Round Table India
You Are Reading
ಅರಸು ಎಂಬ ವಿದ್ಯಮಾನ
0
Features

ಅರಸು ಎಂಬ ವಿದ್ಯಮಾನ

sabitha

 

ಡಾ. ಸಬಿತಾ ಬನ್ನಾಡಿ (Sabitha Bannadi)

sabithaಅದೊಂದು ಬಡವರಿಗೆ ಕೈಗಾಡಿ ವಿತರಿಸುವ ಸಮಾರಂಭ. ರಾಜ್ಯದ ಮುಖ್ಯಮಂತ್ರಿಯೇ ಖುದ್ದಾಗಿ ಈ ಕಾರ್ಯಕ್ರಮವನ್ನು ಉದ್ಘಾಟಿಸುತ್ತಿದ್ದಾರೆ. ಬಡವರಿಗೆ ಕೈಗಾಡಿಗಳನ್ನು ವಿತರಿಸಿದ ಅವರು ಆ ಕೈಗಾಡಿಗಳನ್ನು ಬಳಸಿಕೊಂಡು ತಮ್ಮ ಜೀವನ ಮಟ್ಟವನ್ನು ಸುಧಾರಿಸಿಕೊಳ್ಳುವಂತೆ ಹೇಳುತ್ತಾರೆ. ಹಾಗೆ ಅವರು ಹೇಳುವ ಮಾತುಗಳು ಮಾಮೂಲೀ ರಾಜಕಾರಣಿಯ ಮಾತಿನಂತೆ ಇರುವುದಿಲ್ಲ. ಬದಲಿಗೆ ಮನೆಯ ಹಿರಿಯನೊಬ್ಬ ಆಡುವ ಕಳಕಳಿಯ ಮಾತಿನಂತೆ ಅನ್ನಿಸುತ್ತದೆ. ಇಂತಹ ಮಾತುಗಳು ಆ ಮುಖ್ಯಮಂತ್ರಿಗೆ ಜನರ ಕುರಿತಾಗಿ ಇರುವ ಕಳಕಳಿಯೂ ಆಗಿ ಧ್ವನಿಸುತ್ತದೆ. “ಈ ಬ್ಯಾಂಕುಗಳು ಇವರಿಗೆ ಸಾಲವನ್ನು ಕೊಟ್ಟರೆ ಯಾರೂ ಹಿಂದಕ್ಕೆ ಕೊಡದೇ ಹೋಗುವುದಿಲ್ಲ. ನೂರಕ್ಕೆ ಒಬ್ಬನೋ, ಇಬ್ಬರೋ ಕೊಡದೇ ಇರಬಹುದು. ಈ ಜನ ದುಡ್ಡನ್ನು ಕದಿಯುವುದಕ್ಕೆ ಇಷ್ಟಪಡುವುದಿಲ್ಲ. ದುಡಿಮೆ ಮಾಡುವುದಕ್ಕೆ ಅವಕಾಶ ಮಾಡಿಕೊಟ್ಟರೆ ಅವರೆಂದಿಗೂ ಕದಿಯುವುದಿಲ್ಲ. ತಮ್ಮದೇ ಆದ ಬಂಡವಾಳ ಹೂಡುವುದಕ್ಕೆ, ಕೆಲಸ ಮಾಡುವುದಕ್ಕೆ ಇಚ್ಛೆ ಪಡುತ್ತಾರೆ. ನಿಮಗೀಗ ಈ 600 ರೂಪಾಯಿ ಬಂಡವಾಳವೇ ಆಸ್ತಿ. ನಿಮ್ಮ ಜೀವಮಾನಕ್ಕೆ ಇದು ಎಷ್ಟು ಮಹತ್ವದ್ದು. ಮಾಲೀಕರು ನೀವೆ. ದಿವಸಕ್ಕೆ 2 ರೂಪಾಯಿಯನ್ನು ಬ್ಯಾಂಕಿಗೆ ಕಟ್ಟುತ್ತಾ ಬಂದರೆ 20 ತಿಂಗಳ ಅವಧಿಯಲ್ಲಿ ನಿಮ್ಮ ಸಾಲ ತೀರುತ್ತದೆ. . . . ನೀವು ಒಂದು ಸಾವಿರ ರೂಪಾಯಿ ಕಟ್ಟಿದ ಹಾಗೆ ಆಗುತ್ತದೆ. ನೀವು ತೆಗೆದುಕೊಂಡ 600 ರೂಪಾಯಿ ಸಾಲ ವಜಾ ಆಗಿ ಗಾಡಿ ನಿಮ್ಮದಾಯಿತು; ಇನ್ನು 100 ರೂಪಾಯಿ ನೀವು ತೆಗೆದುಕೊಂಡ ಸಾಲಕ್ಕೆ ಬಡ್ಡಿಯಾಯಿತು. ಇನ್ನೂ 300 ರೂಪಾಯಿ ನಿಮ್ಮದು ಅಂತ ಬ್ಯಾಂಕಿನಲ್ಲಿ ಉಳಿಯಿತು; ಉಳಿದ ಈ 300 ರೂಪಾಯಿಗಳನ್ನು ನಮ್ಮ ಟ್ರಸ್ಟ್ ಬೋರ್ಡ್ನಿಂದ ಬಡವರಿಗೆ ಕಡಿಮೆ ದರದಲ್ಲಿ ಸೈಟುಗಳನ್ನು, ಮನೆಗಳನ್ನು ಕೊಡುವುದಕ್ಕೆ ಏರ್ಪಾಡು ಮಾಡುತ್ತಾ ಇದ್ದೇವೆ. ಅದಕ್ಕೆ ಈ ಹಣವನ್ನು ಉಪಯೋಗಿಸಿಕೊಳ್ಳಬಹುದು. (ಪ್ರಗತಿ ಪಥ; ಪು. 231; ಸಂ: ಹಾ.ಮಾ.ನಾ; 1976) ಹೀಗೆ ಮನೆ ಯಜಮಾನನಂತೆ ತಿಳಿಹೇಳಿದ ಮುಖ್ಯಮಂತ್ರಿ ದೇವರಾಜ ಅರಸು. ಅರಸು ಅವರ ಭಾಷಣಗಳ ಸಂಗ್ರಹ ಓದಿದರೆ ಅವರ ಇಂತಹ ಹಲವು ಮಾತುಗಳು ಕಾಣಸಿಗುತ್ತವೆ. ಆ ಮೂಲಕ ಅರಸು ಅವರ ವ್ಯಕ್ತಿತ್ವದ ಇನ್ನೊಂದು ಮಗ್ಗುಲು ತೆರೆದುಕೊಳ್ಳತ್ತದೆ.

ಕೊಳೆಗೇರಿಗಳ ಜನರಿಗೆ ಕೊಳಚೆಯಿಂದ ಮುಕ್ತಿ ಕೊಡುವ ಅವರ ಬಯಕೆ ಯನ್ನೂ ಹೀಗೇ ಗಮನಿಸಬಹುದು. ಕೊಳೆಗೇರಿ ನಿವಾಸಿಗಳಿಗೆ ನಿವೇಶನವನ್ನು ನೀಡುವ ಯೋಜನೆಯನ್ನು ಅವರ ಸರ್ಕಾರ ಹಾಕಿಕೊಂಡಿತ್ತು. ಅದರಂತೆ ಅವರಿಗೆ ನಿವೇಶನಗಳನ್ನು ನೀಡುವಾಗ ಅರಸು “ನಿಮ್ಮ ಜೀವಮಾನದಲ್ಲೇ ಮೊದಲ ಬಾರಿಗೆ ನಿಮ್ಮದೇ ಆದ ಒಂದು ಮನೆಯ ನಿವೇಶನ ಪಡೆಯಲಿದ್ದೀರಿ. ನಿಮಗೆ ಇದರಿಂದ ಎಷ್ಟು ಆನಂದವಾಗಿದೆ ಎನ್ನುವುದನ್ನು ನಾವು ನಿಮ್ಮ ಮುಖ ನೋಡಿಯೇ ಗ್ರಹಿಸಬೇಕು. ಅದನ್ನು ವರ್ಣಿಸುವುದು ಕಷ್ಟ. ನನಗೂ ನಿಮ್ಮಷ್ಟೆ ಆನಂದವಾಗುತ್ತಾ ಇದೆ” (ಅದೇ; ಪು.304) ಎನ್ನುತ್ತಾರೆ. ಕೇವಲ ಆಶ್ವಾಸನೆ ನೀಡುವುದು ಬೇರೆ, ಅದನ್ನು ಈಡೇರಿಸಿ ಆನಂದ ಪಡುವುದು ಬೇರೆ. ಈ ಸಂದರ್ಭದಲ್ಲೂ ಅವರು ಜನರೊಂದಿಗೆ ಮನೆಯ ಹಿರಿಯನಂತೆ ಕೆಲವು ಲೆಕ್ಕಾಚಾರದ ಮಾತುಗಳನ್ನು ಹೇಳುವುದು ಕುತೂಹಲಕಾರಿಯಾಗಿದೆ: ” ನಿಮಗೆ ಕೊಟ್ಟಿರತಕ್ಕ ನಿವೇಶನ 18*20 ಅಡಿ ಉದ್ದ, 20 ಅಡಿ ಅಗಲ. ಚದರ ಒಂದಕ್ಕೆ 8 ರೂಪಾಯಿಯಂತೆ ಆದರೆ ಇದಕ್ಕೆ 320 ರೂಪಾಯಿ ಬೆಲೆ ಆಗುತ್ತದೆ. ಮೊದಲ ಹಂತದಲ್ಲಿ ಕೊಡಬೇಕಾದ್ದು 80 ರೂಪಾಯಿ ಮಾತ್ರ. ಆಗ ನಿವೇಶನ ನಿಮ್ಮದಾಯಿತು. ಆಮೇಲೆ 3 ವರ್ಷಗಳ ಅವಧಿಯಲ್ಲಿ 6 ಕಂತುಗಳಲ್ಲಿ ಬಾಕಿ 240 ರೂಪಾಯಿಗಳನ್ನು ಕೊಡಬೇಕು ಎಂದು ನಗರಾಭಿವೃದ್ಧಿ ಮಂಡಳಿ ತೀರ್ಮಾನಿಸಿದೆ. ಅದರಂತೆ ನೀವು ಮಾಡಬಹುದು…………ಈ ನಿವೇಶನಗಳನ್ನು ಅಪಹರಿಸಲು ಬಕಪಕ್ಷಿಗಳಂತೆ ಅನೇಕರು ಕಾದಿದ್ದಾರೆ ಎಂಬುದನ್ನು ಅವರು (ಲಕ್ಕಣ್ಣ ಎಂಬವರು) ತಿಳಿಸಿದ್ದಾರೆ. ನಾವು ಇದಕ್ಕೆ 8 ರೂಪಾಯಿ ಬೆಲೆ ಗೊತ್ತು ಪಡಿಸಿದ್ದೇವೆ. ಇದರ ಮಾರುಕಟ್ಟೆ ಬೆಲೆ ಚದರ ಅಡಿಗೆ 50 ರೂಪಾಯಿ ಇದೆ. ಇದನ್ನು ಹಣವಂತರು ಬರೆಸಿಕೊಳ್ಳದಂತೆ ಏನಾದರೂ ಕಾನೂನು ತರಬೇಕೆಂದರೆ ಅಂತ ಕಾನೂನನ್ನು ತರುವ ಕಾರ್ಯವನ್ನೂ ನಾವು ಖಂಡಿತವಾಗಿಯೂ ಮಾಡುತ್ತೇವೆ” (ಪು:308). ಈ ರೀತಿ ಬಿಡಿಸಿ ಬಿಡಿಸಿ ಜನರೊಂದಿಗೆ ಜನರಂತೆಯೇ ಮಾತಾಡುವ ಅರಸು ಶೈಲಿ ವಿಶಿಷ್ಟವಾದುದಾಗಿ ತೋರುತ್ತದೆ. ಒಂದು ರೀತಿಯಲ್ಲಿ ಕೈಲಾಗದವರಲ್ಲೂ ಕನಸನ್ನು ಕಾಣುವಂತೆ ಪ್ರೇರಿಸುವ ಮಾತುಗಳಿವು. ಅತ್ಯಂತ ಸರಳವೂ ಆತ್ಮೀಯವೂ ಆದ ಧಾಟಿ ಇಲ್ಲಿದೆ.

urs jagjivan

ಹೀಗೇ ಲೆಕ್ಕಾಚಾರ ಹಾಕಿ ಬಡವರ ಬದುಕಿನಲ್ಲಿ ಆತ್ಮವಿಶ್ವಾಸ ಮತ್ತು ಸ್ವಾವಲಂಬಿತನವನ್ನು ಕಾಣ ಬಯಸಿ ಹಾಕಿಕೊಂಡ ದಿಟ್ಟ ಕಾರ್ಯಕ್ರಮ ಭೂಸುಧಾರಣೆ. ಇಲ್ಲೂ ದೇವರಾಜ ಅರಸು ಅವರು ಯೋಜನೆಗಾಗಿ ಯೋಜನೆ ಹಾಕಿಕೊಳ್ಳದೆ ಒಂದು ಹಸನಾದ ಭವಿಷ್ಯದ ಕನಸು ಕಾಣುವ ಉತ್ಸಾಹದಲ್ಲೇ ಅದರ ಜಾರಿಗಾಗಿ ಪ್ರಯತ್ನಿಸಿದರು. ಈ ಕಾರಣದಿಂದಲೇ ಅವರು ಭೂಸುಧಾರಣೆ ಕಾನೂನಿನ ಜೊತೆ ಜೊತೆಗೇ ನ್ಯಾಯಮಂಡಳಿಗಳ ಸ್ಥಾಪನೆಯನ್ನೂ ಮಾಡಿದರು. ಈ ಮುಂದಾಲೋಚನೆಯೇ ಇಂತಹ ಜಾರಿಗೆ ಕಠಿಣವಾಗಿರುವ ಕಾನೂನು ತಕ್ಕಮಟ್ಟಿಗಾದರೂ ಜನರನ್ನು ತಲುಪಲು ಸಹಾಯ ಮಾಡಿತು. ಇದು ಕೆಲವರಿಗೆ ಭೂಮಿಯನ್ನು ನೀಡಿತು ನಿಜ. ಆದರೆ ಅದು ಭೂಮಿಯನ್ನಷ್ಟೇ ನೀಡಿತೆ? ಭೂಮಿ ಕೊಟ್ಟಿದ್ದು ಎಷ್ಟು ಮುಖ್ಯವೋ ಅದಕ್ಕಿಂತ ಮುಖ್ಯವಾದುದು ಈ ಕಾನೂನಿನ ಅನುಷ್ಠಾನದ ಪರಿಣಾಮವಾಗಿ ಆದ ಜನರ ಮನಸ್ಥಿತಿಯ ಬದಲಾವಣೆ. ಭೂಮಿ ಸಿಕ್ಕಿದವರಿಗೆ ಭೂಮಿಯೊಂದಿಗೆ ಹೆಮ್ಮೆಯ ಭಾವವನ್ನೂ, ಕೆಲವರಿಗೆ ಭೂಮಿ ಸಿಕ್ಕದೇ ಹೋದರೂ ನಾವೂ ಆರ್ಥಿಕ ಮೂಲದ ಸುಧಾರಣೆಯೊಂದಿಗೆ ತಲೆ ಎತ್ತಿ ಬಾಳಬಹುದು ಎಂಬ ಆಶ್ವಾಸನೆಯನ್ನೂ ಅದು ನೀಡಿತು. ಅಂದರೆ ಅಲ್ಲಿಯ ತನಕ ತಲೆಬಾಗಿ ‘ಒಡೆಯ’ ಎನ್ನುತ್ತಿದ್ದ ನಾಲಗೆ ಆ ನಂತರದಲ್ಲಿ ತಲೆಎತ್ತಿ, ಮುಖನೋಡಿ ಮಾತಾಡುವುದನ್ನೂ ಕಲಿಸಿತು. ಅಲ್ಲಿಯ ತನಕ ಒಡೆಯ ಕಣ್ಣು ಹಾಕಿದರೆ ಅದು ತನ್ನ ಭಾಗ್ಯ ಎಂದು ಭಾವಿಸಬೇಕೆಂಬ ತರಬೇತಿಗೆ ಒಳಗಾಗಿದ್ದ ಗೇಣೀದಾರ, ಕೂಲಿ ಹೆಣ್ಣುಮಕ್ಕಳಿಗೆ ಅಲ್ಲಿಂದ ನಂತರ – ದಿಟ್ಟಿಸಿ ನೋಡಿ ‘ಏನು?’ ಎಂದು ಪ್ರಶ್ನಿಸಬಹುದು ಎಂಬುದನ್ನು ಕಲಿಸಿತು. ಒಕ್ಕಲು ಮಕ್ಕಳಿಗೂ ಕೂಡ ಈ ಭೂಮಿ ವಿಶಾಲವಾಗಿದೆ, ತಾನು ಬದುಕುತ್ತಿರುವ ನೆಲದಾಚೆಗೂ ತಾನು ಬಾಳು ಕಟ್ಟಿಕೊಳ್ಳಬಹುದು, ಒಡೆಯನ ಮನೆ – ತನ್ನ ಗುಡಿಸಲುಗಳ ಆಚೆಗೂ ತನ್ನದೇ ಬದುಕು ಕಟ್ಟಿಕೊಳ್ಳಬಹುದು ಎಂಬ ಜ್ಞಾನವನ್ನೂ ಇದು ನೀಡಿತು.

ಭೂಮಿ ಪಡೆದವರಿಗೆ ಮಾತ್ರವಲ್ಲ ಇದು ಭೂಮಿ ಕಳೆದುಕೊಂಡವರಿಗೂ ಮರುಹುಟ್ಟು ನೀಡಿತು. ಆ ಕಾಲದಲ್ಲಿ ಇದು ಭೂಮಾಲೀಕರು ಕಾಂಗ್ರೆಸ್ ವಿರೋಧಿ ನಿಲುವು ತಳೆಯಲು ಕಾರಣವಾಯಿತು ಎಂದಷ್ಟೇ ಕಾಣುತ್ತದೆ. ಆದರೆ, ಹಿಂತಿರುಗಿ ನೋಡಿದಾಗ, ಈ ಭೂಮಾಲೀಕರಾಗಿದ್ದವರ ಅಟ್ಟಹಾಸ ಕಡಿಮೆಯಾಗಿ ಅವರ ಮಕ್ಕಳು ಮರಿ ಇದರಾಚೆಗೂ ತಮಗಿದ್ದ ಪ್ರತಿಭೆಗಳಿಗೆ ಸಾಣೆ ಹಿಡಿಯಲು ನೆರವಾಯಿತು. ಒಂದು ಕಾಲದಲ್ಲಿ ‘ರೌಡಿಸಂ’ ಮಾಡಿಕೊಂಡು ಮೆರೆದಾಡುತ್ತಿದ್ದ ಅವಿಭಜಿತ ದಕ್ಷಿಣ ಕನ್ನಡದ ಭೂಮಾಲೀಕ ವರ್ಗದ ಹುಡುಗರು ಕಳೆದ 20-25 ವರ್ಷಗಳಲ್ಲಿ ಜಗತ್ತಿನಾದ್ಯಂತ ಬೇರೆ ಬೇರೆ ಕ್ಷೇತ್ರಗಳಲ್ಲಿ ಮುಂಚೂಣಿಗೆ ಬರುತ್ತಿದ್ದಾರೆ. ಇದಕ್ಕೆ ಮೂಲ ಕಾರಣ ಚೂರು ಪಾರು ಭೂಮಿ ನಂಬಿಕೊಂಡು ಬದುಕಲಾಗುವುದಿಲ್ಲ ಎಂಬ ಅರಿವಿನಿಂದ ತಮ್ಮ ಬದುಕನ್ನು ತಾವೇ ರೂಪಿಸಿಕೊಳ್ಳಬೇಕಾದ ಅನಿವಾರ್ಯತೆ, ಒತ್ತಡ. ಅದರ ಫಲವಾಗಿ ವಿದ್ಯೆಗೆ ತೆರೆದುಕೊಳ್ಳತೊಡಗಿದರು. ಹೋಟೆಲ್ ಇತ್ಯಾದಿ ಉದ್ಯೋಗ ನಂಬಿಕೊಂಡು ಊರು ತೊರೆದು ಬದುಕು ಕಟ್ಟಿಕೊಳ್ಳ ತೊಡಗಿದರು. ಇವೆಲ್ಲದರ ಫಲವಾಗಿ ಇವರುಗಳ ಜೀವನ ದೃಷ್ಠಿಯಲ್ಲೂ ಗಮನಾರ್ಹ ಬದಲಾವಣೆಗಳಾಗ ತೊಡಗಿದವು. ಕರ್ಮಠ, ಪುರೋಹಿತ ಶಾಹಿಯ ನಂಟು, ದಬ್ಬಾಳಿಕೆ, ಹೆಂಗಸರನ್ನು ಭೋಗದ, ಶೋಷಣೆಯ ಸಾಮಗ್ರಿ ಎಂಬ ನಿಲುವಿನಿಂದ ನೋಡುತ್ತಾ, ಕ್ರೌರ್ಯವನ್ನೇ ಪೌರುಷ ಎಂದು ಭಾವಿಸಿದ್ದ – ದೊಡ್ಡ ದೊಡ್ಡ ಹಿಡುವಳಿದಾರರು ಮತ್ತು ಅವರ ಮಕ್ಕಳು – ಕಾಲದ ಹೊಡೆತದಿಂದ ಪರಿಸ್ಥಿತಿಗೆ ಹೊಂದಿಕೊಂಡು ಬದಲಾದದ್ದು ಭೂ ಸುಧಾರಣೆ ಉಂಟು ಮಾಡಿದ ಪರೋಕ್ಷ ಬದಲಾವಣೆಗಳಲ್ಲೊಂದು. ಬಹುಶಃ ಬಹಳಷ್ಟು ಹೆಂಗಸರು, ತಾಯಂದಿರು ಈ ಬದಲಾವಣೆಗೆ ಒಳಗೊಳಗೇ ಕೈಮುಗಿದಿರಬಹುದು.

ಭೂ ಸುಧಾರಣೆ ಮಾಡಿದ ಬದಲಾವಣೆಗಳಲ್ಲಿ ಕೆಲವು ಕಣ್ಣಿಗೆ ಕಾಣುವಂತಿವೆ. ಒಂದು ಕಾಲದಲ್ಲಿ ಅಸಮಾನತೆಯ ಚಿತ್ರದಲ್ಲೂ ಏಕತಾನತೆ ಇತ್ತು. ಇದನ್ನು ನಾನು ನನ್ನ ಚಿಕ್ಕ ಊರಿನ ಅನುಭವದೊಂದಿಗೆ ಹೇಳ ಬಯಸುತ್ತೇನೆ. ನನ್ನ ತಾಯಿಯ ಊರು ಬನ್ನಾಡಿಯಲ್ಲಿ (ಕುಂದಾಪುರ ಕನ್ನಡ ಮನೆಮಾತಿನ, ತಾಂತ್ರಿಕವಾಗಿ ಉಡುಪಿ ಜಿಲ್ಲೆಗೆ ಸೇರಿದ ಊರು.)ಕೆಲವು ಸಾವಿರ ಮನೆಗಳಿರಬಹುದು. ಈ ಇಡೀ ಊರಿನಲ್ಲಿ ಪ್ರಧಾನವಾಗಿ ಇರುವುದು ಎರಡೇ ಜಾತಿಗಳು. ಒಂದು ಬಂಟರು ಮತ್ತು ಇನ್ನೊಂದು ಬಿಲ್ಲವರದು. ಊರ ಹೊರಗಣ ಬಯಲಿನಲ್ಲಿ ದಲಿತ ಕುಟುಂಬಗಳ ವಾಸ. ಊರಿನ ದೇವಸ್ಥಾನದ ಪುಜೆಗೆಂದು ಒಂದು ಬ್ರಾಹ್ಮಣ ಕುಟುಂಬ ಇತ್ತು. ಇನ್ನೊಂದು ವ್ಯಾಪಾರ ವ್ಯವಹಾರ ಮಾಡುವ ಗೌಡ ಸಾರಸ್ವತ ಕುಟುಂಬವೂ ಇತ್ತು. ಬಾಲ್ಯದಲ್ಲಿ ನಾನು ಕಂಡ ದೃಶ್ಯ ಹೇಗಿತ್ತೆಂದರೆ, ಬಂಟರೆಲ್ಲ ಭೂಮಿ ಉಳ್ಳವರಾಗಿದ್ದು ಒಡೆಯರಾಗಿದ್ದರೆ, ಬಿಲ್ಲವರೆಲ್ಲ ಈ ಒಡೆಯರಿಗೆ ಆಳುಗಳಾಗಿದ್ದರು. ಈ ವ್ಯತ್ಯಾಸ ಗೆರೆ ಕೊರೆದಂತೆ ಸ್ಪಷ್ಟವಾಗಿ ಕಾಣುತ್ತಿತ್ತು. ಬಿಲ್ಲವರು ಬಂಟರಿಗೆ ಗೇಣಿದಾರರೂ ಆಗಿದ್ದರು. ಹಾಗಂತ ಇಲ್ಲಿ ಯಾರೂ ಅತಿ ಶ್ರೀಮಂತರು ಇರಲಿಲ್ಲ. ಬಂಟರಲ್ಲಿ ಕೆಲವರು ಬಡವರೂ ಇದ್ದರು. ಆದರೆ ಬಿಲ್ಲವರಲ್ಲಿ ಯಾರೂ ಶ್ರೀಮಂತರೇ ಇರಲಿಲ್ಲ. ಇನ್ನೂ ಒಂದು ವಿಶೇಷ ಎಂದರೆ ಬಂಟ ಮತ್ತು ಬಿಲ್ಲವರು ನಂಬುವ ಗ್ರಾಮ ದೇವತೆಯನ್ನು ಪುಜಿಸುವ ಅಧಿಕಾರ ಅಂದೂ ಇಂದೂ ಬಿಲ್ಲವರಲ್ಲೇ ಒಬ್ಬನದಾಗಿರುತ್ತಿತ್ತು. ಈ ಮಾತು ದೇವಸ್ಥಾನದ ವಿಷಯಕ್ಕೆ ಬಂದಾಗ ಬದಲಾಗುತ್ತಿತ್ತು. ಆಗ ಪುಜಾರಿ ಪ್ರಧಾನ, ಬಂಟ ನಂತರದ ಪ್ರಧಾನ, ಆನಂತರದಲ್ಲಿ ಬಿಲ್ಲವರಿರುತ್ತಿದ್ದರು.

ದೇವರಾಜ ಅರಸು ಭೂಸುಧಾರಣೆಯ ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಹೊರಟಾಗ ಈ ಊರಿನಲ್ಲೂ ಸಂಚಲನವಾಯಿತು. ಮಧ್ಯಮ ವರ್ಗದ ಬಂಟರಲ್ಲಿ ತಳಮಳ ಶುರುವಾಯಿತು. ‘ಯಬ್ಯೇ ಈಗ ಅವ್ರ್ನೆಲ್ಲ ಮಾತಾಡ್ಸುಕಾತ್ತಾ? ಅವ್ರಿಗೊಂದ್ ಡಿಕ್ಲರೇಷನ್ ಕಾಯ್ದಿ ಬಂದ್ ಸೊಕ್ ಬಂದದ್ದೇ’ ಎಂಬ ಉದ್ಗಾರ ಈಗಲೂ ನನ್ನ ಕಿವಿಯಲ್ಲಿ ಗುಯ್ಗುಡುತ್ತಿದೆ. ಈ ಕಾಯ್ದೆ ಬಂದಾಗ ನಾನು ಹೈಸ್ಕೂಲು ಓದುವ ವಿದ್ಯಾರ್ಥಿನಿಯಾಗಿದ್ದೆ. ನನಗೆ ಅರಸು ಪರಿಚಯವಾದದ್ದು ಇಂತ ಮಾತುಗಳ ಮೂಲಕ. ನನ್ನ ಅಂದು ಬಂಧುಗಳ ಮೇಲಿನ ಮಾದರಿಯ ಉದ್ಗಾರವನ್ನು ನಾನು ಹೇಗೆ ಸ್ವೀಕರಿಸಬೇಕು ಎಂಬುದು ನನಗೆ ಹೊಳೆಯುತ್ತಿರಲಿಲ್ಲ. ನಾನು ಆ ಹಳ್ಳಿಯಲ್ಲಿ ವಾಸವಿರದೇ ಹತ್ತಿರದ ಪಟ್ಟಣದಲ್ಲಿ ಬೆಳೆಯುತ್ತಿದ್ದುದರಿಂದ ನನಗೆ ಹಳ್ಳಿಯ ಸಂಸರ್ಗ ಇರಲಿಲ್ಲ. ಆದರೆ ನಮ್ಮ ಅರ್ಧ ಎಕರೆ ತೆಂಗಿನ ತೋಟ ನೋಡಿಕೊಳ್ಳುತ್ತಿದ್ದ ನಮ್ಮ ಒಕ್ಕಲು ಕೂಡ ಡಿಕ್ಲರೇಷನ್ ಕೊಟ್ಟರೂ ಕೊಡಬಹುದು ಎಂಬ ಮಾತುಕತೆ ನಮ್ಮ ಮನೆಯಲ್ಲಿ ನಡೆಯುತ್ತಿತ್ತು. ನಮ್ಮ ತಂದೆ ನಮ್ಮ ‘ಒಕ್ಕಲಿತಿ’ಯನ್ನು (ಗೇಣಿದಾರಳು) ಕರೆದು ‘ನಿನಗೆ ಡಿಕ್ಲರೇಷನ್ ಕೊಡುವುದರಿಂದ ಎಷ್ಟು ಜಾಗ ಸಿಗುತ್ತೋ ಅಷ್ಟು ಜಾಗವನ್ನು ನಾವೇ ಕೊಡುತ್ತೇವೆ. ನೀನು ಡಿಕ್ಲರೇಷನ್ ಕೊಡುವುದು ಬೇಡ’ ಎಂದು ಹೇಳಿ ಅದರಂತೆ ನಮ್ಮಿಬ್ಬರಿಗೂ ಅನುಕೂಲವಾಗುವಂತೆ ಆಕೆಗೆ ಜಾಗ ನೀಡಿದ್ದರು. ಆ ಮೂಲಕ ಆಕೆ ಮತ್ತು ನಮ್ಮ ನಡುವೆ ಪರಸ್ಪರ ವಿಶ್ವಾಸ ಉಳಿದಿತ್ತು. ಆದರೆ ಎಲ್ಲ ಸಂದರ್ಭದಲ್ಲಿ ಇದು ಹೀಗೇ ಆಗಿದ್ದಿಲ್ಲ. ಭೂಸುಧಾರಣೆಗಳು ಅತಿ ಹೆಚ್ಚು ಪರಿಣಾಮಕಾರಿಯಾಗಿ ಅವಿಭಜಿತ ದಕ್ಷಿಣಕನ್ನಡದಲ್ಲಿ ಜಾರಿಗೆ ಬಂದಿದ್ದರೂ ಅಲ್ಲೂ ಕೂಡ ಜಮೀನ್ದಾರರ ಹಿಡಿತ ಹೆಚ್ಚಿದ್ದ ಕೆಲವು ಊರುಗಳಲ್ಲಿ ಎಷ್ಟೋ ಕಡೆ ಹಲ್ಲೆ, ಕೊಲೆಗಳು ನಡೆದು ಹೋದದ್ದೂ ಇದೆ.

ಇಷ್ಟಾಗಿಯೂ ಈ ಭೂಮಿಯ ಒಡೆತನ ಎನ್ನುವುದು ಮಾಡಿದ ಬದಲಾವಣೆಗಳನ್ನು ನಿರ್ಲಕ್ಷಿಸುವಂತೆಯೇ ಇಲ್ಲ. ಈಗ ಇಂತದ್ದೇ ಊರುಗಳಲ್ಲೂ ಕೂಡ ಅಸಮಾನತೆಯ ಗೆರೆಗಳಲ್ಲಿ ಕೆಲವು ಚಲನೆಗಳಾಗಿವೆ. ಈಗ ಅದೇ ಊರುಗಳಿಗೆ ಹೋದರೆ ನಿಮಗೆ, ಹಳೆಯದಾಗಿ ಶಿಥಿಲವಾದ ಅದೇ ಒಡೆಯನ ಮನೆಯ ಮುಂದೆ ಹೊಸದಾದ ಹೊಳೆಯುತ್ತಿರುವ ಆರ್.ಸಿ.ಸಿ. ಮನೆ ಕಟ್ಟಿಕೊಂಡಿರುವ ಮಾಜಿ ಒಕ್ಕಲಿನವರು ಕಾಣುತ್ತಾರೆ. ಊರಿನ ದೇವಸ್ಥಾನದ ಬಾಗಿಲಲ್ಲಿ ತುಸು ದೂರದಲ್ಲಿ ನಡು ಬಗ್ಗಿಸಿ ಪುಜಾರಿ ಎಸೆಯುತ್ತಿದ್ದ ಪ್ರಸಾದಕ್ಕೆ ಬೊಗಸೆ ಒಡ್ಡುತ್ತಿದ್ದ ಒಕ್ಕಲು ಇಂದು ಅದೇ ಊರಿನ ಜೀರ್ಣೋದ್ಧಾರಗೊಳ್ಳುವ ದೇವಾಲಯಕ್ಕೆ ದೇಣಿಗೆ ನೀಡುವವರಾಗಿ ದೇಣಿಗೆ ಪಟ್ಟಿಯಲ್ಲಿ ಅತಿ ಹೆಚ್ಚು ಹಣ ನೀಡಿ ಮೊದಲಿನ ಹೆಸರನ್ನು ದಾಖಲಿಸಿಕೊಂಡು ದೇವಸ್ಥಾನದ ಗೋಡೆಯಲ್ಲಿ ಇವರ ಹೆಸರು ರಾರಾಜಿಸುತ್ತಿದ್ದರೆ ಇಷ್ಟು ಹಣ ನೀಡಲಾಗದ ಮೇಲ್ಜಾತಿಯವರು ಮನಸ್ಸಿನಲ್ಲೇ ಶಾಪ ಹಾಕಿಕೊಳ್ಳುವವರಾಗಿದ್ದಾರೆ. ಮೊದಲು ಪ್ರಸಾದವನ್ನು ಬೊಗಸೆಗೆ ಎಸೆಯುತ್ತಿದ್ದ ಪುರೋಹಿತನ ಮಗ ಇಂದು ಪುರೋಹಿತನಾಗಿದ್ದಲ್ಲಿ ಇವರನ್ನು ಬಹುವಚನದಲ್ಲಿ ಕರೆಯುವ ಅನಿವಾರ್ಯತೆಗೆ ಸಿಲುಕಿದ್ದಾನೆ. (ಬದಲಾವಣೆಯ ಸ್ವರೂಪ ಹೀಗಿರಬೇಕಾಗಿರಲಿಲ್ಲ ಎಂಬುದು ಬೇರೆ ಮಾತು. ಜೀರ್ಣೋದ್ಧಾರ ಎಂಬುದು ಕೂಡ ಪುರೋಹಿತಶಾಹಿಯನ್ನು ವೈಭವೀಕರಿಸುವ ಒಂದು ತಂತ್ರವೇ. ಕೊನೆಗೂ ಆರ್ಥಿಕತೆ ಆ ಕಡೆಗೇ ಚಲಿಸಲು ನೆರವಾಗುವ ತಂತ್ರವೂ ಹೌದು. ಮಾತ್ರವಲ್ಲ, ಇಂದು ಹೀಗೆ ಆರ್ಥಿಕವಾಗಿ ಮುನ್ನೆಲೆಗೆ ಬಂದವರು ಬ್ರಾಹ್ಮಣ, ಬಂಟರ ಅನುಕರಣೆ ಮಾಡುತ್ತಾ ಹಿಂದುತ್ವದ ಕಾರ್ಯಸೂಚಿಗಳಲ್ಲಿ ಕಾರ್ಯಕರ್ತರಾಗಿ ಅವರ ಅಣತಿ ಪಾಲಿಸುವವರಾಗುವ ವಿರುದ್ಧ ಚಲನೆಗಳೂ ನಡೆಯುತ್ತಿವೆ.) ಹಳ್ಳಿಗಳಲ್ಲಿ ಯಜಮಾನಿಕೆ ಎಂಬುದು ಇಂತಹ ಸಂಗತಿಗಳಿಂದಲೇ ನಿರ್ಣಯವಾಗುತ್ತವೆ. ಹೀಗಾಗಿ ಈಗ ಇಲ್ಲಿ ಕ್ರಮೇಣ ಈ ಹಿಂದೆ ಕೆಳಜಾತಿ ಅನ್ನಿಸಿಕೊಂಡವರು ಮುನ್ನೆಲೆಗೆ ಬರುತ್ತಿದ್ದಾರೆ. ಮತ್ತು ಮೇಲ್ಜಾತಿಯ ಮಾನಸಿಕತೆ ನಿಧಾನವಾಗಿಯಾದರೂ ಇದನ್ನು ಒಪ್ಪಿಕೊಳ್ಳತೊಡಗಿವೆ. ಇದೆಲ್ಲಾ ಬರೀ ಭೂಸುಧಾರಣೆಯಿಂದಷ್ಟೇ ಆದದ್ದಲ್ಲ. ಭೂಸುಧಾರಣೆ ಎಂಬ ವಿದ್ಯಮಾನ ನೀಡಿದ ಆತ್ಮವಿಶ್ವಾಸದ ಫಲವಾಗಿ ತಲೆ ಎತ್ತಿ ನಿಂತವರು ಪರ ಊರಿಗೆ ಹೋಗಿ ದುಡಿದ ಹಣದಿಂದ ಆಗಿರುವುದು.

ಭೂ ಸುಧಾರಣೆ ಕಾಯ್ದೆಯನ್ನು ಜಾರಿಗೆ ತರುವಾಗ ಆ ಕುರಿತು ಅರಸು ಅವರಿಗೆ ಇದ್ದ ಬದ್ಧತೆ ಮತ್ತು ಖಚಿತತೆ ಗಮನಾರ್ಹವಾದುದು. “ಯಾರು ಬೆವರು ಸುರಿಸಿ ಅದರಿಂದ ಉತ್ಪಾದನೆಯನ್ನು ಮಾಡುತ್ತಿದ್ದಾರೋ ಅವರಿಗೇ ಆ ಭೂಮಿಯ ಮಾಲೀಕತ್ವ ಸಲ್ಲಬೇಕು” ಎಂಬ ಸ್ಪಷ್ಟ ನಿಲುವಿನಿಂದ 1974ರಲ್ಲಿ ಜಾರಿಗೆ ತಂದ ಈ ಕಾಯ್ದೆಯಿಂದ ಸುಮಾರು ಹದಿನೈದು ಲಕ್ಷ ಗೇಣಿದಾರರಿಗೆ ಭೂಮಿ ಸಿಕ್ಕಿದೆ. ಹಾಗೆಯೇ ಸುಮಾರು ಇಪ್ಪತ್ತು ಲಕ್ಷ ಕೃಷಿ ಕಾರ್ಮಿಕರಿಗೆ ಇದರ ಫಲ ದೊರೆತಿದೆ ಎಂದು ಅಂಕಿ ಅಂಶಗಳು ಹೇಳುತ್ತವೆ. ಮುಖ್ಯವಾಗಿ ಉತ್ತರ ಕನ್ನಡ, ಅವಿಭಜಿತ ದಕ್ಷಿಣ ಕನ್ನಡ ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಇದು ಹೆಚ್ಚು ಪರಿಣಾಮಕಾರಿಯಾಗಿ ಜಾರಿಗೆ ಬಂತು. ಆದರೆ ಉತ್ತರ ಕರ್ನಾಟಕದ ಕಡೆ ಇದು ಎಷ್ಟೋ ಜನರ ಅರಿವಿಗೂ ಬರಲಿಲ್ಲ. ಅರಸು ಅವರಿಗೆ ಇದು ತರಬಹುದಾದ ಬದಲಾವಣೆಗಳ ಬಗ್ಗೆ ಸ್ಪಷ್ಟವಾದ ಮುನ್ನೋಟಗಳಿದ್ದವು. ತಾವು ಈ ಕಾಯ್ದೆ ತರಲು ಹೊರಟಾಗ ಅವರು ಮೊದಲು ನಿರ್ದೇಶನ ನೀಡಿದ್ದು ತಮ್ಮದೇ ಪಕ್ಷದ ಶಾಸಕರು ಹಾಗೂ ಮಂತ್ರಿಗಳಿಗೆ. “ಬೇರೆ ಪಕ್ಷದವರು ಏನು ಹೇಳುತ್ತಾರೋ ತಿಳಿದಿಲ್ಲ. ನಮ್ಮ ಪಕ್ಷದಲ್ಲಿ ಕೆಲಸಮಾಡತಕ್ಕ ಮುಖಂಡರು ಕಾರ್ಯಕರ್ತರು ಪ್ರಾಮಾಣಿಕವಾಗಿ ನಾವು ಏನು ಕಾನೂನು ಮಾಡಿದ್ದೇವೆ ಆ ಕಾನೂನಿನಂತೆ ವ್ಯವಹಾರಗಳು ನಡೆಯುವಂತೆ ಏರ್ಪಾಡು ಮಾಡುವುದು ತಮ್ಮ ಕರ್ತವ್ಯವೆಂದು ಭಾವಿಸಬೇಕು. ನಮ್ಮಲ್ಲಿ ಭೂ ಮಾಲೀಕರ ಪರ ಇರುವ ಜನ ಇದ್ದರೆ, ಕಾನೂನಿನಂತೆ ನಡೆಯಲು ಅವರಿಗೆ ಇಷ್ಟವಿಲ್ಲದಿದ್ದರೆ ಅಂಥವರು ನಮ್ಮ ಪಕ್ಷವನ್ನು ಬಿಟ್ಟು ಹೋಗಬೇಕು. ಇದಕ್ಕೆ ಬೇರೆ ದಾರಿಯೇ ಇಲ್ಲ. ಪಕ್ಷದಲ್ಲೂ ಇರುತ್ತೇವೆ ಹಾಗೂ ಜಮೀನನ್ನೂ ಉಳಿಸಿಕೊಳ್ಳುತ್ತೇವೆ ಅನ್ನುವುದಾದರೆ ಇಂದಲ್ಲ ನಾಳೆಯಾದರೂ ನೀವು ಹೊರಗೆ ಹೋಗಲೇಬೇಕಾಗುತ್ತದೆ. ಇದಕ್ಕೆ ಒಂದು ಭೂಮಿಕೆಯನ್ನು ಮೊದಲು ನಾವು ತಯಾರು ಮಾಡಿಕೊಳ್ಳಬೇಕು.” (ಅದೇ; ಪು:20) ಇದರೊಂದಿಗೆ ಅವರು ಬಹಿರಂಗ ಸಭೆಯನ್ನು ಏರ್ಪಡಿಸಿ ಜನರಿಗೆ ಕಾನೂನನ್ನು ವಿವರಿಸುತ್ತಾರೆ. ಭೂಮಾಲೀಕರು ಗೇಣಿದಾರರಿಗೆ ಮೋಸ ಮಾಡಿಯಾರು ಎಂಬುದು ಅವರ ಕಾಳಜಿ. “ಭೂಸುಧಾರಣೆ ಕಾನೂನಿನಿಂದ ನಾವು ಯಾರ ಹಿತವನ್ನು ಸಾಧನೆ ಮಾಡುವುದಕ್ಕೆ ಹೊರಟಿದ್ದೇವೋ ಆ ಜನರಿಗೆ ಕಾನೂನಿನ ಮೂಲಕ ರಕ್ಷಣೆ ದೊರಕಿಸಿಕೊಡಬೇಕು ಎಂಬುದು ನಮ್ಮ ಉದ್ದೇಶ” ಎನ್ನುವ ಅವರು “ಯಾರು ಗೇಣಿದಾರರಿದ್ದಾರೆ ಅವರಿಗೆ ಭೂಮಿಯನ್ನು ಕೊಡುವಂತೆ ಹಾಗೂ ಅದನ್ನು ಹಿಂದಕ್ಕೆ ಮಾಲೀಕರಿಗೆ ಕೊಡದಂತೆ ಈಗ ಕಾನೂನು ಮಾಡಿದ್ದೇವೆ. ಇದನ್ನು ಜನರು ಅರ್ಥಮಾಡಿಕೊಳ್ಳಬೇಕು. ಈ ಸಭೆ ಏರ್ಪಾಡು ಮಾಡಿರುವುದು ಬಹಿರಂಗವಾಗಿ ಜನರಿಗೆ ಈ ವಿಷಯವನ್ನು ತಿಳಿಯುವಂತೆ ಹೇಳಬೇಕೆಂಬ ಉದ್ದೇಶದಿಂದಲೆ” ಎನ್ನುತ್ತಾರೆ. ಹಾಗಂತ ಅವರು ಭೂಮಿ ಕಳೆದುಕೊಂಡವರ ಕುರಿತು ಮೌನವಾಗೇನೂ ಇರಲಿಲ್ಲ. “ಬಡವರಿಗೂ ಹಣವಂತರಿಗೂ ಅಂತರ ಕಡಿಮೆ ಮಾಡಬೇಕೆಂದೂ, ದೇಶದಲ್ಲಿ ಉತ್ಪಾದನೆ ಹೆಚ್ಚಾಗಬೇಕೆಂದೂ, ಅದರಲ್ಲಿ ತೊಡಗಿರುವ ಜನರಿಗೆ ಯೋಗ್ಯತಾನುಸಾರ ಲಾಭದ ಹಂಚಿಕೆಯಾಗಬೇಕು” ಎಂದು ಹೇಳಿ ಅವರ ಮನ ಒಲಿಸಲು ಪ್ರಯತ್ನಿಸುತ್ತಾರೆ. ಅವರಿಗೆ ಪರಿಹಾರ ಇತ್ಯಾದಿಗಳ ಬಗ್ಗೆ ಯೋಚಿಸಿದಂತೆಯೇ ಖಡಕ್ಕಾಗಿ ಅವರು ಹೇಳುವ ಮಾತು ಇಂದು ಅಚ್ಚರಿ ಹುಟ್ಟಿಸುತ್ತದೆ. “ಯಾರು ಇದುವರೆಗೆ ಈ ಗೇಣಿದಾರರನ್ನು ಶೋಷಣೆ ಮಾಡಿ ಸುಖಪಡುತ್ತಿದ್ದರೋ ಆ ಜನ ತಮ್ಮ ಕಾಲ ಮುಗಿಯಿತೆಂದು ತಿಳಿಯಬೇಕು…ದುಡಿಯುವವರಿಗೆ ಈಗ ನೀವು ಅವಕಾಶಮಾಡಿಕೊಡಬೇಕು,ಮಾಡಿಕೊಡಿ. ನಿಮಗೆ ಹಣ ಸಂಪಾದಿಸಲು ಅನೇಕ ಮಾರ್ಗಗಳಿವೆ. ಅಲ್ಲಿಗೆ ಹೋಗಿ”(ಅದೇ;ಪು:22) ಎನ್ನುತ್ತಾರೆ.

ಅರಸರ ಈ ಖಚಿತತೆಯಾಗಲೀ, ಕಾಳಜಿಯಾಗಲೀ, ದಿಟ್ಟತನವಾಗಲೀ ಮುಂದೆ ಎಂದೂ ಅಧಿಕಾರಸ್ಥರಲ್ಲಿ ಕಾಣುವುದಿಲ್ಲ. ಹೀಗಾಗಿಯೇ ಇವುಗಳ ಪುರ್ಣಫಲ ಸಿಗಲಿಲ್ಲ. 1995ರಲ್ಲಿ ಬದಲಾದ ಶಾಸನಗಳು ಕೈಗಾರಿಕೆಗಳಿಗೆ ಭೂ ಒಡೆತನಕ್ಕೆ ಅನುಕೂಲ ಮಾಡಿತು. ಅರಸು ಕೃಷಿರಂಗಕ್ಕೆ ಕಪ್ಪುಹಣ ಪ್ರವೇಶಿಸಬಾರದು ಎಂಬ ನಿಲುವಿನವರಾಗಿದ್ದರು. ವಾಣಿಜ್ಯೋದ್ಯಮಿಗಳು ಕೃಷಿ ಭೂಮಿ ಪಡೆದು ಲಾಭ ಮಾಡಿಕೊಳ್ಳಬಾರದು ಎಂಬ ದೃಷ್ಟಿ ಅವರಿಗಿತ್ತು. ಆದರೆ ಬದಲಾದ ಕಾಯ್ದೆಗಳಲ್ಲಿ ಕೃಷಿಯೇತರ ಆದಾಯಮೂಲದ ಮಿತಿಯನ್ನು ಹೆಚ್ಚಿಸುತ್ತಾ ಹೋಗಲಾಯಿತು. ಭೂಮಿ ಹೊಂದುವ ಗರಿಷ್ಠಮಿತಿಯನ್ನು 54ಎಕರೆಗಳಿಂದ 95ರಲ್ಲಿ 216ಎಕರೆಗಳಿಗೆ ಹೆಚ್ಚಿಸಲಾಯಿತು. 74ರಲ್ಲಿ ಸದನದ ಸದಸ್ಯರೆಲ್ಲರಿಗೂ ಕಾಯ್ದೆಯ ಅರಿವಿತ್ತು. ಆದರೆ 95ರಲ್ಲಿ ಚರ್ಚೆಯಿಲ್ಲದೇ ಕಾಯ್ದೆ ಮಾಡಲಾಯಿತು. ಇಲ್ಲಿಂದ ಆರಂಭವಾದ ಬಂಡವಾಳಶಾಹಿ ಪರ ಮತ್ತು ರೈತರೆಡೆಗಿನ ನಿರ್ಲಕ್ಷ್ಯ ಧೋರಣೆ ನಿರಂತರವಾಗಿ ಮುಂದುವರಿದಿದ್ದು ಇಂದು ರೈತರ ಆತ್ಮಹತ್ಯೆಯ ತನಕ ಬಂದಿದ್ದು ಭೂ ಸುಧಾರಣೆಯ ಮೂಲ ಆಶಯವನ್ನೇ ಮಸುಕಾಗಿಸಿದೆ. ರೈತರ ಬಗ್ಗೆ ಅವರು ಕೇವಲ ಓಟುಗಳೆಂದು ಭಾವಿಸದೆ ಕಕ್ಕುಲಾತಿಯಿಂದ ಮಾತಾಡುವ ರಾಜಕಾರಣಿಗಳಿಗೂ ಈಗ ಬರ ಬಂದಿದೆ. ಅರಸು ಒಂದೆಡೆ, ರೈತರಿಗೆ ವ್ಯವಸಾಯದ ಜೊತೆಗೆ ಒಂದಿಷ್ಟು ತೆಂಗಿನಮರಗಳನ್ನೋ, ಹಲಸಿನ ಮರಗಳನ್ನೋ, ಮಾವಿನ ಮರಗಳನ್ನೋ ಹಾಕಿಕೊಳ್ಳಿ. ಅದರಿಂದ ಆರು ತಿಂಗಳ ಸಂಸಾರ ನಿರ್ವಹಣೆಯಾದರು ಆಗುತ್ತದೆ ಎನ್ನುತ್ತಾರೆ. ನಾವು ಮರಗಳನ್ನು ಬೆಳೆಸುವುದು ಬಿಟ್ಟು ಬರೀ ಕಡಿಯುವ ಕೆಲಸ ಮಾಡುತ್ತಿದ್ದೇವೆ. ಪೀಠೋಪಕರಣಗಳಿಗೆ ಕೊಟ್ಟಷ್ಟು ಗಮನವನ್ನೂ ಮರಬೆಳೆಸಲು ಕೊಡುತ್ತಿಲ್ಲ. ಸರ್ಕಾರ ಎಲ್ಲರಿಗೂ ನೀರಾವರಿ ವ್ಯವಸ್ಥೆ ಮಾಡಲಾಗುವುದಿಲ್ಲ. ಮಳೆನೀರನ್ನೇ ಅವಲಂಬಿಸಿರುವ ರೈತರು ಮರಬೆಳೆಸುವುದೊಂದೇ ಮೋಕ್ಷದ ದಾರಿ. ನಿಮಗೆ ಇಷ್ಟಬಂದ ಮರ ಹಾಕಿ. ಯಾವ ಮರ ವರ್ಷದಲ್ಲಿ ಎರಡು ಮೂರು ಸಾರಿ ಮಳೆ ಬಂದರೂ ಚೆನ್ನಾಗಿ ಬೆಳೆಯುತ್ತದೋ ಅಂತ ಮರ ಹಾಕಿ. ಹುಣಸೇ ಮರವನ್ನಾದರೂ ಹಾಕಿ ಎನ್ನುತ್ತಾರೆ. ಇಂದು ಟ್ರಾಕ್ಟರ್ ಕೊಳ್ಳುವುದು ಮತ್ತು ಮರ ಕಡಿಯುವುದು ಅಭಿವೃದ್ಧಿ ಎನ್ನುವ ವಿಪರ್ಯಾಸದಲ್ಲಿ ನಾವಿದ್ದೇವೆ.

ಇಷ್ಟೆಲ್ಲಾ ಸೂಕ್ಷ್ಮ ಇರುವ ಅರಸು ತುರ್ತುಪರಿಸ್ಥಿತಿಯ ಸಮಯದಲ್ಲಿ ನಡೆದುಕೊಂಡ ರೀತಿ ಅವರ ಇನ್ನೊಂದು ವ್ಯಕ್ತಿತ್ವವನ್ನೂ ಹೇಳುತ್ತದೆ. ಅರಸುವನ್ನು ಒಳಗೊಳಗೇ ಸಹಿಸದ ಪತ್ರಕರ್ತರು ಆ ಮೊದಲೇ ಅವರ ಉತ್ತಮ ಕೆಲಸಗಳಿಗೆ ಪ್ರಚಾರಕೊಡದೇ ಸಣ್ಣಪುಟ್ಟ ವಿವಾದಗಳನ್ನು ದೊಡ್ಡದು ಮಾಡುತ್ತಿದ್ದರು. ಅವರೊಬ್ಬ ಭ್ರಷ್ಟ ಎಂಬಂತೆ ಅವರನ್ನು ಬಿಂಬಿಸಲು ತುದಿಗಾಲಲ್ಲಿ ನಿಂತವರಿಗೆ ತುರ್ತುಪರಿಸ್ಥಿತಿಯ ವಿದ್ಯಮಾನಗಳಿಂದ ರಕ್ಕೆ ಮೂಡಿತು. ಆ ಸಂದರ್ಭದಲ್ಲಿ ಅರಸು ತನಗಾಗದವರನ್ನು, ತನಗವರು ಮೊದಲು ಉಪಕಾರ ಮಾಡಿದ್ದರೂ ಮರೆತು ಜೈಲಿಗೆ ಅಟ್ಟಿದ ರೀತಿ, ಆಗ ನಡೆದ ಅನಾಚಾರಗಳನ್ನು ಯಾರೂ ಸಮರ್ಥಿಸಲು ಸಾಧ್ಯವಿಲ್ಲ. ಹೀಗಾಗಿ ಕ್ರಮೇಣ ಅರಸು ಭ್ರಷ್ಟ ಮತ್ತು ತೋಳ್ಬಲದ ರಾಜಕಾರಣವನ್ನು ಬೆಳೆಸಿದವರು ಎಂಬ ಮಾತು ಮುನ್ನೆಲೆಗೆ ಬಂತು. ಆ ಕಾಲದ ಮತ್ತು ನಂತರದ ಯುವ ತಲೆಮಾರು ಅರಸು ಬಗ್ಗೆ ಇದರಾಚೆಗೆ ತಿಳಿದುಕೊಳ್ಳುವ ಕುತೂಹಲವನ್ನೂ ಹೊಂದಲಿಲ್ಲ. ಲಂಕೇಶ್ ಕೇಳಿದ ‘ನಿಮ್ಮ ಭ್ರಷ್ಟಾಚಾರದ ಬಗ್ಗೆ ಹೇಳಿ’ ಎಂಬ ನೇರ ಪ್ರಶ್ನೆಗೆ ಅರಸು ‘ಭ್ರಷ್ಟರಲ್ಲದವರು ಯಾರು?’ ಎಂದು ಮರು ಪ್ರಶ್ನಿಸುತ್ತಾರೆಯೇ ಹೊರತು ತಮ್ಮನ್ನು ಸಮರ್ಥಿಸಿಕೊಳ್ಳುವುದಿಲ್ಲ. ಅರಸು ಸ್ವಲ್ಪ ದಡ್ಡ ಎಂಬುದಾಗಿ ಲಂಕೇಶ್ ಹೇಳುತ್ತಾರೆ. ವಡ್ಡರ್ಸೆ ರಘುರಾಮ ಶೆಟ್ಟರು ಬರೆದ ‘ಬಹುರೂಪಿ ಅರಸು’ ಎಂಬ ಪುಸ್ತಕ ಅರಸು ಅವರನ್ನು ಮರು ಚರ್ಚೆಗೆ ಒಡ್ಡಲು ಪ್ರೇರೇಪಿಸುತ್ತದೆ. ತಮ್ಮ ಮನೆ ಆಳಿನ ಮಗನಿಗೆ ಅಪಘಾತ ಆಗಿದ್ದನ್ನು ಕೇಳಿ ಮರುಗಿದ ಅರಸರನ್ನು ನೋಡಿ ಲಂಕೇಶ್ ಕೂಡ ಅವರೆಡೆಗಿನ ನಿಲುವನ್ನು ಬದಲಿಸಿಕೊಂಡರಂತೆ. ಇಂದಿರಾಗಾಂಧಿಯಿಂದ ದೂರಾದ ನಂತರ ರಾಷ್ಟ್ರರಾಜಕಾರಣದೆಡೆಗೆ ಮನಸ್ಸು ಮಾಡಿದ ಅರಸರಿಗೆ ವಿಮಾನದ ಟಿಕೆಟ್ಗೆ ಕೂಡ ಹಣವಿಲ್ಲದ್ದನ್ನು ಸ್ವತಃ ವಡ್ಡರ್ಸೆ ನೋಡಿದ್ದನ್ನು ಬರೆದುಕೊಂಡಿದ್ದಾರೆ. ಅರಸು ಅವರ ಸಾವಿನ ನಂತರ ಅವರ ತೋಟದಮನೆ ಕಲ್ಲಹಳ್ಳಿಗೆ ಹೋಗಿ ನೋಡಿದ ವಡ್ಡರ್ಸೆಯವರು ತಮಗಾದ ಅಚ್ಚರಿಯನ್ನು ಬರೆದುಕೊಂಡಿದ್ದಾರೆ. ತಮಗಿದ್ದ 28 ಎಕರೆಯಲ್ಲಿ 4ಎಕರೆಯನ್ನು ತೋಟದಆಳಿಗೆ ಬರೆದುಕೊಟ್ಟೇ ವಿಧಾನಸಭೆಗೆ ಹೋಗಿ ಭೂಸುಧಾರಣೆ ಕಾಯ್ದೆಯನ್ನು ಮಂಡಿಸಿದ ಅರಸು ಅದನ್ನು ತಮ್ಮ ಹೆಂಡತಿ ಮಕ್ಕಳಿಗೂ ಹೇಳಿರಲಿಲ್ಲವಂತೆ. ಅಲ್ಲಿದ್ದ ಸಾಮಾನ್ಯ ಕೈಹೆಂಚಿನ ಹಳೆಯಮನೆ, ತೆಂಗಿನ ತೋಟ ಮತ್ತು ಬಡ್ಡಿಕಟ್ಟಲಾಗದೆ ಬೆಳೆದು 90,000ವಾಗಿದ್ದ ಸಾಲವನ್ನಷ್ಟೇ ಅವರು ತಮ್ಮ ಹೆಂಡತಿ ಮಕ್ಕಳಿಗೆ ಉಳಿಸಿದ್ದು. ಅವರ ಮೂರು ಮಕ್ಕಳು ಈ ಆಸ್ತಿ ಮತ್ತು ಸಾಲವನ್ನು ಸಮನಾಗಿ ಹಂಚಿಕೊಂಡರಂತೆ.

ಮಾಧ್ಯಮಗಳು ಇಂದು ಮಾಡುತ್ತಿರುವುದನ್ನೇ ಅಂದೂ ಮಾಡಿಕೊಂಡು ಬಂದಿವೆ. ಕೆಲ ಮಹಾನ್ ಭ್ರಷ್ಟರನ್ನೂ ಮಹಾನ್ ನಾಯಕರಂತೆ ಬಿಂಬಿಸುವ ಇವರು ಯಾವ ಹಿನ್ನೆಲೆಯವರನ್ನು ಹೀಗೆ ಬಿಂಬಿಸುತ್ತಾರೆ ಎಂಬುದು ಗುಟ್ಟಾಗೇನೂ ಉಳಿದಿಲ್ಲ. ಆದರೆ, ವಡ್ಡರ್ಸೆಯವರ ಅನುಭವ ಮತ್ತು ಅರಸು ಅವರು ಮಾಡಿಹೋದ ಕೆಲಸಗಳು ಅರಸು ಎಂಬ ವ್ಯಕ್ತಿಯನ್ನು ನಾವು ಈಗಿನ ರಾಜಕಾರಣ ಮತ್ತು ರಾಜಕಾರಣಿಯ ನೆಲೆಯಿಂದಾಚೆಗೆ ಅಳೆಯಬೇಕಾದ ಜರೂರಿಯನ್ನು ಹುಟ್ಟುಹಾಕುತ್ತದೆ.
~~~

ಡಾ. ಸಬಿತಾ ಬನ್ನಾಡಿ: ಮುಖ್ಯಸ್ಥರು ಮತ್ತು ಪ್ರಾಧ್ಯಾಪಕರು, ಸ್ನಾತಕೋತ್ತರ ಕನ್ನಡ ಅಧ್ಯಯನ ವಿಭಾಗ, ಸರ್ ಎಂ.ವಿ.ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜು, ಭದ್ರಾವತಿ.
ಕೃತಿಗಳು: ಸಾಹಿತ್ಯ ನಿರೂಪಣೆಗಳು, ಆಲಯವು ಬಯಲಾಗಿ.
ಸಂಪಾದನೆ: ಭಾಷೆ-ಬಳಕೆ, ಸಾಹಿತ್ಯ ಸಂಕಥನ
ಅನುವಾದ: ಅಂಬೇಡ್ಕರ್ ಬದುಕು – ಹೋರಾಟ ( ಮೂಲ: ಸಾಂಝಗಿರಿ)