗಿಸಿಕೊಂಡು ಅರೆಕಾಲಿಕ ಉದ್ಯೋಗಗಳಲ್ಲಿ ತೊಡಗಿಸಿಕೊಂಡವರನ್ನು ಒಳಗೊಂಡಂತೆ ಒಟ್ಟು ನಾಲ್ಕು ಗುಂಪುಗಳನ್ನಾಗಿ ವಿಭಾಗಿಸಿಕೊಳ್ಳೋಣ. ಇವರನ್ನೆಲ್ಲಾ ಒಳಗೊಂಡಂತೆ ಅರೆವಿದ್ಯಾವಂತ ನಿರುದ್ಯೋಗಿ ಯುವ ಸಮುದಾಯ ಎಂದು ಗುರುತಿಟ್ಟುಕೊಳ್ಳಬಹುದು.

ದಲಿತ ಕೆಳಜಾತಿಗಳು ಆರ್ಥಿಕವಾಗಿಯೂ ಕೆಳಸ್ಥರದಲ್ಲಿರುವ ಕಾರಣ ಈ ಮಕ್ಕಳು ಸಾಮಾನ್ಯವಾಗಿ ಸಾಂಪ್ರದಾಯಿಕ ಶಿಕ್ಷಣದ ಕಲಿಕೆಗೆ ತೊಡಗುತ್ತಾರೆ. ಮುಖ್ಯವಾಗಿ ಎಸ್.ಎಸ್.ಎಲ್.ಸಿ ನಂತರ ಮೇಲುಜಾತಿ ಮಕ್ಕಳು ಹೆಚ್ಚಾಗಿ ವಿಜ್ಞಾನ/ವೃತ್ತಿ/ತಾಂತ್ರಿಕ ಶಿಕ್ಷಣವನ್ನು ಆಯ್ಕೆ ಮಾಡಿಕೊಂಡರೆ, ಕೆಳಜಾತಿ ಮಕ್ಕಳು ಬಹುಪಾಲು ಸಮಾಜ ವಿಜ್ಞಾನ/ಕಲೆಗೆ ಸಂಬಂಧಿಸಿದ ವಿಷಯಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಇದಕ್ಕೆ ಕಾರಣ ಇವರು ಬಾಲ್ಯದಿಂದ ಆಂಗ್ಲಮಾಧ್ಯಮದಲ್ಲಿ ಓದದಿರುವುದು ಮತ್ತು ವಿಜ್ಞಾನ/ವೃತ್ತಿ/ತಾಂತ್ರಿಕ ಶಿಕ್ಷಣಕ್ಕೆ ಓದಿನ ಖರ್ಚು ಹೆಚ್ಚಾಗುವುದಾಗಿದೆ. ಹೀಗಿರುವಾಗ ಕೆಳಜಾತಿಗಳ ಮಕ್ಕಳು ತಮ್ಮ ಸಾಂಪ್ರದಾಯಿಕ ಶಿಕ್ಷಣವನ್ನು ಮೊಟುಕುಗೊಳಿಸಿದರೆ ಅದಕ್ಕೆ ತಕ್ಕುದಾದ ಕೆಲಸ ಸಿಗದೆ ನಿರುದ್ಯೋಗಿಗಳಾಗುತ್ತಾರೆ. ವಿಜ್ಞಾನ/ವೃತ್ತಿ/ತಾಂತ್ರಿಕ ಶಿಕ್ಷಣವನ್ನು ಮೊಟುಗೊಳಿಸಿಕೊಂಡ ವಿದ್ಯಾರ್ಥಿಗಳು ಆಗ್ಲಭಾಷೆ/ತಾಂತ್ರಿಕ ಶಿಕ್ಷಣದ ಕಾರಣಕ್ಕೆ ಕೆಳಹಂತದ ಉದ್ಯೋಗಗಳನ್ನಾದರೂ ಗಿಟ್ಟಿಸಿಕೊಳ್ಳುತ್ತಾರೆ. ಉದಾಹರಣೆಗೆ ಕನ್ನಡ ಮಾಧ್ಯಮದಲ್ಲಿ ಸಮಾಜ ವಿಜ್ಞಾನ/ ಭಾಷೆ/ಸಂಸ್ಕೃತಿಯಂತಹ ಸಂಗತಿಗಳನ್ನು ಭೋದಿಸುವ/ಸಂಶೋಧನೆ ಮಾಡುವ ಕನ್ನಡ ವಿಶ್ವವಿದ್ಯಾಲಯ ಹಂಪಿಯಲ್ಲಿ ಹೆಚ್ಚಾಗಿ ದಲಿತ ಕೆಳಜಾತಿ/ಕೆಳವರ್ಗದ ವಿದ್ಯಾರ್ಥಿಗಳಿದ್ದರೆ, ವಿಶ್ವೇಶ್ವರಯ್ಯ ತಾಂತ್ರಿಕ ವಿವಿಯಲ್ಲಿ ಬಹುಪಾಲು ಮೇಲುಜಾತಿ/ಮೇಲುವರ್ಗದ ವಿದ್ಯಾರ್ಥಿಗಳಿರುವುದನ್ನು ಗಮನಿಸಬಹುದು.

ಕಲಿತು ಉದ್ಯೋಗ ದಕ್ಕಿಸಿಕೊಂಡ ದಲಿತ ಕೆಳಜಾತಿಯ ಯುವ ಜನತೆ ಬಹುಪಾಲು ತಮ್ಮ ವಾಸದ ನೆಲೆಯನ್ನು ಗ್ರಾಮದಿಂದ ನಗರಕ್ಕೆ ಸ್ಥಳಾಂತರಿಸಿಕೊಂಡಿದ್ದಾರೆ. ಅದರಲ್ಲಿ ಸಣ್ಣ ಭಾಗವೊಂದು ಸಾಹಿತ್ಯ ಬರಹ ಚಳವಳಿ ವೈಚಾರಿಕತೆಯ ಜತೆ ಗುರುತಿಸಿಕೊಂಡರೆ, ದೊಡ್ಡ ಸಂಖ್ಯೆಯವರು ನಗರ ಕೇಂದ್ರಿತ ಮೋಜಿನ ಬದುಕಿಗೆ ಮತ್ತು ಸತ್ಯನಾರಾಯಣ ಪುಜೆಯ ತರಹದ ನವಬ್ರಾಹ್ಮಣಿಕೆಗೆ ಒಗ್ಗಿಕೊಂಡಂತೆ ಕಾಣುತ್ತದೆ. ಇವರುಗಳೆಲ್ಲಾ ತಾವು ಬೆಳೆದು ಬಂದ ಸಾಮಾಜಿಕ ಹಿನ್ನೆಲೆಯ ನೆನಪುಗಳನ್ನು ಅಳಿಸಿಕೊಳ್ಳಲು ಪ್ರಯತ್ನಿಸುತ್ತಿರುತ್ತಾರೆ. ಹೀಗಾಗಿ ತಮ್ಮ ಹುಟ್ಟೂರಿನ ಜತೆಗಿನ ಸಂಬಂಧಗಳನ್ನು ಯಾಂತ್ರಿಕಗೊಳಿಸಿಕೊಂಡಿದ್ದಾರೆ. ಹೆಚ್ಚೆಂದರೆ ತಮ್ಮ ಕುಟುಂಬದ ಯುವಕ ಯುವತಿಯರನ್ನು ಹೆಚ್ಚಿನ ಓದಿಗೆ ನಗರಕ್ಕೆ ಕರೆತರುವುದಿದೆ. ಉಳಿದಂತೆ ಇವರುಗಳು ಸಿನಿಕರಾಗಿ ತಮ್ಮ ಹಳ್ಳಿಗಳನ್ನು ಗೊಡ್ಡುಪರಂಪರೆಯ ಕೊಂಪೆಗಳೆಂದು ಭಾವಿಸುತ್ತ ಸಂಪುರ್ಣ ಸಂಬಂಧ ಕಡಿದುಕೊಳ್ಳುವ ಸಾಧ್ಯತೆ ಇದೆ. ಹೀಗೆ ಕಲಿತು ಉದ್ಯೋಗ ಪಡೆದವರು ಹಳ್ಳಿಗಳ ಸಂಪರ್ಕ ಕಡಿದುಕೊಂಡರೆ, ಆಯಾ ಹಳ್ಳಿಗಳಲ್ಲಿ ನೆಲೆನಿಲ್ಲುವವರು ಅರೆವಿದ್ಯಾವಂತ ನಿರುದ್ಯೋಗಿ ಯುವಜನತೆ.

ಹಾಗೆ ನೋಡಿದರೆ ಎಪ್ಪತ್ತು ಎಂಬತ್ತರ ದಶಕದಲ್ಲಿ ದಲಿತ ಕೆಳಜಾತಿ ಸಮುದಾಯದ ಮೊದಲ ತಲೆಮಾರು ಶಿಕ್ಷಣ ಪಡೆದಾಗ ಕೆಲಸ ದೊರೆತು ಪುರ್ಣಪ್ರಮಾಣದ ಉದ್ಯೋಗಗಳಲ್ಲಿ ತೊಡಗುತ್ತಿದ್ದರು. ಇದೀಗ ಅರೆವಿದ್ಯಾವಂತರು ತಾತ್ಕಾಲಿಕ ಉದ್ಯೋಗಗಳಲ್ಲಿ ತೊಡಗುತ್ತಾರೆ. ಕೆಲದಿನಗಳು ಕೆಲಸವಿದ್ದು ಕೆಲಕಾಲ ಸುಮ್ಮನೆ ಅಲೆಯುತ್ತಾರೆ. ಇಂತಹ ಸಂದರ್ಭದಲ್ಲಿ ಅನ್ಯ ಸಂಗತಿಗಳ ಜತೆ ತಮ್ಮನ್ನು ತೊಡಗಿಸಿಕೊಳ್ಳುತ್ತಾರೆ. ಇದರಲ್ಲಿ ಮುಖ್ಯವಾಗಿ ಜಾತಿಯ ಯುವ ಸಂಘಟನೆ ರಚಿಸುವುದು, ಕ್ರಿಕೇಟ್ ಟೂರ್ನಿಮೆಂಟ್ ಆಯೋಜನೆ, ಕನ್ನಡ ಸಂಘಟನೆಗಳ ಸೇರ್ಪಡೆ, ಮಾಹಿತಿ ಹಕ್ಕಿನಡಿ ದಾಖಲೆಗಳ ಪಡೆದು ಬ್ಲಾಕ್ ಮೇಲ್ ಮಾಡುವುದು, ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಕಾಲ ಕಳೆಯುವುದು, ಬ್ಲಾಕ್ ಟ್ಯಾಬ್ಲೈಡ್ ಪತ್ರಿಕೆ ನಡೆಸುವುದು, ಚಂದಾ ಎತ್ತಿ ಗಣೇಶನನ್ನು ಕೂರಿಸುವುದು, ಹಾಸ್ಯ ಡಾನ್ಸ್ ಆರ್ಕೆಸ್ಟ್ರಾ ಮುಂತಾದ ಜನಪ್ರಿಯ ಕಾರ್ಯಕ್ರಮಗಳನ್ನು ಆಯೋಜಿಸುವುದು ಇನ್ನೂ ಮುಂತಾದ ಅನುತ್ಪಾದಕ ಚಟುವಟಿಕೆಯಲ್ಲಿ ತೊಡಗುತ್ತಾರೆ. ಇಂತಹ ಚಟುವಟಿಕೆಗಳಿಗೆ ಎತ್ತುವ ‘ಚಂದಾ’ ದಂತಹ ಚೂರುಪಾರು ಉತ್ಪಾದನೆಯನ್ನು ದಿನದ ಮೋಜಿನ ಖರ್ಚಿಗೆ ಜೋಡಿಸಿಕೊಳ್ಳುತ್ತಾರೆ.

ಇಂತಹ ಯುವ ಸಮುದಾಯವನ್ನು ರಾಜಕೀಯ ಚಟುವಟಿಕೆಗೆ ರಾಜಕಾರಣಿಗಳು, ಧಾರ್ಮಿಕ ಚಟುವಟಿಕೆಗಳಿಗೆ ಧಾರ್ಮಿಕ ಮೂಲಭೂತವಾದಿಗಳು, ಹುಸಿ ಜನಪ್ರಿಯತೆಯನ್ನು ಪ್ರಚುರಪಡಿಕೊಳ್ಳುವ ಖಾಯಲಿ ಇರುವ ಸ್ಥಳೀಯ ಉದ್ಯಮಿ ಕಮ್ ಸಮಾಜ ಸೇವಕರು ಬಳಸಿಕೊಳ್ಳುತ್ತಾರೆ. ಇಂದು ಮುಸ್ಲೀಂ ಭಯೋತ್ಪಾದಕ ಸಂಘಟನೆಗಳಿರಲಿ, ಅರ್.ಎಸ್.ಎಸ್ನಂತಹ ಹಿಂದೂ ಮೂಲಭೂತವಾದಿ ಸಂಘಟನೆಗಳಿರಲಿ ಇಲ್ಲೆಲ್ಲಾ ಇರುವುದು ಈ ಅರೆ ವಿದ್ಯಾವಂತ ನಿರುದ್ಯೋಗಿ ಯುವಜನರು. ಗ್ರಾಮೀಣ ಪ್ರದೇಶಗಳಲ್ಲಿ ಈ ಬೆಳವಣಿಗೆ ಜಾತಿಯನ್ನಾಧರಿಸಿ ಬೆಳೆಯುತ್ತಿದೆ. ಆಯಾ ಜಾತಿಯ ಅರೆವಿದ್ಯಾವಂತ ನಿರುದ್ಯೋಗಿ ಯುವ ಜನತೆಯನ್ನು ಪೋಷಿಸುವ ಶಕ್ತಿಗಳೂ ಜಾಗೃತವಾಗಿವೆ. ಜಾತಿಯನ್ನು ಬಂಡವಾಳ ಮಾಡಿಕೊಳ್ಳುವ ಆಯಾ ಸಮುದಾಯದ ರಾಜಕಾರಣಿಗಳು, ಮಠಾದೀಶರು, ಆರ್ಥಿಕ ಸ್ಥಿತಿವಂತರು ಆಯಾ ಜಾತಿಯ ಅರೆವಿದ್ಯಾವಂತ ನಿರುದ್ಯೋಗಿ ಯುವ ಜನತೆಯನ್ನೇ ಆಯ್ದುಕೊಳ್ಳುತ್ತಿದೆ. ಕರ್ನಾಟಕ, ಕನ್ನಡ ರಕ್ಷಣೆಯ ಹೆಸರಲ್ಲಿ ಹುಟ್ಟಿಕೊಂಡಿರುವ ಕನ್ನಡಪರ ಸಂಘಟನೆಗಳ ಸದಸ್ಯರು ಕೂಡ ಇವರೇ ಆಗಿದ್ದಾರೆ.

ಹೀಗೆ ಬಳಕೆಗೊಳ್ಳುತ್ತಿರುವ ಯುವ ಜನತೆಯನ್ನು ಆಯಾ ಜಾತಿಯ ವಕ್ತಾರರನ್ನಾಗಿ ಸಿದ್ದಗೊಳಿಸಲಾಗುತ್ತಿದೆ. ಹಾಗಾಗಿ ಯುವಜನತೆ ಜಾತಿವಾರು, ಪ್ರಾದೇಶಿಕವಾರು, ಉಪಜಾತಿವಾರು ಚಿಕ್ಕ ಚಿಕ್ಕ ಗುಂಪುಗಳಾಗಿ ಒಡೆಯುತ್ತಿವೆ. ಈ ಗುಂಪುಗಳು ಒಂದಕ್ಕೊಂದು ವಿರುದ್ಧವೆಂಬಂತೆ ಎದುರುಬದುರು ನಿಲ್ಲುತ್ತಿವೆ. ಇದರ ಪರಿಣಾಮ ಜಾತಿಗಲಬೆಗಳಲ್ಲಿ ಕಾಣುತ್ತದೆ. ಈ ಎಲ್ಲಾ ಕೆಳಜಾತಿ ದಲಿತ ದಮನಿತ ಸಮುದಾಯಗಳನ್ನು ಶೋಷಿಸುವ ಶಕ್ತಿಗಳು ದೇಶಮಟ್ಟದಲ್ಲಿ ಮತ್ತು ಜಾಗತಿಕವಾಗಿಯೂ ಬಲಗೊಳ್ಳುತ್ತಿರುವುದಕ್ಕೂ, ಇಂತಹ ಏಕರೂಪಿ ಶತ್ರುವನ್ನು ಹಿಮ್ಮೆಟ್ಟಿಸಲು ಜಾಗ್ರತವಾಗಬೇಕಿದ್ದ ದಲಿತ ಕೆಳಜಾತಿಯ ಯುವ ಸಮುದಾಯ ಛಿದ್ರಗೊಳ್ಳುವುದಕ್ಕೂ ಸರಿಯಾಗಿದೆ. ಕರ್ನಾಟಕದಲ್ಲಿ ನಡೆಯುತ್ತಿರುವ ದಲಿತರ ಮೇಲಿನ ದಬ್ಬಾಳಿಕೆ, ಬಹಿಷ್ಕಾರ ಶೋಷಣೆಗಳಿಗೆ ಮೇಲುಜಾತಿಗಳ ಜತೆ ಕುರುಬ, ನಾಯಕ ಮೊದಲಾದ ಆಯಾ ಭಾಗದ ಪ್ರಭಾವಿ ಕೆಳಜಾತಿಗಳು ಕಾರಣವಾಗುತ್ತಿರುವುದು ಆತಂಕಕಾರಿ. ಇದೊಂದು ಭವಿಷ್ಯದ ದೊಡ್ಡ ಅಪಾಯವೂ ಕೂಡ. ಉತ್ತರ ಕರ್ನಾಟಕದ ದಲಿತ ಶೋಷಣೆಯು ಮೈಸೂರು ಭಾಗದ ದಲಿತರಿಗೆ ಸಮಸ್ಯೆಯಲ್ಲ ಎನ್ನುವ ಹಂತಕ್ಕೆ ಈ ಛಿದ್ರೀಕರಣ ಬೆಳೆದಿದೆ.

ಇಂತಹ ಕಾರಣಗಳಿಗಾಗಿ ದಲಿತ ಕೆಳಜಾತಿ ಯುವಕರ ನಡೆಗಳು ಚರ್ಚಾರ್ಹವಾಗಿವೆ. ಕಳೆದ ವರ್ಷ ಚಾಮರಾಜನಗರದಲ್ಲಿ ಅಂಬೇಡ್ಕರ್ ಫೋಟೋವನ್ನು ಆಹ್ವಾನ ಪತ್ರಿಕೆಯಲ್ಲಿ ಪ್ರಕಟಿಸಿಲ್ಲ ಎನ್ನುವ ಕಾರಣಕ್ಕೆ ಕನ್ನಡ ಪುಸ್ತಕ ಪ್ರಾಧೀಕಾರವು ಆಯೋಜಿಸಿದ ದಲಿತ ಸಾಹಿತ್ಯ ಸಂಸ್ಕೃತಿಯ ಸೆಮಿನಾರೊಂದನ್ನು ಅಲ್ಲಿನ ದಲಿತ ಯುವಕರು ನಡೆಯದಂತೆ ನಿಲ್ಲಿಸಿದ್ದು ಚರ್ಚೆಗೆ ಕಾರಣವಾಗಿತ್ತು. ಇದನ್ನು ಆಧರಿಸಿ ದಲಿತ ಯುವಕರ ಅನಾರೋಗ್ಯಕರ ನಡೆಗಳ ಬಗ್ಗೆ ಚರ್ಚೆಯೂ ಆಯಿತು. ಮುಖ್ಯವಾಗಿ ಮೈಸೂರು ಚಾಮರಾಜನಗರ ಭಾಗದಲ್ಲಿ ಅರೆವಿದ್ಯಾವಂತ ದಲಿತ ಯುವಕರ ಸಂಖ್ಯೆ ದೊಡ್ಡದಿದೆ. ಇದರಲ್ಲಿ ಕೆಲವರು ರಾಜಕೀಯವಾಗಿ ಬಿಎಸ್.ಪಿ ಜತೆಗೂ ಗುರುತಿಸಿಕೊಂಡಿದ್ದಾರೆ. ಈ ಯುವಕರಲ್ಲಿಯೇ ಒಂದು ಸಣ್ಣ ಜಾಗೃತ ಗುಂಪಿದ್ದರೆ, ಮತ್ತೊಂದು ದೊಡ್ಡಮಟ್ಟದ ಅಸೂಕ್ಷ್ಮ ಗುಂಪಿದೆ. ಈ ಗುಂಪು ಕೆಲವೆಡೆ ಪುಂಡಾಟಿಕೆ ಒಳಗೊಂಡಂತೆ ಅತಿರೇಕದ ನಡೆಗಳನ್ನೂ ಮಾಡುತ್ತಿದೆ. ಇದು ಯುವಜನತೆಯ ಅರೆಶಿಕ್ಷಣದ ಪರಿಣಾಮದಂತೆ ಕಾಣುತ್ತದೆ. ಈ ವಿದ್ಯಮಾನ ಕೇವಲ ದಲಿತ ಯುವ ಸಮುದಾಯಕ್ಕೆ ಮಾತ್ರ ಅನ್ವಯವಾಗುವಂತಿಲ್ಲ. ಈ ಸಮಸ್ಯೆ ಎಲ್ಲಾ ಕೆಳಜಾತಿಗಳ ಅರೆವಿದ್ಯಾವಂತ ಅರೆಉದ್ಯೋಗಿ/ನಿರುದ್ಯೋಗಿ ಯುವ ಸಮುದಾಯದಲ್ಲಿದ್ದಂತಿದೆ.

ಹಿಂದೊಮ್ಮೆ ಸುದೀಪ್ ಅಭಿನಯದ ‘ವೀರ ಮದಕರಿ’ ಸಿನಿಮಾ ಬಂದಾಗ ಕರ್ನಾಟಕದಾದ್ಯಾಂತ ವಾಲ್ಮೀಕಿ/ಬೇಡ ಸಮುದಾಯದ ಯುವ ಜನತೆ ಸಿನೆಮಾ ಪೋಷ್ಟರ್ ಎದುರು ಪ್ರಾಣಿಬಲಿಕೊಟ್ಟು ಸಂಭ್ರಮಿಸಿದರು. ‘ಮೈಲಾರಿ’ ಸಿನೆಮಾ ಬಂದಾಗಲೂ ಕೆಲವೆಡೆ ಕುರುಬ ಸಮುದಾಯದ ಯುವಕರು ಸಂಭ್ರಮಿಸಿದ್ದರು. ಈ ನಡೆ ಸಮುದಾಯಕ್ಕೆ ಏನನ್ನು ಕೊಡಲು ಸಾಧ್ಯ? ಇಂತಹದ್ದೇ ಘಟನೆಗಳನ್ನು ಆಯಾ ಕೆಳಜಾತಿಗಳ ಯುವಜನತೆಯ ನೆಲೆಯಲ್ಲಿ ಹೆಕ್ಕಿ ಕೊಡಲು ಸಾಕಷ್ಟು ಉದಾಹರಣೆಗಳು ಸಿಗುತ್ತವೆ. ಇಂತಹ ಆರೋಪಗಳ ಪಟ್ಟಿಯನ್ನು ಗಮನಿಸುತ್ತಲೇ ಅರೆವಿದ್ಯಾವಂತ ನಿರುದ್ಯೋಗಿ ಈ ಯುವ ಸಮುದಾಯವನ್ನು ಜನಪರ ಚಳುವಳಿಯಲ್ಲಿ ತೊಡಗಿಸಿಕೊಳ್ಳುವ ಸಾಧ್ಯತೆಗಳ ಬಗ್ಗೆ ಚಿಂತಿಸಬೇಕಿದೆ.

ಇದೀಗ ಕರ್ನಾಟಕದಲ್ಲಿ ದೊಡ್ಡಮಟ್ಟದ ಯುವಜನತೆ ಶಬರಿಮಲೆಗೆ ಸ್ವಾಮಿ ಮಾಲೆ ಹಾಕಿದ್ದಾರೆ. ಇದು ಯುವಜನತೆಯ ಪ್ಯಾಶನ್ ಆಗಿ ಬದಲಾಗಿದೆ. ಇದರಲ್ಲಿ ದಲಿತ ಕೆಳಜಾತಿ ಯುವಕರ ಸಂಖ್ಯೆ ಹೆಚ್ಚಿದೆ. ಈ ಆಚರಣೆಯ ಆಳದಲ್ಲಿ ಕೆಳಜಾತಿಗಳ ಮೇಲ್ಚಲನೆಯ ಅಂಶವೂ ಸೂಕ್ಷ್ಮವಾಗಿದೆ. ಕಳೆದ ಹತ್ತು ಹದಿನೈದು ವರ್ಷಗಳಲ್ಲಿ ಈ ಮಾಲೆಯ ಅನುಕರಣೆ ಪ್ರಾದೇಶಿಕ ಮಟ್ಟದಲ್ಲೂ ದೊಡ್ಡಮಟ್ಟದಲ್ಲಿ ಬೆಳೆಯುತ್ತಿದೆ ಇಲ್ಲೆಲ್ಲಾ ದಲಿತ ಕೆಳಜಾತಿಗಳ ಯುವಕರ ಸಂಖ್ಯೆಯೇ ಪ್ರಮುಖವಾಗಿದೆ. ಶಿವಮೊಗ್ಗ ಭಾಗದ ದತ್ತ ಮಾಲೆ ಒಳಗೊಂಡಂತೆ ಹಂಪಿಯಲ್ಲಿ ವಿರೂಪಾಕ್ಷ ಮಾಲೆ, ದುರ್ಗಾಮಾಲೆ, ಹನುಮಮಾಲೆ ಈಗ ಹೆಚ್ಚು ಪ್ರಚಲಿತದಲ್ಲಿದ್ದು ಇವನ್ನು ಭಜರಂಗದಳವು ಆಯೋಜಿಸುತ್ತಿದೆ. ಹನುಮಮಾಲೆ ವರ್ಷದಿಂದ ವರ್ಷಕ್ಕೆ ಹೆಚ್ಚು ಜನಪ್ರಿಯವಾಗುತ್ತಿದೆ. ಈ ಬಾರಿ ಹನುಮಮಾಲೆ ಹಾಕಿದವರ ಸಂಖ್ಯೆ ಅಂದಾಜು ನಾಲ್ಕು ಸಾವಿರ ಮುಟ್ಟಿತ್ತು. ಬಳ್ಳಾರಿ ಜಿಲ್ಲೆಯ ಕೊಟ್ಟೂರಿನಲ್ಲಿ ಕೊಟ್ಟೂರೇಶ್ವರ ಮಾಲೆ, ನಾಯಕನಹಟ್ಟಿಯಲ್ಲಿ ‘ತಿಪ್ಪೇಸ್ವಾಮಿ ಮಾಲೆ’ ತರಹದ ಪ್ರಾದೇಶಿಕವಾಗಿ ಬೇರೆ ಬೇರೆ ಮಾಲೆಗಳಿವೆ. ಈ ಮಾಲೆಗಳನ್ನು ಹಾಕುವ ಬಹುಸಂಖ್ಯಾತ ಯುವಕರು ದಲಿತ ಕೆಳಜಾತಿಗೆ ಸೇರಿದವರಾಗಿದ್ದಾರೆ. ಈ ಬಗೆಯ ಮಾಲೆ ಧರಿಸುವ ಯುವಜನತೆಯನ್ನು ಹಿಂದೂ ಧಾರ್ಮಿಕ ಮೂಲಭೂತವಾದಿಗಳು ತಮ್ಮ ಸಂಗಾತಿಗಳನ್ನಾಗಿ ಮಾಡಿಕೊಳ್ಳುವುದರಲ್ಲಿ ಕ್ರಿಯಾಶೀಲರಾಗಿದ್ದಾರೆ.

ನಾನು ಈಚೆಗೆ ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ಮಹಾಲಿಂಗಪುರಕ್ಕೆ ಹೋಗಿದ್ದೆ. ಅಲ್ಲಿ ಸೌಹಾರ್ಧ ಬೆಸೆಯುವ ಹರಿಕಥೆ ಸಂವಾಂದ ಮಾಡುವ ಹಿಂಬ್ರಾಹಿಂ ಸುತಾರ ಅವರ ಅಭಿನಂದನ ಕಾರ್ಯಕ್ರಮವಿತ್ತು. ಈ ಕಾರ್ಯಕ್ರಮದಲ್ಲಿ ಒಂದು ಸಾವಿರದಷ್ಟು ಜನರು ಸೇರಿದ್ದರು. ಸೂಕ್ಷ್ಮವಾಗಿ ಗಮನಿಸಿದರೆ ಇಲ್ಲಿ ನೆರೆದವರೆಲ್ಲಾ 40-45 ವರ್ಷ ಮೀರಿದವರು ಮತ್ತು ಹೆಚ್ಚಾಗಿ ಪುರುಷರು. ಇವರೆಲ್ಲಾ ಯಾವ ಧರ್ಮ, ಜಾತಿ ಕಟ್ಟಿಕೊಂಡು ಏನಾಗಬೇಕು ಎನ್ನುವ ಉದಾರ ಮನೋಭಾವದ ಜನರು. ಇದನ್ನು ನೋಡಿದರೆ ಕಳೆದ ಮುವತ್ತು ವರ್ಷದಿಂದ ಸೌಹಾರ್ಧ ಪರಂಪರೆ ಕಟ್ಟುವಲ್ಲಿ ಶ್ರಮಿಸುತ್ತಿರುವ ಸುತಾರ ಅವರ ಶ್ರೋತ್ರುಗಳು ಯುವಜನತೆಯಲ್ಲ ಎನ್ನುವುದು ಅರಿವಿಗೆ ಬಂತು. ಇದಕ್ಕೆ ಸಾಕ್ಷಿಯೆಂಬಂತೆ ಈಚೆಗೆ ಮಹಾಲಿಂಗಪುರಕ್ಕೆ ಸಮೀಪದ ಮುಧೋಳದಲ್ಲಿ ನಡೆದ ಕೋಮುಗಲಭೆಯಲ್ಲಿ ಯುವಕರೆ ಹೆಚ್ಚಿದ್ದರು. ಗ್ರಾಮೀಣ ಭಾಗದ ಮತೀಯ ಗಲಬೆಗಳು ಧರ್ಮದ ನೆಲೆಯಲ್ಲಿರದೆ ಬಹುಪಾಲು ಜಾತಿಯ ನೆಲೆಯಲ್ಲಿವೆ. ಅಂದರೆ ಮೇಲುಜಾತಿಗಳ ಕೆಳಜಾತಿಗಳ ಸಂಘರ್ಷ, ಕೆಳಜಾತಿ ಮತ್ತು ದಲಿತ ಸಮುದಾಯಗಳ ನಡುವಿನ ಸಂಘರ್ಷ, ದಲಿತ ಸಮುದಾಯಗಳಲ್ಲಿಯೂ ಸ್ಪೃಶ್ಯ ಅಸ್ಪೃಶ್ಯ ಎಡ ಬಲ ಸಮುದಾಯಗಳ ನಡುವಿನ ಸಂಘರ್ಷಗಳು ಹೆಚ್ಚುತ್ತಿವೆ. ಈ ಸಂಘರ್ಷಗಳಲ್ಲಿ ಮುಂಚೂಣಿಯಲ್ಲಿರುವುದು ಆಯಾ ಸಮುದಾಯದ ಯುವಜನತೆ ಎನ್ನುವುದನ್ನು ಗಮನಿಸಬೇಕಾಗಿದೆ.

ಉತ್ತರ ಕರ್ನಾಟಕ, ಹೈದರಾಬಾದ ಕರ್ನಾಟಕದ ಯುವಜನತೆಯ ಸಮಸ್ಯೆಗಳಿಗೆ ಭಿನ್ನ ಮುಖಗಳಿವೆ. ಈ ಬರಹದ ಆರಂಭಕ್ಕೆ ಉಲ್ಲೇಖಿಸಿದಂತೆ ಈ ಭಾಗದ ದಲಿತ ಕೆಳಜಾತಿ ಯುವ ಸಮುದಾಯ ವರ್ಷದಲ್ಲಿ ಏಳೆಂಟು ತಿಂಗಳು ಕೂಲಿಗಾಗಿ ವಲಸೆ ಹೋಗುತ್ತಾರೆ. ಇದರಲ್ಲಿ ಕುಟುಂಬ ಸಮೇತ ವಲಸೆ ಹೋಗುವುದು ಒಂದಾದರೆ, ಕುಟುಂಬದ ಯುವಕರು ಮಾತ್ರ ವಲಸೆ ಹೋಗುವುದು ಮತ್ತೊಂದು. ಹೀಗಾಗಿ ಈ ಭಾಗದ ಹಳ್ಳಿಗಳಲ್ಲಿ ಹೆಚ್ಚಾಗಿ ಕೆಳಜಾತಿಯ ಮಹಿಳೆಯರು, ವಯಸ್ಸಾದವರು ಉಳಿಯುತ್ತಾರೆ. ಉಳಿದಂತೆ ಮೇಲುಜಾತಿಗಳ ಕುಟುಂಬ ಮತ್ತು ಯುವಕರು ಹೆಚ್ಚಾಗಿರುತ್ತಾರೆ. ಹೀಗೆ ಹಳ್ಳಿಗಳಲ್ಲಿ ಉಳಿಯುವ ಮೇಲುಜಾತಿಯ ಯುವಕರನ್ನು ಕೂಡ ಧಾರ್ಮಿಕ ಮೂಲಭೂತವಾದಿಗಳು ತಮ್ಮೆಡೆಗೆ ಸೆಳೆಯಲಾಗುತ್ತಿದೆ. ಈ ಮೇಲುಜಾತಿ ಯುವಕರು ವಲಸೆಯಿಂದ ಬಂದ ಅಥವಾ ವಲಸೆ ಹೋಗದ ಕೆಳಜಾತಿ ಮತ್ತು ದಲಿತ ಯುವಕರನ್ನು ಇಂತಹ ಸಂಘಟನೆಗಳಿಗೆ ಒಳಗುಮಾಡಿಕೊಳ್ಳುತ್ತಾರೆ. ಇದು ಮುಖ್ಯವಾಗಿ ಬೆಳಗಾವಿ, ಬಿಜಾಪುರ ಜಿಲ್ಲೆಗಳಲ್ಲಿ ಹೆಚ್ಚು ಕಾಣುತ್ತಿದೆ.

 ಇಲ್ಲಿ ಬಳಸಿರುವ ಯುವ ಸಮುದಾಯ ಪ್ರಧಾನವಾಗಿ ‘ಯುವಕರ’ನ್ನು ಕೇಂದ್ರೀಕರಿಸಿದೆ. ಇದರಲ್ಲಿ ದಲಿತ ಕೆಳಜಾತಿಗಳ ಯುವತಿಯರ ನೆಲೆಗಳನ್ನು ನೋಡಿದರೆ ಅಷ್ಟು ಆಶಾದಾಯಕವಾಗಿಲ್ಲ. ಕಾರಣ ಮೇಲೆ ಹೇಳಿದ ನಾಲ್ಕು ಗುಂಪುಗಳಲ್ಲಿ ಮೊದಲನೆ ಗುಂಪಿಗೆ ಸೇರುವ ಅಂದರೆ ಹತ್ತನೇ ತರಗತಿಯ ಒಳಗೆ ಓದನ್ನು ಮಟುಕುಗೊಳಿಸಿಕೊಂಡ ಹುಡುಗಿಯರ ಸಂಖ್ಯೆ ಹೆಚ್ಚಾಗಿದೆ. ಉಳಿದ ಮೂರು ಗುಂಪುಗಳಲ್ಲಿ ಈ ಸಂಖ್ಯೆ ಇಳಿಮುಖ ಚಲನೆ ಹೊಂದಿದೆ. ಸಾಮಾನ್ಯವಾಗಿ ಟೈಲರಿಂಗ್ ಮುಂತಾದ ಮನೆ ಒಳಗೆ ಮಾಡಬಹುದಾದ ಸ್ವ ಉದ್ಯೋಗಗಳಲ್ಲಿ ತೊಡಗಿಕೊಂಡವರ ಸಂಖ್ಯೆ ದೊಡ್ಡದಿದೆ. ಬಿಟ್ಟರೆ ಕೃಷಿಸಂಬಂಧಿ ಚಟುವಟಿಕೆಗಳಲ್ಲಿ ಹೆಚ್ಚಾಗಿ ಭಾಗಿಯಾಗಿದ್ದಾರೆ.

ಇದನ್ನು ನೋಡಿದರೆ ದಲಿತ ಕೆಳಜಾತಿ ಯುವಕರು ಕೃಷಿಸಂಬಂದಿ ಚಟುವಟಿಕೆಗಳಲ್ಲಿ ಭಾಗವಹಿಸುವಿಕೆಯ ಪ್ರಮಾಣ ಮೊದಲಿಗಿಂತ ಕಡಿಮೆಯಾಗುತ್ತಿದೆ. ಮುಖ್ಯವಾಗಿ ನಗರಕ್ಕೆ ಹೊಂದಿಕೊಂಡಂತೆ ಇರುವ ಹಳ್ಳಿಗಳ ಅರೆವಿದ್ಯಾವಂತ ಯುವತಿಯರು ಗಾರ್ಮೆಂಟ್ಸ್ ಪ್ಯಾಕ್ಟರಿ, ಬಟ್ಟೆ ಅಂಗಡಿ ಒಳಗೊಂಡಂತೆ ಎಲ್ಲಾ ಬಗೆಯ ವ್ಯಾಪಾರಿ ಮಳಿಗೆಗಳ, ಚಿಕ್ಕಪುಟ್ಟ ಪ್ಯಾಕ್ಟರಿಗಳ ಒಳಾಂಗಳ ಕೆಲಸ ಮಾಡಲು ತೀರಾ ಕಡಿಮೆ ಕೂಲಿಗೆ ದುಡಿಯುವುದಿದೆ. ಇದರಲ್ಲಿ ಅಸ್ಪ್ರೃಶ್ಯ ದಲಿತ ಸಮುದಾಯದ ಹುಡುಗಿಯರ ಭಾಗವಹಿಸುವಿಕೆ ಕಡಿಮೆ ಇದ್ದರೂ ಅದು ಹೆಚ್ಚಾಗಿ ಸ್ವಚ್ಚಗೊಳಿಸುವಂತಹ ಕೆಳದರ್ಜೆಯ ಕೆಲಸಗಳಲ್ಲಿದ್ದಾರೆ. ಕಾರಣ ಈ ಸಮುದಾಯಗಳಲ್ಲಿ ಹುಡುಗಿಯರ ಶಿಕ್ಷಣ ತುಂಬಾ ಕಡಿಮೆ ಇರುವುದು ಮತ್ತು ಉದ್ಯೋಗಕ್ಕೆ ಸೇರಿಸಿಕೊಳ್ಳುವ ಸ್ಥಾನಗಳಲ್ಲಿ ಮೇಲುಜಾತಿಗಳ ಉದ್ಯೋಗದಾತರಿರುವುದು. ಉಳಿದಂತೆ ಸ್ಪೃಶ್ಯ ಕೆಳಜಾತಿಗಳು ಮತ್ತು ಆರ್ಥಿಕವಾಗಿ ಕೆಳವರ್ಗದ ಮೇಲುಜಾತಿ ಹುಡುಗಿಯರ ಸಂಖ್ಯೆ ದೊಡ್ಡದಿದೆ. ಇಂತಹ ವೃತ್ತಿಗಳಿಗೆ ಮಹಿಳೆಯರನ್ನು ನೇಮಿಸಿಕೊಳ್ಳಲು ಕೆಲವು ಲಾಭದಾಯಕ ಅಂಶಗಳಿವೆ. ಹುಡುಗಿಯರು ನಿಷ್ಠೆಯಿಂದ ದುಡಿಯುತ್ತಾರೆಂತಲೂ, ಮಹಿಳಾ ಗಿರಾಕಿಗಳಿಗೆ ಹೊಂದಿಕೊಳ್ಳುತ್ತಾರೆಂತಲೂ, ಹೆಚ್ಚಿನ ಸಂಬಳಕ್ಕಾಗಿ ಬೇಡಿಕೆ ಸಲ್ಲಿಸುವುದಿಲ್ಲವೆಂತಲೂ, ಪದೇ ಪದೇ ಕೆಲಸ ಮಾಡುವ ಸ್ಥಳಗಳನ್ನು ಬದಲಾಯಿಸುವುದಿಲ್ಲವೆಂತಲೂ, ಅನ್ಯ ಕಾರಣಗಳಿಗಾಗಿ ಅಂಗಡಿ/ಪ್ಯಾಕ್ಟರಿ ಬಿಟ್ಟು ಹೊರ ಹೋಗುವುದಿಲ್ಲವೆಂತಲೂ ಹಲಬಗೆಯ ಕಾರಣಗಳಿವೆ. ಈ ಬಗೆಯ ಉದ್ಯೋಗ ಸಾಮಾನ್ಯವಾಗಿ ದೊಡ್ಡಮಟ್ಟದಲ್ಲಿ ಖಾಸಗಿ ವಲಯದಲ್ಲಿದೆ.
**

ದೇಶದ ಎಲ್ಲಾ ಕೋಮುಗಲಬೆಗಳಲ್ಲಿ ಪ್ರಾಣತೆತ್ತವರು ಮತ್ತು ಜೈಲುಪಾಲಾದವರು ದಲಿತ ಕೆಳಜಾತಿ ಬುಡಕಟ್ಟು ಸಮುದಾಯದ ಯುವಕರು. ಈ ಗಲಬೆಗಳಿಗೆ ಕುಮ್ಮಕ್ಕು ನೀಡಿ ಪ್ರೇರೇಪಿಸಿದ ಮೂಲಭೂತವಾದಿ ಸಂಘಟನೆಗಳು ತೆರೆಮರೆಯಲ್ಲಿ ವಿಕಟ ನಗೆನಗುತ್ತಾ ಮತ್ತೊಂದು ಗಲಬೆಗೆ ಸಿದ್ದತೆ ಮಾಡುತ್ತಿರುತ್ತಾರೆ. ಇಂತಹ ಸಂಧರ್ಭದಲ್ಲಿ ದಲಿತ ಕೆಳಜಾತಿ ಬುಡಕಟ್ಟುಗಳು ಹಿಂದೂ ಮೂಲಭೂತವಾದಿ ಸಂಘಟನೆಗಳಿಗೆ ಆಯುಧ ವಾಗುವುದನ್ನು ತಪ್ಪಿಸಬೇಕಿದೆ. ಅಂತೆಯೇ ಇವರ ಕೋಮುಗಲಬೆಯ ಕುಮ್ಮಕ್ಕಿಗೆ ಬಲಿಯಾಗದಂತೆ ಸ್ವತಃ ಸಮುದಾಯಗಳು ಎಚ್ಚರ ವಹಿಸಬೇಕಿದೆ. ಈಚೆಗೆ ಹೊಸಪೇಟೆಯಲ್ಲಿ ನಾಯಕ ಸಮುದಾಯ ಅಂತಹ ಎಚ್ಚರವನ್ನು ಪ್ರದರ್ಶಿಸಿ ಎಲ್ಲಾ ದಲಿತ ಕೆಳಜಾತಿಗಳಿಗೆ ಮಾದರಿಯಾಯಿತು.

ಕಳೆದ ಡಿಸೆಂಬರಿನಲ್ಲಿ ಮುಸ್ಲಿಂ ಯುವಕನ ಹೆಸರಲ್ಲಿ ಹಂಚಲ್ಪಟ್ಟ ಉದ್ದೇಶಪುರಿತ ಕರಪತ್ರವೊಂದು ಹೊಸಪೇಟೆಯಲ್ಲಿ ಒಂದೆರಡು ದಿನ ಉದ್ವಿಗ್ನ ಪರಿಸ್ಥಿತಿಯನ್ನು ಹುಟ್ಟಿಸಿತ್ತು. ಆಗ ಹೊಸಪೇಟೆಯ ಜಾಗೃತ ನಾಯಕ ಬಳಗವು ಈ ಘಟನೆಯನ್ನು ತುಂಬಾ ಸೂಕ್ಷ್ಮವಾಗಿ ನಿರ್ವಹಿಸಿ ಪತ್ರವೊಂದನ್ನು ಬರೆಯಿತು. ಈ ಪತ್ರದಲ್ಲಿ ‘ಜಾಗೃತ ನಾಯಕ ಬಳಗದಲ್ಲಿ ಎಲ್ಲಾ ಜಾತಿ ಸಮುದಾಯದ ಸದಸ್ಯರಿದ್ದು ಸೌಹಾರ್ಧತೆ ಪರವಾದ ಧೋರಣೆ ಹೊಂದಿದೆ. ಅನಾಮಧೇಯ ಕರಪತ್ರಕ್ಕೆ ಭಾವೋಧ್ವೇಗಗೊಳ್ಳುವ ಸಂಘಟನೆ ನಮ್ಮದಲ್ಲ, ದಯಮಾಡಿ ಶಾಂತಿ ಸೌಹಾರ್ಧತೆಗೆ ಭಂಗ ತರುವ ಬಾಲಿಶತನದ ಹೇಳಿಕೆಗಳಿಗೆ ಕಿವಿಗೊಡಬಾರದೆಂದು ಈ ಮೂಲಕ ಮನವಿ ಮಾಡಿಕೊಳ್ಳುತ್ತೇವೆ’ ಎಂದು ಬರೆಯಲಾಗಿತ್ತು. ಅಂತೆಯೇ ಜಾಗೃತ ಬಳಗದ ಹಿರಿಯರು ಕೂಡಲೆ ತಮ್ಮ ಸಮುದಾಯದ ಯುವಕರಿಗೆ ತಿಳಿಹೇಳಿ ಗಲಭೆ ನಡೆಯದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಂಡರು. ನಂತರದಲ್ಲಿ ಈ ಕರಪತ್ರ ರೂಪಿಸಿದ್ದು ಭಜರಂಗದಳದವರೆಂದು ಶಂಕಿಸಿ ಪೋಲೀಸರು ಕೆಲವರನ್ನು ಬಂಧಿಸಿದ್ದರು.

ಹೀಗೆ ಕರ್ನಾಟಕದಲ್ಲಿ ಒಂದೆಡೆ ದಲಿತ ಕೆಳಜಾತಿಗಳ ಯುವಕರನ್ನು ಮೂಲಭೂತವಾದಿಗಳು ತಮ್ಮ ಆಯುಧಗಳನ್ನಾಗಿ ಬಳಸಿಕೊಳ್ಳುತ್ತಿದ್ದರೆ, ಇನ್ನೊಂದೆಡೆ ಎನ್.ಜಿ.ಓಗಳು ಅರೆವಿದ್ಯಾವಂತ ಕೆಳಜಾತಿ ಯುವಕರಿಗೆ ಕೆಲಸ ಕೊಟ್ಟು ತಮ್ಮ ಹಿತಾಸಕ್ತಿಗಳಿಗೆ ಪುರಕವಾಗಿ ಅವರನ್ನು ಅಣಿಗೊಳಿಸುತ್ತಿವೆ. ಈ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಯ ಬಗ್ಗೆ ಜನರಲ್ಲಿ ಅವಿಶ್ವಾಸ ಮೂಡಿಸುತ್ತ ಜನರ ಒಲವು ಖಾಸಗಿ ಸಂಸ್ಥೆ ಮತ್ತು ಉತ್ಪಾದನೆಗಳ ಕಡೆ ಒಲಿಯುವಂತೆ ಮಾಡುತ್ತಿವೆ. ಇದರಲ್ಲಿ ಯುವಜನತೆ ಜೊತೆ ಖಾಸಗೀಕರಣವನ್ನು ಬಿಗಿಯಾಗಿ ಕಟ್ಟುವ ಹುನ್ನಾರಗಳೂ ಇವೆ. ಇಂತಹ ಸಂದರ್ಭದಲ್ಲಿ ದಲಿತ ಕೆಳಜಾತಿಗಳ ಅರೆವಿದ್ಯಾವಂತ ನಿರುದ್ಯೋಗಿ ಯುವ ಸಮುದಾಯವನ್ನು ಜೀವಪರ ಚಟುವಟಿಕೆಗಳು ಪರಿಣಾಮಕಾರಿಯಾಗಿ ಒಳಗೊಳ್ಳುತ್ತಿಲ್ಲ. ಸಾಮಾನ್ಯವಾಗಿ ಜೀವಪರ ಚಿಂತನೆ, ಬರಹ, ಚಳವಳಿಗಳಲ್ಲಿರುವವರು ಒಂದು ಹಂತದ ಶಿಕ್ಷಣ ಪಡೆದವರು ಮತ್ತು ಜಾಗೃತವಾದವರು. ಇವರುಗಳೇ ಮತ್ತೆ ಮತ್ತೆ ಒಂದೆಡೆ ಸೇರುತ್ತ ಚಿಂತನ ಮಂಥನ ಮಾಡುತ್ತಿದ್ದಾರೆ. ಈ ಬಗೆಯ ಚಟುವಟಿಕೆಗಳೆಲ್ಲಾ ಶಿಕ್ಷಿತರ ಚಟುವಟಿಕೆಗಳಾಗಿ ನಗರ ಕೇಂದ್ರಿತವಾಗಿವೆ. ಇವು ಹಳ್ಳಿ ಗ್ರಾಮಕೇಂದ್ರವಾಗಿ ಹೆಚ್ಚು ವಿಸ್ತರಿಸದೆ ಈ ತಿಳಿವಿನ ಮೂಲಕ ಗ್ರಾಮಜಗತ್ತಿನ ಯುವಜನರನ್ನು ತಿದ್ದಲು ಅಥವಾ ಒಳಗೊಳ್ಳಲು ಸಾಧ್ಯವಿಲ್ಲ.

ಸೂಕ್ಷ್ಮವಾಗಿ ನಡೆಯಬೇಕಾದ ಜಾತಿ ಸಮುದಾಯಗಳ ಅಕಾಡೆಮಿಕ್ ಚರ್ಚೆ ಸಂವಾದಗಳಲ್ಲಿಯೂ ಒಂದೇ ಜಾತಿಯ ವಿದ್ವಾಂಸರನ್ನು ಸೇರಿಸುವುದಿದೆ. ಅದಕ್ಕೆ ಪುರಕವಾಗಿ ಅದೇ ಜಾತಿಯ ಯುವಜನತೆ ಒಳಗೊಂಡಂತೆ ಶ್ರೋತ್ರುವರ್ಗವನ್ನೂ ಕೂಡಿಹಾಕುವುದಿದೆ. ಇದೊಂದು ಕೆಟ್ಟ ಬೆಳವಣಿಗೆ. ಜಾತಿಯಾಧಾರಿತ ಅಧ್ಯಯನ ಪೀಠಗಳು ಮತ್ತು ಅಕಾಡೆಮಿಗಳ ಕಾರ್ಯಕ್ರಮಗಳ ಪಟ್ಟಿಯನ್ನು ನೋಡಿದರೆ ಅದು ಡಾಳಾಗಿ ಕಾಣುತ್ತದೆ. ಹಿಂದೊಮ್ಮೆ ಕನ್ನಡ ವಿಶ್ವವಿದ್ಯಾಲಯದ ವಾಲ್ಮೀಕಿ ಅಧ್ಯಯನ ಪೀಠವು ಬಳ್ಳಾರಿ ಜಿಲ್ಲೆಯ ಕೂಡ್ಲಿಗಿಯಲ್ಲಿ ಸಮುದಾಯ ಆಧಾರಿತ ಉಪನ್ಯಾಸ ಏರ್ಪಡಿಸಿದ್ದಾಗ ಮ್ಯಾಸಬೇಡ ಮತ್ತು ಊರುಬೇಡ ಎಂಬ ಪಂಗಡಗಳ ಕಾರಣಕ್ಕೆ ಈ ಸಮುದಾಯದ ಯುವ ಜನತೆ ಸಣ್ಣದಾಗಿ ಸಂಗರ್ಷಕ್ಕೆ ಇಳಿದಿತ್ತು. ಇಂತಹ ಬಿಡಿಬಿಡಿ ಘಟನೆಗಳು ಮುಂದೆ ಜಾತಿಮೂಲಭೂತವಾದ ಬಲಗೊಳ್ಳುವ ಲಕ್ಷಣಗಳಾಗಿ ಕಾಣುತ್ತಿವೆ. ಹೀಗೆ ರೂಪುಗೊಳ್ಳುವ ಜಾತಿ ಮೂಲಭೂತವಾದಕ್ಕೆ ವಿಶಾಲ ವ್ಯಾಪ್ತಿ ದೊರಕಿದರೆ ಅದು ಧಾರ್ಮಿಕ ಮೂಲಭೂತವಾದದ ಜೊತೆ ಬೆರೆಯುವುದು ದೊಡ್ಡ ಸಂಗತಿಯಲ್ಲ.

ಸೂಕ್ಷ್ಮವಾಗಿ ಗಮನಿಸಿದರೆ ಅರೆವಿದ್ಯಾವಂತ ಕೆಳಜಾತಿ ಯುವ ಜನತೆ ನಿರುದ್ಯೋಗದಲ್ಲಿ ತೊಡಗಿ ಅನ್ಯ ಚಟುವಟಿಕೆಯಲ್ಲಿ ತೊಡಗಿರುವಲ್ಲಿ ವ್ಯವಸ್ಥೆಯ ದೋಷವೂ ಇದೆ. ಆಧುನಿಕ ಶಿಕ್ಷಣ ಗ್ರಾಮೀಣ ಸಾಂಪ್ರದಾಯಿಕ ಉದ್ಯೋಗಗಳ ಕೌಶಲ್ಯದಿಂದ ವಂಚಿತರನ್ನಾಗಿಸಿದೆ. ಅಂತೆಯೇ ಕಲಿಯುತ್ತಿರುವ ಶಿಕ್ಷಣವನ್ನು ಆಧರಿಸಿದ ಉದ್ಯೋಗಗಳೂ ಸಿಗುತ್ತಿಲ್ಲ. ನಿರುದ್ಯೋಗಿ ಯುವಜನತೆಗಾಗಿ ಸರಕಾರ ಆಯೋಜಿಸುವ ಯೋಜನೆಗಳು ಪರಿಣಾಮಕಾರಿಯಾಗಿ ತಲುಪುತ್ತಿಲ್ಲ. ಹೀಗಾಗಿ ಇಡೀ ವ್ಯವಸ್ಥೆಯ ಒಳಗೇ ಈ ದೋಷ ಮುಗುಮ್ಮಾಗಿ ಕೂತಂತಿದೆ. ಇದನ್ನು ಸರಿಪಡಿಸದ ಹೊರತು ಮೇಲು ನೋಟದ ಪರಿಹಾರದ ಕ್ರಮಗಳು ಹೆಚ್ಚು ಪರಿಣಾಮ ಬೀರಲಾರವು. ಪುಂಡಾಟಿಕೆ ಮಾಡುವ ಕೆಳಜಾತಿ ಯುವಸಮುದಾಯವನ್ನು ಭೂತಗನ್ನಡಿಯಲ್ಲಿ ತೋರಿಸುತ್ತ ಅದನ್ನು ಸಾರ್ವತ್ರಿಕಗೊಳಿಸುವುದು, ವೈಚಾರಿಕ ಎಚ್ಚರದಿಂದ ಗಟ್ಟಿಯಾದ ಧ್ವನಿ ಎತ್ತುವ ಕೆಳಜಾತಿ ಯುವ ಸಮುದಾಯವನ್ನು ದಮನಗೊಳಿಸುವ ಪ್ರಕ್ರಿಯೆ ಇದರ ಮಧ್ಯೆಯೇ ವ್ಯವಸ್ಥಿತವಾಗಿ ನಡೆಯುತ್ತಿದೆ.

ಕಳೆದ ವರ್ಷ ಮದ್ರಾಸ್ ಐಐಟಿಯ ಅಂಬೇಡ್ಕರ್ ಪೆರಿಯಾರ್ ಸ್ಟಡಿ ಸರ್ಕಲ್ನ್ನು (APSC) ರದ್ದುಗೊಳಿಸಿ, ಪ್ರತಿಭಟನೆ ಹೆಚ್ಚಾದಾಗ ರದ್ದತಿಯನ್ನು ವಾಪಾಸು ಪಡೆದ ಪ್ರಸಂಗವನ್ನು ಗಮನಿಸಬಹುದು. 2015 ರ ಏಪ್ರಿಲ್ 14 ರ ಅಂಬೇಡ್ಕರ್ ಜಯಂತಿಯಂದು ಹುಟ್ಟಿಕೊಂಡ ಈ ಗುಂಪಿನ ಸದಸ್ಯರು 50 ರಷ್ಟಿದ್ದರು. ಈ ಸಣ್ಣ ಗುಂಪಿನ ಸದಸ್ಯರು ಸಾಮಾನ್ಯವಾಗಿ ಕೆಳಜಾತಿ ಮತ್ತು ದಲಿತ ಸಮುದಾಯಕ್ಕೆ ಸೇರಿದವರು. ಇವರು ಮೋದಿ ಸರಕಾರದ ನಡೆಯನ್ನು ತುಂಬಾ ಪರಿಣಾಮಕಾರಿಯಾಗಿ ವಿಶ್ಲೇಷಣೆ ಮಾಡುತ್ತಿದ್ದರು. ಈ ಕಾರಣವನ್ನು ಮುಂದುಮಾಡಿ ಎಮ್.ಹೆಚ್.ಆರ್.ಡಿ ರದ್ದತಿಗೆ ಮುಂದಾಗಿತ್ತು. ಇವುಗಳನ್ನೆಲ್ಲಾ ಗಮನಿಸಿದರೆ ಕೆಳಜಾತಿ ದಲಿತ ಸಮುದಾಯದ ಯುವ ಜನತೆಗೆ ಉದ್ಯೋಗ ಒದಗಿಸುವ ಎಲ್ಲಾ ದಾರಿಗಳನ್ನು ತೆರೆದು ಮುನ್ನಡೆಯಬೇಕಾಗಿದೆ. ಂPSಅ ತಂಡದಂತೆ ವೈಚಾರಿಕವಾಗಿ ಪ್ರಖರವಾಗಿ ಆಲೋಚಿಸುವ ಸಣ್ಣ ಸಣ್ಣ ಗುಂಪುಗಳನ್ನಾದರೂ ರೂಪಿಸಬೇಕಿದೆ.

ಕುವೆಂಪು ಅವರ ಬಹುಪಾಲು ಲೇಖನ ಭಾಷಣಗಳ ಆರಂಭ ಯುವಕರಿಗೆ ಕರೆ ಕೊಡುವ ಮಾದರಿಯಲ್ಲಿವೆ. ಕೆಲವು ಲೇಖನಗಳ ಶೀರ್ಷಿಕೆಯಲ್ಲಿಯೇ ಅದು ಅಡಗಿದೆ. ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ, ವಿಚಾರ ಕ್ರಾಂತಿಗೆ ಆಹ್ವಾನ ಮುಂತಾದ ಬರಹಗಳನ್ನು ನೋಡಿದರೆ ತಿಳಿಯುತ್ತದೆ. ಇದರ ಮುಂದುವರಿಕೆಯಾಗಿ ಪಿ.ಲಂಕೇಶ್ ಅವರು ತಮ್ಮ ಪತ್ರಿಕೆಯ ಮೂಲಕ ಯುವಜನತೆಯನ್ನು ಎಚ್ಚರಿಸುವ ವೇದಿಕೆಯೊಂದನ್ನು ರೂಪಿಸಿದ್ದರು. ದೇವನೂರು ಮಹಾದೇವ, ಬರಗೂರು ರಾಮಚಂದ್ರಪ್ಪ, ದಿನೇಶ ಅಮಿನಮಟ್ಟು, ರಹಮತ್ ತರೀಕೆರೆ, ಸಿ.ಎಸ್.ಧ್ವಾರಕಾನಾಥ, ಬಂಜಗೆರೆ ಜಯಪ್ರಕಾಶ ಮೊದಲಾದ ಬೆರಳೆಣಿಕೆಯ ಕೆಲವರು ಯುವಕರಿಗೆ ಕರೆಕೊಡುವ ಪರಿಣಾಮಕಾರಿ ಮಾತುಗಳನ್ನು ಆಡುತ್ತಿದ್ದಾರೆ. ಇದನ್ನು ಹೊರತುಪಡಿಸಿದರೆ, ಬಹುಪಾಲು ಚಿಂತಕರ ಭಾಷಣ ಮತ್ತು ಬರಹಗಳಲ್ಲಿ ಯುವಕರಿಗೆ ಕರೆ ಕೊಡುವ ಮಾದರಿ ಕಡಿಮೆಯಾಗುತ್ತಿವೆ. ಈ ನಡೆಯ ಬಗ್ಗೆ ಆಲೋಚಿಸಬೇಕಿದೆ. ಇಂತಹ ಮಾದರಿ ಮತ್ತೆ ತಲೆಯೆತ್ತಬೇಕಾಗಿದೆ. ಯುವಜನತೆಯನ್ನು ವೈಚಾರಿಕ ತಿಳಿವಿಗೆ ಒಳಗುಮಾಡಿಕೊಳ್ಳುವ ಹೊಸ ಪರಿಭಾಷೆಗಳನ್ನು ಕಂಡುಕೊಳ್ಳಬೇಕಿದೆ. ತಮ್ಮ ಹಕ್ಕುಗಳನ್ನು ಪಡೆಯುವುದಕ್ಕಾಗಿ ಗ್ರಾಮೀಣ ಭಾಗದ ಯುವ ಜನತೆ ಸಣ್ಣಪ್ರಮಾಣದ ಪ್ರತಿಭಟನೆ ಆರಂಭಿಸುವಂತೆ ಜಾಗೃತಗೊಳಿಸಬೇಕಿದೆ. ಯುವ ಜನತೆಯನ್ನು ಜೀವಪರ ಸಂಗತಿಗಳ ಪರವಾಗಿ ಧ್ವನಿ ಎತ್ತುವ ಸಂಗಾತಿಗಳನ್ನಾಗಿ ರೂಪಿಸುವ ಜವಾಬ್ದಾರಿ ಎಲ್ಲರ ಮೇಲಿದೆ.

ಈ ನಿಟ್ಟಿನಲ್ಲಿ ಕೆಲವು ಆಶಾದಾಯಕ ಚಟುವಟಿಕೆಗಳೂ ಬಿಡಿಬಿಡಿಯಾಗಿ ನಡೆಯುತ್ತಿವೆ. ಯುವ ಸಮೂಹದ ಸಂಘಟನೆಗಳೇ ವೈಚಾರಿಕ ಚಿಂತನ ಮಂಥನಗಳನ್ನು ಆಯೋಜಿಸುವುದು ಕರ್ನಾಟಕದ ಕೆಲವಡೆ ನಡೆಯುತ್ತಿದೆ. ಬಳ್ಳಾರಿ ಜಿಲ್ಲೆಯ ಕೊಟ್ಟೂರಿನ ನಾವು-ನಮ್ಮಲ್ಲಿ ಬಳಗ ಆಯೋಜಿಸುವ ವಾರ್ಷಿಕ ಕಾರ್ಯಕ್ರಮ, ಮಂಗಳೂರಿನ ಅಭಿಮತ ಗೆಳೆಯರು ಆಯೋಜಿಸುವ ‘ಜನನುಡಿ’ ಸಮಾವೇಶ, ಮಂಡ್ಯದ ಜನಶಕ್ತಿ ಸಂಘಟನೆಯು ರೂಪಿಸುತ್ತಿರುವ ಕರ್ನಾಟಕ ವಿಧ್ಯಾರ್ಥಿ ಸಂಘಟನೆಯ ಚಟುವಟಿಕೆಗಳು, ಗುಲ್ಬರ್ಗಾದ ಜನವಾದಿ ಮಹಿಳಾ ಸಂಘಟನೆ ಯುವಜನತೆಗಾಗಿ ನಡೆಸುವ ಸಮಾವೇಶಗಳು, ಎಡಪಂಥೀಯ ಮತ್ತು ದಲಿತಪರ ಸಂಘಟನೆಗಳ ಚಟುವಟಿಕೆಗಳು, ಈಚಿನ ಸಮಾನತೆಗಾಗಿ ಜನಾಂದೋಲನದ ಸಮಾವೇಶ ಮುಂತಾದವುಗಳಲ್ಲಿ ದಲಿತ ಕೆಳಜಾತಿಯ ಯುವಜನತೆಯ ಭಾಗವಹಿಸುವಿಕೆ ಆಶಾದಾಯಕವಾಗಿದೆ. ಈ ಪ್ರಮಾಣ ಇನ್ನೂ ಹೆಚ್ಚಾಗಬೇಕಿದೆ. ಗ್ರಾಮೀಣ ಭಾಗದ ಯುವಜನತೆಯನ್ನೂ ಒಳಗೊಳ್ಳಬೇಕಿದೆ.

ಈಚೆಗೆ ಕರ್ನಾಟಕದ ಯುವಜನತೆಯನ್ನು ಕೇಂದ್ರೀಕರಿಸಿದ ಕೆಲವು ಸರಕಾರಿ ಸಾಂಸ್ಥಿಕ ಯೋಜನೆಗಳು ರೂಪುಗೊಳ್ಳುತ್ತಿವೆ. ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆಯ ಅಂಬೇಂಡ್ಕರ್ ಅಧ್ಯಯನ ಕೇಂದ್ರವು ಆಯೋಜಿಸಿದ ‘ಯುವಜನತೆ ಮತ್ತು ಪ್ರಜಾತಂತ್ರಕ್ಕಾಗಿ ಅಂಬೇಡ್ಕರ್’ ಯೋಜನೆ ವರ್ಷದಲ್ಲಿ 500 ಪದವಿ ಕಾಲೇಜುಗಳಲ್ಲಿ ನಡೆಯುತ್ತಿದೆ. ಅಂತೆಯೇ ಕರ್ನಾಟಕ ಸಾಹಿತ್ಯ ಅಕಾಡೆಮಿ 125 ತಾಲೂಕುಗಳ ಪದವಿ ಕಾಲೇಜುಗಳಲ್ಲಿ ‘ಅಂಕುರ’ ಓದು ಕಮ್ಮಟವನ್ನು ನಡೆಸುತ್ತಿದೆ. ಯುವಜನರಲ್ಲಿ ಓದುವ ಅಭಿರುಚಿ ಹೆಚ್ಚಿಸಲು ಕನ್ನಡ ಪುಸ್ತಕ ಪ್ರಾಧೀಕಾರ 200 ಕಾಲೇಜುಗಳಲ್ಲಿ ‘ಪುಸ್ತಕ ಪ್ರೇಮಿ ಬಳಗ’ ರೂಪಿಸುತ್ತಿದೆ. ಕುವೆಂಪು ಭಾಷಾಭಾರತಿ ಪ್ರಾಧೀಕಾರವು ‘ಯುವಜನತೆಗಾಗಿ ಕುವೆಂಪು’ ಎನ್ನುವಂತೆ ವಿಶಿಷ್ಠವಾದ ‘ಕುವೆಂಪು ಓದು’ ಕಮ್ಮಟಗಳನ್ನು ವಾರ್ಷಿಕವಾಗಿ 60 ಕಾಲೇಜುಗಳಲ್ಲಿ ಆಯೋಜಿಸುತ್ತಿದೆ. ಕರ್ನಾಟಕ ಜಾನಪದ ಅಕಾಡೆಮಿಯು ಮೊದಲ ಬಾರಿಗೆ ಯುವಜನತೆಗಾಗಿ ‘ಸಂಸ್ಕೃತಿ ಕಮ್ಮಟ’ ವನ್ನು ಆಯೋಜಿಸುತ್ತಿದೆ.

ಇಲ್ಲಿ ಮುಖ್ಯವಾಗಿ ಕರ್ನಾಟಕದ ದಲಿತ ಕೆಳಜಾತಿಗಳ ಹೊಸತಲೆಮಾರಿನ ನಡೆಗಳ ಪ್ರಮುಖ ಎಳೆಗಳನ್ನು ಗುರುತಿಸಲು ಪ್ರಯತ್ನಿಸಿರುವೆ. ಈ ಎಳೆಗಳಿಗೆ ಹೊಂದಿಕೆಯಾಗುವ ನೂರಾರು ಉದಾಹರಣೆಗಳು ಕರ್ನಾಟಕದ ಬೇರೆ ಬೇರೆ ಭಾಗದದಿಂದ ಸಿಗಬಹುದು. ಅಂತೆಯೇ ನನಗೆ ಗುರುತಿಸಲು ಸಾಧ್ಯವಾಗದ ಪ್ರಮುಖ ಎಳೆಗಳೂ ಇರಬಹುದು. ಇದನ್ನು ಆಯಾ ಭಾಗದ ಸಂಗಾತಿಗಳು ಬರಹ ಮಾಡುವ ಮೂಲಕ ಗಮನಸೆಳೆಯುವ ಅಗತ್ಯವಿದೆ. ಈ ಬರಹದ ಮುಖ್ಯ ಕಾಳಜಿ ಇರುವುದು ಗ್ರಾಮಜಗತ್ತಿನ ಅರೆವಿದ್ಯಾವಂತ ಯುವಜನತೆಯನ್ನು ಒಳಗೊಳ್ಳುವ ವೈಚಾರಿಕ ಸರಳ ಪರಿಭಾಷೆಗಳನ್ನು ಶೋಧಿಸುವುದು ಮತ್ತು ಯುವಕರದೇ ಭಾಷೆಯಲ್ಲಿ ಜೀವಪರ ತಿಳಿವನ್ನು ವಿಸ್ತರಿಸುವ ದಾರಿಗಳನ್ನು ಹುಡುಕುವುದಾಗಿದೆ.
~

ಈ ಲೇಖನವು ಸಂವಾದ ಫೆಬ್ರುವರೀ 2016ರ ಸಂಚಿಕೆಯಲ್ಲಿ ಮೊದಲು ಪ್ರಕಟವಾಗಿತ್ತು.

 ~~~

 

 Dr ಅರುಣ್ ಜೋಳದಕೂಡ್ಲಿಗಿ: ಪೋಸ್ಟ್ ಡಾಕ್ಟರಲ್ ಫೆಲೋ, ಕನ್ನಡ ಸಾಹಿತ್ಯ ಅಧ್ಯಯನ ವಿಭಾಗ, ಕನ್ನಡ ವಿಶ್ವವಿದ್ಯಾಲಯ,ಹಂಪಿ. ವಿದ್ಯಾರಣ್ಯ-583276. ಹೊಸಪೇಟೆ ತಾ. ಬಳ್ಳಾರಿ