Round Table India
You Are Reading
ಆಶ್ರಯಾನ್ವೇಷಣೆ: ಒಂದು ಮುಂದೂಡಲ್ಪಟ್ಟ ಕನಸು
0
Features

ಆಶ್ರಯಾನ್ವೇಷಣೆ: ಒಂದು ಮುಂದೂಡಲ್ಪಟ್ಟ ಕನಸು

suma priyadarshini bk

 

 

ಸುಮಾ ಪ್ರಿಯದರ್ಶಿನಿ ಬಿ ಕೆ

suma priyadarshini bk

ದಲಿತರು ಹಾಗು ಅಸಮಾನತೆ ಎನ್ನುವುದು ತಲತಲಾಂತರಗಳಿಂದ ನಡೆದುಕೊಂಡೇ ಬಂದಿದೆ. ಇಂದಿನ ಡಿಜಿಟಲ್ ಯುಗದಲ್ಲೂ ಅಸ್ಪೃಶ್ಯತೆಯಿನ್ನೂ ಹಾಗೆ ಉಳಿದುಕೊಂಡಿದೆ ಮತ್ತು ನಾನಾ ರೀತಿಗಳಲ್ಲಿ ಕಾಣಸಿಗುತ್ತದೆ. ಸಮಾಜದ ಎಲ್ಲಾ ವರ್ಗ, ವಿಷಯ ಮತ್ತು ವಸ್ತುಗಳು ಒಂದೆಡೆಯಾದರೆ ದಲಿತರಿಗೆ ಈ ಯಾವುದರಲ್ಲೂ ಸ್ಥಾನ ಮಾನಗಳಿಲ್ಲ ಎಂಬುದು ಪದೇ ಪದೇ ಜಗತ್ತಿಗೆ ತಿಳಿಯುತ್ತಲಿದೆ. ಯಾವುದೇ ಕ್ಷೇತ್ರದಲ್ಲಿ ಸೂಕ್ಷ್ಮವಾಗಿ ಗಮನಿಸಿದರೆ ಅಸ್ಪೃಶ್ಯತೆ ಎಂಬುದು ಬೂದಿಮುಚ್ಚಿದ ಕೆಂಡದಂತಿದೆ. ತುಮಕೂರು ವಿಶ್ವವಿದ್ಯಾನಿಲಯದ Dr. ಅಂಬೇಡ್ಕರ್ ಅಧ್ಯಯನ ವಿಭಾಗದ ಅಡಿಯಲ್ಲಿ ನಡೆಯುತ್ತಿರುವ ‘ದಲಿತ ಸಂಸ್ಕೃತಿ ಮತ್ತು ಸಾಹಿತ್ಯ: ಹೊಸ ಆಯಮಗಳು’ ವಿಚಾರ ಸಂಕಿರಣದ ವಿಷಯ ದಲಿತರ ಸಂಘರ್ಷ ಹಾಗು ನಡೆದು ಬಂದ ದಾರಿ ಗಮನದಲ್ಲಿಟ್ಟುಕೊಂಡು ಈ ಸಂಶೋಧನಾ ಲೇಖನದಲ್ಲಿ ನಾನು ದಲಿತರು ಹಾಗು ವಸತಿ ಸಮಸ್ಯೆ ಬಗ್ಗೆ ಕೆಲವೊಂದು ಘಟನೆಗಳ ಮೂಲಕ ತಿಳಿಸಲು ಇಚ್ಚಿಸುತ್ತೇನೆ.

ಸರಿಸುಮಾರು ೧೦೦ ವರ್ಷಗಳ ಹಿಂದೆ ಡಾ. ಬಿ. ಆರ್. ಅಂಬೇಡ್ಕರ್ ಅವರು ಬಾಡಿಗೆಗೆ ಮನೆ ಪಡೆಯಲು ಸಾಧ್ಯವಾಗದೆ ಬರೋಡ ತೊರೆದು ಮುಂಬೈಗೆ ಬರಬೇಕಾಯಿತು. ಅವರು ‘Waiting for a Visa’ ಲೇಖನದಲ್ಲಿ ಹೀಗೆ ವಿವರಿಸುತ್ತಾರೆ: ೧೯೧೩ ರಿಂದ ೧೯೧೭ ರವರೆಗೆ ಅಮೆರಿಕಾದ ಕೊಲಂಬಿಯಾ ಯೂನಿವರ್ಸಿಟಿ ಯಲ್ಲಿ ಓದು ಮುಗಿಸಿದ್ದ ಡಾ. ಅಂಬೇಡ್ಕರ್ ಅವರು ೧೯೧೮ ರಲ್ಲಿ ಇಂಗ್ಲೆಂಡಿನ ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ಅಲ್ಲಿ ಓದುತ್ತಿರುತ್ತಾರೆ. ಬರೋಡ ಸಂಸ್ಥಾನವು ಡಾ. ಅಂಬೇಡ್ಕರ್ ಅವರ ವಿದ್ಯಾಭ್ಯಾಸವನ್ನು ಪ್ರಾಯೋಜಿಸಿದ್ದರಿಂದ ಸಂಸ್ಥಾನಕ್ಕೆ ಕೆಲಸ ಮಾಡಲು ಬರೋಡಕ್ಕೆ ಹಿಂದಿರುಗಿ ಬರಬೇಕಾಗುತ್ತದೆ. ಬರೋಡ ಸ್ಟೇಷನ್ನಿಗೆ ಬಂದಾಗ ಹಿಂದೂ ಹೋಟೆಲ್ ಗಳು ಅಸ್ಪ್ರುಶ್ಯತೆಯ ಕಾರಣ ವಸತಿ ಕೊಡುವುದಿಲ್ಲವಾದ್ದರಿಂದ ಪಾರ್ಸಿಗಳು ಅಸ್ಪ್ರುಶ್ಯತೆ ಅನುಸರಿಸುವುದಿಲ್ಲವೆಂದು ಅವರ ವಸತಿ ನಿಲಯದಲ್ಲಿ ಉಳಿಯುತ್ತಾರೆ. ಆದರೆ ಹತ್ತೇ ದಿನದ ನಂತರ ಪಾರ್ಸಿ ಯುವಕರು ದೊಣ್ಣೆಗಳನ್ನು ಹಿಡಿದುಕೊಂಡು ಬಂದು ಬೆದರಿಸಿ ಅಂದು ರಾತ್ರಿಯ ಒಳಗೆ ತೆರವು ಮಾಡಲು ಗಡುವು ಕೊಡುತ್ತಾರೆ. ‘ನಾನು ತಬ್ಬಿಬ್ಬಾದೆ. ನನ್ನ ಹೃದಯ ಕುಗ್ಗಿತು. ತೀವ್ರ ಶೋಕದಿಂದ ಕಣ್ಣೀರಿಟ್ಟೆ. ನನಗೆ ಜೀವಕ್ಕಿಂತ ಅಮೂಲ್ಯವಾಗಿದ್ದ ಆಸರೆಯನ್ನು ಕಸಿದುಕೊಂಡಿದ್ದರು. ಈ ಆಸರೆ ಸೆರೆಯಾಳಿನ ಗೂಡಿಗಿಂತ ಉತ್ತಮವಾಗಿರಲಿಲ್ಲ. ಆದರೆ ನನಗೆ ಅಮೂಲ್ಯವಾಗಿತ್ತು’. ಎಂದು ಹೇಳುತ್ತಾರೆ. ಅಂಬೇಡ್ಕರ್ ಸ್ನೇಹಿತರು ಕೂಡ ದಲಿತ ಎನ್ನುವ ಕಾರಣಕ್ಕೆ ಅವರಿಗೆ ಉಳಿದುಕೊಳ್ಳಲು ಅವಕಾಶ ಮಾಡಿಕೊಡಲಾಗಲಿಲ್ಲ. ಈ ಘಟನೆಗಳು ಬಾಬಾಸಾಹೇಬ್ ಮನಸಿನಲ್ಲಿ ಗಟ್ಟಿಯಾಗೇ ಬೇರೂರುತ್ತವೆ. ಡಾ. ಅಂಬೇಡ್ಕರ್ ಜಾತಿ ನಿರ್ಮೂಲನಾ ಆಂದೋಲನಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಆದರೂ ವಸತಿ ತಾರತಮ್ಯ, ಜಾತಿ ಹಾಗು ಧರ್ಮದ ಹೆಸರಿನಲ್ಲಿ ನಡೆಯುತ್ತಲೇ ಇದೆ.

ಭಾರತ ದೇಶದಲ್ಲಿ ಪ್ರಪಂಚದಲ್ಲೇ ಅತಿ ಹೆಚ್ಚು ನಗರಗಳಲ್ಲಿ ಬಡತನ ಹಾಗೂ ವಸತಿರಹಿತ ಜನರಿದ್ದಾರೆ. ೨೦೧೧ರ ಜನಗಣತಿಯಲ್ಲಿ ವಸತಿರಹಿತ ಜನರ ಪ್ರಾತಿನಿಧ್ಯವು ಸರಿಯಾಗಿ ಆಗಿಲ್ಲವೆಂದು ಸಂಶೋಧಕರು ಅಭಿಪ್ರಾಯ ಪಟ್ಟು, ಜನಗಣತಿಯಲ್ಲಿ ೧.೮ ಮಿಲಿಯನ್ ನಮೂದಿಸಿದ್ದರೂ ವಾಸ್ತವವಾಗಿ ೩ ಮಿಲಿಯನ್ ಜನರು ಎಂದಿದ್ದಾರೆ. ೧೩% ಗ್ರಾಮೀಣ ಕುಟುಂಬಗಳು ಇಂದಿಗೂ ಕಚ್ಚಾ ಎಂದರೆ ಒಂದು ರೂಮಿನ ತಾತ್ಕಾಲಿಕ ಸ್ಥಳಗಳು, ಕೆಳ ಗುಣಮಟ್ಟದ ಸಾಮಗ್ರಿಗಳಿಂದ ಕೂಡಿದ್ದು ಸರಿಯಾದ ವಾತಾವರಣ ಮತ್ತು ನೈರ್ಮಲ್ಯದ ವ್ಯವಸ್ಥೆಗಳಿಲ್ಲದ , ಮಳೆ, ಗಾಳಿ ಧೂಳಿನಿಂದ ರಕ್ಷಿಸಲ್ಪಡದ ಜಾಗಗಳಲ್ಲಿದ್ದಾರೆ.. ೪೦ ಮಿಲಿಯನ್ ಗ್ರಾಮೀಣ ವಸತಿ ಅವಶ್ಯಕವಿದ್ದು ೯೦% ಗ್ರಾಮೀಣ ವಸತಿ ಅವಶ್ಯಕತೆ ಇರುವ ಜನರು ಇಂದಿಗೂ ಬಡತನ ರೇಖೆಯ ಕೆಳಗೆ ವಾಸಿಸುತ್ತಿದ್ದಾರೆ. ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಪ್ರಕಾರ ಎಲ್ಲಾ ಸರ್ಕಾರಗಳು ಬಾದ್ಯತೆಯಿಂದ ಖಾಸಗಿ ಭೂಮಾಲಿಕರು ಮತ್ತು ಅಭಿವರ್ಧಕರ ತಾರತಮ್ಯದಿಂದ ರಕ್ಷಿಸಬೇಕಾಗಿದೆ. ಭಾರತದ ಪರಂಪರೆಯಲ್ಲಿ ಪರಿಶಿಷ್ಟ ಜಾತಿ ಹಾಗು ಪರಿಶಿಷ್ಟ ಪಂಗಡದವರಿಗೆ ಜಾತಿ ತಾರತಮ್ಯ; ಹಿಂದುಳಿದ ಪಂಗಡದವರಿಗೆ ಮಹಿಳೆಯರಿಗೆ ಅದರಲ್ಲೂ ಏಕ ಮತ್ತು ವಿಧಿವೆಯರಿಗೆ ಮತ್ತು ಹಲವಾರು ಜಾತಿ, ಅಲ್ಪಸಂಖ್ಯಾತರುಗಳಿಗೆ ತಾರತಮ್ಯ ನಡೆಯುತ್ತಲೇ ಇದೆ. ವಸತಿರಹಿತ ಹಾಗು ಕೊಳಗೇರಿಗಳಲ್ಲಿ ಕಚ್ಚಾ ಮನೆಗಳಲ್ಲಿ ವಾಸಿಸುವ ಜನರು ಈ ವರ್ಗಗಳಿಗೆ ಸೇರಿದವರೇ ಆಗಿರುತ್ತಾರೆ.

ಇಸ್ಮಾಯಿಲ್ ಕನ್ನಡದ ಪ್ರಮುಖ ದಿನಪತ್ರಿಕೆ ಪ್ರಜಾವಾಣಿಯ ಸಂಪಾದಕ. ಇವರು ಎಲ್ಲಿದೆ ನಮ್ಮನೆ? ಎಂಬ ಲೇಖನದಲ್ಲಿ ಬೆಂಗಳೂರು ಮಹಾನಗರದಲ್ಲಿ ಬಾಡಿಗೆಗೆ ಅನುಭವಿಸಿದ ಕಷ್ಟಗಳ ಬಗ್ಗೆ ಬರೆದಿದ್ದಾರೆ; ಎರಡು ವರ್ಷದ ಹಿಂದೆ ನಾಗರಾಜ ಹೆತ್ತೂರು, ಪತ್ರಿಕೋದ್ಯಮಿ, (ಮಾಜಿ ಪ್ರಧಾನಿ ದೇವೇಗೌಡ, ಭಾರತದೇಶ ಇವರು ಪ್ರತಿನಿಧಿಸುವ ಸ್ಥಳ). ಹಾಸನದಲ್ಲಿ ಖಾಸಗಿ ವಸತಿ ಹುಡುಕಾಟದಲ್ಲಿ ೫೦ ಮನೆ ಮಾಲೀಕರುಗಳಿಂದ ನಿರಾಕರಿಸಲ್ಪಡುತ್ತಾರೆ. ಅಂಬೇಡ್ಕರ್ ಕೂಡ ಇಂಥಹುದೇ ಪರಿಸ್ಥಿತಿಯನ್ನು ಅನುಭವಿಸಿರುವ ಬಗ್ಗೆ ಈಗಾಗಲೇ ನಾನು ಪ್ರಸ್ತಾಪಿಸಿದ್ದೇನೆ. ಶಿಕ್ಷಕ ಸಂತೋಷ ಗುಡ್ಡಿಯಂಗಡಿ, ಮತ್ತು ಹೈದೆರಾಬಾದಿನಲ್ಲಿ ಸ್ಕೈ ಬಾಬಾ ಕೂಡ ಇಂತಹುದೇ ಸಮಸ್ಯೆಯನ್ನು ಅನುಭವಿಸಿರುವ ಬಗ್ಗೆ ಬರೆದಿದ್ದಾರೆ. ಹೇಗೆ ಹಲವಾರು ಪತ್ರಕರ್ತರು ಹಾಗು ಇತರೆ ಸರ್ಕಾರಿ ಹಾಗು ಸರ್ಕಾರೇತರೇ ಇಲಾಖೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವವರು ನಗರಗಳಲ್ಲಿ ವಾಸಿಸಲು ಸೂರಿಲ್ಲದೆ ಖಾಸಗಿ ಮಾಲೀಕತ್ವದ ವಸತಿ ಪಡೆಯಲು ಹೋದಾಗ ಅನುಭವಿ ಸಿರುವ ಕಹಿ ಘಟನೆಗಳ ಪಟ್ಟಿ ಬೆಳೆಯುತ್ತಲೇ ಇದೆ. ಇದರಿಂದ ನಗರಗಳಲ್ಲಿ ಖಾಸಗಿ ಮಾಲೀಕತ್ವವು ಬಹುತೇಕ ಮೇಲ್ಜಾತಿಯವರ ಕೈಯಲ್ಲಿರುವುದು ಸಾಬೀತಾಗುತ್ತದೆ. ಬೆಂಗಳೂರು ಮಹಾನಗರದ ಮುಖ್ಯ ಭಾಗದಲ್ಲಿರುವ ಮಲ್ಲೇಶ್ವರಂ, ಬಸವನ ಗುಡಿ ಹಾಗು ಇತರ ಪ್ರದೇಶಗಳಲ್ಲಿ ಬಹುತೇಕ ಮೇಲ್ಜಾತಿಯವರೇ ವಾಸಿಸುತ್ತಿರುವ ಕಾರಣವೇನೆಂದರೆ ಹಿಂದಿನ ಕಾಲದಲ್ಲಿ ಮೇಲ್ಜಾತಿಯವರು ಭೂಸ್ವಾಧೀನ ಪಡಿಸಿಕೊಂಡಿರುವುದು ಹಾಗು ಇಂದಿಗೂ ಇದೆ ಪರಿಸ್ಥಿತಿ ಮುಂದುವರೆದಿದೆ.

ವಸತಿ ಹಕ್ಕನ್ನು ೧೯೪೮ ರಲ್ಲಿ ಮಾನವಹಕ್ಕು ಎಂದು Universal declaration of Human rights ರಲ್ಲಿ ಗುರುತಿಸಲಾಗಿದೆ. ಇದೊಂದು ಸಾರ್ವತ್ರಿಕ ಹಕ್ಕು ಹಾಗೂ ಮೂಲಭೂತ ಹಕ್ಕು ಎಂದು ಪರಿಗಣಿಸಲಾಗಿದೆ. ಹಲವಾರು ಅಂತರರಾಷ್ಟ್ರೀಯ ಅಧ್ಯಯನಗಳು ಹಾಗು ಸರ್ಕಾರಗಳು ಈ ಹಕ್ಕನ್ನು ಪ್ರಚಾರ ಮಾಡಲು ಮತ್ತು ರಕ್ಷಿಸಲು ಹೊಣೆಯನ್ನು ಹೊತ್ತಿದೆ. ಇಂದು ೧೨ ಕ್ಕಿಂತಲೂ ಹೆಚ್ಚು UN Instruments ವಸತಿ ಹಕ್ಕನ್ನು ಪ್ರತಿಪಾದಿಸುತ್ತವೆ. ಇಷ್ಟೆಲ್ಲಾ ಇದ್ದರು ಇಂದಿಗೂ ಕೂಡ ಸಾಕಷ್ಟು ಜಾಗಗಳಲ್ಲಿ ವಸತಿ ಎನ್ನುವುದು ಒಂದು ದೊಡ್ಡ ಸವಾಲಾಗೆ ಉಳಿದಿದೆ.

ಮಧ್ಯಮ ವರ್ಗಗಳಲ್ಲಿ ವಾಸಿಸಲು ಜಾಗ ಹಾಗು ವಸತಿ ಎರಡರ ಮಾಲೀಕತ್ವದಲ್ಲಿ ತಾರತಮ್ಯ ಇರುವುದರಿಂದ ಬಡವರ ಪರಿಸ್ಥಿತಿಯ ಬಗ್ಗೆ ವಿಶ್ವಸಂಸ್ಥೆಯ ವಿಶೇಷ ರಪ್ಪೋರ್ಟ್ನ್ರ್ ತಮ್ಮ ಮಧ್ಯಂತರ ವರದಿಯಲ್ಲಿ — ಗೃಹನಿರ್ಮಾಣದ ಹಕ್ಕನ್ನು ಹಕ್ಕಿನಿಂದ ಕೂಗುವುದು ಮಾತ್ರವಲ್ಲ. ಇದು ಸಾಮಾನ್ಯವಾಗಿ ಮಾನವ ಹಕ್ಕುಗಳಂತೆ ಕಾಂಕ್ರೀಟ್ ಮಾನದಂಡಗಳನ್ನು ನೀಡುತ್ತದೆ ಮತ್ತು ಅದು ಪ್ರಗತಿಗೆ ಅನುಷ್ಠಾನಗೊಳಿಸಬಹುದು ಮತ್ತು ಅಳೆಯಬಹುದು. ಫಲಿತಾಂಶಗಳು ರೂಪಾಂತರವಾಗಬಲ್ಲವು ಮತ್ತು ಕೊಡುಗೆಯಿಂದ ಸಾಮಾಜಿಕ ನ್ಯಾಯದತ್ತ ಕರೆದೊಯ್ಯಬಹುದು. ಮಿಸ್ ಲೈಲಾನಿ ಫರ್ಹಾ ಅಂತಿಮ ವರದಿಯನ್ನು ಹೆಚ್ ಆರ್ ಸಿ ನ ಮೋ ೩೪ ನೇ ಸೆಶನ್ ಮಾರ್ಚ್ ೨೦೧೭ ಜೆನೀವಾ ದಲ್ಲಿ ಪ್ರಸ್ತುತ ಪಡಿಸಿದರು. ಮಿಸ್ ಲೈಲಾನಿ ಫರ್ಹಾ ಯು. ನ್ ನ ವಿಶೇಷ ರೆಪ್ಪೆರ್ಟೂರ್ ಆಗಿ ವಸತಿಯು ಮಾನವರ ಜೀವನಮಟ್ಟದ ಒಂದು ಪ್ರಮುಖ ಅಂಗವಾಗಿ ಹಾಗೂ ಈ ವಿಷಯದಲ್ಲಿ ತಾರತಮ್ಯ ಸಲ್ಲದೆಂದು ಏಪ್ರಿಲ್ 2016 ನಲ್ಲಿ ಇಂಡಿಯಾ ಗೆ ಭೇಟಿ ನೀಡಿ ಇಲ್ಲಿನ ವಸತಿ ಹಾಗು ನಿರಾಶ್ರಿತರ ಪರಿಸ್ಥಿತಿಯನ್ನು ಸಾಮಾಜಿಕ ಮತ್ತು ಶಾಸಕಾಂಗ ಮಟ್ಟದಲ್ಲಿ ಕಾರ್ಯಕ್ರಮಗಳು ಹಾಗೂ ನೀತಿಗಳಾಗಿ ರಾಷ್ಟೀಯ, ಅಂತರರಾಷ್ಟ್ರೀಯ ಮಟ್ಟದಲ್ಲಿ ಈ ವಿಷಯ ವನ್ನು ಪ್ರಸ್ತುತಪಡಿಸಲಾಯಿತು. ೨೦೧೧ರ ಜನಗಣತಿಯ ಪ್ರಕಾರ ಭಾರತದಲ್ಲಿ ಸುಮಾರು ೧೩. ೭೫ ಮಿಲಿಯನ್ ವಸತಿಗಳು ಅಥವಾ ಅಂದಾಜು ೬೫-೭೦ ಮಿಲಿಯನ್ ಜನರು ಇನ್ನೂ ಹಲವು ಪಟ್ಟಣಗಳಲ್ಲಿ ಅಂದರೆ ಮುಂಬೈ ಯಂತಹ ಕೊಳಗೇರಿಗಳಲ್ಲಿ ಸುಮಾರು ೫೦% ನಷ್ಟು ನಮ್ಮ ನಗರ ಜನಸಂಖ್ಯೆ ಇದೆ. ಚೆನ್ನೈ ,ಹೈದೆರಾಬಾದ್ ಹಾಗು ಕೊಲ್ಕತ್ತಾ ನಗರಗಳಲ್ಲಿ ೫೦%ಕ್ಕೂ ಹೆಚ್ಚು ಮನೆಗಳು ಕೊಳಗೇರಿಗಳಲ್ಲಿವೆ.
“ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಾನವ ಹಕ್ಕುಗಳ ಬದ್ಧತೆಗಳ ಆಧಾರದ ಮೇಲೆ ರಾಷ್ಟ್ರೀಯ ವಸತಿ ಶಾಸನವನ್ನು ಅಳವಡಿಸಿಕೊಳ್ಳಲು ಇಂದು ಭಾರತಕ್ಕೆ ಸಮಯ” ಎಂದು ಲೈಲಾನಿ ಫರ್ಹಾ, ಯುಎನ್ ವಿಶೇಷ ವರದಿಗಾರ ಅವರು ಶಿಫಾರಸು ಮಾಡಿದ್ದಾರೆ.

ನನ್ನ ಪ್ರಕಾರ, ಭಾರತದಲ್ಲಿ ವಸತಿ ಸಮಸ್ಯೆ ಪ್ರಮುಖವಾಗಿ ಎರಡು ರೀತಿಯದ್ದಾಗಿದೆ: ಒಂದು, ನಿರಾಶ್ರಿತ ಜನಸಂಖ್ಯೆ ಮತ್ತು ಇನ್ನೊಂದು ವಸತಿ ಹೊಂದಲು ಅಸಾಧ್ಯವಾದ್ದರಿಂದ, ಜಾತಿ ಮತ್ತು ಧರ್ಮದ ಆಧಾರದ ಮೇಲೆ ತಾರತಮ್ಯ ಮಾಡುವುದು. ಎಲ್ಲಾ ರಾಜ್ಯ ಸರ್ಕಾರಗಳ ಜೊತೆಗೆ ಕೇಂದ್ರ ಸರಕಾರವು ಒಂದು ಬೃಹತ್ ವಸತಿ ಕಾರ್ಯಕ್ರಮವನ್ನು ಮಾಡಬೇಕು, ಇದರಿಂದಾಗಿ ಜನರಿಗೆ ಕೆಲವು ರೀತಿಯ ವಸತಿ ಸೌಕರ್ಯಗಳು ದೊರಕಿದಂತಾಗುತ್ತದೆ. ಕೊಳೆಗೇರಿ ಮತ್ತು ರಸ್ತೆ ಹಾದಿಗಳಲ್ಲಿ ವಾಸಿಸುವ ಜನರನ್ನು ಕೆಲವು ವಸತಿ ಯೋಜನೆಗಳ ಅಡಿಯಲ್ಲಿ ತರಬೇಕು. ಹೀಗಾಗಿ ಭಾರತ ದೇಶದಲ್ಲಿ ಯಾವುದೇ ಜನರು ನಿರಾಶ್ರಿತರಾಗಿಲ್ಲ ಎಂದು ಖಚಿತಪಡಿಸಿಕೊಳ್ಳಬಹುದು. ನಮ್ಮ ದೇಶದಲ್ಲಿ ನಡೆಯುತ್ತಿರುವ ಸಾಮಾಜಿಕ ಪೂರ್ವಾಗ್ರಹ ಪೀಡಿತರಿಂದ ಮನೆ ಬಾಡಿಗೆಗೆ ಅಥವಾ ಕೊಂಡುಕೊಳ್ಳಲು ದಲಿತ ಅಥವಾ ಮುಸ್ಲಿಮರಿಗೆ ಕನಸಾಗೇ ಉಳಿದಿದೆ. ಮುಸ್ಲಿಮರು ಒಟ್ಟು ಜನಸಂಖ್ಯೆಯಲ್ಲಿ 14% ಪ್ರತಿನಿಧಿಸುತ್ತಾರೆ. ದೇಶದ ವಿವಿಧ ಭಾಗಗಳಲ್ಲಿ ವಿವಿಧ ವಿಧಾನಗಳಲ್ಲಿ ವಸತಿ ಪ್ರಕಟಣೆಯಲ್ಲಿ ಮುಸ್ಲಿಮರ ವಿರುದ್ಧ ತಾರತಮ್ಯ. ಉದಾಹರಣೆಗೆ, ಎನ್ಸಿಆರ್ನಲ್ಲಿ ಖಾಸಗಿ ಬಾಡಿಗೆ ಸೌಕರ್ಯಗಳ ಪ್ರವೇಶದ ಮೇಲಿನ ಅಧ್ಯಯನವು ಮುಸ್ಲಿಮರಿಗೆ (ಜೊತೆಗೆ ದಲಿತರು) ವಿರುದ್ಧ ತಾರತಮ್ಯವು ಗೃಹನಿರ್ಮಾಣ ಪ್ರವೇಶಕ್ಕೆ ತಡೆಗಟ್ಟುತ್ತದೆ ಎಂದು ತೋರಿಸುತ್ತದೆ.

ದಿನಗಳು ಕಳೆದಂತೆ ನಮ್ಮಲ್ಲಿ ಮಾನವೀಯ ಮೌಲ್ಯಗಳು ಕೂಡ ನಶಿಸಿದಂತೆ ಕಾಣುತ್ತಿದೆ ಇದಕ್ಕೆ ಜೀವಂತ ಉದಾಹರಣೆ ನಮ್ಮಲ್ಲಿರುವ ಅಮಾನವೀಯ ಜಾತಿ ಬೇಧ!.ಜಾತಿ ಪದ್ದತಿಯ ಬಗ್ಗೆ ತಿಳಿದುಕೊಳ್ಳಬೇಕಾದ ವಿಷಯವೆಂದರೆ ಅದು ಯಾವುದೇ ಕಾನೂನುಬದ್ಧ ಶಕ್ತಿ ಇಲ್ಲದೆಯೇ ಅಸ್ತಿತ್ವದಲ್ಲಿದೆ, ವಿಚಿತ್ರ ಆದರೆ ನಗ್ನ ಸತ್ಯ.

ನಾನು ಬರೆಯುತ್ತಿರುವ ವಿಷಯ ತುಂಬಾ ದೊಡ್ಡದು ಮತ್ತು ವಿಶಾಲವಾದದ್ದು ಎಂಬ ಅರಿವಿದೆ. ಆದರೆ ಈ ಲೇಖನದ ಮೂಲಕ ಸರಳ ಮತ್ತು ಸಂಕ್ಷಿಪ್ತವಾಗಿ ಹೇಳ ಬಯಸಿದ ವಿಷಯವೇನೆಂದರೆ ವಸತಿ ಎನ್ನುವ ಮಾನವ ಹಕ್ಕು ನಮ್ಮ ದೇಶದಲ್ಲಿ ಕೇವಲ ಕೆಲ ಜಾತಿಯ ಸ್ವತಾಗಿ ಉಳಿದಿದೆ ಎಂಬ ವಿಪರ್ಯಾಸ. ಅನೇಕ ವರ್ಷಗಳಿಂದ ಈ ಪರಿಸ್ಥಿತಿಯ ವಿರುದ್ಧ ಸಾಕಷ್ಟು ಹೋರಾಟಗಳು ನಡೆದಿದ್ದರೂ ಇಂದಿಗೂ ವಸತಿಗಾಗಿ ದಲಿತರು ಪಟ್ಟಣ ಪ್ರದೇಶಗಳಲ್ಲಿ ತೊಂದರೆ ಅನುಭವಿಸುತ್ತಿದ್ದಾರೆ ಎಂಬುದು ಅಷ್ಟೇ ಸತ್ಯ. ಇಂಗ್ಲಿಷ್ ನಲ್ಲಿ ಹೇಳುವಂತೆ Enough is enough. ಇನ್ನಾದರೂ ಕಾನೂನಿನ ಮಧ್ಯಸ್ತಿಕೆಯ ಅವಶ್ಯಕತೆ ಇದೆ. ವಸತಿ ಸೌಲಭ್ಯ ಮಾನವನ ಹಕ್ಕು ಎಂಬ ಮಾತು ಎಲ್ಲ ವರ್ಗದವರಿಗೂ ಗಟ್ಟಿಯಾಗಿ ಹೇಳಲೇ ಬೇಕಾದ ಸಮಯ ಬಂದಿದೆ. ಆಫ್ರಿಕನ್ ಅಮೆರಿಕನ್ ಲೇಖಕಿ ಲೊರೈನ್ ಹಾನ್ಸ್ ಬೆರಿ ತಮ್ಮ ಕುಟುಂಬದವರು ಚಿಕಾಗೊ ದಲ್ಲಿ ಅನುಭವಿಸಿದ ವಸತಿ ಸಮಸ್ಯೆ ಯನ್ನು ಆಧಾರವಾಗಿಟ್ಟುಕೊಂಡು ಕಪ್ಪು ಅಮೆರಿಕನ್ನರು ಎದುರಿಸುತ್ತಿದ್ದ ಜನಾಂಗೀಯ ಪ್ರತ್ಯೇಕತೆ ಯ ಅರಿವು ಮೂಡಿಸಲು ‘A Raisin in the Sun’ ನಾಟಕ ರಚಿಸುತ್ತಾರೆ. ಅಂಬೇಡ್ಕರ್ ಅವರಿಂದ ಇಲ್ಲಿನವರಿಗೆ ಈ ಸಮಸ್ಯೆಯ ಬಗ್ಗೆ ಬರೆಯುತ್ತಿರುವ ಎಲ್ಲ ಲೇಖಕರ ಕನಸು ಲ್ಯಾನ್ಗ್ಸ್ಟನ್ ಹೂಗ್ಹ್ಸ್ ನ ‘ ಮುಂದೂಡಲ್ಪಟ್ಟ ಕನಸಾಗದೆ’ ವಸತಿ ಎನ್ನುವ ಹಕ್ಕು ಮಾನವನ ಜೀವನದಲ್ಲಿ ಹಾಸುಹೊಕ್ಕಾಗಲಿ ಎಂದು ಆಶಿಸುತ್ತೇನೆ.

~

References

Dr Ambedkar B R, 1936, Waiting for a Visa. Available from: http://www.columbia.edu/itc/mealac/pritchett/00ambedkar/txt_ambedkar_waiting.html#two

ಇಸ್ಮಾಯಿಲ್ ಎನ್‌.ಎ.ಎಂ., 2014, ಎಲ್ಲಿದೆ ನಮ್ಮನೆ? Available from:

https://www.prajavani.net/article/%E0%B2%8E%E0%B2%B2%E0%B3%8D%E0%B2%B2%E0%B2%BF%E0%B2%A6%E0%B3%86-%E0%B2%A8%E0%B2%AE%E0%B3%8D-%E0%B2%AE%E0%B2%A8%E0%B3%86

Langston Hughes, 1951, Dreams Deferred. Available from https://www.loc.gov/rr/program/journey/hughes-transcript.html

Leilani Farha, 2017, Report of the Special Rapporteur on adequate housing as a component of the right to an adequate standard of living, and on the right to non-discrimination in this context, on her mission to India. Available from: https://documents-dds-ny.un.org/doc/UNDOC/GEN/G17/002/82/PDF/G1700282.pdf?OpenElement

Lorraine Hansberry, 1959, A Raisin in the Sun’ Vintage; Reprint, Reissue edition (29 November 2004)

Nagaraj Hettur, 2016, In search of a house to rent: Untouchability and humiliation I experienced today. Available from http://roundtableindia.co.in/index.php?option=com_content&view=article&id=8616:in-search-of-a-house-to-rent-untouchability-and-humiliation-i-experienced-today&catid=119&Itemid=132

ಸಂತೋಷಗುಡ್ಡಿಯಂಗಡಿ, 2015, ಷರತ್ತುಗಳು ಅನ್ವಯಿಸುತ್ತವೆ Available from: http://korabadu15.blogspot.com/2015/03/blog-post_27.html

Sky Baaba, 2016, Vegetarians Only, Available from : http://roundtableindia.co.in/index.php?option=com_content&view=article&id=8802:vegetarians-only&catid=119:feature&Itemid=132x

 ~~~

ಸುಮಾ ಪ್ರಿಯದರ್ಶಿನಿ ಬಿ ಕೆ

 ಸಹಾಯಕ ಪ್ರಾಧ್ಯಾಪಕರು, ಇಂಗ್ಲಿಷ್ ಸ್ನಾತಕೋತ್ತರ ವಿಭಾಗ, ಸರ್ಕಾರಿ ಕಲಾ ಕಾಲೇಜು, ಡಾ. ಬಿ. ಆರ್. ಅಂಬೇಡ್ಕರ್ ವೀಧಿ, ಬೆಂಗಳೂರು -೧