Round Table India
You Are Reading
ಭಾರತದ ಮೊದಲ ಮಹಿಳಾ ಶಿಕ್ಷಕಿ ಮಾತೆ ಸಾವಿತ್ರಿಬಾಯಿ ಫುಲೆ
0
Features

ಭಾರತದ ಮೊದಲ ಮಹಿಳಾ ಶಿಕ್ಷಕಿ ಮಾತೆ ಸಾವಿತ್ರಿಬಾಯಿ ಫುಲೆ

savita hosamani

 

ಸವಿತಾ ಹೊಸಮನಿ (Savita Hosamani)

 

savita hosamaniಭಾರತದ ಸಾಮಾಜಿಕ ವ್ಯವಸ್ಥೆಯಲ್ಲಿ ಅಸ್ಪೃಶ್ಯರಷ್ಟೇ ಶೋಷಣೆಗೆ ಒಳಗಾದ ಇನ್ನೊಂದು ವರ್ಗವೆಂದರೆ ಮಹಿಳೆಯರು. ಮನುಸಂವಿಧಾನದ ಪ್ರಕಾರ ಮಹಿಳೆ ವಿದ್ಯೆ ಕಲಿಯಲು ಅರ್ಹಳಲ್ಲ. ಮಹಿಳೆಯರ ಸ್ವಾತಂತ್ರ್ಯ ಹರಣದ ಪ್ರಮುಖ ಭಾಗ ವಿದ್ಯೆಯೇ ಆಗಿತ್ತೆನ್ನಬಹುದು. ಯಾಕೆಂದರೆ ಮಹಿಳೆ ಯಾವತ್ತಿಗೂ ಅಡಿಯಾಳಾಗಿಯೇ ಇರಬೇಕೆಂಬುದು ಮನುವಿನ ಮಸಲತ್ತಾಗಿತ್ತು. ಬಾಲ್ಯದಲ್ಲಿ ತಂದೆಯ, ಯೌವ್ವನದಲ್ಲಿ ಗಂಡನ ಮತ್ತು ಮುಪ್ಪಿನಲ್ಲಿ ಮಗ ಅವಳನ್ನು ರಕ್ಷಿಸಬೇಕೆಂಬುದು ಮನುಶಾಸನವಾಗಿತ್ತು. ಹೆಣ್ಣನ್ನು ಅಬಲೆ ಎಂಬ ನೆಪದಲ್ಲಿ ಅವಳನ್ನು ಗುಲಾಮಗಿರಿಗೆ ನೂಕಲಾಗಿತ್ತು.

ವೇದಕಾಲದಿಂದಲೂ ವಿದ್ಯೆ ಎನ್ನುವುದು ಕೆಲವೇ ಜನರ ಸೊತ್ತಾಗಿತ್ತು. ವಿದ್ಯೆಯಿಂದ ವಂಚಿತರಾದ ಶೂದ್ರರು ಮತ್ತು ಮಹಿಳೆಯರು ಗುಲಾಮರಂತೆ ಬದುಕಬೇಕಾಗಿತ್ತು. ಆದರೆ ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಅಸ್ಪೃಶ್ಯರು ಮತ್ತು ಮಹಿಳೆಯರಿಗೆ ವಿದ್ಯೆಯ ಬಾಗಿಲನ್ನು ತೆರೆದವರು ಮಹಾತ್ಮಾ ಜ್ಯೋತಿಬಾ ಫುಲೆ. ಮೊದಲ ಮಹಿಳಾ ಶಿಕ್ಷಕಿ ಅವರ ಧರ್ಮಪತ್ನಿ ಮಾತೆ ಸಾವಿತ್ರಿಬಾಯಿ ಫುಲೆ (1831-1897).

 ಶಿಕ್ಷಣದ ಮುಖಾಂತರ ಮಾತ್ರ ಅದರಲ್ಲೂ ವಿಶೇಷವಾಗಿ ಮಹಿಳೆಯರಿಗೆ ಶಿಕ್ಷಣ ನೀಡುವ ಮೂಲಕ ಸಾಮಾಜಿಕ ಸಮಾನತೆ ಯನ್ನು ತರುವುದು ಸಾಧ್ಯ ಎಂಬುದು ಮಹಾತ್ಮಾ ಫುಲೆ ಅವರ ಸಿದ್ಧಾಂತವಾಗಿತ್ತು. ಅದಕ್ಕೆಂದೇ ಅವರು ಕ್ರಾಂತಿಕಾರಿ ಹೆಜ್ಜೆಯನ್ನಿಟ್ಟು ಶೂದ್ರರು-ಅತಿಶೂದ್ರರು ಮತ್ತು ಮಹಿಳೆಯರಿಗೆ ವಿದ್ಯಾದಾನ ಮಾಡುವ ಮೂಲಕ ಹೊಸ ಮನ್ವಂತರವೊಂದಕ್ಕೆ ನಾಂದಿ ಹಾಡಿದರು.

ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಮಹಾತ್ಮಾ ಜ್ಯೋತಿಬಾ ಫುಲೆ ಮಹಿಳೆಯರಿಗಾಗಿ ಪುಣೆ ನಗರದ ತಾತ್ಯಾ ಸಾಹೇಬ ಭಿಡೆ ಎಂಬುವವರ ಮನೆಯಲ್ಲಿ ಶಾಲೆಯೊಂದನ್ನು ತೆರೆದರು. 1848ರಲ್ಲಿ ಪ್ರಾರಂಭವಾದ ಈ ಶಾಲೆ ಭಾರತದ ಪ್ರಪ್ರಥಮ ಖಾಸಗಿ ಮಹಿಳಾ ಶಾಲೆ ಎಂದು ಕರೆಯಲ್ಪಡುತ್ತದೆ. ಆ ಕಾಲದಲ್ಲಿ ಮಹಿಳೆಯರಿಗಾಗಿ ಶಾಲೆ ಪ್ರಾರಂಭಿಸುವುದೆಂದರೆ ಸಾಮಾನ್ಯ ಸಂಗತಿಯಾಗಿರಲಿಲ್ಲ.

savitribai1

ಮಹಿಳೆಯರಿಗಾಗಿ ಶಾಲೆ ಪ್ರಾರಂಭಿಸಿದ ಮಹಾತ್ಮಾ ಫುಲೆ ಹಲವಾರು ತೊಂದರೆಗಳನ್ನು ಎದುರಿಸುವಂತಾಯಿತು. ಸ್ತ್ರೀ ಶಿಕ್ಷಣದ ವಿರೋಧಿಗಳಾಗಿದ್ದ ಸಂಪ್ರದಾಯವಾದಿ ಬ್ರಾಹ್ಮಣರು ಫುಲೆ ಅವರ ತಂದೆ ಗೋವಿಂದರಾವರನ್ನು ಹೆದರಿಸಿದರು. ಶಾಲೆಯನ್ನು ಪ್ರಾರಂಭ ಮಾಡದಿರುವಂತೆ ಅವರು ಒತ್ತಡ ಹೇರಿದರು. ಆದರೆ ಜ್ಯೋತಿಬಾ ಫುಲೆ ತಮ್ಮ ನಿರ್ಧಾರದಿಂದ ಹಿಂದೆ ಸರಿಯಲಿಲ್ಲ. ಅದರ ಪರಿಣಾಮವಾಗಿ ಜ್ಯೋತಿಬಾ ಫುಲೆ ತಂದೆಯ ಮನೆಯನ್ನು ತೊರೆಯಬೇಕಾಯಿತು.

ಶಾಲೆಯನ್ನು ತೆರೆದರಾದರೂ ಅಲ್ಲಿ ಕಲಿಸುವ ಶಿಕ್ಷಕರು ಬೇಕಲ್ಲ? ಈ ಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ಮಾಡಲು ಯಾರೂ ಮುಂದೆ ಬರಲಿಲ್ಲ. ಇಂಥ ಸಂದರ್ಭದಲ್ಲಿ ಜ್ಯೋತಿಬಾ ಫುಲೆ ತಮ್ಮ ಪತ್ನಿ ಸಾವಿತ್ರಿಬಾಯಿ ಅವರಿಗೆ ವಿದ್ಯೆ ಕಲಿಸಿ ಅವರನ್ನೇ ತಮ್ಮ ಶಾಲೆಯ ಶಿಕ್ಷಕಿಯನ್ನಾಗಿ ನೇಮಕ ಮಾಡಿದರು. ಆ ಕಾಲದಲ್ಲಿ ಸ್ತ್ರೀ ಶಾಲೆಗೆ ಹೋಗುವುದಿರಲಿ, ಮನೆಯಿಂದ ಕೆಲವೇ ಸಂದರ್ಭದಲ್ಲಿ ಮಾತ್ರ ಮನೆಯಿಂದ ಹೊರಗೆ ಬರುತ್ತಿದ್ದಳು. ಅವಳು ಗಂಡಸರೊಂದಿಗೆ ಮಾತಾಡುವುದೆಂದರೇ ತನ್ನ ಗಂಡನಿಗೆ ಮತ್ತು ತನ್ನ ಕುಟುಂಬಕ್ಕೆ ದ್ರೋಹ ಬಗೆದಂತಾಗುತ್ತಿತ್ತು. ಇಂಥ ಸಂದರ್ಭದಲ್ಲಿ ತಮ್ಮ ಮಗಳನ್ನು ಶಾಲೆಗೆ ಕಳಿಸಿಕೊಡಲು ಕೂಡಾ ತಂದೆ ತಾಯಿಯರು ಹಿಂದೇಟು ಹಾಕತೊಡಗಿದ್ದರು. ಅವರ ಮನವೊಲಿಸಬೇಕಾದರೆ ಮಹಾತ್ಮಾ ಫುಲೆ ಮತ್ತು ಸಾವಿತ್ರಿಬಾಯಿ ಫುಲೆ ತುಂಬಾ ಕಷ್ಟಪಡಬೇಕಾಯಿತು.

ಸಂಪ್ರದಾಯವಾದಿ ಬ್ರಾಹ್ಮಣರ ಪ್ರಕಾರ ಜ್ಯೋತಿಬಾ ಫುಲೆ ಎರಡು ರೀತಿಯಲ್ಲಿ ಅಪರಾಧಿಯಾಗಿದ್ದರು. ಒಂದು- ಅವರು ಹುಡುಗಿಯರಿಗಾಗಿ ಶಾಲೆ ತೆರೆದದ್ದು, ಇನ್ನೊಂದು- ತಮ್ಮ ಪತ್ನಿಯನ್ನೇ ಶಿಕ್ಷಕಿಯನ್ನಾಗಿ ನೇಮಕ ಮಾಡಿದ್ದು. ಜ್ಯೋತಿಬಾ ಫುಲೆ ಅವರ ಈ ಎರಡೂ ಕಾರ್ಯಗಳು ಸಂಪ್ರದಾಯವನ್ನು ವಿರೋಧಿಸುವಂಥವೇ ಆಗಿದ್ದವು.

ತಂದೆಯ ಆದೇಶದಂತೆ ಜ್ಯೋತಿಬಾ ಫುಲೆ ತಂದೆಯ ಮನೆಯನ್ನು ತೊರೆದರು. ಅವರ ಪತ್ನಿ ಸಾವಿತ್ರಿಬಾಯಿಯೂ ತನ್ನ ಪತಿಯ ಹೆಜ್ಜೆಯಲ್ಲಿಯೇ ನಡೆಯುವ ಅಚಲ ನಿರ್ಧಾರ ಮಾಡಿದರು. ಅವರು ಶೋಷಿತರಿಗೆ ಶಿಕ್ಷಣ ನೀಡುವ ಮಹತ್ಕಾರ್ಯ ದಲ್ಲಿ ಪತಿಯ ನೆರಳಿನಂತೆ ನಡೆದರು.

ಫುಲೆ ದಂಪತಿಗಳು ಪ್ರಾರಂಭಿಸಿದ ಈ ಮೊದಲ ಮಹಿಳಾ ಶಾಲೆಗೆ ಪ್ರಪ್ರಥಮವಾಗಿ ಆರು ಜನ ಬಾಲಕಿಯರು ಪ್ರವೇಶ ಪಡೆದರು. ಅನ್ನಪೂರ್ಣಾ ಜೋಶಿ, ಸುಮತಿ ಮೊಕಾಶಿ, ದುರ್ಗಾ ದೇಶಮುಖ, ಮಾಧುರಿ ಥಟ್ಟೆ, ಸೋನು ಪವಾರ್ ಮತ್ತು ಜಾನಿ ಕರದಿಲೆ ಇವರೇ ಭಾರತದ ಮೊಟ್ಟಮೊದಲ ಮಹಿಳಾ ಶಾಲೆಯ ಮೊದಲ ವಿದ್ಯಾರ್ಥಿನಿಯರು. ಇವರೆಲ್ಲ ಆರು ವರ್ಷ ಕೆಳಗಿನವರಾಗಿದ್ದರು. ಇವರಲ್ಲಿ ನಾಲ್ಕು ಜನ ಬಾಲಕಿಯರು ಬ್ರಾಹ್ಮಣರು, ಒಬ್ಬಾಕೆ ಮರಾಠಾ ಮತ್ತು ಇನ್ನೊಬ್ಬಾಕೆ ಕುರುಬ ಜಾತಿಗೆ ಸೇರಿದವರಾಗಿದ್ದರು.

ಶಿಕ್ಷಕ ತರಬೇತಿ ಪಡೆದ ನಂತರ ಸಾವಿತ್ರಿಬಾತಿ ಫುಲೆ ಈ ಶಾಲೆಯ ಮುಖ್ಯೋಪಾಧ್ಯಾಯಿನಿಯಾಗಿ ನೇಮಕಗೊಂಡರು. ಸಾವಿತ್ರಿಬಾಯಿ ಫುಲೆ ತರಬೇತಿ ಪಡೆದ ಮೊಟ್ಟ ಮೊದಲ ಮಹಿಳಾ ಶಿಕ್ಷಕಿ ಎಂದು ಕರೆಸಿಕೊಳ್ಳುತ್ತಾರೆ.

ಸಂಪ್ರದಾಯವಾದಿಗಳ ಎಷ್ಟೋ ಕಿರುಕುಳವನ್ನು ಅವರು ಸಹಿಸಬೇಕಾಯಿತು. ಅವರು ಶಾಲೆಗೆ ಹೋಗುವಾಗ ದಾರಿಯಲ್ಲಿದ್ದ ಹೆಂಗಸರು ಅವರನ್ನು ಅವಾಚ್ಯವಾಗಿ ಬೈಯುತ್ತಿದ್ದರು. ಅವರ ಮೈಮೇಲೆ ಕಲ್ಲು, ಇಟ್ಟಂಗಿ, ಸೆಗಣಿಯನ್ನು ಎಸೆಯುತ್ತಿದ್ದರು. ಅದರಿಂದ ಅವರಿಗೆ ತಲೆಗೆ ಮೈಗೆ ಗಾಯಗಳಾಗುತ್ತಿದ್ದವು. ಉಟ್ಟ ಬಟ್ಟೆ ಹೊಲಸಾಗುತ್ತಿದ್ದವು. ಸಾವಿತ್ರಿಬಾಯಿ ಹತ್ತಿರ ಸದಾ ಎರಡು ಸೀರೆಗಳು ಇರುತ್ತಿದ್ದವು. ಒಂದು ಸೀರೆಯನ್ನು ಮನೆಯಿಂದ ಶಾಲೆಗೆ ಬರುವಾಗ ಉಟ್ಟುಕೊಳ್ಳುತ್ತಿದ್ದರು. ಆದರೆ ಆ ಸೀರೆ ಜನರು ಎರಚಿದ ಸೆಗಣಿಯಿಂದ ಹೊಲಸಾಗುತ್ತಿತ್ತು. ಶಾಲೆಗೆ ಬಂದ ಮೇಲೆ ಹೊಲಸಾದ ಸೀರೆಯನ್ನು ಕಳಚಿಟ್ಟು ಮತ್ತೊಂದು ಸೀರೆಯನ್ನು ಉಟ್ಟುಕೊಳ್ಳುತಿದ್ದರು. ಧೈರ್ಯಸ್ಥೆಯಾಗಿದ್ದ ಅವರು ಇದ್ಯಾವುದಕ್ಕೂ ಹೆದರದೆ ತಮ್ಮ ಪವಿತ್ರ ಕೆಲಸದಲ್ಲಿ ತೊಡಗುತ್ತಿದ್ದರು.

ಫುಲೆ ದಂಪತಿಗಳು ಐದು ವರ್ಷಗಳಲ್ಲಿ ಐದು ಶಾಲೆಗಳನ್ನು ತೆರೆದರು. 1. ಪುಣೆ ನಗರದ ಬುಧವಾರಪೇಟೆಯ ತಾತ್ಯಾಸಾಹೇಬ ಭಿಡೆ ಅವರ ಮನೆಯಲ್ಲಿ (1848). 2. ಪುಣೆ ನಗರದ ಬುಧವಾರ ಪೇಟೆಯ ಅಣ್ಣಾಸಾಹೇಬ ಚಿಪಳೂಣಕರ್ ಮನೆಯಲ್ಲಿ (ಜುಲೈ 3, 1851). 3. ಹಿಂದುಳಿದ ವರ್ಗಗಳ ಹುಡುಗಿಯರಿಗಾಗಿ ಗಂಜ್ಪೇಟೆಯ ಸದಾಶಿವರಾವ ಗೋವಂದೆ ಮನೆಯಲ್ಲಿ (1851). 4. ರಾಸ್ತಾಪೇಟ್ನಲ್ಲಿ ಬಾಲಕಿಯರಿಗಾಗಿ (ಸೆಪ್ಟಂಬರ್ 17, 1851). 5. ವೇತಲ್ ಪೇಟ್ನಲ್ಲಿ ಬಾಲಕಿಯರಿಗಾಗಿ (ಮಾರ್ಚ್ 15, 1852). 1853ರ ವೇಳೆಗೆ ಈ ಎಲ್ಲಾ ಶಾಲೆಗಳು ಸೇರಿ ವಿದ್ಯಾರ್ಥಿನಿಯರ ಸಂಖ್ಯೆ 235ಕ್ಕೆ ಏರಿತ್ತು.

ಬ್ರಿಟಿಷ್ ಆಡಳಿತಗಾರರು ಜ್ಯೋತಿಬಾ ಫುಲೆ ಮತ್ತು ಸಾವಿತ್ರಿಬಾಯಿ ಫುಲೆ ಅವರ ಈ ಶಾಲೆಗಳ ಪ್ರಗತಿಯನ್ನು ಕಂಡು ನಿಬ್ಬೆರಗಾದರು. ಬ್ರಿಟಿಷ್ ಸರಕಾರದ ಪರವಾಗಿ 16 ನವಂಬರ್, 1852 ರಂದು ವಿಶೇಷ ಕಾರ್ಯಕ್ರಮವೊಂದನ್ನು ಪುಣೆ ನಗರದ ವಿಕ್ರಮ್ ಬಾಗ್ನಲ್ಲಿ ಸಂಘಟಿಸಿ ಫುಲೆ ದಂಪತಿಗಳನ್ನು ಶಾಲು ಹೊದಿಸಿ ಮಾನಪತ್ರಗಳನ್ನು ನೀಡಿ ಸನ್ಮಾನಿಸಲಾಯಿತು. ಸಾವಿತ್ರಿಬಾಯಿಯ ಸತತ ಪ್ರಯತ್ನದ ಫಲವಾಗಿ ಸಾತಾರಾ ಮತ್ತು ನಗರ ಜಿಲ್ಲೆಗಳಲ್ಲೂ ಶೂದ್ರ ಮತ್ತು ಅತಿಶೂದ್ರ ವರ್ಗಗಳ ಬಾಲಕಿಯರಿಗಾಗಿ ಶಾಲೆಗಳನ್ನು ತೆರೆಯಲಾಯಿತು.
ಜ್ಯೋತಿಬಾ ಫುಲೆ ಅವರ ಸಾಧನೆಗಳಲ್ಲಿ ಸಾವಿತ್ರಿಬಾಯಿಯದು ಸಿಂಹಪಾಲು. ತನ್ನ ಪತಿ ಕೈಕೊಂಡ ಮಹತ್ಕಾರ್ಯದಲ್ಲಿ ಮನಸಾರೆ ಕೈಜೋಡಿಸಿದ ಅವರು ಎಂದೂ-ಎಂಥ ಪರಿಸ್ಥಿತಿಯಲ್ಲೂ ಹಿಂದೆ ಸರಿಯಲಿಲ್ಲ. ಬ್ರಿಟಿಷ್ ಸರಕಾರ ನೀಡಿದ ಸನ್ಮಾನ ಕಾರ್ಯಕ್ರಮದಲ್ಲಿ ಜ್ಯೋತಿಬಾ ಫುಲೆ ತಮ್ಮ ಪತ್ನಿಯ ಗುಣಗಾನ ಮಾಡಿದರು. ಸಾವಿತ್ರಿಬಾಯಿ ಇಲ್ಲದೇ ಹೋಗಿದ್ದರೆ ತಾವು ಕೇವಲ ಒಬ್ಬ ರೈತನಾಗಿ ಇರಬೇಕಾಗುತ್ತಿತ್ತು. ಶಾಲೆಗಳನ್ನು ತೆರೆಯುವ ನಿರ್ಧಾರ ಮಾಡಿದಾಗ ಆಕೆ ಎರಡು ಮಾತಿಲ್ಲದೆ ಒಪ್ಪಿಕೊಂಡಳು ಮತ್ತು ಅನೇಕ ಕಷ್ಟಗಳನ್ನು ಎದುರಿಸಿದಳು. ಅವಳು ಈ ಸಂದರ್ಭದಲ್ಲಿ ಅವಳ ಧೈರ್ಯವನ್ನು ತಾವು ಬಹುವಾಗಿ ಮೆಚ್ಚಿಕೊಂಡಿದ್ದಾಗಿ ಜ್ಯೋತಿಬಾ ಫುಲೆ ತಮ್ಮ ಪತ್ನಿ ಸಾವಿತ್ರಿಬಾಯಿಯನ್ನು ಹೊಗಳಿದ್ದರು.

ಸಾವಿತ್ರಿಬಾಯಿ ಫುಲೆ ಒಬ್ಬ ಪ್ರಬುದ್ಧ ಲೇಖಕಿ ಮತ್ತು ಕವಯತ್ರಿಯೂ ಆಗಿದ್ದರು. ಸಾವಿತ್ರಿಬಾಯಿಯವರ ಸಾಮಾಜಿಕ ಚಳವಳಿಯಿಂದ ಪ್ರೇರಿತರಾಗಿದ್ದ ಶ್ರೀ ವಾಳ್ವೆಕರ್ ಎಂಬುವವರು ‘ಗೃಹಿಣಿ’ ಎಂಬ ನಿಯತಕಾಲಿಕೆಯನ್ನು ಪ್ರಾರಂಭಿಸಿದ್ದರು. ಸಾವಿತ್ರಿಬಾಯಿ ಈ ನಿಯತಕಾಲಿಕೆಗೆ ಲೇಖನಗಳನ್ನು ಬರೆಯುತ್ತಿದ್ದರು. ‘ಕಾವ್ಯಫುಲೆ’ ಸಾವಿತ್ರಿಬಾಯಿಯವರ ಮೊದಲ ಕವನ ಸಂಕಲನ. ಇದು 1854ರಲ್ಲಿ ಪ್ರಕಟವಾಗಿತ್ತು. ಈ ಸಂಕಲನದಲ್ಲಿ ಅವರು ಶಿಕ್ಷಣ, ಜಾತಿ ವಿನಾಶ, ಮಕ್ಕಳ ಕಲ್ಯಾಣ ಮತ್ತ ಸಾಮಾಜಿಕ ಸುಧಾರಣೆಯಂಥ ಮಹತ್ವದ ವಿಷಯಗಳನ್ನು ಒಳಗೊಂಡಿತ್ತು. ಪ್ರಕೃತಿಯ ವರ್ಣನೆಯುಳ್ಳ ‘ಜೈಚಿ ಕಲಿ’ ಮತ್ತು ‘ಗುಲಾಬಚೆ ಫೂಲ್’ನಂತಹ ಸುಂದರ ಕವನಗಳುಳ್ಳ ಮತ್ತೊಂದು ಕವನ ಸಂಕಲವನ್ನು ಅವರು ಪ್ರಕಟಿಸಿದ್ದರು. ಈ ಸಂಕಲನವು ಜ್ಯೋತಿಬಾ ನಿಧನದ ನಂತರ 1892ರ ನವಂಬರ್ 7ರಂದು ಪ್ರಕಟವಾಗಿತ್ತು.

ಜ್ಯೋತಿಬಾ ಫುಲೆ ಅವರ ಭಾಷಣಗಳ ನಾಲ್ಕು ಸಂಪುಟಗಳನ್ನು ಸಾವಿತ್ರಿಬಾಯಿ ಸಂಪಾದನೆ ಮಾಡಿದ್ದರು. ತಮ್ಮದೇ ಭಾಷಣಗಳ ಸಂಗ್ರಹವನ್ನು 1892ರಲ್ಲಿ ಅವರು ಪ್ರಕಟಿಸಿದ್ದರು. ಪ್ರಾಚಾರ್ಯ ಎಂ.ಜಿ. ಮಾಳಿ ಎಂಬುವವರು ಸಾವಿತ್ರಿಬಾಯಿ ಅವರು ತಮ್ಮ ಕೈಬರಹದಲ್ಲಿ ಬರೆದಿದ್ದ ಎರಡು ಪತ್ರಗಳನ್ನು ಬಹಳ ಶ್ರಮವಹಿಸಿ ಸಂಗ್ರಹಿಸಿದ್ದಾರೆ. ಈ ಎರಡೂ ಪತ್ರಗಳು ಅವರು ತಮ್ಮ ಪತಿ ಜ್ಯೋತಿಬಾ ಫುಲೆ ಅವರಿಗೆ ನಾಯಗಾಂವದಿಂದ ಬರೆದಿದ್ದಾಗಿವೆ. ಒಂದು ಪತ್ರವು 10-10-1856 ಮತ್ತು ಇನ್ನೊಂದು ಪತ್ರವು 29-8-1868 ರಲ್ಲಿ ಬರೆದಿದ್ದಾಗಿದೆ. ಒಂದು ಪತ್ರದಲ್ಲಿ ಅವರು ತಮ್ಮ ಸಹೋದರ ಜ್ಯೋತಿಬಾ ಫುಲೆ ಅವರ ಶಿಕ್ಷಣ ಪ್ರಸಾರದ ಮಹತ್ವವನ್ನು ಅರಿತುಕೊಂಡಿಲ್ಲದಿರುವುದರ ಕುರಿತು ಟೀಕೆ ಮಾಡಿದ್ದಾರೆ.ಈ ಎರಡೂ ಪತ್ರಗಳಲ್ಲಿ ಸಾಮಾಜಿಕ ಸುಧಾರಣೆ ಕುರಿತ ಚರ್ಚೆ ಇರುವುದು ಗಮನಾರ್ಹವಾಗಿದೆ. 1897ರಲ್ಲಿ ಅವರು ನಿಧನರಾಗುವ ವರೆಗೂ ಅವರ ಸಾಮಾಜಿಕ ಚಳವಳಿ ನಿರಂತರವಾಗಿ ಸಾಗಿ ಬಂದಿತ್ತು.

ನಿಜಕ್ಕೂ ಸಾವಿತ್ರಿಬಾಯಿ ಇಲ್ಲದಿದ್ದರೆ ಜ್ಯೋತಿಬಾ ಫುಲೆ ಇದೆಲ್ಲವನ್ನು ಸಾಧನೆ ಮಾಡಲಾಗುತ್ತಿರಲಿಲ್ಲ. ಅವರಿಗೆ ಎಲ್ಲ ಹಂತದಲ್ಲೂ, ಎಂಥ ಸಂದರ್ಭದಲ್ಲೂ ಧೈರ್ಯ-ಉತ್ಸಾಹಗಳನ್ನು ತುಂಬಿದವರು ಸಾವಿತ್ರಿಬಾಯಿ. ಅವರ ಎಲ್ಲಾ ಸಾಮಾಜಿಕ ಚಳವಳಿ ಗಳಿಗೆ ಹೆಗಲು ನೀಡಿದವರು. ಮಹತ್ಮಾ ಫುಲೆ ಅವರು ನಿಧನಾ ನಂತರ ಅವರು ಪ್ರಾರಂಭಿಸಿದ್ದ ‘ಸತ್ಯಶೋಧಕ ಸಮಾಜ’ವನ್ನು ಯಶಸ್ವಿಯಾಗಿ ಮುನ್ನಡೆಸಿದರು. ಆ ಮೂಲಕ ಜ್ಯೋತಿಬಾ ಫುಲೆ ಪ್ರಾರಂಭಿಸಿದ್ದ ಸಾಮಾಜಿಕ ಮತ್ತು ಶೈಕ್ಷಣಿಕ ಕ್ರಾಂತಿಯನ್ನು ಮುಂದುರೆಸಿಕೊಂಡು ಬಂದರು. ಸಮಾಜದ ಕಣ್ಣಲ್ಲಿ ಪತಿ-ಪತ್ನಿಯರಾಗಿದ್ದರೂ ಎಂದೂ ಅವರು ಸಾಂಸಾರಿಕ ಸುಖ ಭೋಗಗಳನ್ನು ಅನುಭವಿಸದೆ ಶೋಷಿತ ಸಮುದಾಯಗಳ ಉದ್ಧಾರಕ್ಕಾಗಿ ತಮ್ಮ ಜೀವನವನ್ನೇ ತೇಯ್ದರು ಎಂಬುದನ್ನು ಈ ವರ್ಗಗಳು ಅರಿಯಬೇಕಿದೆ.
~~~~

ಬಿಜಾಪುರದಲ್ಲಿ ಹುಟ್ಟಿದ ಸವಿತಾ ಹೊಸಮನಿ BSc ಮತ್ತು B.Ed ಮಾಡಿ ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ.