Round Table India
You Are Reading
ಎರಡು ಸಾಂಸ್ಥಿಕ ಹತ್ಯೆಗಳ ನಡುವೆ..!
0
Features

ಎರಡು ಸಾಂಸ್ಥಿಕ ಹತ್ಯೆಗಳ ನಡುವೆ..!

manjunath naragund

 

ಮಂಜುನಾಥ ನರಗುಂದ (Manjunath Naragund)

manjunath naragundಕಾರ್ಲ್ ಮಾರ್ಕ್ಸ್ ನ “History repeats itself. First as tragedy, second as farce” ಎನ್ನುವ ಮಾತು ಸದ್ಯ ರೋಹಿತ್ ವೇಮುಲಾ ಮತ್ತು ರಜಿನಿ ಕ್ರಿಷ್ ಅವರ ಸಾಂಸ್ಥಿಕ ಹತ್ಯೆಗಳ ಚಿತ್ರಣಕ್ಕೆ ಸರಿಯಾಗಿ ಅನ್ವಯಿಸುತ್ತದೆ.
ಇವರಿಬ್ಬರ ಆತ್ಮಹತ್ಯೆಗಳಿಗೂ ಮುನ್ನ ಇಂತಹವೇ ಹಲವು ಆತ್ಮಹತ್ಯೆಗಳು ವಿವಿಗಳಲ್ಲಿ ನಡೆದಾಗಲೂ ಅವು ಸೀಮಿತ ಚೌಕಟ್ಟಿನೊಳಗೆ ಬಂಧಿಯಾಗಿದ್ದವು. ಆದರೆ, ರೋಹಿತನ ಸಾಂಸ್ಥಿಕ ಹತ್ಯೆ ಎಲ್ಲ ಸೀಮಿತ ಸಂಕೋಲೆಗಳನ್ನು ಕಿತ್ತು ತನ್ನ ಒಳಸಂಕಟದ ಬೇಗುದಿಗಳನ್ನು ಜಗದಗಲ ತೆರೆದಿಟ್ಟಿದ್ದು ಈಗ ಇತಿಹಾಸ. ಈ ಇತಿಹಾಸ ಇಂದು ವ್ಯವಸ್ಥೆಯ ದುರಂತದ ಭಾಗವಾಗಿದೆ. ಈ ದುರಂತದ ಮತ್ತೊಂದು ಮುಂದುವರೆದ ಭಾಗವಾಗಿ ಇಂದು ರಜಿನಿ ಕ್ರಿಶ್ ನ ಸಾಂಸ್ಥಿಕ ಕೊಲೆ ಘಟಿಸಿದೆ. ಇಂತಹ ಶೋಷಿತ ವಿದ್ಯಾರ್ಥಿಗಳ ಆತ್ಮಹತ್ಯೆಗಳು ವ್ಯವಸ್ಥೆಯನ್ನು ಅಣಕಿಸುವುದರ ಭಾಗವಾಗಿ ನಮಗೆ ಕಾಣುತ್ತಿವೆ. ರೋಹಿತ್, ರಜನಿ ಅವರನ್ನು ಹತ್ತಿರದಿಂದ ಕಂಡವರಿಗೆ ಅವರ ಆತ್ಮಹತ್ಯೆಗಳು ಹಾಗೂ ಅವುಗಳ ಕಾರಣಗಳೂ ನಿಜಕ್ಕೂ ದಿಗಿಲೂ ಹುಟ್ಟಿಸುತ್ತಿವೆ.
 ~ 

ರಜನಿ ಕ್ರಿಷ್….
ನಾನು ಯಾವಾಗಲೂ ಅವನನ್ನು ನೋಡುತ್ತಿದ್ದದ್ದೂ ಹೆಗಲಿಗೆ ಖಾದಿ ಬ್ಯಾಗ್ ತೊಟ್ಟು ಸಾಗುತ್ತಿದ್ದ ರಭಸದ ನಡಿಗೆ, ಹೈದರಾಬಾದ್ ಕೇಂದ್ರೀಯ ವಿವಿಯಲ್ಲಿ ನನ್ನ ಬ್ಯಾಚಮೇಟ್ ಆಗಿದ್ದ ಅವನು ಇತಿಹಾಸ ವಿಭಾಗದಲ್ಲಿ ಅಧ್ಯನ ಮಾಡುತ್ತಿದ್ದ ಓಡಿಸ್ಸಾದ ನನ್ನ ರೂಮೆಟ್ ರಾಜಕುಮಾರ್ ದೀಪ್ ನ ಕ್ಲಾಸ್ ಮೇಟ್. ಕ್ಯಾಪಂಸನಲ್ಲಿ ಸಿಕ್ಕಾಗಲೆಲ್ಲ ಸದಾ ನಗುಮುಖದಿಂದಲೇ ಮಾತನಾಡಿಸುತ್ತಿದ್ದ ಅವನ ರೀತಿ, ಕ್ಯಾಂಪಸ್ ನ ಪ್ರತಿ ಹೋರಾಟಗಳಲ್ಲೂ, ಅದರಲ್ಲೂ ಅಂಬೇಡ್ಕರೈಟ್ ವಿಚಾರದ ಕಾರ್ಯಕ್ರಮಗಳಲ್ಲಿ ಇರುತ್ತಿದ್ದ ಅವನ ಹಾಜರಿ, ನನಗೆ ಈಗಲೂ ಕಣ್ಣು ಕಟ್ಟಿದಂತಿದೆ.

ನಾವು ಕೊನೆಯ ಸೆಮಿಸ್ಟರ್ ಹಂತದಲ್ಲಿದ್ದಾಗ ನಡೆದ ರೋಹಿತ್ ವೇಮುಲಾನ ಸಾಂಸ್ಥಿಕ ಹತ್ಯೆ ಮತ್ತು ಆನಂತರ ನಡೆದ ಹಲವು ಘಟನೆಗಳಿಗೆ ರಜನಿ ಕೂಡಾ ಸಾಕ್ಷಿಯಾಗಿದ್ದ. ಜೆಎನ್ಯುಗೆ ಪ್ರವೇಶ ಪಡೆಯಲು ಹಲವು ಬಾರಿ ಪ್ರಯತ್ನ ಪಟ್ಟು ವಿಫಲನಾದರೂ, ಛಲ ಬಿಡದೆ ಈ ಬಾರಿ ಜೆಎನ್ಯುನ ಆಧುನಿಕ ಇತಿಹಾಸದ ವಿಭಾಗದಲ್ಲಿ ಎಂ.ಫಿಲ್ ಸೀಟು ಗಿಟ್ಟಿಸಿಕೊಂಡಿದ್ದ. ಇಂತಹ ಪ್ರಯತ್ನವಾದಿ ರಜನಿ ಆತ್ಮಹತ್ಯೆಯ ಸುದ್ದಿ ಇಂದು ನನಗಷ್ಟಲ್ಲದೆ, ನನ್ನ ಸ್ನೇಹಿತರೆಲ್ಲರನ್ನು ವಿಚಲಿತಗೊಳಿಸಿದೆ.

ರಜನಿಯಂತೆ ದಲಿತ, ಆದಿವಾಸಿ, ಹಿಂದುಳಿದ, ಅರೆ ಸಮುದಾಯಗಳಿಂದ ಬಂದಂತ ವಿದ್ಯಾರ್ಥಿಗಳು ಇಂದು ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಆಧುನಿಕ ಶಂಬೂಕ ಮತ್ತು ಏಕಲವ್ಯರ ಹಾಗೆ ಜೀವಪರಿತ್ಯಾಗ ಮಾಡುತ್ತಿದ್ದಾರೆ. ಏಕೆಂದರೆ ಪುರೋಹಿತಶಾಹಿ ವ್ಯವಸ್ಥೆಯು ಎಲ್ಲ ವಿವಿಗಳ ಎಡ, ಬಲ, ನಡು ಪಂಥಗಳಲ್ಲಿ ಮೇಳೈಸಿಕೊಂಡಿದೆ. ಇಂದು ಇಂಗ್ಲಿಷ್ ಎಂಬ ಆಧುನಿಕ ಸಂಸ್ಕೃತದ ಪೆಡಂಭೂತವು ಅಕಾಡೆಮಿಕ್ ವಲಯವನ್ನು ಆಕ್ರಮಿಸಿದೆ. ಇದು ವಿವಿಗಳೆಂಬ ಆಧುನಿಕ ಅಗ್ರಹಾರಗಳಲ್ಲಿ ಬೋಧಿಸಲ್ಪಡುವ ವೈದಿಕ ಭಾಷೆಯಂತೆ ಬಿಂಬಿಸಲ್ಪಡುತ್ತಿದೆ. ಸಂಘ ಪರಿವಾರದ ಶಕ್ತಿಗಳು ದಿನೇದಿನೆ ಬಲಗೊಳ್ಳುತ್ತಿರುವ ಈ ಸಂಧರ್ಭದಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳು, ವಿವಿಗಳು, ವೈಜ್ಞಾನಿಕ ಸಂಶೋಧನಾ ಕೇಂದ್ರಗಳು ಸಂಪೂರ್ಣವಾಗಿ ಕೇಸರೀಕರಣಗೊಳ್ಳುತ್ತಿವೆ. ಇತ್ತೀಚೆಗಿನ ಮೂರು ವರ್ಷಗಳಲ್ಲಿನ ಬೆಳವಣಿಗೆಗಳನ್ನು ಗಮನಿಸಿದಾಗ ಇಲ್ಲಿನ ಸರಣಿ ಕಥನಗಳು ಇದನ್ನು ಸ್ಪಷ್ಟಪಡಿಸುತ್ತವೆ.

rajini krish

ಜಾಧವಪುರ ವಿವಿ, ಎಫ್.ಟಿಐಐ, ಐಐಟಿ ಮದ್ರಾಸ್, ಹೈದರಾಬಾದ್ ಕೇಂದ್ರೀಯ ವಿವಿ, ದೆಹಲಿ ವಿವಿ, ಜೆಎನ್ಯು ನಂತಹ ಸಂಸ್ಥೆಗಳು ಕೇಸರೀಕರಣದ ಕೂಪಗಳಾಗಿ ಪರಿವರ್ತನೆಯಾಗುತ್ತಿವೆ. ಅಲ್ಲದೆ ಈ ಪ್ರಕ್ರಿಯೆಗೆ ಸವಾಲಾಗುವವರನ್ನು ದೇಶದ್ರೋಹಿಗಳನ್ನಾಗಿ ಬಿಂಬಿಸುವುದಲ್ಲದೇ, ಜಾತಿ ತಾರತಮ್ಯದ ಮಾರ್ಗೋಪಾಯಗಳ ಮೂಲಕ ಅವರನ್ನು ಮುಗಿಸುವಂತಹ ರಾಜಕೀಯ ಹುನ್ನಾರಗಳನ್ನು ನಡೆಸುತ್ತಿರುವುದು ಇಂದು ಜಗತ್ತಿಗೆ ತಿಳಿದಿರುವ ನಗ್ನ ಸತ್ಯ. ರೋಹಿತ್ ವೇಮುಲಾ, ಕನ್ನಯ್ಯಕುಮಾರ, ನಜೀಬ್, ರಜಿನಿ ಕ್ರಿಶ್ ರಂತವರು ಇಂತಹ ವ್ಯವಸ್ಥಿತ ರಾಜಕೀಯ ಪಿತೂರಿಗಳಿಗೆ ಒಳಗಾಗಬೇಕಾಗಿರುವುದು ದುರಂತದ ಸಂಗತಿ.

ಅಂಬೇಡ್ಕರ್, ಪುಲೆ, ಪೆರಿಯಾರ್, ಗಾಂಧಿ, ನೆಹರು ಕಂಡ ಸಾಮಾಜಿಕ ನ್ಯಾಯದ ಬಳುವಳಿ ಭಾರತದ ಸಂವಿಧಾನ. ಇದರ ಪ್ರಸ್ತಾವನೆಯಲ್ಲಿ ಬರುವ ಸ್ವಾತಂತ್ರ್ಯ, ಸಮಾನತೆ, ಭ್ರಾತೃತ್ವ ಹಾಗೂ ಸಾಮಾಜಿಕ ನ್ಯಾಯದ ಆಶಯಗಳು ಶೋಷಿತ ಸಮದಾಯಗಳಿಂದ ಬಂದ ರಜನಿ, ರೋಹಿತರಂತಹ ವಿದ್ಯಾರ್ಥಿಗಳು ಜೆಎನ್ಯು, ಹೈದರಾಬಾದ್ ಕೇಂದ್ರಿಯ ವಿವಿಗಳೇ ಮೊದಲಾದ ದೇಶದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಪ್ರವೇಶ ಪಡೆಯುವುದರೊಂದಿಗೆ ಈಡೇರಿತ್ತು. ಆದರೆ, ಈ ವಿದ್ಯಾರ್ಥಿಗಳ ಆತ್ಮಹತ್ಯೆಗಳ ಮೂಲಕ ಆಶಯಗಳು ಇಂದು ಭಿನ್ನವಾಗಿ ಪ್ರತಿಧ್ವನಿಸುತ್ತಿವೆ. ಇದರ ಮೂಲಕ ಒಂದು ಅಂಶ ಸ್ಪಷ್ಟವಾಗಿದೆ. ಯಾವ ವ್ಯವಸ್ಥೆ ವೈದಿಕ ಪಾಳೇಗಾರಿಕೆಯಿಂದ ದಲಿತರನ್ನು ಊರಾಚೆಗೆ ಇಟ್ಟಿತ್ತೋ., ಇಂದು ಅದೇ ವ್ಯವಸ್ಥೆ ಮತ್ತೆ ಹೊಸ ಬಣ್ಣದೊಂದಿಗೆ ವಿವಿಗಳಿಗೆ ಮೆತ್ತಿಕೊಂಡಿದೆ. ಇದಕ್ಕೆ ಪೂರಕವಾಗಿ ರಜನಿ ಕ್ರಿಷ್ ನ ಶಬ್ಧಗಳಲ್ಲೇ ಹೇಳುವುದಾದರೆ…

“ಸಮಾನತೆಯು ನಿರಾಕರಿಸಲ್ಪಟ್ಟಾಗ ಪ್ರತಿಯೊಂದು ಕೂಡ ನಿರಾಕರಿಸಲ್ಪಡುತ್ತದೆ. ಎಂ.ಫಿಲ್, ಪಿಎಚ್.ಡಿ ಪ್ರವೇಶಗಳಲ್ಲಿ ಸಮಾನತೆಗಳಿಲ್ಲ, ಮೌಖಿಕ ಪರೀಕ್ಷೆಗಳಲ್ಲಿ ಸಮಾನತೆಯಿಲ್ಲ. ಇರುವುದೊಂದೆ ಸಮಾನತೆಯ ನಿರಾಕರಣೆ, ಪ್ರೊ.ಸುಖದೇವ್ ಥೋರಟ್ ಅವರ ಶಿಫಾರಸ್ಸಿನ ನಿರಾಕರಣೆ. ಆಡಳಿತ ವಿಭಾಗದಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆಗೆ ನಿರಾಕರಣೆ. ದುರ್ಬಲ ವರ್ಗಗಳಿಗೆ ಶಿಕ್ಷಣದ ನಿರಾಕರಣೆ”.

ಈ ಮಾತುಗಳು ಶೋಷಿತ ಸಮುದಾಯಗಳಿಗಿರುವ ಎಲ್ಲ ಬಾಗಿಲುಗಳನ್ನು ಮುಚ್ಚುವ ಪಿತೂರಿಯಂತೂ ವ್ಯವಸ್ಥಿತವಾಗಿ ಸಿದ್ಧಗೊಂಡಿರುವ ಅಂಶವನ್ನು ಸ್ಪಷ್ಟಪಡಿಸುತ್ತವೆ.

rohith vemula 2

ಹೋಳಿಯ ಈ ರಂಗ ಪಂಚಮಿಯ ಸಂದರ್ಭದಲ್ಲಿ ಆದ ರಜನಿ ಕ್ರಿಶ್ ನ ಆತ್ಮಹತ್ಯೆಯು ನನಗೆ ಪೌರಾಣಿಕ ದಂತಕಥೆಯನ್ನು ನೆನಪಿಸುತ್ತಿದೆ. ಬಹುಜನ ಸಮಾಜವನ್ನು ಪ್ರತಿನಿಧಿಸುವ ಅಸುರ ರಾಜ ಹಿರಣ್ಯಕಶ್ಯಪುವಿನ ಸೋದರಿ ಹೋಳಿಕಾಳನ್ನು ಹೋಳಿಯ ದಿನ ದಹಿಸುತ್ತಾರೆ. ಇಂದು ಪುರಾಣಗಳೇ ಇತಿಹಾಸಗಳೆಂದು ಚಿತ್ರಿಸುವ, ಇತಿಹಾಸಗಳನ್ನು ತಮಗೆ ಬೇಕಾದಂತೆ ತಿರುಚಹೊರಟಿರುವ ಇಂದಿನ ಸಂಘ ಪರಿವಾರ ಪ್ರೇರಿತ ಸರ್ಕಾರ ರೋಹಿತನನ್ನು ದೇಶದ್ರೋಹಿ ಎಂದಂತೆ ರಜನಿಯನ್ನು ದುರ್ಬಲ, ಹೇಡಿ ಎನ್ನಬಹುದು. ವೈದಿಕರು ತಮ್ಮ ವಿರೋಧಿಗಳನ್ನು ಅಸುರರೆಂದು ಪುರಾಣಗಳಲ್ಲಿ ಚಿತ್ರಿಸಿದ್ದಾರೆ. ಇಂದು ಅವರು ತಮ್ಮನ್ನು ಹಾಗೂ ತಮ್ಮ ವ್ಯವಸ್ಥೆಯನ್ನು ಪ್ರಶ್ನಿಸ ಹೊರಟವರಿಗೆ ದೇಶದ್ರೋಹಿ ಎಂದು ಕರೆಯುತ್ತಿದ್ದಾರೆ. ಈ ಹಿನ್ನೆಲೆಯಿಂದ ನೋಡುವುದಾದರೆ ಶೋಷಿತ ಬಹುಜನ ಸಮುದಾಯದ ಪ್ರತಿನಿಧಿಗಳಾದ ರಜನಿಯ ಸಾಂಸ್ಥಿಕ ಹತ್ಯೆ ಮತ್ತು ಹೋಳಿಕಾಳ ದಹನ ನನಗೆ ಒಂದೇ ಅನ್ನಿಸುತ್ತಿದೆ.

ಅಷ್ಟಕ್ಕೂ ರಜನಿ ಕ್ರಿಷ್ ನೋಡಿದವರು ಅವನು ಅಷ್ಟು ಆತ್ಮಹತ್ಯೆ ಮಾಡಿಕೊಳ್ಳುವ ದುರ್ಬಲ ಮನಸ್ಥಿತಿಯವನಂತೂ ಖಂಡಿತ ಅಲ್ಲ ಎಂದು ಹೇಳೇ ಹೇಳುತ್ತಾರೆ. ನಾನೇ ಕಂಡಂತೆ ರೋಹಿತ ವೇಮುಲನ ಹೋರಾಟದ ಸಂದರ್ಭದಲ್ಲಿ ವಿವಿ ಕ್ಯಾಂಪಸ್ ನಲ್ಲಿ ಮುನ್ನಲೆಯಿಂದಲೇ ಹೋರಾಟ ಮಾಡುವ ಛಾತಿ ರಜನಿಯದಾಗಿತ್ತು. ಅಷ್ಟೇ ಅಲ್ಲ ತಮಿಳುನಾಡಿನ ಸೇಲಂನಿಂದ ಹೈದರಾಬಾದ್ ಕೇಂದ್ರೀಯ ವಿವಿ ಹಾಗೂ ಜೆಎನ್ಯು ವರೆಗಿನ ಅವನ ಏಳುಬೀಳಿನ ಯಶೋಗಾಥೆ ನಮ್ಮೆಲ್ಲರಿಗೂ ಆದರ್ಶಪ್ರಾಯವಾಗಿತ್ತು. ಇಂದು ಒಳಸಂಕಟಗಳು, ಅವಮಾನಗಳನ್ನು ಮೀರಿ ಬಂದಂತಹ ರಜನಿಯಂತಹ ಸದೃಢ ಮನೋಸ್ಥೈರ್ಯದವರನ್ನು ವಿವಿಯ ಜಾತಿ ತಾರತಮ್ಯಗಳು ಬಲಿ ತೆಗೆದುಕೊಳ್ಳುತ್ತಿರುವುದು ಆತಂಕಕಾರಿಯಾಗಿದೆ. ಇಂದಿನ ಪ್ರಜಾಪ್ರಭುತ್ವದಲ್ಲಿ ಬಂಡವಾಳಶಾಹಿ ವ್ಯವಸ್ಥೆ, ಹಿಂದು ಮೂಲಭೂತವಾದದೊಂದಿಗೆ ಮೇಳೈಸಿದ ಸಂಘ ಪರಿವಾರದ ಸರ್ಕಾರವು ಸಾಂವಿಧಾನಿಕ ಆಶಯಗಳನ್ನೇ ಬುಡಮೇಲು ಮಾಡಲು ಹೊರಟಿದೆ. ಒಂದು ಕಡೆ ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಹಲ್ಲೆ. ಇನ್ನೊಂದೆಡೆ ಜೊಳ್ಳು ದೇಶಭಕ್ತಿಯ ಮೂಲಕ ದೇಶಪ್ರೇಮದ ವ್ಯಾಖ್ಯಾನವನ್ನೇ ತಿರುಚುತ್ತಿದೆ. ಈ ಮೂಲಕ ದಲಿತ, ಆದಿವಾಸಿ, ಹಿಂದುಳಿದ ವರ್ಗ, ಅಲ್ಪಸಂಖ್ಯಾತ ವರ್ಗಗಳ ಹಕ್ಕುಗಳನ್ನು ದಮನ ಮಾಡುತ್ತಲೇ ಹೊರಟ್ಟಿದೆ.

ಗೌರವಾನ್ವಿತ ಪ್ರಧಾನಮಂತ್ರಿಗಳೇ ಇವತ್ತು ನಿಮ್ಮ ಮಾತಿನ ಧ್ವನಿವರ್ಧಕದಿಂದ ದೇಶದ ಅಷ್ಟ ದಿಕ್ಕುಗಳವರೆಗೂ ತಮ್ಮ ಛಾಪನ್ನು ಮೂಡಿಸುತ್ತಿರುವ ಸಂಗತಿ ನಿಮಗೇ ಸಂತಸ ತಂದಿರಬಹುದು. ಪ್ರಜಾಪ್ರಭುತ್ವ ಎಂದರೆ ಯಾವಾಗಲೂ ಚುನಾವಣೆಗಳನ್ನು ಗೆಲ್ಲುವ ಗುಂಗಿನಲ್ಲಿ ಇರುವುದಷ್ಟೆ ಅಲ್ಲ. ಅದಕ್ಕೂ ಮೀರಿದ ಸಮಸ್ಯೆಗಳು ಈ ದೇಶದಲ್ಲಿ ಜೀವಂತ ಹೆಣವಾಗಿ ಬಿದ್ದಿವೆ. ಸ್ವಲ್ಪ ಅತ್ತ ಕಡೆಗೂ ಗಮನಹರಿಸಿರಿ. ಇಲ್ಲವಾದರೆ ಇತಿಹಾಸ ನಿಮ್ಮಂಥ ಮಹಾನುಭಾವರನ್ನು ಬಹಳ ಕಂಡುಬಿಟ್ಟಿದೆ. ಇದಕ್ಕೆ ನೀವೇನೂ ಹೊಸ ಸಾರಥಿಗಳೇನೂ ಅಲ್ಲ. ನಿಮ್ಮ ಲ್ಲಿ ಎಂಥ ಕ್ಷಾತ್ರ ಎದೆಗಾರಿಕೆ ಇದ್ದರೂ ಸಹಿತ ಸರಿದಾರಿಯಲ್ಲಿ ನಡೆಯದಿದ್ದರೆ ಈ ದೇಶದ ಜನ ಸುಮ್ಮನೆ ಬಿಡುವುದಿಲ್ಲ ಎನ್ನುವ ಅಂಶ ನಿಮಗೆ ಇತಿಹಾಸದ ಮೂಲಕ ಮನದಟ್ಟು ಮಾಡಿಕೊಳ್ಳಬೇಕಾಗಿದೆ.

~~~

 

Manjunath Naragund is a freelance writer from Gadag (Karnataka); he has completed MA in Political science from University of Hyderabad in 2014-16.