Round Table India
You Are Reading
ಶೂದ್ರರು ಎಲ್ಲಿದ್ದಾರೆ..?
0
Features

ಶೂದ್ರರು ಎಲ್ಲಿದ್ದಾರೆ..?

default image

 

ಕಾಂಚಾ ಐಲಯ್ಯ ಶೆಪರ್ಡ್ 

ಕನ್ನಡಕ್ಕೆ: ಮಂಜುನಾಥ ನರಗುಂದ

1990 ರ ಆರಂಭದಲ್ಲಿ ಕೇಂದ್ರ ಸರ್ಕಾರ ಮಂಡಲ್ ಆಯೋಗದ ಶಿಫಾರಸ್ಸುಗಳನ್ನು ಜಾರಿಗೆ ತಂದಿದ್ದು ನಿಜಕ್ಕೂ ಶೂದ್ರರಿಗೆ ಒಂದು ಮಹತ್ವದ ಕ್ಷಣವೆನ್ನಬಹುದು. ಈ ಕ್ರಮವು ವಿಶೇಷವಾಗಿ ಸರ್ಕಾರಿ ಉದ್ಯೋಗ ಮತ್ತು ಸಾರ್ವಜನಿಕ ಉನ್ನತ ಶಿಕ್ಷಣದಲ್ಲಿ ಮೀಸಲು ಸ್ಥಾನವನ್ನು ಇತರ ಹಿಂದುಳಿದ ವರ್ಗಗಳಿಗೆ ನೀಡುತ್ತದೆ. ಈ ವರ್ಗವು ಬಹುತೇಕವಾಗಿ ಸಮಾಜದಲ್ಲಿನ ದುರ್ಬಲ ಶೂದ್ರ ಜಾತಿಗಳನ್ನು ಮತ್ತು ಈ ಹಿಂದಿನಿಂದಲೂ ಕೂಲಿ ಕಾರ್ಮಿಕರು, ಕರಕುಶಲ ಕೆಲಸಗಳನ್ನು ಮಾಡುತ್ತಾ ಬಂದಿರುವ ಜನರನ್ನು ಒಳಗೊಂಡಿದೆ. ಮಂಡಲ್ ಆಯೋಗವು ತನ್ನ ವರದಿಯಲ್ಲಿ ಪ್ರಮುಖವಾಗಿ ವೈದಿಕ ವ್ಯವಸ್ಥೆಯಲ್ಲಿನ ಕೊನೆಯ ಚಾತುರ್ವರ್ಣ ಶ್ರೇಣಿಯಲ್ಲಿ ಬರುವ ಜಾತಿಗಳನ್ನು ಗುರುತಿಸಿತು. ಈ ಎಲ್ಲ ಜಾತಿ ಸಮುದಾಯಗಳು ಸಾಮಾಜಿಕ, ಆರ್ಥಿಕ ಮತ್ತು ಶಿಕ್ಷಣ ಹೀಗೆ ಬಹು ಸ್ಥರದಲ್ಲಿ ಇತರ ಉನ್ನತ ಜಾತಿಗಳಿಗಿಂತ ಹಿಂದುಳಿದಿವೆ. ಇವು ಸ್ವಾತಂತ್ರದ ಸಂದರ್ಭದಲ್ಲಿ ದಲಿತರು ಮತ್ತು ಆದಿವಾಸಿಗಳಿಗಾಗಿ ರೂಪಿತಗೊಂಡಂತಹ ಮೀಸಲಾತಿ ವ್ಯವಸ್ಥೆಯಿಂದ ಹೊರಗುಳಿದಿದ್ದವು. ಆದರೆ ಕಾಲಾಂತರದಲ್ಲಿ ವಿವಿಧ ಜಾತಿ ಸಮುದಾಯಗಳನ್ನೊಳಗೊಂಡ ಪ್ರತ್ಯೇಕ ವರ್ಗದ ಮೀಸಲಾತಿಯನ್ನು ಅವರ ಹಿಂದುಳಿದಿರುವಿಕೆ ಐತಿಹಾಸಿಕ ಹಿನ್ನಲೆಯಲ್ಲಿ ಗುರುತಿಸಲು ಆಯೋಗವನ್ನು ರಚಿಸಲಾಯಿತು.

 

ಹಿಂದುಳಿದ ವರ್ಗಗಳಿಗೆ ನೀಡಿರುವ ಮೀಸಲಾತಿ ಕ್ರಮಕ್ಕೆ ವಿಶೇಷವಾಗಿ ಬ್ರಾಹ್ಮಣ ಮತ್ತು ವೈಶ್ಯ ಜಾತಿ ಹಾಗೂ ಶೂದ್ರ ಸಮುದಾಯದ ಕೆಲವು ಜಾತಿಗಳಿಂದ ಸಾಕಷ್ಟು ಪ್ರತಿರೋಧ ವ್ಯಕ್ತವಾಯಿತು. ಹಲವಾರು ದಶಕಗಳಿಂದಲೂ ಭೂಮಿಯನ್ನು ಉಳುವ ಹಾಗೂ ಶೂದ್ರ ಒಳಜಾತಿ ಶ್ರೇಣಿಯಲ್ಲಿ ಉನ್ನತ ಸ್ಥರದಲ್ಲಿರುವ ಕಮ್ಮಾ, ರೆಡ್ಡಿ, ಕಾಪು, ಗೌಡ, ನಾಯರ್, ಜಾಟ್, ಮರಾಠ, ಗುಜ್ಜರ್, ಯಾದವ ಜಾತಿ ಸಮುದಾಯಗಳು ಪ್ರಮುಖವಾಗಿ ಬ್ರಾಹ್ಮಣ ಮತ್ತು ಬನಿಯಾ ಜಾತಿಗಳಿಂದ ಪ್ರಭಾವಿತರಾಗಿ ಸಾಂಸ್ಕೃತಿಕರಣಗೊಂಡಿವೆ. 1996ರಲ್ಲಿ ಪ್ರಕಟಗೊಂಡ ‘ನಾನೇಕೆ ಹಿಂದೂ ಅಲ್ಲ’ ಎನ್ನುವ ಪುಸ್ತಕದಲ್ಲಿ ನಾನು ಈ ಮೇಲ್ವರ್ಗದ ಶೂದ್ರ ಜಾತಿಗಳನ್ನು ನವ-ಕ್ಷತ್ರೀಯರು ಎಂದು ವಿವರಿಸಿದ್ದೇನೆ. ಈ ಸಾಂಸ್ಕೃತಿಕರಣದ ಪ್ರಕ್ರಿಯೆ ಮೂಲಕ ಸಾಂಪ್ರದಾಯಿಕವಾಗಿ ಜಾತಿ ವ್ಯವಸ್ಥೆಯ ಎರಡನೇ ಶ್ರೇಣಿಯಲ್ಲಿ ಬರುವ ಕ್ಷತ್ರೀಯರ ಸ್ಥಾನವನ್ನು ತುಂಬಲು ಪೂರಕವಾಗಿದೆ.

 ಮಂಡಲ್ ಆಯೋಗದ ಮೂಲಕ ಜಾರಿಗೆ ಬಂದಂತಹ ಒಬಿಸಿ ಮೀಸಲಾತಿ, ಈಗಾಗಲೇ ಕಾರ್ಯರೂಪಕ್ಕೆ ಬಂದು ಎರಡೂವರೆ ದಶಕಗಳು ಕಳೆದಿವೆ. ಆದ್ದರಿಂದ ಒಬಿಸಿಯಲ್ಲಿನ ಶೂದ್ರರು ಈವರೆಗೆ ಎಷ್ಟರಮಟ್ಟಿಗೆ ಅಭುದ್ಯಯಗೊಂಡಿದ್ದಾರೆ. ಈ ಮೀಸಲಾತಿಯನ್ನು ವಿರೋಧಿಸಿದ ಮೇಲ್ವರ್ಗದ ಶೂದ್ರ ಜಾತಿಗಳಿಗೆ ಇದರಿಂದಾದ ಅನುಕೂಲವೇನು? ಪ್ರಸಕ್ತ ಭಾರತದಲ್ಲಿ ಶೂದ್ರರು ತಮ್ಮನ್ನು ಯಾವ ಸ್ಥರದಲ್ಲಿ ಕಾಣಬಹುದು? ಎನ್ನುವುದನ್ನು ಪರಾಮರ್ಶಗೆ ಒಳಪಡಿಸಲು ಇದೊಂದು ಸೂಕ್ತ ಸಂದರ್ಭ ಎನ್ನಬಹುದು.
 

ಜಗತ್ತಿನಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶಗಳಲ್ಲಿ ಎರಡನೇ ಸ್ಥಾನದಲ್ಲಿರುವ ಭಾರತದಲ್ಲಿ ಈಗ ಶೂದ್ರರ ಜನಸಂಖ್ಯೆಯೇ ದೇಶದ ಅರ್ಧದಷ್ಟಿದೆ. 1980 ರ ಅವಧಿಯಲ್ಲಿ ಮಂಡಲ್ ಆಯೋಗವು ಒಬಿಸಿ (ಇತರೆ ಹಿಂದುಳಿದ ವರ್ಗ) ಗಳು ಮೇಲ್ವರ್ಗದ ಶೂದ್ರರ ಭಾಗವಲ್ಲ, ಅವರು ದೇಶದ ಶೇ.52 ರಷ್ಟು ಜನಸಂಖ್ಯೆಯನ್ನು ಪ್ರತಿನಿಧಿಸುತ್ತಾರೆ ಎನ್ನುವ ಅಂತಿಮ ನಿರ್ಣಯಕ್ಕೆ ಬಂದಿತು. ಇದು ಸದ್ಯ 650 ಮಿಲಿಯನ್ ಜನಸಂಖ್ಯೆಯನ್ನು ಪ್ರತಿನಿಧಿಸುತ್ತದೆ. ಅಷ್ಟೇ ಅಲ್ಲದೆ ಅಮೆರಿಕಾಕ್ಕಿಂತ ಎರಡು ಪಟ್ಟು, ಪಾಕಿಸ್ತಾನ ಅಥವಾ ಬ್ರೆಜಿಲ್ ಗಿಂತ ಮೂರು ಪಟ್ಟು ಅಧಿಕ ಜನಸಂಖ್ಯೆಯನ್ನು ಹೊಂದಿದೆ. ಈ ಸಮುದಾಯಗಳನ್ನು ಮುಂದುವರೆದ ಜಾತಿಗಳು-ಒಬಿಸಿಯಿಂದ ಹೊರಗಿರುವ ಹಿಂದೂ ಜಾತಿಗಳು, ಹಾಗೂ ಪರಿಶಿಷ್ಟ ಪಂಗಡ, ಪರಿಶಿಷ್ಟ ಜಾತಿಗಳಿಗೆ ಒಟ್ಟಾರೆಯಾಗಿ ಹೋಲಿಕೆ ಮಾಡಿದಾಗ ಭಾರತದ ಜನಸಂಖ್ಯೆಯ ಶೇ.20 ರಷ್ಟಿಲ್ಲ ಎನ್ನಬಹುದು. ಶೂದ್ರ ಸಮುದಾಯವು ಇಷ್ಟೆಲ್ಲ ಜನಸಂಖ್ಯೆಯ ನಡುವೆಯೂ ಕೂಡ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಜೀವನದಲ್ಲಿ ಕನಿಷ್ಠ ಪ್ರಾತಿನಿದ್ಯತೆಯನ್ನು ಹೊಂದಿದೆ. ಅದರಲ್ಲೂ ರಾಷ್ಟ್ರೀಯ ಮಟ್ಟದಲ್ಲಿ ಸರ್ಕಾರವಾಗಿರಲಿ ಅಥವಾ ಉದ್ಯಮವಾಗಿರಲಿ, ಧರ್ಮ ಅಥವಾ ಶಿಕ್ಷಣವಾಗಿರಲಿ, ಶೂದ್ರರು ಬ್ರಾಹ್ಮಣ ಮತ್ತು ವೈಶ್ಯ, ಬನಿಯಾಗಳ ಅಧೀನರಾಗಿದ್ದಾರೆ. ಇಂದು ವಿಭಿನ್ನ ಸ್ಥರದಲ್ಲಿರುವ ಮೇಲ್ವರ್ಗದ ಶೂದ್ರರಿಗೂ ಕೂಡ ಇದು ಅಷ್ಟೇ ಅನ್ವಯಿಸುತ್ತದೆ. ಇತರ ಶೂದ್ರ ಸಮುದಾಯಗಳಿಗಿಂತ ಉನ್ನತ ಸ್ಥರದಲ್ಲಿರುವುದು ಅವರನ್ನು ಒಬಿಸಿ ಪಟ್ಟಿಯಿಂದ ಹೊರಗಿಡುವುದಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ. ಈಗ ದೇಶಾದ್ಯಂತ ಲಕ್ಷಾಂತರ ಜನರು ಈ ಜಡಗೊಂಡಿರುವ ಅವಕಾಶ ಮತ್ತು ಚಲನೆ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ಮೀಸಲಾತಿಯಲ್ಲಿ ತಮ್ಮನ್ನೂ ಒಳಗೊಳ್ಳಲು ‘ಒಬಿಸಿ’ ಎಂದು ಪರಿಗಣಿಸಬೇಕೆಂಬ ಬೇಡಿಕೆಯನ್ನು ಇಡುತ್ತಿದ್ದಾರೆ.
 

ರಾಷ್ಟ್ರೀಯ ಆರ್ಥಿಕತೆಯಲ್ಲಿ ಶೂದ್ರರು ಎಲ್ಲಿದ್ದಾರೆ? ಶ್ರೀಮಂತರು ಈಗಲೂ ಕೂಡ ಕೃಷಿ ಆಧಾರಿತ ಆರ್ಥಿಕತೆ ಮೇಲೆ ಅವಲಂಬಿತರಾಗಿದ್ದಾರೆ. ಇನ್ನು ಮುಖ್ಯ ಸ್ಥರದಲ್ಲಿರುವ ಸಾಂಪ್ರದಾಯಿಕ ಶೂದ್ರ ಸಮುದಾಯ ಕೂಡ ಕೈಗಾರಿಕೋದ್ಯಮ ಮತ್ತು ಬಂಡವಾಳ ವಿಭಾಗದಲ್ಲಿ ಹೆಚ್ಚಿನ ಪ್ರಗತಿಯನ್ನು ಸಾಧಿಸಿಲ್ಲ. ಈ ಕ್ಷೇತ್ರಗಳು ಪ್ರಮುಖವಾಗಿ ಬನಿಯಾಗಳಿಂದ ಪ್ರಾಬಲ್ಯವನ್ನು ಸಾಧಿಸಿವೆ. ಅವರು ಬಂಡವಾಳ ಸದಾ ತಮ್ಮ ಜೊತೆ ಇರುವಂತೆ ನೋಡಿಕೊಂಡಿದ್ದಾರೆ. ಅಂಬಾನಿಗಳು, ಅದಾನಿಗಳು ಅಥವಾ ಮಿತ್ತಲ್ ಗಳಿಗೆ ಪ್ರತಿಸ್ಪರ್ಧಿಯಾಗಿ ಯಾವುದೇ ಶೂದ್ರ ಉದ್ಯಮಿಗಳು ಇಲ್ಲವೆನ್ನಬಹುದು. ಅದರಲ್ಲೂ ಬಡ ಶೂದ್ರ ಜಾತಿ ಜನ ಸಮುದಾಯ ಹೊಲ ಗದ್ದೆಗಳಲ್ಲಿ, ಕಟ್ಟಡ ನಿರ್ಮಾಣ ಹಾಗೂ ಕಾರ್ಖಾನೆಗಳಲ್ಲಿ ಕೂಲಿ ಕಾರ್ಮಿಕರಾಗಿ ದುಡಿಯುತ್ತಾರೆ. ಇನ್ನು ಬಹುತೇಕ ಕುಶಲಕರ್ಮಿ ಶೂದ್ರ ಸಮುದಾಯದ ಪಾರಂಪರಿಕ ಕರ-ಕುಶಲತೆಗಳು ಆಧುನಿಕ ಕೈಗಾರಿಕೋದ್ಯಮದಿಂದಾಗಿ ಮಹತ್ವ ಕಳೆದುಕೊಂಡಿವೆ.
 ರಾಷ್ಟ್ರೀಯ ಪ್ರಜ್ಞೆ ಮತ್ತು ಸಂಸ್ಕೃತಿಯಲ್ಲಿ ಶೂದ್ರರೆಲ್ಲಿದ್ದಾರೆ? ಪ್ರಸಕ್ತ ಭಾರತದಲ್ಲಿನ ಬೌದ್ಧಿಕ, ದಾರ್ಶನಿಕ, ಸಮಾಜೋ-ರಾಜಕೀಯ ವಲಯದಲ್ಲಿ ಅವರಿಗೆ ಯಾವುದೇ ಪ್ರಮುಖ ಸ್ಥಾನಮಾನವಿಲ್ಲ. ಒಂದೆಡೆ ಧರ್ಮವು ಶೂದ್ರರು ಎಲ್ಲೆಡೆ ಇರುವ ಒತ್ತಡವನ್ನು ಹೊಂದಿದ್ದರು ಕೂಡ ಶೂದ್ರನ ಅನುಪಸ್ಥಿತಿ, ಮಹಿಳೆಯನ್ನು ಏಕಾಂಗಿಯಾಗಿಸಿರುವ ನಡೆ ಹಿಂದೂ ಧರ್ಮಕ್ಕೆ ಪ್ರಮುಖ ಪ್ರೇರಣೆಯಾಗಿದೆ. ಭಾರತದ ಹಿಂದುಗಳಲ್ಲಿ ಶೂದ್ರರೇ ಅಧಿಕ ಸಂಖ್ಯೆಯಲ್ಲಿದ್ದರೂ ಕೂಡ ಅವರಿಗೆ ಧಾರ್ಮಿಕ ವಿಚಾರದಲ್ಲಿ ಯಾವುದೇ ಆಧ್ಯತೆ ಇಲ್ಲ. ಜಾತಿ ರಚನೆಯು ಶೂದ್ರರಿಗೆ ಪುರೋಹಿತ ಸ್ಥಾನವನ್ನು ಅಲಂಕರಿಸುವುದಕ್ಕೆ ಅವಕಾಶ ನೀಡುವುದಿಲ್ಲ ಮತ್ತು ಯಾವ ಶೂದ್ರನು ಕೂಡ ಆ ಸ್ಥಾನಕ್ಕೆ ಬಯಸುವುದನ್ನು ಅದು ಸಾಂಪ್ರದಾಯಿಕವಾಗಿ ವಿರೋಧಿಸುತ್ತದೆ. ಒಟ್ಟಾರೆಯಾಗಿ ಹೇಳುವುದಾದಲ್ಲಿ ಭಾರತದ ಭೂತ, ವರ್ತಮಾನ ಮತ್ತು ಭವಿಷ್ಯದಲ್ಲಿ ವರ್ಗದ ಸಾಮಾಜಿಕ ಮತ್ತು ರಾಜಕೀಯ ಸ್ಥಾನದ ಬಗ್ಗೆ ಧ್ವನಿ ಎತ್ತುವ ಯಾವುದೇ ಶೂದ್ರ ಬುದ್ಧಿಜೀವಿಗಳು ಇಲ್ಲವೆನ್ನಬಹುದು. ಈ ಚಿತ್ರಣಗಳೆಲ್ಲವೂ ರಾಜ್ಯ ಮತ್ತು ಪ್ರಾದೇಶಿಕ ಮಟ್ಟದಲ್ಲಿ ಅಸ್ತಿತ್ವದಲ್ಲಿದ್ದು, ಪ್ರಾದೇಶಿಕ ಭಾಷೆಗಳಲ್ಲಿ ಕಾರ್ಯನಿರ್ವಹಿಸುತ್ತವೆ. ಆದರೆ ಅವುಗಳೆಲ್ಲವೂ ಕೂಡ ರಾಷ್ಟ್ರೀಯ ಚರ್ಚೆಯಿಂದ ವಿಮುಖವಾಗಿರುತ್ತವೆ. ಇಂದಿನ ಅಕಾಡೆಮಿಯ ಮತ್ತು ಮಾಧ್ಯಮಗಳಲ್ಲಿ ಶೂದ್ರ ಬುದ್ದಿಜೀವಿಗಳಿಗೆ ಹೆಚ್ಚಿನ ಸ್ಥಾನಮಾನವಿಲ್ಲ. ಇನ್ನೊಂದೆಡೆಗೆ ದೇಶಾವ್ಯಾಪಿ ಶೂದ್ರರು ಶಿಕ್ಷಣವನ್ನು ಪಡೆಯುವ ಪ್ರಮಾಣವು ಸಹ ಕನಿಷ್ಠ ಮಟ್ಟದಲ್ಲಿದೆ. ಎಲ್ಲ ಬೌದ್ಧಿಕ ಮತ್ತು ಧಾರ್ಮಿಕ ಕಾರ್ಯ ಚಟುವಟಿಕೆಗಳಲ್ಲಿ ಬಹುತೇಕ ಬ್ರಾಹ್ಮಣರೇ ಇರುವ ನಾಯಕತ್ವಕ್ಕೆ ತಮ್ಮನ್ನು ಅರ್ಪಿಸಿಕೊಂಡಿದ್ದಾರೆ. 
ರಾಷ್ಟ್ರೀಯ ರಾಜಕಾರಣ ಮತ್ತು ಸರ್ಕಾರದಲ್ಲಿ ಶೂದ್ರರು ಎಲ್ಲಿದ್ದಾರೆ? ಉನ್ನತ ನ್ಯಾಯಾಂಗ ಮತ್ತು ಅಧಿಕಾರಶಾಹಿಯಲ್ಲಿ ಅವರ ಪ್ರಾತಿನಿದ್ಯತೆ ಕಡಿಮೆ ಇದೆ.ಇನ್ನೊಂದೆಡೆಗೆ ವಾಸ್ತವ ಸಂಗತಿ ಏನೆಂದರೆ ಬಹುತೇಕ ಶೂದ್ರ ನಾಯಕರು ಪ್ರಾದೇಶಿಕ ಶಕ್ತಿಗೆ ಮಾತ್ರ ಸೀಮಿತವಾಗಿದ್ದಾರೆ. ಕೆಲವು ಮೇಲ್ವರ್ಗದ ಶೂದ್ರ ಜಾತಿಗಳು ಪರಿಣಾಮಕಾರಿಯಾಗಿ ಸಂಘಟಿತರಾಗಿ ಬಲಿಷ್ಠ ಪಕ್ಷಗಳನ್ನು ನಿಯಂತ್ರಿಸುತ್ತಿದ್ದಾರೆ. ಉತ್ತರಪ್ರದೇಶ ಮತ್ತು ಬಿಹಾರದಲ್ಲಿ ಯಾದವರು, ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಕಮ್ಮಾಗಳು, ರೆಡ್ಡಿಗಳು, ಕಾಪುಗಳು, ವೆಲಮಾಗಳು ಇರುವುದನ್ನು ನಾವು ಕಾಣಬಹುದು. ಇನ್ನು ಈ ಪಕ್ಷಗಳ ಅಥವಾ ನಾಯಕರುಗಳ ಅಧಿಕಾರವು ತಮ್ಮ ರಾಜ್ಯ ಮತ್ತು ಪ್ರದೇಶಗಳಲ್ಲಿ ಸಾಮಾನ್ಯವಾಗಿ ಜಾತಿ ಮತ್ತು ಪ್ರಖರ ಪ್ರಾದೇಶಿಕತೆಯನ್ನು (regional chauvinism) ಆಧರಿಸಿರುತ್ತದೆ. ಆದ್ದರಿಂದ ಇಂತಹ ವಿಚಾರ ಒಗ್ಗಟ್ಟನ್ನು ತಡೆಯುತ್ತದೆ. ಕೇಂದ್ರ ಸರಕಾರಗಳೊಂದಿಗೆ ಮೈತ್ರಿ ಮಾಡಿಕೊಳ್ಳುವ ಈ ಪ್ರಾದೇಶಿಕ ನಾಯಕರ ಪ್ರಯತ್ನಗಳು ಅವರ ಅಧೀನ ನಿಷ್ಠೆಯನ್ನು ತೋರಿಸುತ್ತವೆ ಮತ್ತು ಇದರಿಂದ ತಮ್ಮ ಶೂದ್ರ ಘಟಕಗಳಿಗೆ ಅಂತಹ ಅರ್ಥಪೂರ್ಣ ಪ್ರಯೋಜನಗಳು ಸಿಗದೆ ಇರುವುದನ್ನು ನೋಡುತ್ತೇವೆ. 
ಶೂದ್ರರ ಕಳವಳವನ್ನು ಪ್ರತಿನಿಧಿಸಲು ಕಾಂಗ್ರೆಸ್ ಮತ್ತು ಬಿಜೆಪಿಯಂತಹ ರಾಷ್ಟ್ರೀಯ ಪಕ್ಷಗಳ ನಿರ್ಧಾರಿತ ವಲಯದಲ್ಲಿ ಯಾವ ಪ್ರಾತಿನಿಧ್ಯತೆ ಇಲ್ಲದಿರುವುದನ್ನು ನಾವು ನೋಡುತ್ತೇವೆ. ಈ ಎರಡು ಪಕ್ಷಗಳು ಕೂಡ ಬ್ರಾಹ್ಮಣರು ಮತ್ತು ಬನಿಯಾಗಳಿಂದ ನಿಯಂತ್ರಿಸಲ್ಪಟ್ಟಿವೆ. ಈ ಹಿನ್ನಲೆಯಲ್ಲಿ ಶೂದ್ರರ ಮೂಲಭೂತ ಸ್ಥಾನಮಾನದಲ್ಲಿ ಅಂತಹ ಯಾವುದೇ ಬದಲಾವಣೆ ಆಗದಿರುವುದನ್ನು ಕಾಣುತ್ತೇವೆ. ವೈದಿಕಶಾಹಿ ನಂಬಿಕೆಯು ಈಗಲೂ ಅವರನ್ನು ನಾಲ್ಕನೆಯ ವರ್ಣ ಎಂದು ಪರಿಗಣಿಸಿದೆ. ಸಮಾಜದ ಶ್ರೇಣಿಯಲ್ಲಿ ಶೂದ್ರರು ಅವರ್ಣ ಅಥವಾ ವರ್ಣರಹಿತ, ದಲಿತರು ಮತ್ತು ಆದಿವಾಸಿಗಳಿಗಿಂತ ಮಾತ್ರ ಶ್ರೇಷ್ಠರಾಗಿದ್ದಾರೆ. ಇನ್ನೊಂದೆಡೆಗೆ ಜಾತಿ ವ್ಯವಸ್ಥೆಗೆ ನಿಷ್ಠವಾಗಿರುವ ಭಾರತೀಯ ಸಮಾಜ ಅವರನ್ನು ವ್ಯವಸ್ಥೆಗೆ ಅನುಗುಣವಾದ ಪಾತ್ರಗಳಲ್ಲಿರಿಸುತ್ತಾ ಬಂದಿದೆ. ಭಾರತದ ಸಂವಿಧಾನ ಶಿಲ್ಪಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರು 1946 ರಲ್ಲಿ ‘Who Were the Shudras? How They Came To Be The Fourth Varna in the Indo-Aryan Society’ ಎನ್ನುವ ಪುಸ್ತಕದಲ್ಲಿ ಹೀಗೆ ಬರೆಯುತ್ತಾರೆ ‘ ಪ್ರಸ್ತುತ ಈ ವಿಚಾರದ ಬಗೆಗಿನ ಸಾಹಿತ್ಯದ ಸಂದರ್ಭದಲ್ಲಿ ಶೂದ್ರರಿಗೆ ಸಂಬಂಧಿಸಿದ ಕೃತಿಯನ್ನು ಉತ್ಪ್ರೇಕ್ಷೆ ಎನ್ನಲು ಸಾಧ್ಯವಿಲ್ಲ’ ಎನ್ನುತ್ತಾರೆ. ಇನ್ನು ಹೊಸ ಪುರಾತತ್ವ ಮತ್ತು ಆನುವಂಶಿಕ ಅಧ್ಯಯನಗಳು ಅವರ ಮೂಲದ ಸಿದ್ಧಾಂತದ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿವೆ. ಶೂದ್ರರು ಇಂಡೋ-ಆರ್ಯನ್ನರು ಆಗಿದ್ದಾರೆಯೇ ಎನ್ನುವುದನ್ನು ಮೀರಿ ಶೂದ್ರ ಸಾಹಿತ್ಯದ ಸ್ಥಿತಿ ಈ ಎಲ್ಲಾ ವರ್ಷಗಳಲ್ಲಿ ಅಂತಹ ಮಹತ್ವದ ಬದಲಾವಣೆ ಕಂಡುಬಂದಿಲ್ಲ. ಯಾವುದೇ ವಿದ್ವಾಂಸರು ಸ್ವತಂತ್ರ ಭಾರತದಲ್ಲಿ ಶೂದ್ರನ ತಲ್ಲಣಗಳಿಗೆ ಅಷ್ಟು ಒತ್ತು ನೀಡಿಲ್ಲದಿರುವುದು. ಶೂದ್ರರ ಇತಿಹಾಸ ಅಥವಾ ಸಂಸ್ಕೃತಿಯ ಕುರಿತಾದ ಯಾವುದೇ ಉತ್ತಮ ಕೃತಿಗಳಿಲ್ಲದಿರುವುದು, ಪತ್ರಿಕೆಗಳಲ್ಲಿ ಶೂದ್ರರ ಬಗ್ಗೆ ಚುನಾವಣಾ ರಾಜಕೀಯದ ಹೊರತಾದ ಬರಹಗಳು ಕಾಣಸಿಗದೇ ಇರುವುದು ಇದಕ್ಕೆ ನಿದರ್ಶನ ಎನ್ನಬಹುದು. 
ಇದನ್ನು ಇನ್ನಷ್ಟು ಸರಳವಾಗಿ ಹೇಳುವುದಾದಲ್ಲಿ ಉಳಿದೆಲ್ಲ ಸಮುದಾಯಗಳಿಗೆ ತಮ್ಮ ಸಮಸ್ಯೆಗಳಿಗೆ ಇರುವ ಪ್ರಜ್ಞೆಯು ಶೂದ್ರರಲ್ಲಿ ಇಲ್ಲದಿರುವುದೇ ಇದಕ್ಕೆ ಪ್ರಮುಖ ಕಾರಣ. ಡಾ.ಬಿ.ಆರ್.ಅಂಬೇಡ್ಕರ್ ಅವರ ಶೂದ್ರರ ಕುರಿತ ಕೃತಿಗಳು ದಲಿತರಿಗೆ ಐತಿಹಾಸಿಕ, ರಾಜಕೀಯ ಮತ್ತು ಆಧ್ಯಾತ್ಮಿಕ ಪರಿಸ್ಥಿತಿಯ ಅರ್ಥೈಸುವಿಕೆ ಮೂಲಕ ದೇಶಾದ್ಯಂತ ವಿಮೋಚನಾ ಚಳುವಳಿಯ ಹುಟ್ಟಿಗೆ ಪ್ರೇರಣೆಯಾಗಿವೆ. ಆದರೆ ಇದೇ ರೀತಿಯ ಪರಿಣಾಮ ಶೂದ್ರರ ಮೇಲಾಗಲಿಲ್ಲ ಎನ್ನಬಹುದು. ಏಕೀಕೃತ ಪ್ರಜ್ಞೆಯನ್ನು ಒಳಗೊಳ್ಳದೆ, ಶೂದ್ರರನ್ನು ಸಾಂಪ್ರದಾಯಿಕ ಹಿಂದೂ ಧರ್ಮದಲ್ಲಿಯೇ ಇರಿಸಿ, ಅವರನ್ನು ಮೊದಲಿನಂತೆಯೇ ಇನ್ನೂ ಕೀಳಾಗಿ ಕಾಣುತ್ತದೆ. ಆ ಮೂಲಕ ಈಗ ಬ್ರಾಹ್ಮಣ ರಾಜಕೀಯ ಪಕ್ಷಗಳು ಮತ್ತು ಸಾಮಾಜಿಕ ಸಂಸ್ಥೆಗಳ ಆಶಯಗಳಿಗೆ ಸುಲಭವಾಗಿ ಶರಣಾಗತವಾಗುವಂತೆ ಮಾಡುತ್ತದೆ. ಈ ಹಿನ್ನಲೆಯಲ್ಲಿ ಈಗ ಶೂದ್ರರ ಕುರಿತಾಗಿ ಬರೆಯುವುದು ಅಷ್ಟು ಉತ್ಪ್ರೇಕ್ಷೆ ಎನಿಸದು. 
2014 ರಲ್ಲಿ ಹಿಂದುಳಿದ ವರ್ಗದ ನರೇಂದ್ರ ಮೋದಿ ಪ್ರಧಾನಿಯಾಗಿ ಆಯ್ಕೆಯಾದಾಗ ಅವರು ಶೂದ್ರರ ಪ್ರತಿನಿಧಿ ಎನ್ನುವುದನ್ನು ಖಚಿತಪಡಿಸಿಕೊಳ್ಳದೆ ಬಹುತೇಕರು ಅವರಿಗೆ ಬೆಂಬಲ ವ್ಯಕ್ತಪಡಿಸಿದರು. ಆದ್ದರಿಂದ ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಪ್ರತಿನಿಧಿಸುವ ಗುಜರಾತಿನ ಮೋಧ ಘಾಂಚಿ ಸಮುದಾಯದ ಶೂದ್ರ ಸ್ಥಾನಮಾನವನ್ನು ಸಂಶಯದಿಂದ ಕಾಣಬೇಕಾಗುತ್ತದೆ. 
ಈ ಸಮುದಾಯ ಹೆಚ್ಚಾಗಿ ಖಾದ್ಯ ತೈಲವನ್ನು ತಯಾರಿಸುವ ಮತ್ತು ಮಾರಾಟ ಮಾಡುವ ಉದ್ಯಮದಲ್ಲಿದೆ. ಇತ್ತೀಚೆಗಷ್ಟೇ ಅವರು ಕಿರಾನಾ ಮಳಿಗೆಗಳನ್ನು ಕೂಡ ನಡೆಸುತ್ತಿದ್ದಾರೆ. ಈ ಸಮುದಾಯ ವೈದಿಕಶಾಹಿ ವ್ಯವಸ್ಥೆಯಲ್ಲಿ ಹೆಚ್ಚಾಗಿ `ನಿಚ್’ ಕೆಲಸಗಳೆಂದು ಪರಿಗಣಿಲ್ಪಟ್ಟಿರುವ ಕೃಷಿ ಉತ್ಪಾದನೆ ಮತ್ತು ಕೂಲಿ ಕಾರ್ಮಿಕರನ್ನು ಪ್ರತಿನಿಧಿಸುವ ಶೂದ್ರ ಜಾತಿ ಸಮುದಾಯಗಳಿಂದ ಸಂಪೂರ್ಣವಾಗಿ ಭಿನ್ನವಾಗಿದೆ. ಜಾತಿ ವ್ಯವಸ್ಥೆಯು ಪ್ರಮುಖವಾಗಿ ವೃತ್ತಿ ಮೇಲೆ ನಿರ್ಧರಿತವಾಗಿದೆ ಮತ್ತು ಇದು ವಾಣಿಜ್ಯ ವ್ಯಾಪಾರವನ್ನು ತೃತೀಯ ವರ್ಣವಾಗಿರುವ ವೈಶ್ಯರಿಗೆ ಮೀಸಲಿಟ್ಟಿದೆ. ಮೋಧ ಘಾಂಚಿಗಳು ವ್ಯಾಣಿಜ್ಯ ಮತ್ತು ವ್ಯಾಪಾರದಲ್ಲಿನ ತೊಡಗಿಸಿಕೊಂಡಿರುವುದು ವೈಶ್ಯ ಸ್ಥಾನಮಾನದ ಪ್ರತೀಕವನ್ನು ಬಿಂಬಿಸುತ್ತದೆ. ಈ ಜಾತಿ ಸಮುದಾಯ ಗುಜರಾತಿನಲ್ಲಿ ನೀಚ್ ಎಂದು ಬಿಂಬಿತವಾಗಿಲ್ಲ. ಆದರೆ ಅವರ ಸಸ್ಯಾಹಾರದ ಪರಿಪಾಲನೆ ಅವರನ್ನು ಶೂದ್ರ ಮೂಲಕ್ಕಿಂತ ಹೆಚ್ಚಾಗಿ ವೈಶ್ಯ ಎನ್ನುವುದನ್ನು ಸೂಚ್ಯವಾಗಿ ಸಾರುತ್ತದೆ. ಸಾಮಾನ್ಯವಾಗಿ ವ್ಯಾಪಾರಿಗಳಂತೆ ಮೋಧ ಗಾಂಚಿಗಳು ಸಾಂಪ್ರದಾಯಿಕವಾಗಿ ಅಕ್ಷರಸ್ಥರಾಗಿದ್ದಾರೆ ಮತ್ತು ಇದು ಶೂದ್ರೇತರ ಸ್ಥಾನಮಾನವನ್ನು ಸೂಚಿಸುವುದಕ್ಕೆ ಮತ್ತೊಂದು ಸಂಕೇತ ಎನ್ನಬಹುದು. ವರ್ಣಾಶ್ರಮದ ಜಾತಿ ನಿಯಮಗಳ ಪ್ರಕಾರ ಶೂದ್ರರಿಗೆ ಓದಲು ಬರಹ ಕಲಿಯುವುದಕ್ಕೆ ನಿಷೇಧವಿದೆ ಮತ್ತು ಇದನ್ನು ಉಲ್ಲಂಘಿಸಿದಲ್ಲಿ ಕ್ರೂರ ಶಿಕ್ಷೆಯನ್ನು ವಿಧಿಸಲಾಗುತ್ತದೆ. 
ಮೊದಲ ಬಾರಿಗೆ ಮಂಡಲ್ ಸಮಿತಿ ಶಿಫಾರಸ್ಸುಗಳು ಜಾರಿಗೆ ಬಂದಾಗ ಮೋಧ ಘಾಂಚಿಗಳನ್ನು ಒಬಿಸಿ ಪಟ್ಟಿಯಲ್ಲಿ ಪರಿಗಣಿಸಿರಲಿಲ್ಲ. ಆದರೆ 1994 ರಲ್ಲಿ ಗುಜರಾತ್ ಸರ್ಕಾರ ರಾಜ್ಯದಲ್ಲಿ ಅವರಿಗೆ ಒಬಿಸಿ ಸ್ಥಾನಮಾನವನ್ನು ಕಲ್ಪಿಸಿತು. ತದನಂತರ ಕೇಂದ್ರ ಸರ್ಕಾರ 1999 ರಲ್ಲಿ ಅವರನ್ನು ಒಬಿಸಿ ಪಟ್ಟಿಗೆ ಸೇರಿಸಿತು. ಇದರಿಂದಾಗಿ ನರೇಂದ್ರ ಮೋದಿ ಇದಾದ ಎರಡು ವರ್ಷಗಳ ನಂತರ ಗುಜರಾತಿನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಲು ಸಾಧ್ಯವಾಯಿತು. ಇನ್ನು 2002, 2007 ಮತ್ತು 2012 ರಲ್ಲಿ ನಡೆದ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಮೋದಿ ತಮ್ಮನ್ನು ಹಿಂದುಳಿದ ವರ್ಗದ ಸದಸ್ಯ (ಒಬಿಸಿ) ಎಂದು ಬಿಂಬಿಸಿಕೊಂಡಿರಲಿಲ್ಲ. ಅವರನ್ನು ದೇಶದ ಕೈಗಾರಿಕೊದ್ಯಮ ಮತ್ತು ವಾಣಿಜ್ಯೋದ್ಯಮದಲ್ಲಿ ಪ್ರಬಲವಾಗಿರುವ ಬನಿಯಾ ಸಮುದಾಯ ತಮ್ಮವರೆಂದು ಪರಿಗಣಿಸಿದ್ದರಿಂದಾಗಿ ನರೇಂದ್ರ ಮೋದಿ ಬನಿಯಾ ಅಸ್ಮಿತೆ ಮೂಲಕ ಗುರುತಿಸಿಕೊಳ್ಳುವ ಪ್ರಯತ್ನ ಮಾಡಿದರು. ಆದರೆ ಮೋದಿ ಏಕಾಏಕಿ 2014 ರ ಸಾರ್ವತ್ರಿಕ ಚುನಾವಣೆ ಪ್ರಚಾರದಲ್ಲಿ ತಮ್ಮ ಒಬಿಸಿ ಸ್ಥಾನಮಾನವನ್ನು ನೆನಪಿಸಿಕೊಳ್ಳುವ ಮೂಲಕ ಅದನ್ನು ಮುನ್ನಲೆಗೆ ತಂದರು. 
ಅಷ್ಟಕ್ಕೂ ಒಬಿಸಿ ವರ್ಗವನ್ನು ಇಂತಹ ಕಾರ್ಯತಂತ್ರದ ಭಾಗವಾಗಿ ಬಳಸಿದ್ದು ನರೇಂದ್ರ ಮೋದಿ ಒಬ್ಬರೇ ಅಲ್ಲ, ಈಗ ಬಿಹಾರದ ಉಪಮುಖ್ಯಮಂತ್ರಿ ಹಾಗೂ ಬಿಜೆಪಿ ನಾಯಕರಾಗಿರುವ ಸುಶೀಲ್ ಕುಮಾರ್ ಮೋದಿ ಅವರ ಬನಿಯಾ ಜಾತಿಯನ್ನು ಸಹ ಒಬಿಸಿ ಪಟ್ಟಿಯಲ್ಲಿ ಸೇರಿಸಲಾಗಿದೆ. ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಇಂತಹ ಕಾರ್ಯತಂತ್ರದ ಮೂಲಕ ಬನಿಯಾ ಸಮುದಾಯದಲ್ಲಿನ ವಿವಿಧ ವಿಭಾಗಗಳು ತಮ್ಮನ್ನು ಒಬಿಸಿ ಪಟ್ಟಿಗೆ ಸೇರಿಸುವಲ್ಲಿ ಯಶಸ್ವಿಯಾಗಿವೆ.ವರ್ಣ, ಸಂಪತ್ತು, ವೃತ್ತಿ ಮತ್ತು ಸಾಕ್ಷರತೆಯ ದೃಷ್ಟಿಯಿಂದ ಐತಿಹಾಸಿಕ ಅನುಕೂಲಗಳನ್ನು ಹೊಂದಿರುವ ಈ ಸಮುದಾಯಗಳು ಹಿಂದುಳಿದ ವರ್ಗಗಳಾಗಿದ್ದೇಗೆ ಎನ್ನುವುದು ನಿಜಕ್ಕೂ ನಿಗೂಢ ಸಂಗತಿಯಾಗಿದೆ. ಬನಿಯಾಗಳು ತಾವು ಪ್ರಮುಖ ರಾಜಕೀಯ ಶಕ್ತಿಯಾಗಿ ಹೊರಹೊಮ್ಮಲು ಜಾರಿಗೆ ತಂದಿರುವ ಇದೊಂದು ಚುನಾವಣಾ ತಂತ್ರವೆನ್ನಬಹುದು. 
ಇಂತಹ ನಡೆಗಳು ಎಲ್ಲಾ ಶೂದ್ರ ಸಮುದಾಯಕ್ಕೆ ಜ್ಞಾನೋದಯವಾಗಬೇಕು. ಒಬಿಸಿ ಮಿಸಲಾತಿ ಸ್ಥಾನಮಾನವು ಚಾತುವರ್ಣ ವ್ಯವಸ್ಥೆಯಲ್ಲಿ ಕೆಳಗಿರುವ ಮತ್ತು ಅವರ ಸಾಮಾಜಿಕ, ಶೈಕ್ಷಣಿಕ ಹಿಂದುಳಿದಿರುವಿಕೆಯನ್ನು ಪರಿಹರಿಸಲು ಜಾರಿಗೆ ತಂದಿರುವ ಕ್ರಮವಾಗಿದೆ. ಆದರೆ ಕೆಲವರು ಯಾವುದೇ ಸೂಕ್ತ ಹಕ್ಕು ಮಾನ್ಯತೆ ಇಲ್ಲದವರು ಕೂಡ ಇದನ್ನು ತಮ್ಮ ಸಮಾಜೋ-ಆರ್ಥಿಕ ಮತ್ತು ರಾಜಕೀಯ ಲಾಭಕ್ಕಾಗಿ ಇದನ್ನು ಬಳಸಿಕೊಳ್ಳುತ್ತಿದ್ದಾರೆ. ಶೂದ್ರರ ಸಂಕಷ್ಟಗಳು, ಹಿತಾಸಕ್ತಿಗಳು ಮತ್ತು ಸಂಸ್ಕೃತಿಗೆ ನಿಜವಾದ ಸಂಪರ್ಕವಿಲ್ಲದ ನಾಯಕರು ಮತ್ತು ಪಕ್ಷಗಳು ಅವರನ್ನು ಪ್ರತಿನಿಧಿಸುವ ಮೂಲಕ ವಂಚಿಸಲಾಗುತ್ತಿದೆ. ಆ ಮೂಲಕ ನಿಜವಾದ ಶೂದ್ರ ಪ್ರತಿನಿಧಿಗಳಿಗೆ ಇಂತಹ ನಾಯಕರು ಮತ್ತು ಪಕ್ಷಗಳು ಅಧಿಕಾರದ ಸ್ಥಾನಗಳನ್ನು ನಿರಾಕರಿಸುತ್ತಿವೆ. 
ಇನ್ನೊಂದೆಡೆಗೆ ಶೂದ್ರರಲ್ಲಿಯೂ ಕೂಡ ಇದಕ್ಕನುಗುಣವಾಗಿರುವ ಪ್ರವೃತ್ತಿ ಅಸ್ತಿತ್ವದಲ್ಲಿದೆ. ಕೆಲವು ಜಾತಿಗಳು ಅಂತರ್-ವರ್ಣ ಶ್ರೇಣಿಯ ಕೆಳಭಾಗದಲ್ಲಿ ಪರಿಶಿಷ್ಟ ಜಾತಿಗಳಾಗಿ ಮಾನ್ಯತೆಯನ್ನು ಹೊಂದುವ ಮೂಲಕ ಸಾಮಾಜಿಕ ಪ್ರಯೋಜನಗಳನ್ನು ಪಡೆಯಲು ಬಯಸುತ್ತವೆ. ಈ ಹಿನ್ನಲೆಯಲ್ಲಿ ದಲಿತ ಜಾತಿಗಳ ಮೇಲೆ ಶೂದ್ರರ ಹಕ್ಕು ಸ್ವಾಮ್ಯ ತಡೆಯುವ ನಿಟ್ಟಿನಲ್ಲಿ ಬಂದಂತಹ ದಲಿತರ ವಿಮರ್ಶಾತ್ಮಕ ಚಿಂತನೆ ಸೂಕ್ತವಾಗಿದೆ. ಇನ್ನು ಇದೇ ಸಂದರ್ಭದಲ್ಲಿ ಶೂದ್ರ ದಲಿತೀಕರಣ ಒಂದು ಸ್ವರೂಪವಾಗಿ ಮೇಲ್ಭಾಗದ ಶೂದ್ರರ ಸಾಂಸ್ಕೃತಿಕರಣಕ್ಕೆ ವಿರುದ್ಧವಾದ ದಿಕ್ಕಿನಲ್ಲಿ ಸಾಗುತ್ತಿರುವ ಪ್ರಕ್ರಿಯೆ ಜಾತಿ ಸಂಘರ್ಷವನ್ನು ತೀಕ್ಷ್ಣಗೊಳಿಸಲು ಅಲ್ಲ. ಆದರೆ ಈ ನಡೆ ಜಾತಿಯ ವಿರುದ್ಧದ ಹೋರಾಟದಲ್ಲಿ ಸಾಂಘಿಕ ಒಗ್ಗಟ್ಟನ್ನು ಬೆಳೆಸುತ್ತದೆ. 
2014 ರಲ್ಲಿನ ಮೋದಿ ನೇತೃತ್ವದ ಬಿಜೆಪಿ ಪಕ್ಷದ ಗೆಲುವು ದೇಶದ ರಾಜಕೀಯ ವ್ಯವಸ್ಥೆಯು ಬನಿಯಾಗಳ ನಿಯಂತ್ರಣಕ್ಕೆ ಒಳಪಟ್ಟಿರುವುದನ್ನು ಸಾಬೀತುಪಡಿಸಿತು. ನರೇಂದ್ರ ಮೋದಿ ಸರ್ಕಾರವನ್ನು ಗೌತಮ್ ಅದಾನಿ ಮತ್ತು ಅಂಬಾನಿಗಳಂತಹ ಬನಿಯಾ ಉದ್ಯಮಿಗಳು ಕೂಡ ಬೆಂಬಲಿಸಿದರು. ಇದಕ್ಕೆ ಪ್ರತಿಯಾಗಿ ಮೋದಿ ಸರ್ಕಾರವೂ ಅವರ ಪರವಾಗಿ ನಿಂತಿತು. ಇನ್ನು ಮೋದಿಯ ನಂಬರ್-2 ವ್ಯಕ್ತಿ ಎಂದು ಜನಜನಿತವಾಗಿರುವ ಅಮಿತ್ ಷಾ ಅವರನ್ನು ಬಿಜೆಪಿಯ ಅಧ್ಯಕ್ಷರನ್ನಾಗಿ ನೇಮಿಸಲಾಯಿತು. ಆ ಮೂಲಕ ಈಗ ಬನಿಯಾರೊಬ್ಬರು ಆಡಳಿತ ಪಕ್ಷದ ಮುಖ್ಯಸ್ಥರಾಗಿದ್ದಾರೆ. ಈ ಹಿಂದೆ ‘ಬ್ರಾಹ್ಮಣ-ಬನಿಯಾ’ ಪಕ್ಷ ಎಂದು ಖ್ಯಾತಿ ಪಡೆದಿದ್ದ ಬಿಜೆಪಿಯು ಈಗ ಮತ್ತಷ್ಟು ಬನಿಯಾ-ಬ್ರಾಹ್ಮಣ ಪಕ್ಷ ಎನ್ನುವುದನ್ನು ಮತ್ತೊಮ್ಮೆ ಸ್ಪಷ್ಟಪಡಿಸಿದೆ. 
ಇಂತಹ ರಾಜಕೀಯ ವ್ಯವಸ್ಥೆಯಲ್ಲಿ ಶೂದ್ರನ ಸ್ಥಾನವನ್ನು ಅರ್ಥೈಸಿಕೊಳ್ಳಲು ನಾವು ಎಂ.ವೆಂಕಯ್ಯ ನಾಯ್ಡು ಅವರನ್ನು ನಡೆಸಿಕೊಂಡ ರೀತಿಯನ್ನು ನೋಡಬಹುದು. ಅವರು 2017 ರಲ್ಲಿ ಹಲವಾರು ಮಹತ್ವದ ಕೇಂದ್ರ ಸಚಿವ ಸಂಪುಟದ ಹುದ್ದೆಗಳಿಗೆ ರಾಜೀನಾಮೆ ನೀಡಬೇಕಾಯಿತು ಮತ್ತು ಅವರನ್ನು ವಿಧ್ಯುಕ್ತವಾಗಿ ಉಪರಾಷ್ಟ್ರಪತಿಯ ಹುದ್ದೆಗೆ ನೇಮಕ ಮಾಡಲಾಯಿತು. ಇಂದು ಭಾರತ ಸರ್ಕಾರದ ಪ್ರಮುಖ ಶೂದ್ರ ಮುಖವಾಗಿ ವೆಂಕಯ್ಯನಾಯ್ಡು ತಮ್ಮ ಉದ್ದೇಶವನ್ನು ಸಾಧಿಸಿದ್ದರು ಕೂಡ ಅವರು ಒಂದರ್ಥದಲ್ಲಿ ದುರ್ಬಲರಾಗಿದ್ದಾರೆ. ಇದೇ ರೀತಿಯಾಗಿ ನಾವು ಆಂಧ್ರಪ್ರದೇಶದ ಶೂದ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರನ್ನು ನೋಡಬಹುದು. 2014 ರಲ್ಲಿ ಕೇಂದ್ರದಲ್ಲಿ ನೂತನ ಸರ್ಕಾರವನ್ನು ಅಧಿಕಾರಕ್ಕೆ ತರಲು ಬಯಸಿದವರಲ್ಲಿ ಚಂದ್ರಬಾಬು ನಾಯ್ಡು ಮುಂಚೂಣಿಯಲ್ಲಿದ್ದರು. ಆಗ ಅವರಿಗೆ ನೂತನ ರಾಜ್ಯವಾಗಿ ವಿಭಜಿತವಾದ ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನದ ಭರವಸೆಯನ್ನು ನೀಡಲಾಗಿತ್ತು. ಆದರೆ ಒಮ್ಮೆ ಅಧಿಕಾರಕ್ಕೆ ಬಂದ ನಂತರ ನರೇಂದ್ರ ಮೋದಿ ಮತ್ತು ಅಮಿತ್ ಶಾ ಆ ಭರವಸೆಗಳನ್ನು ಈಡೇರಿಸದೇ ಚಂದ್ರಬಾಬು ನಾಯ್ಡು ಅವರಿಂದ ಅಂತರವನ್ನು ಕಾಯ್ದುಕೊಂಡರು. ಇನ್ನು ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಕೂಡ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರೊಂದಿಗೆ ಇದೇ ರೀತಿಯ ಒಪ್ಪಂದ ಮಾಡಿಕೊಂಡಿದ್ದರು. ಆದರೆ ಅವರು ಕೂಡ ಕೊನೆಗೆ ಇದೇ ರೀತಿಯ ಅವಮಾನಕ್ಕೆ ಒಳಗಾದರು. 
ನರೇಂದ್ರ ಮೋದಿ ಬನಿಯಾ ಬಂಡವಾಳದ ಅಗತ್ಯಗಳನ್ನು ಪೂರೈಸುವ ಮೂಲಕ ರಾಜಕೀಯ ಅಧಿಕಾರದಲ್ಲಿ ಬೆಳೆದಿದ್ದೇ ಹೊರತು ಶೂದ್ರರ ಅಗತ್ಯಗಳನ್ನಲ್ಲ. ಅವರ ಬನಿಯಾ ಜಾತಿ ಮೂಲ ಮತ್ತು ಒಬಿಸಿ ಪ್ರಮಾಣಪತ್ರಗಳ ಸಂಯೋಜನೆಯಾಗಿದ್ದರಿಂದಾಗಿ, ಪ್ರಸ್ತುತ ಬಿಜೆಪಿಯಲ್ಲಿ ಅವರು ಪರಿಪೂರ್ಣ ಮುಖವಾಣಿಯಾಗಲು ಸಾಧ್ಯವಾಯಿತು. ಇನ್ನು ಬಿಜೆಪಿಯು ಸಂಖ್ಯೆ ದೃಷ್ಟಿಯಿಂದ ಶೂದ್ರ ಮತದಾರರ ಮೇಲೆ ಹೆಚ್ಚು ಅವಲಂಬಿತವಾಗಿದೆ. ಆದರೆ ಅದೆಲ್ಲವೂ ಬಿಜೆಪಿಗೆ ಪ್ರಮುಖವಾಗಿದ್ದರೆ ಅದು ಇತರ ಶೂದ್ರ ನಾಯಕರನ್ನು ಬೆಂಬಲಿಸುವ ಮೂಲಕ ಅವರನ್ನು ಮೆಚ್ಚಿಸಬಹುದಿತ್ತು. ಆದರೆ ನರೇಂದ್ರ ಮೋದಿಯವರಂತೆ ಒಬಿಸಿ ಕಾರ್ಡ್ ಮೂಲಕ ಬನಿಯಾಗಳನ್ನು ಸಂತೃಪ್ತಿಪಡಿಸುವವರಷ್ಟು ಬೇರೆ ಯಾರೂ ಇಲ್ಲದ ಕಾರಣಕ್ಕಾಗಿ ಅವರಿಗೆ ಮಣೆ ಹಾಕಲಾಯಿತು. 
ಈ ಹಿಂದೆ ಭಾರತದ ಸ್ವಾತಂತ್ರದ ಸಂದರ್ಭದಲ್ಲಿ ಬನಿಯಾಗಳ ರಾಜಕೀಯ ಶಕ್ತಿಯು ಉತ್ತುಂಗಕ್ಕೇರಿತು. ಅವರು ತಮ್ಮ ಇಬ್ಬರು ಪ್ರಮುಖ ನಾಯಕರಾದ ಮಹಾತ್ಮಾ ಗಾಂಧಿ ಮತ್ತು ರಾಮ್ ಮನೋಹರ್ ಲೋಹಿಯಾ ಅವರನ್ನು ಅವಲಂಬಿಸಿದ್ದರು. ನೆಹರು ನೇತೃತ್ವದ ಬ್ರಾಹ್ಮಣ ಪ್ರಾಬಲ್ಯದ ಕಾಂಗ್ರೆಸ್ ನ ಅಡಿಯಲ್ಲಿ ಬನಿಯಾಗಳು ರಾಷ್ಟ್ರೀಯ ರಾಜಕೀಯದಲ್ಲಿ ಬಹುತೇಕ ಅದೃಶ್ಯರಾಗಿದರೂ ಕೂಡ ಅವರು ವ್ಯಾಪಾರ, ಕೈಗಾರಿಕೆ ಮತ್ತು ಖಾಸಗಿ ಪತ್ರಿಕೆಗಳ ಮೂಲಕ ಹೆಚ್ಚಿನ ಪ್ರಭಾವವನ್ನು ಹೊಂದಿದ್ದರು. ಕಾಲಾಂತರದಲ್ಲಿ ಬನಿಯಾಗಳು ಜನ ಸಂಘದ ಕಡೆಗೆ ಆಕರ್ಷಿತರಾದರು. ಅದು ನಂತರದಲ್ಲಿ ಬಿಜೆಪಿ ಪಕ್ಷವಾಗಿ ರೂಪುಗೊಂಡಿತು. ಆದರೆ ಅಲ್ಲಿಯೂ ಸಹ ಪಕ್ಷದ ನಾಯಕತ್ವ ಇತ್ತೀಚಿನವರೆಗೂ ಬ್ರಾಹ್ಮಣರ ಕೈಯಲ್ಲಿದದ್ದನ್ನು ನಾವು ಕಾಣಬಹುದು. ಹಾಗಾದರೆ ಬನಿಯಾಗಳು ಜಾತಿ ವ್ಯವಸ್ಥೆಯಲ್ಲಿನ ಸ್ಥರದಲ್ಲಿ ಬ್ರಾಹ್ಮಣರನ್ನು ಅಧಿಕಾರದಿಂದ ಹಿಂದಿಕ್ಕಿ ಕೇಂದ್ರ ಸರ್ಕಾರದ ಉನ್ನತ ಸ್ಥಾನಕ್ಕೆ ಏರಿದ್ದು ಹೇಗೆ? ಒಂದು ಕಾಲದಲ್ಲಿ ಬ್ರಾಹ್ಮಣರ ಸನ್ಯಾಸಿ ಮೌಲ್ಯ ವ್ಯವಸ್ಥೆಯಡಿಯಲ್ಲಿ, ವ್ಯಾಪಾರಿಗಳಾಗಿದ್ದ ಬನಿಯಾಗಳ ವೃತ್ತಿಯನ್ನು ಇಂದು ಶೂದ್ರರ ಶ್ರಮ ಮತ್ತು ಕೃಷಿ ಉತ್ಪಾದನೆಯನ್ನು ಕೀಳಾಗಿ ಕಾಣುವಂತೆ ಆಗ ಕಡೆಗಣಿಸಲಾಗುತ್ತಿತ್ತು. ಆದರೆ ಈಗ ಬನಿಯಾಗಳ ಜಾತಿ ಮತ್ತು ಕುಲಗೆಲಸವನ್ನು ಗೌರವದಿಂದ ಕಾಣಲಾಗುತ್ತದೆ. ಪ್ರಾಚೀನ ಕಾಲದಿಂದಲೂ ಶೂದ್ರರ ವೃತ್ತಿ ಮತ್ತು ಅವರ ಸ್ಥಾನಮಾನದ ಕುರಿತ ಗ್ರಹಿಕೆಗಳು ಇನ್ನೂ ಬದಲಾಗದಿದ್ದರೂ ಬನಿಯಾಗಳ ವಿಚಾರದಲ್ಲಿನ ಈ ಬದಲಾವಣೆಗೆ ಕಾರಣವೇನು? ಎನ್ನುವ ಪ್ರಶ್ನೆಯನ್ನು ಶೂದ್ರರು ಸೂಕ್ಷವಾಗಿ ಅಧ್ಯಯನ ಮಾಡಬೇಕಾಗಿದೆ. ಏಕೆಂದರೆ ಅದು ಅವರಿಗೆ ಮಾದರಿಯಾಗಲಿದೆ ಮತ್ತು ಅವರ ಮುಂದುವರೆಯುತ್ತಿರುವ ದುರ್ಬಲ ಸ್ಥಿತಿ ಮತ್ತು ದಬ್ಬಾಳಿಕೆಗೆ ಇರುವ ಕಾರಣಗಳನ್ನು ಅರ್ಥೈಸಿಕೊಳ್ಳಲು ಸಹಾಯವಾಗುತ್ತದೆ. 
ಇನ್ನು ಈ ಪ್ರಶ್ನೆಗೆ ಸೂಕ್ತ ಉತ್ತರವನ್ನು ಹುಡುಕುತ್ತಾ ಹೋದಾಗ ಅದು ಬಂಡವಾಳವೆಂದು ನಿಶ್ಚಿತವಾಗಿ ತೋರುತ್ತದೆ. ಜಾತಿ ಆಧಾರಿತ ಸಮಾಜಕ್ಕೆ ಉದಾರವಾದಿ ಬಂಡವಾಳಶಾಹಿ ವ್ಯವಸ್ಥೆಯನ್ನು ಪರಿಚಯಿಸಿದಾಗ, ಜಾತಿ ವ್ಯವಸ್ಥೆಯಡಿಯಲ್ಲಿ ವಾಣಿಜ್ಯ ಬಂಡವಾಳದ ಮೇಲೆ ಶತಮಾನಗಳಿಂದಲೂ ವಿಶೇಷ ಹಕ್ಕು ಸ್ವಾಮ್ಯಗಳನ್ನು ಹೊಂದಿರುವ ಸಮುದಾಯಗಳಿಗೆ ಅನುಕೂಲಕರವಾಗುತ್ತವೆ. ಇನ್ನು ಜಾಗತಿಕ ಮಾರುಕಟ್ಟೆ ವ್ಯವಸ್ಥೆಯೊಂದಿಗಿನ ಭಾರತದ ಮುಖಾಮುಖಿಯು ದೇಶದ ಬಂಡವಾಳದ ಮೇಲೆ ಬನಿಯಾಗಳ ನಿಯಂತ್ರಣವನ್ನು ಬಲಪಡಿಸಿದೆ. ಇದರ ಜೊತೆಗೆ ಅದು ಆರ್ಥಿಕತೆ ಮತ್ತು ಸಾಂಪತ್ತಿಕ ಸ್ಥಾನಮಾನವನ್ನು ಸಹ ತರುತ್ತದೆ. 
ಆದರೆ ಇದನ್ನು ವಿವರಣೆಯ ಒಂದು ಭಾಗ ಮಾತ್ರ ಎಂದು ಹೇಳಬಹುದು. ಬನಿಯಾಗಳು ಸಾಮಾಜಿಕ ಮತ್ತು ರಾಜಕೀಯ ಉನ್ನತ ಸ್ಥಾನಗಳನ್ನು ಹೊಂದಿದ್ದಕ್ಕಿಂತ ಸುದೀರ್ಘ ಕಾಲದವರೆಗೆ ಶ್ರೀಮಂತರಾಗಿದ್ದಾರೆ. ಬ್ರಿಟಿಷರ ವಸಾಹತುಶಾಹಿ ಕೊನೆಯ ಅವಧಿಯಲ್ಲಿ ಬನಿಯಾಗಳು ಸಾಕಷ್ಟು ಸಂಪತ್ತನ್ನು ಹೊಂದಿದ್ದರು. ಆದರೆ ಆಗ ಅವರು ಬ್ರಾಹ್ಮಣರ ಬೌದ್ಧಿಕ ಕೀಳರಿಮೆ ಸಂಕೀರ್ಣದಿಂದ ಬಳಲುತ್ತಿದ್ದರು. ಈ ಹಿನ್ನಲೆಯಲ್ಲಿ ಇದನ್ನು ನಿವಾರಿಸಲು ಅವರಿಗೆ ಕೇವಲ ಸಂಪತ್ತು ಮಾತ್ರ ಸಾಕಾಗಲಿಲ್ಲ. ಆ ಸಂದರ್ಭದಲ್ಲಿ ತಮ್ಮ ಸಾಂಪ್ರದಾಯಿಕ ಸಾಮಾಜಿಕ ಸ್ಥಾನದ ಸೈದ್ಧಾಂತಿಕ ಬಂಧಗಳನ್ನು ಸಡಿಲಗೊಳಿಸಲು ಬನಿಯಾಗಳು ದಾರ್ಶನಿಕರನ್ನು ಸೃಷ್ಟಿಸಬೇಕಾಗಿತ್ತು. ಇಂದು ಬನಿಯಾಗಳು ಈ ಹಂತಕ್ಕೆ ತಲುಪುವಲ್ಲಿ, ಮಹಾತ್ಮಾ ಗಾಂಧಿ ಮತ್ತು ಸಮಾಜವಾದಿ ರಾಮ್ ಮನೋಹರ್ ಲೋಹಿಯಾ ಕೇವಲ ರಾಜಕಾರಣಿಗಳಾಗಿ ಅಷ್ಟೇ ಅಲ್ಲ, ಅವರು ಭಾರತೀಯರ ಚಿಂತನಾ ಸ್ವರೂಪವನ್ನು ಬದಲಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದರು. ಇಬ್ಬರು ಕೂಡ ಬನಿಯಾ ಸಾವಯವ ಚಿಂತಕರು, ಇಬ್ಬರೂ ಪ್ರತಿಷ್ಠಿತ ಪಾಶ್ಚಿಮಾತ್ಯ ಶಿಕ್ಷಣ ಮತ್ತು ಇಂಗ್ಲಿಷ್‌ನ ಪಾಂಡಿತ್ಯವನ್ನು ಹೊಂದಿದ್ದವರು ಮತ್ತು ಇಬ್ಬರೂ ವ್ಯಾಪಕವಾಗಿ ಬರಹಗಳನ್ನು ಪ್ರಕಟಿಸಿದರು. ಭಾರತದ ಸ್ವಾತಂತ್ರ್ಯ ಚಳುವಳಿ ಮತ್ತು ಆರಂಭಿಕ ಗಣರಾಜ್ಯ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಬ್ರಾಹ್ಮಣ ಚಿಂತಕರ ನಡುವೆ ಈ ಇಬ್ಬರು ವ್ಯಕ್ತಿಗಳು ಉನ್ನತ ಸ್ಥಾನಮಾನವನ್ನು ಪಡೆದರು ಮತ್ತು ಇದರಿಂದಾಗಿ ಬನಿಯಾ ಸಮುದಾಯದ ಪ್ರತಿಷ್ಠೆ ಮತ್ತು ಸ್ವಾಭಿಮಾನ ಕೂಡ ದ್ವಿಗುಣಗೊಂಡಿತು. 
ಮಹಾತ್ಮಾ ಗಾಂಧಿ ವಿಶೇಷವಾಗಿ ಬ್ರಾಹ್ಮಣರ ಮೇಲೆ ಹೆಚ್ಚಿನ ಪ್ರಭಾವವನ್ನು ಬೀರಿದ್ದರು. ಅವರ ಸಾರ್ವಜನಿಕ ಚಿತ್ರಣ ಮತ್ತು ವೈಯಕ್ತಿಕ ಅಭ್ಯಾಸಗಳು-ಅವರ ಉಡುಪುಗಳು, ಉಪವಾಸ ವೃತ, ಸಸ್ಯಾಹಾರಿ ಪಾಲನೆ, ಬ್ರಾಹ್ಮಣ ವಿಧಿ ವಿಧಾನದಲ್ಲಿ ಪರಿಶುದ್ಧತೆಯ ಗೀಳು, ಇವೆಲ್ಲವೂ ಕೂಡ ಬ್ರಾಹ್ಮಣ ತತ್ತ್ವ ಚಿಂತನೆಯ ತಪಸ್ವಿ ಮೌಲ್ಯಗಳ ಮೇಲೆ ಹೆಚ್ಚು ಪ್ರಭಾವ ಬೀರಿತು. ಒಂದರ್ಥದಲ್ಲಿ ಗಾಂಧೀಜಿ ಬ್ರಾಹ್ಮಣ ಮಾರ್ಗಗಳಿಗೆ ಗೌರವ ಸಲ್ಲಿಸುವ ಬನಿಯಾ ಆಗಿದ್ದರು ಎನ್ನಬಹುದು. 
ಆಧುನಿಕ ಭಾರತೀಯ ರಾಜಕೀಯ ಸಂದರ್ಭದಲ್ಲಿ ಕೈಗಾರಿಕಾ ಬಂಡವಾಳ ಪ್ರವೇಶಿಸಲು ಗಾಂಧೀಜಿ ಒಂದು ಹೊಸ ಮಾರ್ಗವನ್ನು ಸೃಷ್ಟಿಸಿದರು. ಸಾರ್ವಜನಿಕವಾಗಿ ಅವರು ಕೈಗಾರಿಕಾ ಆರ್ಥಿಕತೆಯನ್ನು ತೀವ್ರವಾಗಿ ಟೀಕಿಸುವ ಮೂಲಕ ಗ್ರಾಮೀಣ ಆರ್ಥಿಕತೆಗೆ ಮರಳಬೇಕೆಂದು ಪ್ರತಿಪಾದಿಸಿದರು. ಆದರೆ ಖಾಸಗಿಯಾಗಿ, ಬನಿಯಾ ಉದ್ಯಮಗಳ ಬೆಂಬಲವನ್ನು ಗಾಂಧೀಜಿ ಹೊಂದಿದ್ದರೂ ಕೂಡ ಅವರ ಬೃಹತ್ ಉದ್ಯಮಗಳನ್ನು ಪ್ರೋತ್ಸಾಹಿಸುವ ವಿಚಾರದಲ್ಲಿ ಅವರಿಗೆ ಯಾವುದೇ ಮನಸ್ಸಿದ್ದಿರಲಿಲ್ಲ. ವಿಶೇಷವಾಗಿ ಬಿರ್ಲಾಗಳು ಮತ್ತು ಗೋಯೆಂಕಾಗಳು ಗಾಂಧಿಜೀಯವರಿಗೆ ಉದಾರವಾಗಿ ನೆರವು ನೀಡುವ ಮೂಲಕ ಸಾಕಷ್ಟು ಗೌರವ ಸಂಪತ್ತನ್ನು ಗಳಿಸಿದರು. ಗ್ರಾಮೀಣ ಆರ್ಥಿಕತೆ ಕುರಿತಾದ ಗಾಂಧೀಜಿ ದೃಷ್ಟಿಕೋನದ ಶ್ರಮದ ವಿಭಜನೆ ಜಾತಿ ಪರಿಕಲ್ಪನೆಯೊಂದಿಗೆ ಬಂದಿರುವುದನ್ನು ನಾವು ಕಾಣಬಹುದು. ಗಾಂಧೀಜಿ ಅಸ್ಪೃಶ್ಯತೆಯ ವಿರುದ್ಧ ಮಾತನಾಡಿರುವುದನ್ನು ನಾವು ಕಾಣುತ್ತೇವೆ, ಆದರೆ ಅವರು ಎಂದಿಗೂ ಕೂಡ ಪರಿಣಾಮಕಾರಿಯಾಗಿ ಜಾತಿ ವ್ಯವಸ್ಥೆಯ ವಿರುದ್ಧವಾಗಿ ಮಾತನಾಡಿರುವುದನ್ನು ಕಾಣಲು ಸಾಧ್ಯವಿಲ್ಲ. ವಾಣಿಜ್ಯ ಮತ್ತು ಬಂಡವಾಳದ ಮೇಲೆ ವೈಶ್ಯರ ಏಕಸ್ವಾಮ್ಯಕ್ಕೆ ಬೆಂಬಲ ವ್ಯಕ್ತಪಡಿಸಿದ್ದರು ಇದಕ್ಕಾಗಿ ಗಾಂಧೀಜಿ ಶೂದ್ರರು ಮತ್ತು ದಲಿತರನ್ನು ಶೋಷಣೆಗೆ ಒಳಪಡಿಸಲು ಸಿದ್ಧರಿದ್ದರು. 
ಸ್ವತಂತ್ರ ಭಾರತದ ರಾಜಕೀಯ ಅಸ್ತಿತ್ವವು ಗಾಂಧಿಯವರನ್ನು ಹೆಚ್ಚಾಗಿ ಅನುಸರಿಸುತ್ತಾ ಬಂದಿದೆ. ಕೆಲವು ರಾಜಕಾರಣಿಗಳು ಅವರು ಬ್ರಾಹ್ಮಣರಾಗಿರಲಿ, ಅಥವಾ ಇಲ್ಲದಿರಲಿ, ಬನಿಯಾಗಳ ಮತ್ತು ಅವರ ಬಂಡವಾಳವನ್ನು ಕೀಳಾಗಿ ಕಾಣುತ್ತಿದ್ದರು. ತಮಗೆ ಆಹಾರ ನೀಡಿದ ಕೈಯನ್ನು ಸಾರ್ವಜನಿಕವಾಗಿ ಟೀಕಿಸುವ ಗಾಂಧಿ ನಡೆಯು ಅನೇಕ ರಾಜಕಾರಣಿಗಳಿಗೂ ಅನ್ವಯಿಸುತ್ತದೆ. ಗಾಂಧೀಜಿ ರಾಜಕೀಯ ಚಿಂತನೆಯು ಗಣನೀಯವಾಗಿ ಕೈಗಾರಿಕೋದ್ಯಮದಿಂದ ಆರ್ಥಿಕ ಬಂಡವಾಳ ಮತ್ತು ವೈದಿಕಶಾಹಿಯಿಂದ ಸಾಂಸ್ಕೃತಿಕ ಬಂಡವಾಳವನ್ನು ಅವಲಂಬಿಸಿದೆ. ಆ ಮೂಲಕ ಒಂದು ಸಮುದಾಯವಾಗಿ ಬನಿಯಾಗಳ ಮಹತ್ವವನ್ನು ಪ್ರತಿಬಿಂಬಿಸುತ್ತದೆ. ಅವರು ಆರ್ಥಿಕ ಶಕ್ತಿಯನ್ನು ಹೊಂದಿದ್ದಾರೆ ಮತ್ತು ಬ್ರಾಹ್ಮಣರ ಜೀವನ ವಿಧಾನಗಳನ್ನು ಅಳವಡಿಸಿಕೊಂಡಿದ್ದಾರೆ.ಒಂದರ್ಥದಲ್ಲಿ ಭಾರತೀಯ ಸಮಾಜದ ಉನ್ನತ ಸ್ಥರದಲ್ಲಿ ಬನಿಯಾಗಳ ಅಧಿಕಾರದ ಹಕ್ಕನ್ನು ಗಾಂಧೀಜಿ ಸಾಕಾರಗೊಳಿಸುವಲ್ಲಿ ಯಶಸ್ವಿಯಾದರು ಎಂದು ಹೇಳಬಹುದು. 
ಇನ್ನು ಸಮಾಜವಾದಿ ರಾಮ್ ಮನೋಹರ್ ಲೋಹಿಯಾ ಅವರೊಂದಿಗಿನ ಬನಿಯಾಗಳ ಸಂಬಂಧ ಸಂಕೀರ್ಣತೆಯಿಂದ ಕೂಡಿತ್ತು ಎಂದು ಹೇಳಬಹುದು. ಲೋಹಿಯಾ ಅವರ ಬೌದ್ದಿಕ ಜಾಣ್ಮೆ ಮತ್ತು ಬ್ರಾಹ್ಮಣರಾಗಿದ್ದ ನೆಹರು ನಾಯಕತ್ವಕ್ಕೆ ಬಹಿರಂಗವಾಗಿ ಸವಾಲು ಒಡ್ಡಿದ್ದರಿಂದಾಗಿ ಅವರ ಬಗ್ಗೆ ಬನಿಯಾಗಳಿಗೆ ಒಂದೆಡೆ ಹೆಮ್ಮೆ ಇತ್ತು. ಆದರೆ ಗಾಂಧೀಜಿಯವರನ್ನು ಬೆಂಬಲಿಸಿದಂತೆ ಲೋಹಿಯಾ ಅವರನ್ನು ಬನಿಯಾಗಳು ಎಂದಿಗೂ ಬೆಂಬಲಿಸಲಿಲ್ಲ ಎನ್ನಬಹುದು. ಇದಕ್ಕೆ ಮುಖ್ಯವಾಗಿ ಕಟ್ಟಾ ಸಮಾಜವಾದಿಯಾಗಿದ್ದ ಲೋಹಿಯಾರಿಂದ ತಮ್ಮ ಆರ್ಥಿಕ ಹಿತಾಸಕ್ತಿಗಳಿಗೆ ಧಕ್ಕೆಯಾಗಬಹುದು ಎನ್ನುವ ಭೀತಿಯೇ ಕಾರಣವೆನ್ನಬಹುದು. 
1948 ರಲ್ಲಿ ರಾಮ್ ಮನೋಹರ್ ಲೋಹಿಯಾ ಕಾಂಗ್ರೆಸ್ ಪಕ್ಷವನ್ನು ತೊರೆದು ತಮ್ಮ ಸಮಾಜವಾದಿ ಚಿಂತನೆಗಳನ್ನು ಜಾರಿಗೆ ತರಲು ಮುಂದಾದರು. ಬಹುಶಃ ಈ ನಡೆ ಪರೋಕ್ಷವಾಗಿ ಬನಿಯಾಗಳ ರಾಜಕೀಯ ಬೆಳವಣಿಗೆಗೆ ಹೆಚ್ಚು ಅನುಕೂಲಕರವಾಯಿತು. ಬ್ರಾಹ್ಮಣ್ಯ ಪ್ರಾಬಲ್ಯವನ್ನು ಹೊಂದಿದ್ದ ಕಾಂಗ್ರೆಸ್ ಪಕ್ಷದಿಂದ ನಿರಾಸೆಗೊಂಡು ಹೊರಬಂದ ಶೂದ್ರರು ಆಗ ಲೋಹಿಯಾ ಅವರ ಕಾಂಗ್ರೆಸ್ ವಿರೋಧಿ ರಾಜಕೀಯ ನಿಲುವನ್ನು ವ್ಯಾಪಕವಾಗಿ ಬೆಂಬಲಿಸಿದರು. ಮಹಾತ್ಮ ಗಾಂಧಿ ಮತ್ತು ಕಾರ್ಲ್ ಮಾರ್ಕ್ಸ್ ಚಿಂತನೆಗಳಿಂದ ಪ್ರೇರಿತಗೊಂಡಿದ್ದ ಲೋಹಿಯಾ ಸಮಾಜವಾದವು ವಿಶೇಷವಾಗಿ ಉತ್ತರ ಭಾರತದಲ್ಲಿ ಶೂದ್ರರ ರಾಜಕೀಯ ಸಂಘಟನೆಗೆ ಮುಖ್ಯ ಆಧಾರವಾಗಿ ಪರಿವರ್ತನೆಯಾಯಿತು. ಆ ಮೂಲಕ ಆಗ ಬನಿಯಾ ನಾಯಕತ್ವವನ್ನು ಶೂದ್ರರು ಒಪ್ಪಿಕೊಳ್ಳುವಲ್ಲಿ ಲೋಹಿಯಾ ಪ್ರಮುಖ ಪಾತ್ರವಹಿಸಿದರು. ಈ ಹಿನ್ನಲೆಯಲ್ಲಿ ಇಂದಿನ ಮೋದಿ-ಶಾ ಜೋಡಿ ಆ ಸೌಲಭ್ಯನ್ನು ಅನುಭವಿಸುತ್ತಾ ಮುಂದುವರೆದಿದೆ. 
ಆಗ ರಾಷ್ಟ್ರೀಯ ಮಟ್ಟದಲ್ಲಿ ಶೂದ್ರರಿಗೆ ರಾಜಕೀಯ ಮತ್ತು ಬೌದ್ಧಿಕ ದೃಷ್ಟಿಕೋನ ಹೊಂದಿರುವ ನಾಯಕತ್ವದ ಕೊರತೆ ಇತ್ತು. ಈ ಹಿನ್ನಲೆಯಲ್ಲಿ ಈ ಕೊರತೆಯನ್ನು ಲೋಹಿಯಾ ತುಂಬುವಲ್ಲಿ ಯಶಸ್ವಿಯಾದರು. ಅದೇ ಕಾಲಘಟ್ಟದಲ್ಲಿ ಸಂಭವಿಸಿದ ಬೃಹತ್ ಶೂದ್ರರ ರಾಜಕೀಯ ಕ್ರೂಡಿಕರಣವೆಂದರೆ ಅದು ಮದ್ರಾಸ್ ನಲ್ಲಿನ ದ್ರಾವಿಡ ಚಳಿವಳಿ ಎಂದು ಹೇಳಬಹುದು. ಆದರೆ ನಾಯಕರಾದ ಪೆರಿಯಾರ್ ಹಾಗೂ ಇತರರಿಗೆ ತಮ್ಮ ರಾಜ್ಯದ ವ್ಯಾಪ್ತಿಯನ್ನು ಮೀರಿದ ಯಾವುದೇ ಬೆಂಬಲ ಸಿಗಲಿಲ್ಲ. ಸ್ವಾತಂತ್ರ ಸಂದರ್ಭದಲ್ಲಿ ನೂರಾರು ಶೂದ್ರರು ನಾಯಕರಾಗಿ ಹೊರಹೊಮ್ಮಿದರೂ ಕೂಡ ಅವರಿಗೆ ಯಾವುದೇ ರಾಷ್ಟ್ರಮಟ್ಟದ ಖ್ಯಾತಿ ಧಕ್ಕಲಿಲ್ಲ. 
ಆದರೆ ಆ ಕಾಲ ಘಟ್ಟದಲ್ಲಿ ಇದಕ್ಕೆ ಅಪವಾದವೆನ್ನುವಂತೆ ಇದ್ದ ಶೂದ್ರ ನಾಯಕನೆಂದರೆ ಅದು ಸರ್ದಾರ್ ವಲ್ಲಭಭಾಯ್ ಪಟೇಲ್ ರಾಗಿದ್ದರು. ಬ್ರಿಟಿಶ್ ಪದವಿಯನ್ನು ಪಡೆದಿದ್ದ ಸರ್ದಾರ್ ಪಟೇಲ್, ಯಶಸ್ವಿ ವಕೀಲರಾಗಿದ್ದರು. ಆದರೆ ಅವರ ಬೌದ್ಧಿಕ ಚಿಂತನಾ ಲಹರಿಯು ಗಾಂಧಿ ಮತ್ತು ನೆಹರುಗಳಂತಿರದೇ ಸೀಮಿತವಾಗಿತ್ತು. ಪಟೇಲ್ ಅವರು ಎಂದಿಗೂ ಕೂಡ ಐತಿಹಾಸಿಕ, ತಾತ್ವಿಕ ಮತ್ತು ಧರ್ಮಶಾಸ್ತ್ರದ ವಿಚಾರಗಳತ್ತ ಗಮನಹರಿಸಲಿಲ್ಲ. ಗಾಂಧಿಜೀ ಪಟೇಲ್ ಅವರನ್ನು ರೈತರ ಸಂಘಟನೆಗಾಗಿ ಬಳಸಿಕೊಂಡರೆ, ನೆಹರು ಅವರನ್ನು ಸರ್ಕಾರದಲ್ಲಿ ಕಾನೂನು ಜಾರಿ ಕ್ರಮಗಳಿಗಾಗಿ ಅವಲಂಬಿಸಿದ್ದರು. ಇನ್ನು ಪಟೇಲ್ ಅವರಿಗಿದ್ದ ‘ಸರ್ದಾರ್’ ಮತ್ತು ‘ ಭಾರತದ ಉಕ್ಕಿನ ಮನುಷ್ಯ` ಎನ್ನುವ ಬಿರುದಾಂಕಿತಗಳನ್ನು ಗಾಂಧಿಯವರ ‘ಮಹಾತ್ಮ’ ಅಥವಾ ನೆಹರೂ ಅವರ `ಪಂಡಿತ್’ ಬಿರುದಾಂಕಿತಗಳೊಂದಿಗೆ ಹೋಲಿಸಿದಾಗ ಅವು ಯಾವುದೇ ಬೌದ್ದಿಕ ಅಥವಾ ತಾತ್ವಿಕ ಅರ್ಥೈಸುವಿಕೆಯನ್ನು ನೀಡುವುದಿಲ್ಲ. ಇನ್ನು ಪಟೇಲ್ ಅವರು ಒಂದರ್ಥದಲ್ಲಿ ಗಾಂಧೀಜಿ ಮತ್ತು ನೆಹರು ಅವರಿಗೆ ಅಧೀನರಾಗಿದ್ದರು ಮತ್ತು ಅವರೆಂದಿಗೂ ಕೂಡ ಕಾಂಗ್ರೆಸ್ ಗೆ ಪರ್ಯಾಯ ಮಾರ್ಗವನ್ನು ರೂಪಿಸಲು ಯತ್ನಿಸಲಿಲ್ಲ ಎನ್ನಬಹುದುದು. ಅಷ್ಟೇ ಅಲ್ಲದೆ ಅವರು ಶೂದ್ರರಿಗೆ ಸಬಲೀಕರಣದ ಯಾವುದೇ ತಾತ್ವಿಕ ಚಿಂತನೆಯನ್ನು ಕೂಡ ಸೃಷ್ಟಿಸಲಿಲ್ಲ. 
ಈ ಸಂದರ್ಭದಲ್ಲಿ ಅಧ್ಯಯನಕ್ಕೆ ಸೂಕ್ತವಾದ ಇನ್ನೊಬ್ಬ ವ್ಯಕ್ತಿ ಎಂದರೆ ಡಾ.ಬಿ.ಆರ್.ಅಂಬೇಡ್ಕರ್, ವೈದಿಕ ಧರ್ಮವು ಅಸ್ಪೃಶ್ಯರೆಂದು ಸಮಾಜದಿಂದ ಕಡೆಗಣಿಸಿದ ಜಾತಿಯೊಂದರಲ್ಲಿ ಜನಿಸಿದ ಅವರು ಇಂಗ್ಲಿಷ್ ಭಾಷೆಯಲ್ಲಿ ಪಾರಂಗತರಾಗಿದ್ದರು ಮತ್ತು ಪಾಶ್ಚಾತ್ಯ ದೇಶಗಳಲ್ಲಿ ಅಧ್ಯಯನ ಮಾಡಿದ್ದರು. ಮಹಾತ್ಮ ಗಾಂಧಿ ಮತ್ತು ಲೋಹಿಯಾ ಅವರನ್ನು ಮೀರಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಗಣರಾಜ್ಯ ಭಾರತದ ಬೌದ್ಧಿಕ ನಿರ್ಮಾತೃಗಳಲ್ಲಿ ಸ್ಥಾನಗಳಿಸಿದರು. ಸಂಪತ್ತು ಬನಿಯಾಗಳಿಗೆ ಸಬಲೀಕರಣದ ಸಾಧನವಾಗಿ ಇದ್ದಂತೆ ಶೋಷಿತರಿಗೆ ಲಭ್ಯವಿಲ್ಲದಿದ್ದರೂ ಅಂಬೇಡ್ಕರ್ ಅವರ ಆದರ್ಶ ನಮಗೆ ಚಿಂತನೆಯ ಶಕ್ತಿಯನ್ನು ತೋರಿಸುತ್ತದೆ. ಜಾತಿಯಿಂದ ಹೆಚ್ಚು ಶೋಷಣೆಗೊಳಗಾದವರಿಗೆ ಅವರು ಸಶಕ್ತಿಯ ಮಾರ್ಗವನ್ನು ತೋರಿಸಿದರು. ಇದು ಸ್ವಾಭಿಮಾನ, ಬ್ರಾಹ್ಮಣ್ಯ ಮತ್ತು ಹಿಂದೂ ಧರ್ಮದ ಸಂಪೂರ್ಣ ನಿರಾಕರಣೆ ಮೂಲಕ ಒಗ್ಗೂಡಿಸುವ ದಲಿತ ಅಸ್ಮಿತೆಯನ್ನು ರೂಪಿಸಿದ್ದರಿಂದಾಗಿ ಅಂಬೇಡ್ಕರ್ ಅವರನ್ನು ಇದಕ್ಕೆ ಸಮಾನಾಂತರವಾಗಿ ಪರಿಗಣಿಸಲಾಗುತ್ತದೆ. 
ಅಂಬೇಡ್ಕರ್ ವಾದಿ ಚಿಂತನೆ ವೈದಿಕ ಧರ್ಮವನ್ನು ದುರ್ಬಲಗೊಳಿಸುವಲ್ಲಿ ಅಲ್ಪ ಪ್ರಮಾಣದಲ್ಲಿ ಯಶಸ್ಸನ್ನು ಕಂಡಿದೆ. ಆದರೆ ಶೂದ್ರರು ಇದರ ಮಹತ್ವವನ್ನು ಅರಿಯುವಲ್ಲಿ ವಿಫಲರಾಗಿದ್ದಾರೆ. ಒಂದು ವೇಳೆ ಅವರು ಇದನ್ನು ಒಂದು ಸಿದ್ಧಾಂತವಾಗಿ ಪರಿಗಣಿಸಿ ತಮ್ಮ ಶೋಷಣೆಯಲ್ಲಿ ಜಾತಿ ಮತ್ತು ಧರ್ಮದ ಪಾತ್ರವನ್ನು ಕೇಂದ್ರಿಕರಿಸಿದ್ದೇ ಆಗಿದ್ದಲ್ಲಿ, ಇಂದು ಅವರ ಸ್ಥಾನದಲ್ಲಿ ಸಾಕಷ್ಟು ಬದಲಾವಣೆಯಾಗಿರುತ್ತಿತ್ತು. ಆದರೆ ಅದರ ಬದಲಾಗಿ ಅವರು ಪ್ರಖರ ಜಾತಿಯತೆ (caste chauvinism) ಯನ್ನು ಸ್ವಾಭಿಮಾನ ಎಂದು ಬಿಂಬಿಸುವ ಪ್ರಾದೇಶಿಕ ನಾಯಕರತ್ತ ಮೊರೆ ಹೋದರು.ಇನ್ನು ಈ ನಾಯಕರ ಸಮಾಜವಾದವು ಆರ್ಥಿಕ ಅಸಮಾನತೆ ಬಗ್ಗೆ ಉಲ್ಲೇಖಿಸಿದರೂ ಕೂಡ ಅದೆಂದಿಗೂ ಜಾತಿ ದೌರ್ಜನ್ಯದ ಬಗ್ಗೆ ಪ್ರಸ್ತಾಪಿಸುವುದನ್ನು ಕಾಣುವುದಿಲ್ಲ. 
ಗಣರಾಜ್ಯ ಭಾರತದ ಆರಂಭಿಕ ಕಾಲಾವಧಿಯಲ್ಲಿ ಬನಿಯಾಗಳು ತಮ್ಮ ಕೈಗಾರಿಕೋದ್ಯಮ ಮತ್ತು ಉದ್ಯಮದಿಂದಾಗಿ ಬ್ರಾಹ್ಮಣ ಸಂಸ್ಕೃತಿ ಜೊತೆ ಕೈ ಜೋಡಿಸಿದರು. ಆ ಮೂಲಕ ಅವರು ತಮ್ಮ ಹಿಂದಿನ ಶ್ರೇಣಿಗಿಂತ ಉಚ್ಛ ಸ್ಥರಕ್ಕೆ ಏರುವ ಮಾರ್ಗವನ್ನು ಕಂಡುಕೊಂಡರು. ಇವರಿಗೆ ಮಹಾತ್ಮ ಗಾಂಧೀಜಿ ಒಂದು ರೀತಿಯಲ್ಲಿ ಸಂತರಾಗಿದ್ದರಿಂದಾಗಿ ಅಂದಿನಿಂದಲೂ ಅವರು ತಮ್ಮ ಈಗಿನ ಸ್ಥಾನಕ್ಕೇರಲು ಸಾಕಷ್ಟು ಸುಧಾರಣೆಗೊಂಡಿದ್ದಾರೆ. ಇನ್ನು ಡಾ.ಬಿ.ಆರ್.ಅಂಬೇಡ್ಕರ್ ಅವರು ದಲಿತರಿಗಾಗಿ ಆಮೂಲಾಗ್ರವಾದ ವಿಭಿನ್ನ ಮಾರ್ಗವನ್ನು ನಿರ್ಮಿಸಿದರು. ಇದರಿಂದ ದಲಿತರು ಕೂಡ ಹೆಚ್ಚಿನ ರೀತಿಯಲ್ಲಿ ಪ್ರಗತಿ ಸಾಧಿಸಿಲು ಸಾಧ್ಯವಾಗಿದೆ. 
ಆದರೆ ಶೂದ್ರರಿಗೆ ತಮ್ಮ ಈ ಸಂಕೀರ್ಣ ವ್ಯವಸ್ಥೆಯಿಂದ ಹೊರಬರುವ ನಿಟ್ಟಿನಲ್ಲಿ ದಾರಿ ತೋರಿಸಲು ಯಾವ ಮಾರ್ಗದರ್ಶಕನು ಇಲ್ಲ. ಈ ಹಿನ್ನಲೆಯಲ್ಲಿ ವೈದಿಕ ಧರ್ಮದ ಮೂಲಕ ಅವರಿಗೆ ಮೀಸಲಾದ ಆಧ್ಯಾತ್ಮಿಕ, ಸಾಮಾಜಿಕ ಮತ್ತು ರಾಜಕೀಯ ಸ್ಥರದಲ್ಲಿ ಈ ಹಿಂದಿನ ಕೆಳಮಟ್ಟದ ಸ್ಥಾನದಲ್ಲಿಯೇ ಉಳಿಯುವಂತಾಯಿತು. ಒಂದು ವೇಳೆ ಶೂದ್ರರು ಈ ವೈದಿಕಶಾಹಿ ವ್ಯವಸ್ಥೆಯಿಂದ ಹೊರ ಬರಬೇಕೆಂದರೆ ಅವರಿಗೆ ಸ್ವಂತ ಮಾರ್ಗದರ್ಶಕರ ಅಗತ್ಯವಿದೆ. ಇಂದಿನ ಪ್ರಮುಖ ಶೂದ್ರ ರಾಜಕಾರಣಿಗಳನ್ನು ಕೇವಲ ಭೌಗೋಳಿಕವಾಗಿ ಮಾತ್ರವಲ್ಲ, ಅವರನ್ನು ಭೌದ್ದಿಕವಾಗಿಯೂ ಕೂಡ ನಿರ್ಬಂಧಿಸಲಾಗಿದೆ. ಇಂದಿನ ಪ್ರಮುಖ ಶೂದ್ರ ರಾಜಕಾರಣಿಗಳಲ್ಲಿ ಯಾರೂ ಕೂಡ ಭೌದ್ದಿಕ ವಲಯದಲ್ಲಿ ಇರುವಂತವರಲ್ಲ ಅಥವಾ ಮುಂಬರುವ ಚುನಾವಣೆಯನ್ನು ಮೀರಿ ತಮ್ಮ ಕ್ಷೇತ್ರಗಳನ್ನು ಮುನ್ನಡೆಸುವುದು ಹೇಗೆ ಎನ್ನುವುದರ ಬಗ್ಗೆ ಅವರಿಗೆ ಯಾವುದೇ ಸ್ಪಷ್ಟವಾದ ದೂರದೃಷ್ಟಿ ಇಲ್ಲ. ಎಲ್ಲಾ ಶೂದ್ರರನ್ನು ಜಾತಿ ಮತ್ತು ಪ್ರದೇಶದ ವ್ಯಾಪ್ತಿಯಲ್ಲಿ ಒಂದುಗೂಡಿಸುವ ಮತ್ತು ಅವರನ್ನು ಉನ್ನತ ಸ್ಥಾನಕ್ಕೆ ಕೊಂಡೊಯ್ಯುವ ಮಾರ್ಗವನ್ನು ಕಲ್ಪಿಸಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಪ್ರವೃತ್ತರಾಗುವ ಕೆಲಸವನ್ನು ಎಲ್ಲ ಶೂದ್ರ ಬುದ್ಧಿಜೀವಿಗಳು ಮಾಡಬೇಕಾಗಿದೆ. ಆದರೆ ಇಂದು ರಾಷ್ಟ್ರಮಟ್ಟದಲ್ಲಿ ಒಬ್ಬರೂ ಸಾಮಾಜಿಕ ರಾಜಕೀಯ ಮತ್ತು ತಾತ್ವಿಕ ಪಾತ್ರಗಳನ್ನು ನಿರ್ವಹಿಸಬಲ್ಲಂತಹ ಶೂದ್ರ ಬುದ್ದಿಜೀವಿಗಳು ಕಂಡುಬರುವುದಿಲ್ಲ. ಇದು ನಿಜಕ್ಕೂ ಆಘಾತಕಾರಿ ಸಂಗತಿಯಾಗಿದ್ದರೂ ಕೂಡ ಶೂದ್ರರು ಬದಲಾಗಲೇಬೇಕು. ಇದನ್ನು ಮೊದಲು ಅವರು ತಾವು ಬದಲಾಗುವುದು ಹೇಗೆ? ಎನ್ನುವ ವಿಚಾರದ ಮೂಲಕ ಆರಂಭಿಸಬೇಕಾಗಿದೆ. ಅದಕ್ಕಾಗಿ ಶೂದ್ರರು ತಾವು ಸಿಲುಕಿರುವ ಸಂಕೀರ್ಣ ವ್ಯವಸ್ಥೆಯ ಜಾಲದ ಮೂಲ ಸ್ವರೂಪವನ್ನು ಮೊದಲು ಅರ್ಥೈಸಿಕೊಳ್ಳಬೇಕು. 
ಈ ವೈದಿಕ ಬ್ರಾಹ್ಮಣ ಧರ್ಮದ ಪ್ರಭುತ್ವದ ಮೂಲವು ಮೂರು ಸಾವಿರ ವರ್ಷಗಳಷ್ಟು ಪುರಾತನವಾದ ವೇದಗಳಲ್ಲಿದೆ. ಈ ಗ್ರಂಥಗಳು ಉತ್ಪಾದಕ ಶ್ರಮ ಮತ್ತು ವಿಜ್ಞಾನವನ್ನು ಹೀಗಳೆಯುವ ತತ್ವ ಚಿಂತನೆ ಮೂಲಕ ಭೌತಿಕ-ವಿರೋಧಿ ಮತ್ತು ಅನುತ್ಪಾದಕ ಬ್ರಾಹ್ಮಣರ ಆಧ್ಯಾತ್ಮಿಕ ಪ್ರಾಬಲ್ಯವನ್ನು ಸ್ಥಾಪಿಸಿದವು. ಈ ಸಿದ್ಧಾಂತವು ಹಲವರಿಂದ ಪ್ರಶ್ನಿಸಲ್ಪಟ್ಟಿದ್ದರೂ ಸಹಿತ ಮಧ್ಯಕಾಲೀನ ಅವಧಿಯಲ್ಲಿ, ಅಂದರೆ ಸರಿ ಸುಮಾರು 1,200 ವರ್ಷಗಳ ಹಿಂದೆ ಬ್ರಾಹ್ಮಣರ ಯಜಮಾನಿಕೆ (Brahmin hegemony) ಯು ಆಳವಾಗಿ ಮತ್ತು ವ್ಯಾಪಕವಾಗಿ ನೆಲೆಯೂರಿತು. 
ಈ ಸಿದ್ದಾಂತದ ಅಡಿಯಲ್ಲಿ ಶೂದ್ರರು ಸಾಮಾಜಿಕ ಉಳಿವಿಗೆ ಅಗತ್ಯವಾದ ಸರಕುಗಳನ್ನು ಉತ್ಪಾದಿಸಬೇಕಾಗಿತ್ತು. ಆದರೆ ಇಂತಹ ಕೆಲಸ ಮಾಡಿದ್ದಕ್ಕಾಗಿ ಶೂದ್ರರ ಘನತೆಯನ್ನು ಕಡೆಗಣಿಸಿದ್ದಲ್ಲದೆ ಮತ್ತು ಅವರ ಎಲ್ಲ ಆಧ್ಯಾತ್ಮಿಕ ಮತ್ತು ಶೈಕ್ಷಣಿಕ ಹಕ್ಕುಗಳನ್ನು ನಿರಾಕರಿಸಲಾಯಿತು. ಒಂದರ್ಥದಲ್ಲಿ ಅವರ ಜೀವನವನ್ನು ಕಠಿಣ ಪರಿಶ್ರಮಕ್ಕೆ ಮಾತ್ರ ಸೀಮಿತಗೊಳಿಸಿ ಅವರಿಗೆ ತತ್ವ ಚಿಂತನೆಗಳೊಂದಿಗಿನ ಸಂವಾದದ ಅವಕಾಶವನ್ನು ನಿರಾಕರಿಸಲಾಯಿತು. ಶೂದ್ರರಿಗೆ ಪೌರೋಹಿತ್ಯವನ್ನು ನಿಷೇಧಿಸಲಾಯಿತು, ಅದು ಕೇವಲ ಬ್ರಾಹ್ಮಣರಿಗೆ ಮಾತ್ರ ಸೀಮಿತವಾಗಿತ್ತು. ಅದು ಓದು, ಬರಹದಿಂದ ಹಿಡಿದು ಅವರ ಶೋಷಣೆಗೆ ಮೂಲವಾಗಿರುವ ಸಂಸ್ಕೃತ ಗ್ರಂಥಗಳನ್ನು ಅಧ್ಯಯನ ಮಾಡುವುದಕ್ಕೂ ಕೂಡ ನಿಷೇಧ ಹೇರಲಾಯಿತು. ಇದನ್ನು ಬ್ರಾಹ್ಮಣರೇ ತಮಗೆ ಅನುಕೂಲಕ್ಕೆ ತಕ್ಕಂತೆ ವಾಖ್ಯಾನಿಸುತ್ತಿದ್ದರು. ಅವರು ಶೂದ್ರರ ಆಸ್ತಿ ಹಕ್ಕುಗಳಿಗೂ ಕೂಡ ನಿರ್ಬಂಧ ವಿಧಿಸಿದ್ದರು. ಆಗಿನ ಕಾಲದ ಹಲವು ಅಮೂಲ್ಯ ಬೆಲೆ ಬಾಳುವ ಸರಕುಗಳನ್ನು ದೈವಿಕ ಕಾಣಿಕೆಗಳಾಗಿ ಬಳಸಲಾಗುತ್ತಿತ್ತು. ಆದರೆ ಶೂದ್ರರಿಗೆ ತಮ್ಮ ಕೆಳದರ್ಜೆಯ ಸ್ಥಾನಮಾನದಿಂದ ಕಳಂಕಿತರಾಗುವ ಭಯದಿಂದ ಇವುಗಳಲ್ಲಿ ವ್ಯವಹರಿಸಲು ಸಾಧ್ಯವಾಗುತ್ತಿರಲಿಲ್ಲ. ಈ ಹಿನ್ನಲೆಯಲ್ಲಿ ಈಗ ಶೂದ್ರರು ಆಧ್ಯಾತ್ಮಿಕ ತತ್ವಶಾಸ್ತ್ರ ಮತ್ತು ಉದ್ಯಮದ ಮೂಲಕ ಸಂಪತ್ತನ್ನು ಗಳಿಸುವುದರ ಮೂಲಕ ಅವರು ಪ್ರಗತಿ ಸಾಧಿಸಬೇಕಾಗಿದೆ. ಏಕೆಂದರೆ ಈ ಎರಡು ಪ್ರಮುಖ ಕ್ಷೇತ್ರಗಳ ವ್ಯಾಪ್ತಿಯಿಂದ ಅವರು ನಿರಂತರವಾಗಿ ಹೊರಗುಳಿಯುತ್ತಾ ಬಂದಿದ್ದಾರೆ. 
ಇನ್ನು ಶೂದ್ರರು ತಮ್ಮ ಖಾಸಗಿ ಆಸ್ತಿಯ ಹಕ್ಕನ್ನು ಪಡೆಯಲು ಮುಸ್ಲಿಂ ಆಳ್ವಿಕೆಯವರೆಗೆ ಕಾಯಬೇಕಾಯಿತು. ತದನಂತರ ಶೂದ್ರ ಭೂಮಾಲೀಕತ್ವವು ಕ್ರಮೇಣ ಅಸ್ತಿತ್ವಕ್ಕೆ ಬಂದಿತಾದರೂ, ಅದು ಕೇವಲ ಸಣ್ಣ ಜಾತಿ-ಸಮುದಾಯಗಳಿಗೆ ಮಾತ್ರ ಇದರ ಅನುಕೂಲವಾಯಿತು. ಭೂ ಸಂಪತ್ತು ವರ್ಣದ ಶ್ರೇಣೀಕರಣ ವ್ಯವಸ್ಥೆಯ ಬೆಳವಣಿಗೆಗೆ ಅನುಕೂಲವಾಯಿತೇ ಹೊರತು ಯಾವುದೇ ಹೊಸ ಆಲೋಚನೆಗಳನ್ನು ಸೃಷ್ಟಿಸಲಿಲ್ಲ. ಆಗಿನ ಮುಸ್ಲಿಂ ಆಡಳಿತವು ಕೂಡ ಬ್ರಾಹ್ಮಣರ ಸ್ಥಾನಮಾನಕ್ಕೆ ಯಾವುದೇ ಧಕ್ಕೆಯನ್ನುಂಟು ಮಾಡಲಿಲ್ಲ. ಇದರಿಂದಾಗಿ ಅವರು ಶಿಕ್ಷಣ ಮತ್ತು ಆಧ್ಯಾತ್ಮಿಕತೆಯ ಮೇಲೆ ತಮ್ಮ ಪ್ರಾಬಲ್ಯವನ್ನು ಹಾಗೆ ಉಳಿಸಿಕೊಂಡಿದ್ದರು. ಅದರ ಜೊತೆಗೆ ಶೂದ್ರರ ಮನಸ್ಸಿನ ಮೇಲಿನ ಅವರ ಹಿಡಿತ ಕೂಡ ಹಾಗೆ ಉಳಿಯಿತು. 
ಈ ವೈದಿಕ ವ್ಯವಸ್ಥೆಗೆ ಮೊದಲ ಸವಾಲಾಗಿದ್ದು ಬ್ರಿಟಿಷರ ವಸಾಹತುಶಾಹಿ ಅವಧಿಯಲ್ಲಿನ ಕ್ರಿಶ್ಚಿಯನರ್ ಮಿಷನರಿ ಶಾಲೆಗಳು ಹಾಗೂ ಬ್ರಿಟಿಷರ ಉತ್ತರಾರ್ಧದಲ್ಲಿನ ಕಡ್ಡಾಯ ಸಾರ್ವತ್ರಿಕ ಶಿಕ್ಷಣದ ಕ್ರಮಗಳು ಎಂದು ಹೇಳಬಹುದು. ಆಗ ಶೂದ್ರರು ಇಂಗ್ಲಿಷ್ ಭಾಷೆಯ ಶಿಕ್ಷಣವನ್ನು ಸ್ವೀಕರಿಸುವ ಬದಲು, ಬ್ರಾಹ್ಮಣ ರಾಷ್ಟ್ರೀಯತಾವಾದಿ ಪ್ರಚಾರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಲಿ ಎನ್ನುವುದು ಅವರ ಉದ್ದೇಶವಾಗಿತ್ತು. ಈಗ ರಾಷ್ಟ್ರೀಯ ಐಕಾನ್ ಎಂದು ಪರಿಗಣಿಸಲ್ಪಟ್ಟಿರುವ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಬಾಲ್ ಗಂಗಾಧರ್ ತಿಲಕ್ ಇಂತಹ ಪ್ರಚಾರಕ್ಕೆ ಸಾಂಕೇತಿಕ ಪ್ರತಿನಿಧಿಯಾಗಿದ್ದರು. ನಂತರ ಶೂದ್ರ ಸಮುದಾಯಕ್ಕೆ ಸೇರಿದ ಮಹಾತ್ಮಾ ಜೋತಿರಾವ್ ಮತ್ತು ಸಾವಿತ್ರಿಬಾಯಿ ಫುಲೆ, ಇಬ್ಬರೂ ಮಹಾರಾಷ್ಟ್ರದಲ್ಲಿ ಮಹಿಳೆಯರು ಮತ್ತು ಶೋಷಿತರ ಶಿಕ್ಷಣದ ಚಳುವಳಿ ಹುಟ್ಟಿಗೆ ಕಾರಣಕರ್ತರಾದರು. ತಿಲಕ್ ರು ಈ ಬ್ರಾಹ್ಮಣರ ಟೀಕೆಗಳನ್ನು ಪ್ರತಿನಿಧಿಸುವ ಮೂಲಕ ಬ್ರಿಟಿಷರು ಸಾರ್ವತ್ರಿಕ ಶಿಕ್ಷಣಕ್ಕಾಗಿ ನೀಡಿದ ಎಲ್ಲಾ ಕರೆಗಳನ್ನು ವಿರೋಧಿಸಿದರು. ಅವರ ಭಾರತೀಯ ದೃಷ್ಟಿಕೋನದಲ್ಲಿ ಮಹಿಳೆಯರಿಗೆ ಮತ್ತು ತುಳಿತಕ್ಕೊಳಗಾದ ಜಾತಿಗಳಿಗೆ ಶಿಕ್ಷಣ ನೀಡುವುದು ಜಾತಿ ಶ್ರೇಣಿ ವ್ಯವಸ್ಥೆಗೆ ಅಪಾಯವನ್ನುಂಟು ಮಾಡುತ್ತದೆ ಎನ್ನುವುದು ಅವರ ವಾದವಾಗಿತ್ತು. ಮಿಷನರಿ ಶಾಲೆಗಳು ಭಾರತೀಯರ ಅಸ್ತಿತ್ವಕ್ಕೆ ಧಕ್ಕೆಯಾಗಲಿವೆ ಎಂದು ಬ್ರಾಹ್ಮಣ ರಾಷ್ಟ್ರೀಯವಾದಿಗಳು ಬಿಂಬಿಸುವ ಮೂಲಕ ಅವುಗಳ ವಿರುದ್ಧ ಪ್ರಚಾರ ಆಂದೋಲನವನ್ನು ಆರಂಭಿಸಿದರು. ಈ ಅವಧಿಯಲ್ಲಿ ಶೂದ್ರರು ಕೂಡ ಇಂತಹ ರಾಷ್ಟ್ರೀಯವಾದಿಗಳಿಗೆ ಬೆಂಬಲ ವ್ಯಕ್ತಪಡಿಸಿದರು. 
ಬಹುತೇಕ ಬ್ರಾಹ್ಮಣರು ಆರಂಭದಲ್ಲಿಯೇ ಇಂಗ್ಲಿಷ್ ಶಿಕ್ಷಣ ಪದ್ದತಿಯನ್ನು ಅಳವಡಿಸಿಕೊಂಡರು. ಬ್ರಿಟಿಷ್ ಕ್ರೈಸ್ತ ಮಿಷನರಿಯ ವಿಲಿಯಂ ಕೇರೆ, ಬೆಂಗಾಲಿ ಬ್ರಾಹ್ಮಣ ರಾಮ್ ಮೋಹನ್ ರಾಯ್ ಅವರು ಕೊಲ್ಕೊತ್ತಾದಲ್ಲಿ 19ನೇ ಶತಮಾನದ ಪೂರ್ವಾರ್ಧದಲ್ಲಿ ಇಂಗ್ಲಿಷ್ ಮಾಧ್ಯಮ ಶಾಲೆಯನ್ನು ಸ್ಥಾಪಿಸಿದರು. ಇದಾದ ನಂತರ ಭಾರತದ ಪಶ್ಚಿಮ ಭಾಗದಲ್ಲಿ ಬನಿಯಾಗಳು ಕೂಡ ಇಂಗ್ಲಿಷ್ ಶಾಲೆಗಳನ್ನು ಆರಂಭಿಸಿದರು. ಈ ಎರಡು ವರ್ಣದ ಜನರು ತಮ್ಮ ಮಕ್ಕಳನ್ನು ಹೆಚ್ಚಿನ ರೀತಿಯಲ್ಲಿ ಇಂಗ್ಲಿಷ್ ಶಾಲೆಗಳಿಗೆ ಕಳುಹಿಸಿದರು. ಆ ಮೂಲಕ ಆಗ ಆಂಗ್ಲೋಫೋನ್ ಇಂಡಿಯನ್ನರಿಗಾಗಿ ಬ್ರಿಟಿಷರು ತೆರೆದ ಆಡಳಿತ ಮತ್ತು ಕಾನೂನು ಸ್ಥಾನಗಳನ್ನು ಅವರು ತುಂಬಲು ಸಾಧ್ಯವಾಯಿತು. ಇದೇ ಪ್ರವೃತ್ತಿಯ ಹುಟ್ಟುವಳಿ ಮೂಲಕ ಜವಾಹರಲಾಲ್ ನೆಹರು, ರಾಮ್ ಮನೋಹರ್ ಲೋಹಿಯಾ ಮತ್ತು ಮಹಾತ್ಮಾ ಗಾಂಧಿ ಮುಖ್ಯ ಪರದೆಗೆ ಬಂದರು. 
ಬ್ರಿಟಿಷರು ಭಾರತವನ್ನು ತೊರೆದಾಗ ಸರಕಾರದಲ್ಲಿ ಬ್ರಾಹ್ಮಣರು ಅವರ ಸ್ಥಾನವನ್ನು ಅಲಂಕರಿಸಿದರು. ಆ ಮೂಲಕ ಅವರು ಅಧಿಕಾರಶಾಹಿ ಮತ್ತು ರಾಜಕೀಯ ಬಲದ ಜೊತೆಗೆ ಆಧ್ಯಾತ್ಮಿಕ ಮತ್ತು ಧಾರ್ಮಿಕ ಸಂಸ್ಥೆಗಳ ಮೇಲೆಯೂ ಸಂಪೂರ್ಣ ಹಿಡಿತವನ್ನು ಸಾಧಿಸಿದರು. ಮುಂದೆ ಭಾರತದ ಪ್ರಥಮ ಪ್ರಧಾನಿಯಾದ ಜವಾಹರ್ ಲಾಲ್ ನೆಹರು ಅವರ 17 ವರ್ಷಗಳ ಆಡಳಿತಾವಧಿಯು ಸ್ವತಂತ್ರ ಭಾರತದಲ್ಲಿನ ಶಿಕ್ಷಣ ವ್ಯವಸ್ಥೆಯ ರಚನೆಯನ್ನು ಬಲಪಡಿಸಿತು. ಬ್ರಾಹ್ಮಣರು, ಬನಿಯಾಗಳು ಹಾಗೂ ಇತರ ಮೇಲ್ವರ್ಗದವರು ಸೇರಿದಂತೆ ದುಬಾರಿ ಖಾಸಗಿ ಇಂಗ್ಲಿಷ್-ಮಾಧ್ಯಮ ಶಾಲೆಗಳಿಗೆ ಸೇರಿದರು. ಇನ್ನು ಉಳಿದವರೆಲ್ಲರನ್ನು ಪ್ರಾದೇಶಿಕ ಭಾಷಾ ಮಾಧ್ಯಮದಲ್ಲಿ ಕಲಿಸುವ ಸರ್ಕಾರಿ ಶಾಲೆಗಳಲ್ಲಿ ಸೇರಿಸಲಾಯಿತು. ಉನ್ನತ, ಸರ್ಕಾರಿ ಅನುದಾನಿತ ವಿಶ್ವವಿದ್ಯಾನಿಲಯಗಳು ಆಯ್ದ ಖಾಸಗಿ ಶಾಲೆಗಳ ಪದವೀಧರರಿಗೆ ಅರ್ಹತೆ ಆಧಾರದ ಮೇಲೆ ಆದ್ಯತೆ ನೀಡಿದವು. ಆ ಮೂಲಕ ಈಗಾಗಲೇ ಶ್ರೀಮಂತರು ಮತ್ತು ಪ್ರಬಲರಾಗಿವವರಿಗೆ ಸಬ್ಸಿಡಿ ರೂಪದಲ್ಲಿ ಉನ್ನತ ಶಿಕ್ಷಣ ಕಲ್ಪಿಸಲಾಯಿತು. 
ಮಂಡಲ್ ಸಮಿತಿ ಮೂಲಕ ಜಾರಿಗೆ ಬಂದಂತಹ ಮೀಸಲಾತಿಯಯಿಂದಾಗಿ, ಶೂದ್ರರಿಗೆ ಅಂತಿಮವಾಗಿ ವಿಶ್ವವಿದ್ಯಾನಿಲಯದಲ್ಲಿನ ಅರ್ಥಪೂರ್ಣ ಶಿಕ್ಷಣ ಹಾಗೂ ಅದರಾಚೆಗಿನ ಎರಡು ಪರಂಪರಾಗತ ನಿರ್ಬಂಧಗಳಿಂದ ಹೊರಬರುವುದಕ್ಕೆ ಅವಕಾಶ ದೊರೆಯಿತು. 
ಮೊದಲನೆಯದಾಗಿ ಶೂದ್ರರಿಗಿದ್ದ ಇಂಗ್ಲಿಷ್ ಭಾಷಾ ಪ್ರಾವಿಣ್ಯತೆಯ ಕೊರತೆ. ಬ್ರಾಹ್ಮಣ ಮತ್ತು ಬನಿಯಾಗಳಿಗೆ ಹೋಲಿಸಿದಲ್ಲಿ ಇಂದಿಗೂ ಕೂಡ ದಲಿತರು ಹಾಗೂ ಆದಿವಾಸಿಗಳ ಹಾಗೆ ಬಹುತೇಕ ಶೂದ್ರರು ತಮ್ಮ ಮಕ್ಕಳಿಗೆ ಸರ್ಕಾರಿ ಶಾಲೆಗಳಲ್ಲಿ ಪ್ರಾದೇಶಿಕ ಭಾಷಾ ಮಾಧ್ಯಮದಲ್ಲಿ ಶಿಕ್ಷಣ ನೀಡುತ್ತಾರೆ. ಇದರಿಂದಾಗಿ ಅವರು ಭಾಷಾ ಪರಿಣಿತಿಯಲ್ಲಿ ಸುಮಾರು ಎರಡು ಶತಮಾನಗಳ ಕಾಲ ಹಿಂದುಳಿದಿದ್ದಾರೆ. ಅವರಲ್ಲಿ ಬಹುತೇಕರು ಪ್ರಾದೇಶಿಕ ಭಾಷಾ ರಾಷ್ಟ್ರೀಯತೆ ತಮ್ಮ ಸ್ವತ್ತು ಎಂದು ಬಿಂಬಿಸಲಾಗಿರುವ ಬ್ರಾಹ್ಮಣ ಪ್ರಚಾರದಿಂದ ಸ್ಪೂರ್ತಿಗೊಂಡಿದ್ದಾರೆ. ಆದರೆ ನಿಜ ಹೇಳಬೇಕೆಂದರೆ ವಾಸ್ತವ ಸಂಗತಿ ಅದಲ್ಲ, ಶೂದ್ರರು ದೇಶದ ಎಲ್ಲ ಸರ್ಕಾರಿ ಶಾಲೆಗಳಲ್ಲಿ ಎಂದಿಗೂ ಇಂಗ್ಲಿಷ್ ಭಾಷೆಯ ಶಿಕ್ಷಣದ ಬೇಡಿಕೆಯನ್ನು ಎತ್ತಲಿಲ್ಲ. ದೇಶದ ಉನ್ನತ ಸಾರ್ವಜನಿಕ ಮತ್ತು ಖಾಸಗಿ ವಿಶ್ವವಿದ್ಯಾಲಯಗಳು ಇಂಗ್ಲಿಷ್‌ ಮಾಧ್ಯಮದಲ್ಲಿ ಕಾರ್ಯನಿರ್ವಹಿಸುತ್ತವೆ. ಆದರೆ ಹೆಚ್ಚಿನ ಶೂದ್ರ ವಿದ್ಯಾರ್ಥಿಗಳು ಈ ಸಂಸ್ಥೆಗಳಿಗೆ ಬರುವ ಹೊತ್ತಿಗೆ ಭಾಷೆ ಕೌಶಲ್ಯವನ್ನು ಸುಧಾರಿಸಲು ವಿಳಂಬವಾಗುತ್ತದೆ. 
ಇದು ಅವರ ಕಾರ್ಯಕ್ಷಮತೆ ಮತ್ತು ಅವರ ಸ್ನಾತಕೋತ್ತರ ಭವಿಷ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಅಷ್ಟೇ ಅಲ್ಲದೆ ಕೇವಲ ಪ್ರಾದೇಶಿಕ ಭಾಷೆಯಲ್ಲಿ ಪರಿಣಿತಿ ಹೊಂದಿರುವುದು ಪ್ರಾದೇಶಿಕವಾಗಿರುವ ಅವಕಾಶ ಮತ್ತು ಸಂವಾದದ ವಿಷಯಗಳಲ್ಲಿ ಅವರನ್ನು ನಿರ್ಬಂಧಿಸುತ್ತದೆ. ಒಳ್ಳೆಯದ್ದೋ ಅಥವಾ ಕೆಟ್ಟದ್ದೋ, ಆದರೆ ಭಾರತೀಯ ಉದ್ಯಮ, ಅಧಿಕಾರಶಾಹಿ, ರಾಜತಾಂತ್ರಿಕತೆ, ಮಾಧ್ಯಮ, ಶಿಕ್ಷಣ ಮತ್ತು ಹೆಚ್ಚಿನ ಕಾರ್ಯಗಳು ಪ್ರಾಥಮಿಕವಾಗಿ ಇಂಗ್ಲಿಷ್‌ನಲ್ಲಿ ಕಾರ್ಯನಿರ್ವಹಿಸುತ್ತವೆ. ಬಹುತೇಕ ಜಾಗತಿಕ ಸಂಸ್ಥೆಗಳು ಕೂಡ ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತವೆ. ಇಂತಹ ಜಗತ್ತಿನಲ್ಲಿ ದಲಿತರು ಮತ್ತು ಆದಿವಾಸಿಗಳಷ್ಟೇ ಅಲ್ಲ ಶೂದ್ರರಿಗೂ ಕೂಡ ಯಾವುದೇ ಸ್ಥಳಾವಕಾಶವಿಲ್ಲ. ಇಂಗ್ಲಿಷ್-ಮಾತನಾಡುವ ಜಗತ್ತಿನಲ್ಲಿ ಅವರು ಇನ್ನೂ ಅನಕ್ಷರಸ್ಥರಾಗಿದ್ದಾರೆ. ಇನ್ನೊಂದೆಡೆಗೆ ಅಲ್ಲಿ ಬ್ರಾಹ್ಮಣರು ಮತ್ತು ಬನಿಯಾಗಳು ಪಾಶ್ಚಿಮಾತ್ಯ ದೇಶಗಳಲ್ಲಿನ ಗಣ್ಯ ವ್ಯಕ್ತಿಗಳಿಗೆ ಸಮನಾಂತರವಾಗಿ ಕಾರ್ಯನಿರ್ವಹಿಸುತ್ತಾರೆ. 
ಎರಡನೇ ಪರಂಪರೆ ತತ್ವಚಿಂತನೆ ಬಗ್ಗೆ ಸಂಪೂರ್ಣ ಆಸಕ್ತಿ ಇಲ್ಲದಿರುವುದು. ಈ ವಿಚಾರದಲ್ಲಿ ಅವರು ಭಯಭೀತರಾಗಿರುವುದೇ ಇದಕ್ಕೆ ಕಾರಣವೆನ್ನಬಹುದು. ನನ್ನ ಪ್ರಾಧ್ಯಾಪಕ ವೃತ್ತಿ ಅನುಭವದ ಮೂಲಕ ಇದನ್ನು ಹೇಳುವುದಾದಲ್ಲಿ ಶೂದ್ರ ವಿದ್ಯಾರ್ಥಿಗಳ ಅತ್ಯುನ್ನತ ಮಹತ್ವಾಕಾಂಕ್ಷೆಗಳೆಂದರೆ ಅದು ಡಾಕ್ಟರ್ ಗಳು, ಇಂಜನೀಯರ್ ಗಳು, ಅಧಿಕಾರಿಶಾಹಿಗಳು ಮತ್ತು ಹೆಚ್ಚಾಗಿ ರಾಜಕಾರಣಿಗಳಾಗುವುದು. ಆದರೆ ಅವರೆಂದಿಗೂ ಕೂಡ ಸಾಮಾಜಿಕ ಮತ್ತು ರಾಷ್ಟ್ರೀಯ ಚಿಂತನೆಗಳಲ್ಲಿ ಪ್ರಭಾವ ಬೀರುವ ಚಿಂತಕರಾಗುವುದನ್ನು ಮತ್ತು ಲೇಖಕರಾಗುವುದನ್ನು ಬಯಸುವುದಿಲ್ಲ. ಇದರ ವ್ಯಾಪ್ತಿ ಶೂದ್ರ ವಿದ್ಯಾರ್ಥಿಗಳನ್ನೂ ಮೀರಿ ವಿಸ್ತರಿಸಿದೆ. ನಾನು ಹೈದರಾಬಾದ್ ನಲ್ಲಿನ ಒಸ್ಮಾನಿಯಾ ವಿವಿಯಲ್ಲಿ ಪ್ರಾಧ್ಯಾಪಕನಾಗಿದ್ದಾಗ ಅಲ್ಲಿರುವ ಬಹುತೇಕ ಬೋಧಕ ವರ್ಗ ಶೂದ್ರ ಸಮುದಾಯಕ್ಕೆ ಸೇರಿದವರಾಗಿದ್ದ ನನ್ನ ಸಹೋದ್ಯೋಗಿಗಳಲ್ಲಿ ತಾತ್ವಿಕ ವಿಷಯಗಳಲ್ಲಿ ಗಂಭೀರ ಆಸಕ್ತಿ ಇದ್ದಿದ್ದೇ ಕಡಿಮೆ. ಅದಕ್ಕಿಂತ ಹೆಚ್ಚಾಗಿ ಅವರ ಕಾಳಜಿ ಸ್ಥಳೀಯ ಮಟ್ಟದಲ್ಲಿನ ಅಧಿಕಾರ, ರಾಜಕೀಯ ಮತ್ತು ಹಣಕ್ಕೆ ವಿಸ್ತರಿಸಿತ್ತು. ಆದರೆ ಅವರೆಂದಿಗೂ ಕೂಡ ಶಾಶ್ವತ ಜ್ಞಾನದ ಛಾಪನ್ನು ಮೂಡಿಸಲು ಯತ್ನಿಸಲಿಲ್ಲ. ಏಕೆಂದರೆ ಇದಕ್ಕೆ ಸಾವಿರಾರು ವರ್ಷಗಳಿಂದ ಹಾಗೆ ಉಳಿದುಕೊಂಡು ಬಂದಿರುವ ಬ್ರಾಹ್ಮಣ ಭೀತಿಯೇ ಪ್ರಮುಖ ಕಾರಣ ಎನ್ನಬಹುದು. 
ಇದೇ ಕಾರ್ಯವಿಧಾನ ಶೂದ್ರರ ಇಂಗ್ಲಿಷ್ ಭಾಷಾ ಕಲಿಕೆ ಮೇಲೂ ಪ್ರಭಾವ ಬೀರುತ್ತದೆ. ಹಲವಾರು ತಲೆಮಾರುಗಳ ಕಾಲ ಅವರಿಗೆ ಪಂಡಿತರ ಭಾಷೆಯಾದ ಸಂಸ್ಕೃತದ ಕಲಿಕೆ ಬಗ್ಗೆ ಭಯವನ್ನು ಹುಟ್ಟಿಸಲಾಯಿತು. ಈಗ ಬ್ರಾಹ್ಮಣರು ಇಂಗ್ಲಿಷ್ ಭಾಷೆಯನ್ನು ಕರಗತ ಮಾಡಿಕೊಳ್ಳುವ ಮೂಲಕ ಶೂದ್ರರ ಮನಸ್ಸಿನಲ್ಲಿ ಅದು ಪಂಡಿತರ ಭಾಷೆ ಎನ್ನುವ ಮಟ್ಟಿಗೆ ಬೇರೂರಿದೆ. ಇಂಗ್ಲಿಷ್ ನ್ನು ಪರಕೀಯ ಭಾಷೆ ಎಂದು ಪರಿಗಣಿಸುವ ಮೂಲಕ ಕೃಷಿಕ ಸಮುದಾಯ ಅದನ್ನು ಕಲಿಯಲು ಸಾಧ್ಯವಿಲ್ಲ ಎಂದು ಬಿಂಬಿಸಲಾಗಿದೆ. ಇದಕ್ಕಾಗಿಯೇ ತಮ್ಮ ಮಕ್ಕಳನ್ನು ಖಾಸಗಿ ಇಂಗ್ಲಿಷ್ ಶಾಲೆಗಳಿಗೆ ಸೇರಿಸಲು ಶಕ್ತರಾಗಿರುವ ಶ್ರೀಮಂತ ಶೂದ್ರರು ಕೂಡ ಸಾಮಾನ್ಯವಾಗಿ ಹಿಂಜರಿಯುತ್ತಾರೆ. 
ಏತನ್ಮದ್ದೇ ಬ್ರಾಹ್ಮಣ-ಬನಿಯಾ ಜಾತಿಗಳು ಈ ಹಿಂದೆ ಸಂಸ್ಕೃತಕ್ಕೆ ಇದ್ದಂತೆ, ಇಂದು ಇಂಗ್ಲಿಷ್ ವಿಚಾರದಲ್ಲಿ ಅಸೂಹೆಯನ್ನು ಹೊಂದಿವೆ. ಒಂದು ಕಾಲದಲ್ಲಿ ಶ್ರೇಷ್ಠ ಇಂಗ್ಲಿಷ್ ಶಾಲೆಗಳು ಮತ್ತು ವಿಶ್ವವಿದ್ಯಾನಿಲಯಗಳು ಕೇವಲ ಕ್ರಿಶ್ಚಿಯನ್ ಶಿಕ್ಷಣ ಸಂಸ್ಥೆಗಳಿಗೆ ಮೀಸಲಾಗಿದ್ದವು. ಆದರೆ ಕಾಲಾಂತರದಲ್ಲಿ ಬ್ರಾಹ್ಮಣರು ಮತ್ತು ಬನಿಯಾಗಳು ನಿಯಂತ್ರಿಸುವ ಖಾಸಗಿ ಉದ್ಯಮಗಳಾಗಿದ್ದರಿಂದಾಗಿ ಮಂಡಲ್ ಆಯೋಗದ ಮೂಲಕ ಬಂದಂತಹ ಮೀಸಲಾತಿಯನ್ನು ಜಾರಿಗೆ ತರಲು ಪ್ರತಿರೋಧ ವ್ಯಕ್ತಪಡಿಸುತ್ತವೆ. ಉದಾಹರಣೆಗೆ, ದೆಹಲಿಯ ಪ್ರತಿಷ್ಠಿತ ಸೇಂಟ್ ಸ್ಟೀಫನ್ಸ್ ಕಾಲೇಜಿನಲ್ಲಿ ಒಬಿಸಿ ವಿದ್ಯಾರ್ಥಿಗಳಿಗೆ ಸೀಟುಗಳ ಮೀಸಲಾತಿ ಇಲ್ಲದಿರುವುದನ್ನು ನಾವು ಕಾಣಬಹುದು. ಇಲ್ಲಿನ ಹಳೆಯ ವಿದ್ಯಾರ್ಥಿಗಳ ಪಟ್ಟಿಯಲ್ಲಿ ಪ್ರಮುಖವಾಗಿ ಬ್ರಾಹ್ಮಣ-ಬನಿಯಾ ಬುದ್ಧಿಜೀವಿಗಳೇ ಅಧಿಕವಾಗಿದ್ದಾರೆ. ಆದರೆ ಈ ಸಂಸ್ಥೆ ಎಂದಿಗೂ ಕೂಡ ಭಾರತೀಯ ಸಮಾಜದ ಮೇಲಿನ ಬ್ರಾಹ್ಮಣ ಮತ್ತು ಬನಿಯಾ ಹಿಡಿತಕ್ಕೆ ಸವಾಲಾಗುವ ದಲಿತ ಅಥವಾ ಶೂದ್ರ ಬುದ್ಧಿಜೀವಿಗಳನ್ನು ಸೃಷ್ಟಿಸಲಿಲ್ಲ. 
ಇದರಿಂದ ಆಧುನಿಕ ವಾಖ್ಯಾನದಲ್ಲಿ ಬರೆಯಬಲ್ಲ ಹಾಗೂ ಮಾತನಾಡಬಲ್ಲ ರಾಷ್ಟ್ರೀಯ ಪಾಶ್ಚಿಮಾತ್ಯ ವಿದ್ವತ್ ಸ್ಥಾನಮಾನವನ್ನು ಹೊಂದಿದ್ದ ಡಾ.ಬಿ.ಆರ್.ಅಂಬೇಡ್ಕರ್‌ ಅವರಿಗೆ ಸಮನಾದ ಒಬ್ಬ ನಾಯಕನನ್ನು ಸೃಷ್ಟಿಸಲು ಈ ಬೃಹತ್ ಶೂದ್ರ ಸಮುದಾಯಕ್ಕೆ ಸಾಧ್ಯವಾಗಲಿಲ್ಲವೇಕೆ ? ಎಂಬುದನ್ನು ವಿವರಿಸುತ್ತದೆ. ಪ್ರಗತಿಪರ ಭಾರತೀಯರಲ್ಲಿಯು ಕೂಡ ಶೂದ್ರ ಶೋಷಣೆ ಸಂಗತಿ ಇನ್ನೂ ರಾಷ್ಟ್ರೀಯ ಚರ್ಚೆಯ ಭಾಗವಾಗಿಲ್ಲ ಎನ್ನುವುದನ್ನು ಈ ಅನುಪಸ್ಥಿತಿ ತೋರಿಸುತ್ತದೆ. ಅಂಬೇಡ್ಕರ್ ಅವರ ತಂದೆಯಂತೆ, ಅನೇಕ ಶೂದ್ರರು ಸಹ ಬ್ರಿಟಿಷ್ ಸೈನ್ಯದಲ್ಲಿದ್ದರು ಮತ್ತು ಅಂಬೇಡ್ಕರ್ ಅವರು ಕಲಿತಿದ್ದಂತಹ ಬ್ರಿಟಿಷ್ ಶಾಲೆಗಳಲ್ಲಿಯೇ ತಮ್ಮ ಮಕ್ಕಳಿಗೆ ಶಿಕ್ಷಣ ನೀಡಬಹುದಿತ್ತು. ಕೆಲವರು ಆ ಕೆಲಸವನ್ನು ಮಾಡಿದರೂ ಕೂಡ ಅಂಬೇಡ್ಕರ್ ಅವರ ಕುಟುಂಬವು ಜಾತಿ ಕಟ್ಟಳೆಗಳನ್ನು ಮೀರುವ ಧೈರ್ಯ ತೋರಿಸಿರುವ ನಡೆ ನಿಜಕ್ಕೂ ನನ್ನ ಗ್ರಹಿಕೆಯನ್ನು ಮೀರಿದ್ದಾಗಿದೆ. ಆದರೆ ಇಂತಹ ಪ್ರಯತ್ನ ಮಾಡುವಲ್ಲಿ ಶೂದ್ರ ಕುಟುಂಬಗಳು ವಿಫಲವಾಗಿವೆ ಎಂದೇ ಹೇಳಬಹುದು. ಈ ಶೂದ್ರ ಕೀಳರಿಮೆ ಸಂಕೀರ್ಣಗಳ ಆಳವಾದ ಬೇರುಗಳು ಆಧ್ಯಾತ್ಮಿಕದಲ್ಲಡಗಿವೆ. ಜ್ಞಾನದ ಉನ್ನತ ಸ್ಥರದಲ್ಲಿ ತಮಗೆ ಯಾವುದೇ ಸ್ಥಾನವಿಲ್ಲ ಎನ್ನುವ ವಿಚಾರವನ್ನು ಅವರು ತಮ್ಮಲ್ಲಿ ಅಂತರ್ಗತಗೊಳಿಸಿದ್ದಾರೆ. ಇಂತಹ ವಿಚಾರದ ಹಿಂದೆ ಅಸಮಾನತೆಯ ತತ್ವವೂ ಕೂಡ ಅಡಕವಾಗಿದೆ. ಇದು ಸಂಪೂರ್ಣವಾಗಿ ಬ್ರಾಹ್ಮಣ-ನಿಯಂತ್ರಿತ ಆಧ್ಯಾತ್ಮಿಕ ವ್ಯವಸ್ಥೆಯಿಂದ ಸೃಷ್ಟಿಯಾಗಿದೆ. ಇದು ದೇವರ ದೃಷ್ಟಿಯಲ್ಲಿಯೂ ಪ್ರಬಲ ಜಾತಿಗಳ ಹಾಗೆ ಶೂದ್ರರು ಒಂದೇ ತೆರನಾದ ಹಕ್ಕುಗಳನ್ನು ಹೊಂದಿಲ್ಲ ಎನ್ನುವ ಸಂಗತಿಯನ್ನು ಮನವರಿಕೆ ಮಾಡುವಲ್ಲಿ ಯಶಸ್ವಿಯಾಗಿದೆ. ಬ್ರಾಹ್ಮಣರ ಈ ಪರಿಕಲ್ಪನೆಯನ್ನು ಜಾರಿಗೊಳಿಸಲು ಇರುವಂತಹ ಪ್ರಬಲ ಅಸ್ತ್ರವೆಂದರೆ ಅದು ಪೌರೋಹಿತ್ಯ ಎನ್ನಬಹುದು. ಈ ಹಿನ್ನಲೆಯಲ್ಲಿ ಅವರು ತಮ್ಮ ಸ್ಥಾನದ ಮೇಲಿನ ಹಿಡಿತವನ್ನು ಇತರಿಗಿಂತ ಶಕ್ತವಾಗಿ ಸಾಧಿಸಿದ್ದಾರೆ. ಅದು ಪ್ರಸಿದ್ಧ ತಿರುಪತಿ ದೇವಸ್ಥಾನವಾಗಿರಲಿ, ಪುರಿಯಾಗಿರಲಿ ಅಥವಾ ಇತರ ಇನ್ನ್ಯಾವುದೇ ಕೆಳದರ್ಜೆಯ ಹಿಂದೂ ಸ್ಥಳಗಳಾಗಿರಲಿ ಅಲ್ಲಿ ಶೂದ್ರನು ಪುರೋಹಿತನಾಗಿರುವುದು ಕಂಡುಬರುವುದಿಲ್ಲ. ಧಾರ್ಮಿಕ ವಿಚಾರಗಳಲ್ಲಿ ತತ್ವ ಚಿಂತನೆಯ ಮೂಲವನ್ನು ಒಳಗೊಂಡಿದೆ. ಆದರೆ ಶೂದ್ರರಿಗೆ ಪೌರೋಹಿತ್ಯ ಆಕಾಂಕ್ಷೆಯನ್ನು ನಿರಾಕರಿಸಿರುವ ಹಿನ್ನಲೆಯಲ್ಲಿ ತತ್ವಶಾಸ್ತ್ರ ಮತ್ತು ಬೌದ್ಧಿಕ ಪ್ರಗತಿಯಲ್ಲಿನ ವಿಷಯಗಳಲ್ಲಿಯೂ ಅವರನ್ನು ಆಸಕ್ತಿ ರಹಿತರನ್ನಾಗಿ ಮಾಡಿದೆ. 
ಇದರಿಂದ ಹೊರಬರದ ಹೊರತು ಶೂದ್ರರು ಧೈರ್ಯವಾಗಿ ಸ್ವತಂತ್ರವಾಗಿ ಚಿಂತನೆ ನಡೆಸಲು ಸಾಧ್ಯವಿಲ್ಲ. ಅಷ್ಟೇ ಅಲ್ಲ ಅವರು ನಿರಂತರವಾಗಿ ಬ್ರಾಹ್ಮಣ ಆಧ್ಯಾತ್ಮಿಕ, ಸಾಮಾಜಿಕ ಮತ್ತು ರಾಜಕೀಯ ತತ್ವಜ್ಞಾನದ ಅಧೀನದಲ್ಲಿಯೇ ಉಳಿಯಲ್ಪಡುತ್ತಾರೆ. ಕಳೆದ ವರ್ಷ ಮೊದಲ ಬಾರಿಗೆ ಕೇರಳದ ಧಾರ್ಮಿಕ ಮಂಡಳಿಯು ದೇವಾಲಯದ ಅರ್ಚಕರಿಗೆ ಆಯ್ಕೆ ಪ್ರಕ್ರಿಯೆಯಲ್ಲಿ ಸರ್ಕಾರಿ ನೇಮಕಾತಿಗೆ ಅನ್ವಯವಾಗುವ ಸರ್ಕಾರದ ಮೀಸಲಾತಿ ನಿಯಮಗಳನ್ನು ಅನುಸರಿಸಿತು. ಧಾರ್ಮಿಕ ಮಂಡಳಿ ನೇಮಿಸಿದ 62 ಪುರೋಹಿತರಲ್ಲಿ 30 ಮಂದಿ ಶೂದ್ರರು ಮತ್ತು ಆರು ಮಂದಿ ದಲಿತರಿದ್ದರು. ಈ ಕ್ರಮ ಒಂದರ್ಥದಲ್ಲಿ ಬ್ರಾಹ್ಮಣ ಯಜಮಾನಿಕೆಗೆ ಸೂಕ್ತವಾದ ತಿದ್ದುಪಡಿ ಎಂದು ಹೇಳಬಹುದು.ಆದರೆ ವಾಸ್ತವ ಸಂಗತಿ ಏನೆಂದರೆ ಇಂತಹ ಕ್ರಮಗಳನ್ನು ದೇಶದ ಬಹುತೇಕ ಭಾಗಗಳಲ್ಲಿ ಊಹಿಸಲು ಅಸಾಧ್ಯವಾಗಿದೆ. 
ಇಂಗ್ಲಿಷ್ ನಲ್ಲಿನ ಕೌಶಲ್ಯದ ಕೊರತೆ ಹಾಗೂ ತಾತ್ವಿಕ ಮತ್ತು ಬೌದ್ಧಿಕ ವಿಚಾರಗಳಲ್ಲಿನ ನಿರಾಸಕ್ತಿಯಿಂದ ಹೊರಬರುವ ವಿಚಾರದಲ್ಲಿ ಶೂದ್ರರು ಎಂದಿಗೂ ಕೂಡ ಗಂಭೀರವಾಗಿಲ್ಲ. ರಾಷ್ಟ್ರ ರಾಜಕಾರಣ ಮತ್ತು ಸಂವಾದದಿಂದ ನಿರಂತರವಾಗಿರುವ ತಮ್ಮ ಹೊರಗೊಳ್ಳುವಿಕೆಗೆ ಅಂತ್ಯಹಾಡುವ ಬುದ್ದಿ ಜೀವಿಗಳನ್ನು ಸೃಷ್ಟಿಸಬೇಕೆಂದರೆ ಇದೆಲ್ಲವೂ ಕೂಡ ಬದಲಾಗಬೇಕು. ಆದರೆ ತಮ್ಮ ಸಮುದಾಯದ ತಳಮಳಗಳನ್ನು ನಿವಾರಿಸಲು ಸಿದ್ಧಗೊಂಡಿರುವ ಶೂದ್ರ ಚಿಂತಕರಿಗೆ ಮುಕ್ತವಾಗಿರುವ ಮಾರ್ಗಗಳು ಯಾವವು? ಎನ್ನುವ ಪ್ರಶ್ನೆ ಮಾತ್ರ ಹಾಗೆ ಉಳಿಯುತ್ತದೆ. 
ಮೊದಲಿಗೆ ಅವರು ಮೂಲಭೂತ ಆಯ್ಕೆಗಳನ್ನು ಮಾಡಿಕೊಳ್ಳುವುದು ಅಗತ್ಯವಾಗಿದೆ. ಅದರಲ್ಲಿ ಒಂದು ಹಿಂದೂ ಧರ್ಮ ಮತ್ತು ಅದನ್ನು ಉತ್ತೇಜಿಸುವ ರಾಜಕೀಯಕ್ಕೆ ತಮ್ಮ ನಿಷ್ಠೆಯನ್ನು ಮುಂದುವರೆಸುವುದು ಅಥವಾ ಹಿಂದೂ ಹಿಡಿತದಿಂದ ಹೊರಬರುವುದು. ಈ ಆಯ್ಕೆಗಳನ್ನು ಅರ್ಥೈಸಿಕೊಳ್ಳಲು ಮರಾಠರ ಮತ್ತು ಸಿಖ್ಖ ಸಮುದಾಯದ ಪಥಗಳ ಹೋಲಿಕೆ ಈ ಸಂದರ್ಭದಲ್ಲಿ ಸೂಕ್ತವೆನಿಸುತ್ತದೆ. 
ಮೂಲತಃ ಶೂದ್ರರಾಗಿದ್ದ ಮರಾಠರು ನಂತರ ನವ-ಕ್ಷತ್ರೀಯ ಮಾರ್ಗವನ್ನು ಹಿಡಿದರು. ತಮ್ಮ ಕೀಳು ಸ್ಥಾನಕ್ಕೆ ಪ್ರತಿಯಾಗಿ ಅವರು 17ನೇ ಶತಮಾನದ ಮರಾಠಾ ದೊರೆ ಛತ್ರಪತಿ ಶಿವಾಜಿ ಕೇಂದ್ರಿಕೃತ ಪ್ರಖರ ಜಾತೀಯತೆಗೆ (caste chauvinism) ಮಾರು ಹೋದರು. ಆಗ ಇತರ ಮೇಲ್ವರ್ಗದ ಶೂದ್ರ ಜಾತಿಗಳಿಗೂ ಒಂದು ಹಂತದಲ್ಲಿ ಪ್ರತಿಯೊಬ್ಬರು ಮಹಾನ್ ಆಡಳಿತಗಾರರನ್ನು ಸೃಷ್ಟಿಸಿದ್ದಾರೆ ಎನ್ನುವ ವಿಚಾರ ಮನವರಿಕೆಯಾಯಿತು. ಆಗ ಮರಾಠಾ ಚಿಂತಕರ ಅನುಪಸ್ಥಿತಿ ಹಿನ್ನಲೆಯಲ್ಲಿ, ಶಿವಾಜಿಯ ಜನಪ್ರಿಯ ಚಿತ್ರಣವನ್ನು ಬ್ರಾಹ್ಮಣರು ತಮ್ಮ ಅಗತ್ಯಗಳಿಗೆ ತಕ್ಕಂತೆ ಬಿಂಬಿಸಿದರು. ಈ ಚಿತ್ರಣವು ಶಿವಾಜಿಯನ್ನು ಕೇವಲ ಸೇನಾನಿ ಎಂದು ಬಿಂಬಿಸುವ ಮೂಲಕ ಅವನ ಧೈರ್ಯಕ್ಕೆ ಹೆಚ್ಚಿನ ಒತ್ತು ನೀಡಲಾಯಿತೇ ಹೊರತು ಉತ್ತಮ ರಾಜಕಾರಣಿಯಾಗಿದ್ದ ಅವನ ಚಾಣಾಕ್ಷತನವನ್ನಲ್ಲ. ಈ ಹಿನ್ನಲೆಯಲ್ಲಿ ಶಿವಾಜಿ ಕುರಿತಾದ ಮರಾಠ ಪ್ರತಿಪಾದನೆಯು ಆತನ ಬುದ್ದಿವಂತಿಕೆಗಿಂತ ಹೆಚ್ಚಾಗಿ ಶೌರ್ಯಕ್ಕೆ ಹೆಚ್ಚಿನ ಮಹತ್ವವನ್ನು ನೀಡುತ್ತದೆ. ಇದು ಅವನ ಜಾತಿ ವಿರೋಧಿ ಸುಧಾರಣೆಗಳು ಮತ್ತು ಅವನಿಗಿದ್ದ ಬ್ರಾಹ್ಮಣ ವಿರೋಧವನ್ನು ತೋರಿಸುವುದಿಲ್ಲ. ಇದು ಮೊಘಲರು ಮತ್ತು ಯುರೋಪಿಯನ್ ವಸಾಹತುಶಾಹಿಗಳೊಂದಿಗಿನ ಅವರ ಯುದ್ಧಗಳನ್ನು ಮಾತ್ರ ಎತ್ತಿ ತೋರಿಸುತ್ತದೆ ಹೊರತು ಅವನ ಅಧಿಕಾರಾವಧಿಯಲ್ಲಿನ ಮುಸ್ಲಿಂ ಜನರಲ್‌ಗಳ ನೇಮಕವಲ್ಲ. ಆದ್ದರಿಂದ ಮರಾಠರು ಈ ಹಿನ್ನಲೆಯಲ್ಲಿ ಶಿವಾಜಿಯನ್ನು ಹಿಂದೂ ರಾಷ್ಟ್ರೀಯತೆಯ ಪ್ರತೀಕವೆಂದು ಹೆಮ್ಮೆಪಡುತ್ತಾರೆ. 
ಇಂದು ಮರಾಠರು ಹಿಂದೂ ಧರ್ಮ ಮತ್ತು ಹಿಂದುತ್ವದ ಕಟ್ಟಾಳುಗಳಾಗಿದ್ದಾರೆ ಮತ್ತು ಬ್ರಾಹ್ಮಣ ಪ್ರಾಬಲ್ಯವನ್ನು ಹೊಂದಿರುವ ಬಿಜೆಪಿ ಮಹಾರಾಷ್ಟ್ರವನ್ನು ಆಳುತ್ತಿದೆ ಮತ್ತು ಮುಂಬೈನ ಬನಿಯಾಗಳು ರಾಜ್ಯದ ಆರ್ಥಿಕ ರಾಜಧಾನಿಯನ್ನು ನಿಯಂತ್ರಿಸುತ್ತಿದ್ದಾರೆ. ಆಧ್ಯಾತ್ಮಿಕವಾಗಿ ಅವರು ಮಹಾರಾಷ್ಟ್ರ ಬ್ರಾಹ್ಮಣರನ್ನು ಅನುಸರಿಸುತ್ತಾರೆ. ಏಕೆಂದರೆ ಅವರಿಗೆ ಸ್ವತಃ ಪುರೋಹಿತರಾಗುವ ಯಾವುದೇ ಆಲೋಚನೆಯಿಲ್ಲ. ಅವರು ಒಬಿಸಿ ಸ್ಥಾನಮಾನಕ್ಕಾಗಿ ಒತ್ತಾಯಿಸುತ್ತಿದ್ದಾರೆ, ಆದರೆ ಅವರು ಇತರ ಶೂದ್ರರಿಗಿಂತ ಶ್ರೇಷ್ಠರು ಎಂಬುದು ಅವರಿಗೆ ಮನವರಿಕೆಯಾಗಿದ್ದರಿಂದಾಗಿ ಅದು ಒಬಿಸಿ ಪಟ್ಟಿಗೆ ಸೇರ್ಪಡೆಗೊಳ್ಳುವ ಸಾಧ್ಯತೆಗಳನ್ನು ಕ್ಷೀಣಿಸಿತು. ಇನ್ನು ಅನೇಕ ಒಬಿಸಿಯೇತರ ಶೂದ್ರರಲ್ಲೂ ಇದೇ ತಂತ್ರಗಳನ್ನೇ ಬಳಸಿರುವುದನ್ನು ನಾವು ಕಾಣಬಹುದು. 
ಮಹಾರಾಷ್ಟ್ರದಿಂದ ಹೊರಹೊಮ್ಮಿದ ಏಕೈಕ ಶೂದ್ರ ಚಿಂತಕರೆಂದರೆ ಮಹಾತ್ಮ ಜೋತಿರಾವ್ ಫುಲೆ. ಇವರು ಮಾಲಿ ಜಾತಿ ಸಮುದಾಯದಲ್ಲಿ ಜನಿಸಿದರು. ಆದರೆ ಅವರಿಗೆ ಅಖಿಲ ಭಾರತದ ಸ್ಥಾನಮಾನವನ್ನು ತಂದ ಕೀರ್ತಿ ಪಂಜಾಬಿನ ದಲಿತ ನಾಯಕ ಕಾನ್ಶಿ ರಾಮ್ ಸಲ್ಲಬೇಕು ಹೊರತು ಮರಾಠರಿಗಲ್ಲ. ಫುಲೆ ಅವರು ಹಿಂದೂ ಸಾಮಾಜಿಕ ಮತ್ತು ಆಧ್ಯಾತ್ಮಿಕ ವ್ಯವಸ್ಥೆಯನ್ನು ಕಟುವಾಗಿ ಟೀಕಿಸಿದ್ದರಿಂದ ಮರಾಠರು ಅವರನ್ನು ಹೆಮ್ಮೆಯಿಂದ ಸ್ಮರಿಸುವುದಿಲ್ಲ ಮತ್ತು ಅವರ ಪರಂಪರೆಗೆ ಬ್ರಾಹ್ಮಣರು ಮತ್ತು ಹಿಂದೂ ರಾಷ್ಟ್ರೀಯವಾದಿಗಳು ಅಡ್ಡಿಯಾದರು. ಶಿವಾಜಿಯನ್ನು ಜಾತಿ ನಿರ್ಮೂಲನೆಯ ಸುಧಾರಕ ಎಂದು ಫುಲೆ ಬರೆದಿರುವುದನ್ನು ಮರಾಠರು ಮರೆತಿದ್ದಾರೆ. 2015 ರಲ್ಲಿ ಹತ್ಯೆಯಾದ ಮರಾಠಾ ವಿಚಾರವಾದಿ ಗೋವಿಂದ್ ಪನ್ಸಾರೆ ಶಿವಾಜಿಯನ್ನು ಸಾಮಾಜಿಕ ಸುಧಾರಕ ಎಂದು ಕರೆದಿದ್ದಾರೆ. 
ಬ್ರಾಹ್ಮಣ ಮತ್ತು ಬನಿಯಾ ಹಿಡಿತದಿಂದ ಯಶಸ್ವಿಯಾಗಿ ಪಾರಾದ ಶೂದ್ರರ ಏಕೈಕ ಪ್ರಮುಖ ಗುಂಪು ಎಂದರೆ ಅದು ಸಿಖ್ಖ್ ಸಮುದಾಯ. ಇದನ್ನು ಮಾಡಲು ಅವರು ಹಿಂದೂ ಧರ್ಮದಿಂದ ಸಂಪೂರ್ಣವಾಗಿ ದೂರವಿದ್ದಿದ್ದಷ್ಟೇ ಅಲ್ಲದೆ ತಮ್ಮದೇ ಆದ ಆಧ್ಯಾತ್ಮಿಕ ವ್ಯವಸ್ಥೆಯನ್ನು ರೂಪಿಸಿದರು.ಇದಕ್ಕಾಗಿ ಅವರು ತಮ್ಮದೇ ಆದ ಧರ್ಮ ಗ್ರಂಥವಾದ ಗುರು ಗ್ರಂಥವನ್ನು ರಚಿಸಿದರು ಮತ್ತು ತಮ್ಮದೇ ಆದ ಧಾರ್ಮಿಕ ಕೇಂದ್ರಗಳನ್ನು ಆರಂಭಿಸಿದರು. ಇಂದಿಗೂ ಪಂಜಾಬ್‌ನ ಪ್ರಮುಖ ಎರಡು ರಾಜಕೀಯ ಶಕ್ತಿಗಳಾದ ಅಕಾಲಿ ದಳ ಮತ್ತು ಕಾಂಗ್ರೆಸ್ಸಿನ ರಾಜ್ಯ ಘಟಕವನ್ನೂ ನಿಯಂತ್ರಿಸುತ್ತಾರೆ. ಶೂದ್ರರಿಗಿಂತ ಭಿನ್ನವಾಗಿ, ಜಾಗತಿಕ ಗೋಚರತೆಯನ್ನು ಸಿಖ್ಖರು ಹೊಂದಿದ್ದಾರೆ ಮತ್ತು ಕೆನಡಾದಂತಹ ದೇಶಗಳಲ್ಲಿಯೂ ಕೂಡ ತಮ್ಮ ಅಧಿಕಾರ ಬಂಧವನ್ನು ವಿಸ್ತರಿಸುತ್ತಿದ್ದಾರೆ. ಅವರ ಆಧ್ಯಾತ್ಮಿಕ ಸ್ವಾತಂತ್ರ್ಯವು ಈ ಎಲ್ಲ ಸಾಧನೆಗಳಿಗೆ ಮೂಲ ಆಧಾರವನ್ನು ಒದಗಿಸಿತು ಎನ್ನಬಹುದು. ಭಾರತೀಯ ವಲಸೆಗಾರರಲ್ಲಿ ಬನಿಯಾಗಳು ಮತ್ತು ಬ್ರಾಹ್ಮಣರ ಹೊರತಾಗಿ ಅಧಿಕಾರ ಮತ್ತು ಪ್ರಾಧಾನ್ಯತೆಯನ್ನು ಹೊಂದಿರುವ ಇತರ ಏಕ ಮಾತ್ರ ಗುಂಪು ಎಂದರೆ ಅದು ಸಿಖ್ ಸಮುದಾಯ ಎಂದು ಹೇಳಬಹುದು. ಇದರರ್ಥ ಸಿಖ್ಖರು ಸಂಪೂರ್ಣವಾಗಿ ಪ್ರಗತಿಪರ ಶಕ್ತಿಯಾಗಿ ಪರಿವರ್ತನೆಗೊಂಡಿದ್ದಾರೆ ಎಂದಲ್ಲ. ಸಿಖ್ ಧರ್ಮದಲ್ಲಿ ಮತ್ತು ಪಂಜಾಬ್‌ನಾದ್ಯಂತ ಸಿಖ್ ಧರ್ಮ ಮತ್ತು ರಾಜ್ಯದ ಬಹುಪಾಲು ಭಾಗವಾಗಿರುವ ದಲಿತ ಸಿಖ್ಖರು, ಧರ್ಮದಲ್ಲಿ ಪ್ರಾಬಲ್ಯ ಹೊಂದಿರುವ ಮಾಜಿ ಶೂದ್ರರಾದ ಜಾಟ್ ಸಿಖ್ಖರಿಂದ ತಾರತಮ್ಯವನ್ನು ಎದುರಿಸುತ್ತಿದ್ದಾರೆ. ಆದರೆ ಇಂದು ಪಂಜಾಬ್‌ನಲ್ಲಿ ಬ್ರಾಹ್ಮಣ-ಬನಿಯಾ ಪ್ರಾಬಲ್ಯ ಸಾಧ್ಯವಿಲ್ಲ ಎಂಬುದು ಕೂಡ ಅಷ್ಟೇ ಖಾತ್ರಿಯಾಗಿದೆ. 
ಜಾತಿ ವ್ಯವಸ್ಥೆಯಲ್ಲಿ ಶೂದ್ರರೆಂದು ಪರಿಗಣಿಸಲ್ಪಟ್ಟ ಕೇರಳದ ನಾಯರ್ ಸಮುದಾಯ ಕೂಡ ಒಂದು ಕುತೂಹಲಕಾರಿ ಉದಾಹರಣೆಯನ್ನು ಪ್ರಸ್ತುತಪಡಿಸುತ್ತದೆ. ಅವರಲ್ಲಿ ಗಣನೀಯ ಭಾಗವು ಸಿರಿಯನ್ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳ್ಳುವ ಮೂಲಕ ಮತ್ತು ವಸಾಹತುಶಾಹಿ ಕಾಲದಲ್ಲಿ ಇಂಗ್ಲಿಷ್ ಭಾಷೆಯ ಶಿಕ್ಷಣವನ್ನು ಸ್ವೀಕರಿಸಿದರು. ಆ ಮೂಲಕ ತಮ್ಮ ಸ್ಥಾನವನ್ನು ಸುಧಾರಿಸಿಕೊಂಡರು. ಈ ತಳಹದಿಯಿಂದಲೇ ಅವರು ಇಂಗ್ಲಿಷ್ ಭಾಷೆಯ ಶಿಕ್ಷಣವನ್ನು ಹಿಂದೂ ನಾಯರ್‌ಗಳಿಗೂ ವಿಸ್ತರಿಸಿದರು ಮತ್ತು ಸಮುದಾಯವು ಕ್ರಮೇಣ ಕೇರಳ ಮತ್ತು ಅದರಾಚೆ ಪ್ರಾಮುಖ್ಯತೆಯನ್ನು ಗಳಿಸಲು ಯಶಸ್ವಿಯಾಯಿತು. ಕರ್ನಾಟಕದಲ್ಲಿ ಲಿಂಗಾಯತರ ಶೂದ್ರ ಸ್ಥಾನಮಾನದ ಸುದೀರ್ಘ ಹೋರಾಟವು ಕೊನೆಗೆ ಲಿಂಗಾಯತ ಧರ್ಮವು ಹಿಂದೂ ಧರ್ಮಕ್ಕಿಂತ ವಿಶಿಷ್ಟ ಧರ್ಮ ಎಂದು ಸಾಮಾಜಿಕವಾಗಿ ಗುರುತಿಸಬೇಕೆನ್ನುವ ಬೇಡಿಕೆಗೆ ತಲುಪಿತು, 
ಬಹುತೇಕ ಶೂದ್ರರಂತೆ ಮರಾಠರು ತಮ್ಮದೇ ಆದ ಗುರುಗಳನ್ನು ಹಾಗೂ ಚಿಂತಕರನ್ನು ಸೃಷ್ಟಿಸಲು ಸಾಧ್ಯವಾಗಲಿಲ್ಲ ಏಕೆಂದರೆ ಅವರು ಒಂದು ಸಮುದಾಯವಾಗಿ ವೈದಿಕಶಾಹಿ ಸಿದ್ದಾಂತವನ್ನು ಪ್ರಶ್ನಿಸಲಿಲ್ಲ. ಇದನ್ನು ಅರಿತುಕೊಂಡಂತಹ ಮಹಾತ್ಮ ಫುಲೆ ಶೂದ್ರರ ಜಾತಿ ನಿಯಂತ್ರಣವನ್ನು ಪ್ರಶ್ನಿಸಿದರು. ಆದರೆ ಮರಾಠರು ಎಂದಿಗೂ ಕೂಡ ಅವರ ಬ್ರಾಹ್ಮಣಶಾಹಿ ತಾತ್ವಿಕ ವಿಮರ್ಶೆಯನ್ನು ಮುಂದುವರೆಸಲಿಲ್ಲ. ಶೂದ್ರರು ಈಗಲೂ 1870 ರ ಅವಧಿಯಲ್ಲಿ ಪ್ರಕಟವಾದ ಅವರ ಗುಲಾಮಗಿರಿ ಎಂಬ ಪುಸ್ತಕದಲ್ಲಿನ ಫುಲೆ ಅವರ ಚಿಂತನೆಯನ್ನು ಅಭಿವೃದ್ಧಿಪಡಿಸುವ ಅವಕಾಶವನ್ನು ಹೊಂದಿದ್ದಾರೆ. ಇದಕ್ಕೆ ಅವರು ಅಂಬೇಡ್ಕರ್ ರವರ ತತ್ತ್ವಚಿಂತನೆಯನ್ನು ಸೇರಿಸಬಹುದು. ಏಕೆಂದರೆ ಅದು ಸ್ಪಷ್ಟ ರಾಜಕೀಯ ಮತ್ತು ಮುಖ್ಯವಾಗಿ ಬ್ರಾಹ್ಮಣ ಧರ್ಮಕ್ಕೆ ಆಧ್ಯಾತ್ಮಿಕ ಪರ್ಯಾಯ ಮಾರ್ಗವನ್ನು ಹುಟ್ಟುಹಾಕಿತು. ಒಂದು ವೇಳೆ ಅಂಬೇಡ್ಕರ್ ಅವರು ಇಂತಹ ಕೊಡುಗೆ ನೀಡದೆ ಹೋಗಿದ್ದಲ್ಲಿ, ಶೂದ್ರರ ತಾತ್ವಿಕ ಸ್ಥಾನವು ಇಂದಿಗಿಂತಲೂ ಕೆಳಮಟ್ಟದಲ್ಲಿರುತ್ತಿತ್ತು. 
ಬ್ರಾಹ್ಮಣ ಪ್ರಭುತ್ವಕ್ಕೆ ಸವಾಲಾಗುವ ಶೂದ್ರರ ಇನ್ನೊಂದು ಆಯ್ಕೆ ಎಂದರೆ ಅದು ಮತಾಂತರ ಎನ್ನಬಹುದು. ಆದರೆ ಇದಕ್ಕೆ ಬಿಜೆಪಿ ಮತ್ತು ಅದರ ಸೈದ್ದಾತಿಕ ನಿಯಂತ್ರಕ ಆರೆಸೆಸ್ಸ್ ನೇತೃತ್ವದ ಪ್ರಬಲ ಜಾತಿಗಳು ಇದಕ್ಕೆ ತೀವ್ರ ಪ್ರತಿರೋಧ ವ್ಯಕ್ತಪಡಿಸುತ್ತಿವೆ. ಆದರೆ ಇತಿಹಾಸದ ಮೂಲಕ ಸ್ವತಃ ಮತಾಂತರವನ್ನು ಅವರು ತಮ್ಮ ಲಾಭಕ್ಕಾಗಿ ಬಳಸಿಕೊಂಡಿರುವುದನ್ನು ನೋಡುತ್ತೇವೆ. ಗೋವಾ, ಬಂಗಾಳ ಮತ್ತು ಇತರ ಪ್ರದೇಶಗಳಲ್ಲಿ ಅನೇಕ ಬ್ರಾಹ್ಮಣರು ಬ್ರಿಟಿಷರ ವಸಾತುಶಾಹಿ ಕಾಲಾವಧಿಯಲ್ಲಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರಗೊಳ್ಳುವ ಮೂಲಕ ಅಂತಹ ವಸಾಹತುಶಾಹಿಗಳಲ್ಲಿ ತಮ್ಮ ಸ್ಥಾನಮಾನ ಗಳಿಸಿರುವುದನ್ನು ಕಾಣಬಹುದು. 
ಜಾತಿ ವಿರೋಧಿ ತತ್ವಗಳು ಅಥವಾ ಇತರ ಧರ್ಮಗಳಿಗಾಗಿ ಹಿಂದೂ ಧರ್ಮವನ್ನು ತಿರಿಸ್ಕರಿಸುವ ಆಯ್ಕೆಯನ್ನು ಶೂದ್ರರು ಹೊಂದಿದ್ದಾರೆ. ಆದರೆ ಪ್ರಸಕ್ತ ಪರಿಸ್ಥಿತಿಯಲ್ಲಿ ಅವರಲ್ಲಿ ಹೆಚ್ಚಿನ ಸಂಖ್ಯೆಯ ಜನರು ಈ ಮಾರ್ಗವನ್ನು ಬಳಸುತ್ತಾರೆನ್ನುವುದು ಊಹೆಯಾಗಲಿದೆ. ಅವರಲ್ಲಿ ಹಲವರಾದರೂ ಭವಿಷ್ಯದಲ್ಲಿ ಹಿಂದುಗಳಾಗಿ ಬದುಕುವ ಇಚ್ಛೆಯನ್ನು ಹೊಂದಿರುತ್ತಾರೆ. ಈ ಎಲ್ಲ ಶೂದ್ರರು ಸಮಾನ ಆಧ್ಯಾತ್ಮಿಕ ಸ್ಥಾನಮಾನ ಮತ್ತು ಪೌರೋಹಿತ್ಯಕ್ಕೆ ಸಮಾನ ಪ್ರವೇಶವನ್ನು ಕೋರಬೇಕು. ಅವರು ಶೂದ್ರರ ದೃಷ್ಟಿಯಲ್ಲಿ ಹಿಂದೂ ಧರ್ಮಗ್ರಂಥಗಳೊಂದಿಗೆ ಸಂವಾದ ಮತ್ತು ಅವುಗಳನ್ನು ವ್ಯಾಖ್ಯಾನಿಸುವ ಹಕ್ಕಿಗಾಗಿ ಹೋರಾಟ ನಡೆಸಬೇಕು. ಉಚಿತ ಧರ್ಮಶಾಸ್ತ್ರದ ಶಾಲೆಗಳಿಗಾಗಿ ಮತ್ತು ಕಾಲೇಜುಗಳಿಗಾಗಿ ಒತ್ತಾಯಿಸಬೇಕು. ಅಲ್ಲಿ ಜಾತಿಯ ಭೇದವಿಲ್ಲದೆ ಯಾವುದೇ ಹಿಂದೂವಿಗೆ ಪೌರೋಹಿತ್ಯದಲ್ಲಿ ತೊಡಗಿಸಿಕೊಳ್ಳುವುದಕ್ಕೆ ಅವಕಾಶ ಕಲ್ಪಿಸಬೇಕು. ಹಿಂದೂ ಧರ್ಮದೊಳಗಿನ ತಮ್ಮ ಸಾಮೂಹಿಕ ಶಕ್ತಿಯನ್ನು ಶೂದ್ರರು ಅರ್ಥೈಸಿಕೊಳ್ಳುವುದು ಅತ್ಯಗತ್ಯವಾಗಿದೆ. ಅವರಿಲ್ಲದೆ ಹೋದಲ್ಲಿ ಆ ಧರ್ಮವು ಪತನಗೊಳ್ಳುವ ಅಪಾಯವಿದೆ. ಒಂದು ವೇಳೆ ಅವರು ತಮ್ಮ ಶಕ್ತಿಯನ್ನು ಪ್ರಯೋಗಿಸದಿದ್ದಲ್ಲಿ ಅವರ ಸ್ಥಿತಿ ಎಂದಿನಂತೆಯೇ ಉಳಿಯುತ್ತದೆ ಮತ್ತು ಅವರ ಸ್ಥಾನಮಾನವೂ ಕೂಡ ಕೇರಳದ ನಾಯರ್ ಗಳಂತಾಗಲಿದೆ. ಅಲ್ಲಿ ಅವರು ಪ್ರಖರ ಹಿಂದೂಗಳೆಂದು ಹೇಳಿಕೊಂಡರು ಸಹಿತ ಧರ್ಮದ ವಿಚಾರದಲ್ಲಿ ಅವರು ಬೌದ್ಧಿಕ ಪ್ರಭಾವವನ್ನು ಹೊಂದಿರದ ಕಾರಣಕ್ಕಾಗಿ ಅದನ್ನು ಬ್ರಾಹ್ಮಣ ಪುರೋಹಿತರಿಗೆ ವಹಿಸುತ್ತಾರೆ. 
ಈಗ ಶೂದ್ರರಿಗೆ ಪ್ರತಿಯೊಂದು ಕ್ಷೇತ್ರದಲ್ಲೂ ಸಮಾನತೆಯನ್ನು ಕೇಳುವ ಅಥವಾ ಪ್ರತಿ ಕ್ಷೇತ್ರದಲ್ಲೂ ಪರ್ಯಾಯ ಮಾರ್ಗಗಳನ್ನು ಹುಡುಕುವ ಸಮಯ ಬಂದಿದೆ. ಹಿಂದೂ ಧರ್ಮವು ಆಧ್ಯಾತ್ಮಿಕ ಸಮಾನತೆಯ ಒತ್ತಾಯವನ್ನು ಒಪ್ಪಿಕೊಳ್ಳದಿದ್ದರೆ, ಅವರು ತಮ್ಮ ಪ್ರತಿಪಾದನೆಯ ಚಳುವಳಿಯ ಭಾಗವಾಗಿ ಹೊಸ ಧರ್ಮಗಳನ್ನು ರೂಪಿಸುವುದನ್ನು ಪರಿಗಣಿಸಬೇಕು. ಪ್ರಬಲ ಜಾತಿಗಳನ್ನು ಅಪರಾಧಕ್ಕೊಳಪಡಿಸುವ ನಡೆಯು ಹೆಚ್ಚಾಗಿ ದುಷ್ಕೃತ್ಯ ಮತ್ತು ಪುನರ್ಜನ್ಮದ ಕಲ್ಪನೆ ಹಿನ್ನಲೆಯಲ್ಲಿ ಬಂದಿರುತ್ತದೆ. ಆದ್ದರಿಂದ ಅವರು ತಮ್ಮ ಮೇಲೆ ಬ್ರಾಹ್ಮಣ ಚಿಂತನೆ ಮೂಲಕ ಹೇರಿರುವ ಕೆಳದರ್ಜೆಯ ಸ್ಥಾನಮಾನವನ್ನು ತಿರಸ್ಕರಿಸಬೇಕು. ಅದಕ್ಕಾಗಿ ಶೂದ್ರರು ಪ್ರಸ್ತುತ ಮಾದರಿಯನ್ನು ವಿಸ್ಥಾಪನೆಗೊಳಿಸುವಂತಹ ಬೃಹತ್ ಪ್ರಮಾಣದ ಪರ್ಯಾಯ ಚಿಂತನೆ ಮತ್ತು ಸಾಹಿತ್ಯವನ್ನು ರಚಿಸಬೇಕಾಗುತ್ತದೆ. ಪರ್ಯಾಯ ಶೂದ್ರ ಸಾಹಿತ್ಯ ಮತ್ತು ತತ್ವಜ್ಞಾನವು ಹಿಂದೂ ಧರ್ಮದ ಒಳಗೆ ಅಥವಾ ಹೊರಗಾಗಲಿ ಶೂದ್ರ ಸ್ವಾಭಿಮಾನಕ್ಕೆ ಒಂದು ನೆಲೆಯನ್ನು ಸ್ಥಾಪಿಸುವತ್ತ ಕೇಂದ್ರಿಕೃತವಾಗಬೇಕು. ಪ್ರಪಂಚದಾದ್ಯಂತ ಶೋಷಿತ ಸಮುದಾಯದ ಜನರ ಬರವಣಿಗೆಯಲ್ಲಿ ಈ ರೀತಿಯ ಸಮಾನಾಂತರವನ್ನು ಅಮೆರಿಕಾದ ಬ್ಲಾಕ್ ಪವರ್ ಚಳುವಳಿಯಿಂದ ಹಿಡಿದು ಭಾರತದ ದಲಿತ ಚಳುವಳಿಗಳಲ್ಲಿ ಕಾಣಬಹುದು. ಈ ಚಳುವಳಿಗಳು ಇತಿಹಾಸಗಳು, ಕಾದಂಬರಿಗಳು, ಚಲನಚಿತ್ರಗಳು, ಆಧ್ಯಾತ್ಮಿಕ ಭೋಧನೆಗಳನ್ನು ನಿರ್ಮಿಸಿವೆ. ಅದಕ್ಕಿಂತ ಹೆಚ್ಚಾಗಿ ಪ್ರಬಲ ಸಮುದಾಯಗಳು ತುಳಿತಕ್ಕೊಳಗಾದ ಜನರ ಅವಮಾನಕರ ಚಿತ್ರಣಗಳು ಮತ್ತು ನಂಬಿಕೆಗಳನ್ನು ನಿರಾಕರಿಸಿರುವ ಹಿನ್ನಲೆಯಲ್ಲಿ ಅವು ತಮ್ಮದೇ ಆದ ಸ್ವಯಂ ರಚನೆಯೊಂದಿಗೆ ಬದಲಾಯಿಸುತ್ತವೆ. ಆ ಮೂಲಕ ಇಂತಹ ಹೊಸ ವಿಚಾರಗಳು ಸಾಮಾಜಿಕ ಮತ್ತು ರಾಜಕೀಯ ಪ್ರಕ್ರಿಯೆಗೆ ಉದ್ದೀಪನವಾಗಿ ಕಾರ್ಯನಿರ್ವಹಿಸಲು ಸಹಾಯವಾಗುತ್ತದೆ. 
ಉತ್ಪಾದನಾ ಕೆಲಸವು ಆಧ್ಯಾತ್ಮಿಕತೆಯನ್ನು ಕಲುಷಿತಗೊಳಿಸುತ್ತದೆ ಎನ್ನುವ ವೈದಿಕಶಾಹಿ ಸಿದ್ದಾಂತವನ್ನು ಅಸ್ಥಿರಗೊಳಿಸಬೇಕು ಆ ಮೂಲಕ ಶೂದ್ರರ ಸ್ವಾಭಿಮಾನಕ್ಕೆ ಅಡಿಪಾಯ ಹಾಕಬೇಕು. ಶೂದ್ರರು ಏನನ್ನು ಮಾಡುತ್ತಾರೆ ಮತ್ತು ತಿನ್ನುತ್ತಾರೆ ಎನ್ನುವುದನ್ನು ಹಿಂದೂ ಧಾರ್ಮಿಕ ಮತ್ತು ತತ್ವಜ್ಞಾನದ ಗ್ರಂಥಗಳಲ್ಲಿ ದೈವಿಕ ಗೌರವಕ್ಕೆ ಅನರ್ಹವೆಂದು ಬಿಂಬಿಸಲಾಗಿದೆ. ಚಾರಿತ್ರಿಕವಾಗಿ ಅವರು ಈ ಆಕ್ರಮಣದ ಹಿನ್ನೆಲೆಯಲ್ಲಿ ಸಾಕಷ್ಟು ಭಿನ್ನರಾಗಿದ್ದಾರೆ. ಅವರಿಗೆ ತಮ್ಮದೇ ಆದ ಸಂಸ್ಕೃತಿ ಇಲ್ಲವೆನ್ನುವುದು ಮನವರಿಕೆಯಾಗಿದೆ. ಆದರೆ ಈ ಸಂಸ್ಕೃತಿ ಕುರಿತು ಪುಸ್ತಕಗಳಲ್ಲಿ ಬರೆಯದಿದ್ದ ಮಾತ್ರಕ್ಕೆ ಅದರ ಅಸ್ತಿತ್ವ ಇಲ್ಲವೆಂದರ್ಥವಲ್ಲ. 
ಸಾವಿರಾರು ವರ್ಷಗಳಷ್ಟು ಪುರಾತನವಾದ ಶೂದ್ರರ ಸಂಸ್ಕೃತಿಯು ಅವರ ಕೃಷಿ ಹಾಗೂ ಉತ್ಪಾದನಾ ಕಾರ್ಯವನ್ನು ಕೇಂದ್ರೀಕರಿಸಿದೆ. ಇದರ ಮೌಲ್ಯಗಳು ತಪಸ್ವಿ ಮತ್ತು ನಿಷ್ಕ್ರಿಯ ಸನ್ಯಾಸಿ ಮೌಲ್ಯಗಳಂತಲ್ಲ, ಆದರೆ ಅದು ಫಲವತ್ತತೆ, ಸೃಜನಶೀಲತೆ ಮತ್ತು ಶ್ರಮದ ಮೌಲ್ಯಗಳನ್ನು ಹೊಂದಿದೆ. 
ಶೂದ್ರರ ಸಂಸ್ಕೃತಿಯು ಆಗಾಗ್ಗೆ ಸಾಕಷ್ಟು ಕಥಾ ವಸ್ತುಗಳಿಗಾಗಿ ಹಿಂದೂ ಪುರಾಣಗಳ ಹಿಂಸಾತ್ಮಕ ಕಥೆಗಳಿಂದ ಅಂತರವನ್ನು ಕಾಯ್ದುಕೊಳ್ಳುತ್ತದೆ. ಇದು ಬ್ರಾಹ್ಮಣರ ಆಧ್ಯಾತ್ಮಿಕ ಗೀಳನ್ನು ವೈಜ್ಞಾನಿಕ ಅವಲೋಕನ ಮತ್ತು ಪ್ರಾಯೋಗಿಕ ಅನುಭವದ ಮೂಲಕ ಕಲಿತ ಪ್ರಕೃತಿ, ಕೃಷಿ ಮತ್ತು ಉತ್ಪಾದನಾ ಪ್ರಕ್ರಿಯೆಗಳ ಬಗ್ಗೆ ಅಪಾರ ಜ್ಞಾನವನ್ನು ನೀಡುತ್ತದೆ. ತಮ್ಮ ಕೆಲಸದ ಮೂಲಕ ಶೂದ್ರರು ಔಷಧಿ, ಪಶುಸಂಗೋಪನೆ, ಎಂಜಿನಿಯರಿಂಗ್ ಮತ್ತು ಇತರ ಅನೇಕ ಉತ್ಪಾದಕ ವಲಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇವುಗಳೆಲ್ಲವನ್ನು ದಾಖಲೀಕರಣ ಮಾಡುವುದರ ಜೊತೆಗೆ ಆಚರಿಸಬೇಕು. 
ಶೂದ್ರರು ತಮ್ಮ ಕೆಲಸ ಮತ್ತು ಸಂಸ್ಕೃತಿಯ ಹೆಚ್ಚಿನ ಮೌಲ್ಯವನ್ನು ಉತ್ತೇಜಿಸಬೇಕು. ಅವರು ಆಹಾರ, ಬಟ್ಟೆ, ವಸತಿ, ಕಲೆ, ಸಂಗೀತ, ಮತ್ತು ಹೀಗೆ ಮೂಲಭೂತ ಸಂಪನ್ಮೂಲಗಳನ್ನು ಉತ್ಪಾದಿಸುತ್ತಿದ್ದಾರೆ. ಇವುಗಳೆಲ್ಲವೂ ಕೂಡ ರಾಷ್ಟ್ರದ ಉಳಿವಿಗೆ ನೆರವಾಗುತ್ತದೆ. ಇನ್ನು ಶೂದ್ರರು ಸಾಮಾಜಿಕ ಯೋಗ ಕ್ಷೇಮಕ್ಕಾಗಿ, ಶ್ರಮಿಕ ಶೂದ್ರ ಅಥವಾ ಸನ್ಯಾಸಿ ಬ್ರಾಹ್ಮಣರಿಬ್ಬರಲ್ಲಿ ಯಾರೂ ಅಧಿಕ ಕೊಡುಗೆಯನ್ನು ನೀಡುತ್ತಾರೆ ಎನ್ನುವುದನ್ನು ಪ್ರಶ್ನಿಸಬೇಕು. 
ಉತ್ಪಾದಕ ಸಮುದಾಯಗಳ ಸಂಸ್ಕೃತಿಯನ್ನು ಘನತೆ ಮತ್ತು ಗೌರವದಿಂದ ಪರಿಗಣಿಸಿದ್ದೇ ಆದಲ್ಲಿ, ಅವರು ಇನ್ನೂ ಅಧಿಕ ರೀತಿಯಲ್ಲಿ ತಮ್ಮ ಶಕ್ತಿಯನ್ನು ಬಳಸಿಕೊಳ್ಳುತ್ತಾರೆ. ಆಗ ಇದರಿಂದಾಗಿ ರಾಷ್ಟ್ರೀಯ ಒಳಿತು ಕೂಡ ಹೆಚ್ಚುತ್ತದೆ. ದೇಶದ ಅತಿ ದೊಡ್ಡ ಉತ್ಪಾದಕ ಮತ್ತು ಶ್ರಮ ಸಮೂಹದ ಸಂಸ್ಕೃತಿ ಮತ್ತು ಸ್ವಾಭಿಮಾನವನ್ನು ಹತ್ತಿಕ್ಕುವುದೆಂದರೆ ಎಂದರೆ ಅದು ರಾಷ್ಟ್ರೀಯ ಸಂಪನ್ಮೂಲಗಳಿಗೆ ಅಪಾರ ನಷ್ಟವೆಂದೇ ಹೇಳಬಹುದು. ಇಂತಹ ತಿಳುವಳಿಕೆಯೇ ಹೊಸ ಶೂದ್ರ ರಾಷ್ಟ್ರೀಯತೆಯ ತಿರುಳನ್ನು ರೂಪಿಸುವಂತಾಗಬೇಕು. 
ಹೊಸ ಮಾದರಿಯ ಶೂದ್ರ ಪ್ರಜ್ಞೆಯು ಬ್ರಾಹ್ಮಣ ಮತ್ತು ಬನಿಯಾ ಆರ್ಥಿಕತೆಯನ್ನು ಮೀರಿದ ರಾಷ್ಟ್ರ ರಾಜಕಾರಣ ನಿರ್ಮಾಣಕ್ಕೆ ಸಹಾಯವಾಗುತ್ತದೆ. ಇದಕ್ಕಾಗಿ ಶೂದ್ರರು ಮೊದಲು ತಮ್ಮಲ್ಲಿನ ತಿರಸ್ಕೃತ ಮನೋಭಾವವನ್ನು ತೊರೆಯುವ ಮೂಲಕ ತಮ್ಮ ವರ್ಣದೊಳಗಿನ ಜಾತಿಗಳ ನಡುವಿನ ಸಂಬಂಧವನ್ನು ಪುನರ್ ವಾಖ್ಯಾನಕ್ಕೆ ಒಳಪಡಿಸಬೇಕಾಗುತ್ತದೆ. ಅಷ್ಟೇ ಅಲ್ಲದೆ ಇದರ ಜೊತೆಗೆ ಅದನ್ನು ಮೀರಿದ ಶೋಷಣೆಗೆ ಒಳಪಟ್ಟ ಜಾತಿ ಮತ್ತು ಸಮುದಾಯಗಳ ಜೊತೆಗಿನ ಸಂಬಂಧವನ್ನು ಕೂಡ ಮರುವಾಖ್ಯಾನಕ್ಕೆ ಒಳಪಡಿಸಬೇಕಾಗುತ್ತದೆ. 
ಒಂದು ವೇಳೆ ಶೂದ್ರರು ತಮ್ಮ ಪ್ರದೇಶ ಮತ್ತು ರಾಜ್ಯಗಳ ಹೊರತಾಗಿ ಅಧಿಕ ಸಂಖ್ಯೆಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಛಾಪು ಮೂಡಿಸಬೇಕೆಂದರೆ ಸಮಗ್ರ ಭಾರತದ ಶೂದ್ರ ಅಸ್ಮಿತೆಯನ್ನು ಯಾವುದೇ ಅಂತರ್-ತಾರತಮ್ಯವಿಲ್ಲದೆ ರಚಿಸಬೇಕು. ವೈದಿಕಶಾಹಿಯಿಂದ ರಚಿತವಾಗಿರುವ ಶೂದ್ರ ಕೀಳಿರಿಮೆಯ ಪರಿಕಲ್ಪನೆ ಒಟ್ಟಾರೆಯಾಗಿ ವರ್ಣಕ್ಕೆ ಅನ್ವಹಿಸುತ್ತದೆ. ಈ ಹಿನ್ನಲೆಯಲ್ಲಿ ಇದನ್ನು ಜಾತಿಗಳ ಅಧಾರಕ್ಕಿಂತಲೂ ಹೆಚ್ಚಾಗಿ ಸಮಗ್ರವಾಗಿ ನಿಭಾಯಿಸಬೇಕಾದ ಅಗತ್ಯವಿದೆ. 
ಶೂದ್ರ ಪ್ರಜ್ಞೆಯಲ್ಲಿನ ಈ ಪರಿವರ್ತನೆಯು ದಲಿತರು ಹಾಗೂ ಇತರ ಶೋಷಿತ ಸಮುದಾಯಗಳ ಮೇಲೆಯೂ ಕೂಡ ಪರಿಣಾಮ ಬೀರುತ್ತದೆ. ಶೂದ್ರರು ತಮ್ಮ ಕಿಳಿರಿಮೆಗೆ ಆಧಾರವಾಗಿರುವ ಈ ತಾತ್ವಿಕ ವಿಚಾರವನ್ನು ತಿರಸ್ಕರಿಸಿದ್ದೇ ಆದಲ್ಲಿ ಇತರ ಜಾತಿಗಳಿಗಿಂತ ತಾವು ಕೀಳು ಎನ್ನುವ ಪ್ರಶ್ನೆಯೇ ಬರುವುದಿಲ್ಲ. ಒಮ್ಮೆ ಅವರು ಬ್ರಾಹ್ಮಣ ಮತ್ತು ಬನಿಯಾ ಹಿತಾಸಕ್ತಿ ಪರಿಗಣಿಸದಿದ್ದಲ್ಲಿ ಆಗ ಮುಸ್ಲಿಂ ಅಥವಾ ಕ್ರೈಸ್ತರ ಭಯವನ್ನು ಅನುಕೂಲವೆಂದು ಪರಿಗಣಿಸುವ ಪ್ರಮಯವೇ ಬರುವುದಿಲ್ಲ. ಇದಕ್ಕೆ ಪರ್ಯಾಯವಾಗಿ ಅವರು ಬ್ರಾಹ್ಮಣವಾದ ಲೋಪದೋಷಗಳನ್ನು ಎತ್ತಿಹಿಡಿಯುವ ವಿಚಾರಗಳ ಪರವಾಗಿ ನಿಲ್ಲಲು ಅನೂಕೂಲವಾಗುತ್ತದೆ. ಈ ಪ್ರಕ್ರಿಯೆ ಕೂಡ ಶೂದ್ರ ರಾಷ್ಟ್ರೀಯತೆಯ ಭಾಗವಾಗಿರಬೇಕು.ಆದರೆ ಇದು ಎಂದಿಗೂ ಕೂಡ ದಲಿತರು, ಆದಿವಾಸಿಗಳು ಅಥವಾ ಬ್ರಾಹ್ಮಣ ಮತ್ತು ಬನಿಯಾ ಪ್ರಾಬಲ್ಯದೊಂದಿಗೆ ಹೋರಾಡುವ ಇತರ ಗುಂಪುಗಳಿಗೆ ವಿರುದ್ಧವಾಗಿರಬಾರದು. 
ಶೂದ್ರರಲ್ಲಿನ ಸ್ವಯಂ ತಿರಸ್ಕೃತ ಧೋರಣೆ ಮತ್ತು ಭಾರತೀಯ ರಾಷ್ಟ್ರೀಯತೆ ಹಾಗೂ ರಾಷ್ಟ್ರೀಯ ರಾಜಕಾರಣದ ಪ್ರಬಲ ಸ್ವರೂಪಗಳನ್ನು ಇಂದು ಸೂಕ್ಷ್ಮವಾಗಿ ಅವಲೋಕಿಸಬೇಕಾಗಿದೆ. ಸ್ವಾತಂತ್ರ್ಯ ಸಂಗ್ರಾಮದಿಂದಲೂ ಕೂಡ ಬ್ರಾಹ್ಮಣರು ಮತ್ತು ಬನಿಯಾಗಳು ಜನಪ್ರಿಯ ರಾಷ್ಟ್ರೀಯ ಭಾವನೆಗಳಿಗೆ ಮಾರ್ಗದರ್ಶಕರಾಗಿದ್ದಾರೆ. ಇನ್ನೊಂದೆಡೆಗೆ ಶೂದ್ರ ಸಮುದಾಯದಲ್ಲಿನ ಬುದ್ದಿಜೀವಿಗಳ ಅನುಪಸ್ಥಿತಿ ಹಿನ್ನಲೆಯಲ್ಲಿ ಅವರೂ ಕೂಡ ಇಂತಹ ಅಭಿಪ್ರಾಯಗಳಿಗೆ ಮಣೆ ಹಾಕಿದ್ದಾರೆ.. 
ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರು ರಾಷ್ಟ್ರದಲ್ಲಿನ ಆಘಾತಕಾರಿ ಸಾಮಾಜಿಕ ಅಸಮಾನತೆಗಳನ್ನು ನಿವಾರಿಸಲು ಸುಧಾರಣಾ ಕ್ರಮಗಳನ್ನು ತೆಗೆದುಕೊಳ್ಳದೇ ವೈಭವಿಕರಿಸಿದಲ್ಲಿ ಅದೊಂದು ಖಾಲಿ ಪ್ರಯತ್ನವಾಗುತ್ತದೆ ಎಂದು ಹೇಳಿದರು. ಆದರೆ ಅವರ ಈ ದೃಷ್ಟಿಕೋನವನ್ನು ಕಡೆಗಣಿಸಲಾಯಿತು. ಇಂದು ನಿಜವಾದ ಬ್ರಾಹ್ಮಣ-ಬನಿಯಾ ರಾಷ್ಟ್ರೀಯತೆ ವಿಚಾರವನ್ನು ತಿಳಿಯದೆ ಶೂದ್ರರು ಹಿಂದೂ ರಾಷ್ಟ್ರೀಯತೆ ಪ್ರಖರ ಬೆಂಬಲಿಗರಾಗಿದ್ದಾರೆ. ಬಿಜೆಪಿಯ ಹಿಂದುತ್ವವು ಆರ್ಎಸ್ಎಸ್ ನ ಬ್ರಾಹ್ಮಣ ಪ್ರಾಬಲ್ಯ ಸಿದ್ಧಾಂತವನ್ನು ಭರವಸೆ ನೀಡುತ್ತದೆ ಮತ್ತು ಅದರ ಆರ್ಥಿಕ ನೀತಿಗಳು ದೈತ್ಯ ಬನಿಯಾ ಒಡೆತನದ ನಿಗಮಗಳ ಲಾಭವನ್ನು ಹೆಚ್ಚಿಸುತ್ತವೆ. ಇನ್ನು ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ಆರ್ಥಿಕ ಪರ್ಯಾಯವನ್ನು ಮುಂದಿಡಲು ಸಾಧ್ಯವಾಗಿಲ್ಲ. ಅದರ ‘ಜಾತ್ಯತೀತ’ ರಾಷ್ಟ್ರೀಯತೆಯ ಅನುಸರಣೆಯು ಹೆಚ್ಚಾಗಿ ಬಿಜೆಪಿಯ ಬ್ರಾಹ್ಮಣೀಯತೆಯನ್ನು ಹೋಲುತ್ತದೆ. ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ತಮ್ಮನ್ನು ಜನಿವಾರದಾರಿ ಬ್ರಾಹ್ಮಣ ಎಂದು ಘೋಷಿಸಿಕೊಂಡಿರುವ ತಂತ್ರವು ಜನಸಾಮಾನ್ಯರ ಗಮನ ಸೆಳೆಯುತ್ತದೆ ಎಂದು ಭಾವಿಸಿರುವಂತಿದೆ. 
ಹಿಂದೂ ರಾಷ್ಟ್ರೀಯತೆಯ ಹೆಚ್ಚಾಗಿ ಶೂದ್ರರ ಮೇಲಿನ ದಬ್ಬಾಳಿಕೆ ಮತ್ತು ಹೊರಗಿಡುವಿಕೆಯ ಮೇಲೆ ನಿರ್ಮಿತವಾಗಿದೆ. ಇದಕ್ಕೆ ಗೋರಕ್ಷಣೆ ರಾಜಕೀಯ ಒಂದು ಉದಾಹರಣೆ ಎನ್ನಬಹುದು. ಗೋವು ಪವಿತ್ರ ಪ್ರಾಣಿ ಎಂಬ ಸಿದ್ಧಾಂತವು ಬ್ರಾಹ್ಮಣರ ಕಾರ್ಯವಾಗಿದೆ. ಅವರು ಎಂದಿಗೂ ಪ್ರಾಣಿಗಳನ್ನು ಮೇಯಿಸಲಿಲ್ಲ ಮತ್ತು ಆರ್ಥಿಕವಾಗಿ ಅದನ್ನು ಅವಲಂಬಿಸಿಲ್ಲ, ಆದರೆ ಆ ಕೆಲಸದ ಭಾರ ಮಾತ್ರ ಶೂದ್ರರಿಗೆ ಸೇರಿತ್ತು. ಆದರೆ ಆ ಪ್ರಾಣಿಗಳ ಸ್ಥಾನಮಾನ ಗುರುತಿಸುವ ವಿಚಾರದಲ್ಲಿ ಅವರಿಗೆ ಯಾವುದೇ ಹಕ್ಕು ಇಲ್ಲ. ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಿನಿಂದ ಜಾನುವಾರುಗಳ ಹತ್ಯೆ ಮೇಲೆ ವಿಧಿಸಿರುವ ನಿಷೇಧವು ಜಾನುವಾರು ಆರ್ಥಿಕತೆಯನ್ನು ನಾಶಪಡಿಸಿದೆ. ಇದರಿಂದಾಗಿ ರೈತರು ಇನ್ನು ಮುಂದೆ ತಮ್ಮ ಪ್ರಾಣಿಗಳನ್ನು ಆರ್ಥಿಕ ಉದ್ದೇಶಗಳಿಗಾಗಿ ಮಾರುಕಟ್ಟೆಯಲ್ಲಿ ಮಾರಲು ಸಾಧ್ಯವಿಲ್ಲ. ಆದರೆ ಇಡೀ ದೇಶಾದ್ಯಂತ ಗ್ರಾಮೀಣ ಆರ್ಥಿಕತೆಯನ್ನು ನಷ್ಟಕ್ಕೆ ತಳ್ಳಿರುವ ಈ ದುರಂತವನ್ನು ಶೂದ್ರರು ಸದ್ದಿಲ್ಲದೇ ಒಪ್ಪಿಕೊಂಡಿದ್ದಾರೆ. 
ಈಗ ಹಿಂದೂ ರಾಷ್ಟ್ರೀಯತೆ ಶೂದ್ರರ ನಿಷ್ಕ್ರಿಯತೆಯನ್ನು ಗೆದ್ದಿದೆ. ನರೇಂದ್ರ ಮೋದಿ ಪ್ರಧಾನಿಯಾದ ನಂತರ ಬೌದ್ಧಿಕ, ಆಧ್ಯಾತ್ಮಿಕ, ರಾಜಕೀಯ ಮತ್ತು ಆರ್ಥಿಕ ಕ್ಷೇತ್ರಗಳ ಉನ್ನತ ಮಟ್ಟಗಳು ಮುಖ್ಯವಾಗಿ ಬ್ರಾಹ್ಮಣ ಮತ್ತು ಬನಿಯಾಗಳ ನಿಯಂತ್ರಣಕ್ಕೆ ಒಳಪಟ್ಟಿವೆ. ಇನ್ನು ಶೂದ್ರರ ಸಾಮಾಜಿಕ ಅಥವಾ ಆರ್ಥಿಕ ಸ್ಥಿತಿಯಲ್ಲಿಯೂ ಕೂಡ ಅಂತಹ ಯಾವುದೇ ಬದಲಾವಣೆಗಳಾಗಿಲ್ಲ. ಆ ಮೂಲಕ ಹಿಂದೂ ರಾಷ್ಟ್ರೀಯತೆ ಬ್ರಾಹ್ಮಣ ಸಿದ್ಧಾಂತ ಮತ್ತು ಬನಿಯಾ ಬಂಡವಾಳದ ಶಕ್ತಿಯನ್ನು ಮತ್ತಷ್ಟು ಬಲಪಡಿಸಿದೆ. ಇನ್ನೊಂದೆಡೆಗೆ ತಮ್ಮ ಜೀವದ ಹಂಗು ತೊರೆದು ಶೂದ್ರರು ಹಿಂದೂ ರಾಷ್ಟ್ರೀಯತೆಯ ರಕ್ಷಿಸುತ್ತಿರುವುದನ್ನು ನಾವು ಕಾಣಬಹುದು. 
ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರು Who Were the Shudras? ಕೃತಿಯಲ್ಲಿ ‘ಬ್ರಾಹ್ಮಣ ಧರ್ಮವು ಶೂದ್ರರನ್ನು “ನಾಗರಿಕತೆಯಿಲ್ಲದ, ಸಂಸ್ಕೃತಿಯಿಲ್ಲದ, ಗೌರವವಿಲ್ಲದ ಮತ್ತು ಸ್ಥಾನವಿಲ್ಲದ” ಕೆಳವರ್ಗದ ಜನರು’ ಎಂದು ವಾಖ್ಯಾನಿಸಿರುವುದನ್ನು ಉಲ್ಲೇಖಿಸಿದ್ದಾರೆ. ಅವರ ಕಾಲಾವಧಿಯಿಂದಲೂ ಇರುವ ಈ ಸಂಗತಿಗಳಲ್ಲಿ ಮೂಲಭೂತವಾಗಿ ಬದಲಾವಣೆ ತರಲು ಇದುವರೆಗೂ ಸಾಧ್ಯವಾಗಿಲ್ಲ. ಈಗ ಇವುಗಳನ್ನು ಕೇವಲ ಹೊಸ ಶೂದ್ರ ಪ್ರಜ್ಞೆಯಿಂದ ಮಾತ್ರ ಅದನ್ನು ಬದಲಾವಣೆ ತರಲು ಸಾಧ್ಯ.ಇದರಿಂದ ಶೂದ್ರರನ್ನು ಮತ್ತು ಈ ದೇಶವನ್ನು ಕೂಡ ಉತ್ತಮ ಹಾದಿಯಲ್ಲಿ ತರಬಹುದು. 
English version published in The Caravan | Indian journal of politics and culture (01 October 2018) as ‘Where Are The Shudras? Why the Shudras are lost in today’s India

 

-KANCHA ILAIAH SHEPHERD