Round Table India
You Are Reading
ಹಿಮಗೈಯಲ್ಲಿ ಹಿಡಿದ ಸುಡುಗೆಂಡ: ಎನ್ ಕೆ ಕಾವ್ಯ
0
Features

ಹಿಮಗೈಯಲ್ಲಿ ಹಿಡಿದ ಸುಡುಗೆಂಡ: ಎನ್ ಕೆ ಕಾವ್ಯ

nk hanumataya

 

ರಹಮತ್ ತರೀಕೆರೆ (Rahamat Tarikere)

ನಮ್ಮ ನಡುವಿನ ಪ್ರತಿಭಾವಂತ ಕವಿಗಳಲ್ಲಿ ಒಬ್ಬರಾಗಿದ್ದ ಎನ್.ಕೆ. ಹನುಮಂತಯ್ಯ (1974-2010), ಸಾಯಬಾರದ ವಯಸ್ಸಿನಲ್ಲಿ ಸತ್ತು ಆರು ವರ್ಷಗಳಾದವು. ಈಗಲೂ ಅವರ ನೆನಪು ಹಸಿಯಾಗಿಯೇ ಕಾಡುತ್ತಿದೆ. ‘ಸಂಬಂಧ’ಗಳನ್ನು ಸಂಭಾಳಿಸಲಾಗದೆ ನೈತಿಕ ಬಿಕ್ಕಟ್ಟಿನಲ್ಲಿ ಸಿಲುಕಿ, ಗೆಳೆಯರಿಗೆ ಸಿಗದೆ ಓಡಾಡುತ್ತಿರುವಾಗಲೂ, ಫೋನಿನಲ್ಲಿ ಯಾವುದೇ ಮಾತಿಲ್ಲದೆ ಅಳುತ್ತಿರುವಾಗಲೂ, ಈ ಬಿಕ್ಕಟ್ಟಿನಿಂದ ಅವರು ಪಾರಾಗಿ ಬರುವರೆಂದೇ ಭಾವಿಸಿದ್ದೆವು. ಆದರೆ ಅವರ ಸಾವಿನ ಕೆಟ್ಟಸುದ್ದಿ ಒಂದು ದಿನ ಬಂದು ಬಡಿಯಿತು. ನೋವಿನ ಜತೆ ಆಕ್ರೋಶವೂ ಬಂದಿತು. ಕನ್ನಡಕ್ಕೆ ಶ್ರೇಷ್ಠ ಕಾವ್ಯ ರಚಿಸಿ ಕೊಡಬಲ್ಲ ಪ್ರತಿಭಾವಂತ ಕವಿಯೊಬ್ಬ ಕಳೆದುಹೋದನೆೆಂದಲ್ಲ; ಸೂಕ್ಷ್ಮವೂ ಮಾನವೀಯವೂ ಆದ ಬರೆಹದಿಂದ ನನ್ನಂತಹವರ ತಿಳಿವನ್ನು ಹಿಗ್ಗಿಸಬಲ್ಲ, ಮರುಚಿಂತನೆಗೆ ಹಚ್ಚಬಲ್ಲ, ನಾವೆಲ್ಲ ಕಟ್ಟಬೇಕೆಂದು ಬಯಸುತ್ತಿರುವ  ಕನಸಿನ ಸಮಾಜದ ಸಸಿಗೆ ನೀರೆರೆಯಬಲ್ಲ ಒಂದು ಅಪುರ್ವ ಜೀವ, ತನ್ನ ದುಡುಕಿನಿಂದ ಇಲ್ಲವಾಯಿತಲ್ಲ ಎಂದು. ಈಗ ಅವರ ಕಾವ್ಯವು ಒಟ್ಟಾಗಿ ಪ್ರಕಟವಾಗುತ್ತಿರುವ ಈ ಸನ್ನಿವೇಶದಲ್ಲಿ ಕೆಲವು ಮಾತುಗಳನ್ನು ಬರೆಯುತ್ತಿರುವಾಗಲೂ ದುಗುಡದ ಪಸೆ ಆರಿಲ್ಲ.

ಸದಾ ತೀವ್ರವಾದ ತಳಮಳದಲ್ಲಿ ಅದ್ದಿರುವಂತಿದ್ದ ಎನ್ಕೆ, ಒಮ್ಮೆ ಕನ್ನಡ ವಿಶ್ವವಿದ್ಯಾಲಯದಲ್ಲಿ ದಲಿತ ಚಳುವಳಿಯ ಮೇಲೆ ಒಂದು ಉಪನ್ಯಾಸ ಮಾಡಿದ ಪ್ರಸಂಗ ನೆನಪಾಗುತ್ತಿದೆ. ದಲಿತ ಚಳುವಳಿಯ ವರ್ತಮಾನದ ದುರವಸ್ಥೆಯನ್ನು ಅವರು ಅಂದು ನವಿಲಿನ ರೂಪಕದಲ್ಲಿ ವಿವರಿಸಿದರು. ದಲಿತ ಚಳುವಳಿ, ಒಂದು ಕಾಲಕ್ಕೆ ಕರ್ನಾಟಕದ ಯಾವುದೇ ಮೂಲೆಯಲ್ಲಿ ದಲಿತರ ಮೇಲೆ ಹಲ್ಲೆಯಾದರೂ, ಅಲ್ಲಿಗೆ ಹೋಗಿ ಕ್ರಾಂತಿಯ ಮೊಟ್ಟೆಗಳನ್ನಿಟ್ಟು ಬರುವ ನವಿಲಿನ ಕೆಲಸವನ್ನು ಮಾಡುತ್ತಿತ್ತು; ನಂತರ ಆ ಮೊಟ್ಟೆಗಳು ಒಡೆದು ಅಲ್ಲಿ ಹೊಸನವಿಲುಗಳು ಹುಟ್ಟುತ್ತಿದ್ದವು; ಕ್ರಾಂತಿಯನ್ನು ಮುಂದುವರೆಸುತ್ತಿದ್ದವು. ಈಗ ಆ ನವಿಲುಗಳೆಲ್ಲ ಬಿಕರಿಯಾಗಿ, ಕಸಾಯಿಖಾನೆಯಲ್ಲಿ ಪುಕ್ಕ ತರಿಸಿಕೊಂಡು ಮಾಂಸವಾಗಿ ಮಾರಾಟಗೊಳ್ಳುತ್ತಿವೆ ಎಂಬುದು ಆ ರೂಪಕದ ಆಶಯವಾಗಿತ್ತು. ಈ ರೂಪಕದ ಮೂಲಕ ವರ್ತಮಾನವನ್ನು ವಿವರಿಸುವಾಗ ಒಂದು ಕ್ಷಣ ಭಾವುಕರಾಗಿ ಅವರ ಗಂಟಲು ಬಿಗಿದು ಮಾತು ನಿಂತಿತು. ಈ ಪ್ರಸಂಗವು ಎನ್ಕೆ ವ್ಯಕ್ತಿತ್ವದ ಸ್ವರೂಪವನ್ನು ಮಾತ್ರವಲ್ಲ, ಅವರ ಒಟ್ಟೂ ಬರೆಹದ ಲಕ್ಷಣವನ್ನೂ ಹೇಳುವಂತಿದೆ. ಈ ಅತಿಭಾವುಕತೆಯೇ ಅವರ ಬದುಕನ್ನೂ ಬಲಿಪಡೆಯಿತು.

nk hanumataya

ಕಾಲೇಜು ಅಧ್ಯಾಪಕರಾಗಿದ್ದ ಎನ್ಕೆ ತಮ್ಮ ಜೀವಿತಾವಧಿಯಲ್ಲಿ ‘ಹಿಮದ ಹೆಜ್ಜೆ’ (1997), ‘ಚಿತ್ರದ ಬೆನ್ನು’ (2006) ಕವನ ಸಂಕಲನಗಳನ್ನು ಪ್ರಕಟಿಸಿದರು. ಅವರ ಕವನಗಳು ತಟ್ಟನೆ ಪ್ರಖರ ಕಾವ್ಯಪ್ರತಿಭೆಯೊಂದನ್ನು ಓದುಗರ ಅನುಭವಕ್ಕೆ ತರುತ್ತವೆ. ಅವರನ್ನು ‘ದಲಿತಕವಿ’ಯೆಂದು ಹುಟ್ಟಿನ ಮತ್ತು ಅನುಭವಲೋಕದ ಹಿನ್ನೆಲೆಯಲ್ಲಿ ಕರೆಯಬಹುದು. ಆದರೆ ಅವರ ದಲಿತ ಸಂವೇದನೆ ದಲಿತರನ್ನೂ ಒಳಗೊಂಡಂತೆ ಸಕಲ ಜೀವಾತ್ಮಗಳನ್ನು ಒಳಗೊಳ್ಳುವಂತೆ ವಿಶಿಷ್ಟವೂ ವಿಶಾಲವೂ ಆಗಿತ್ತು. ಸಿದ್ಧಲಿಂಗಯ್ಯ, ದೇವನೂರ ಮಹಾದೇವ, ಎಲ್. ಹನುಮಂತಯ್ಯ, ಅರವಿಂದ ಮಾಲಗತ್ತಿ ಮುಂತಾದವರದು ಮೊದಲ ತಲೆಮಾರೆಂದೂ; ಮೊಗಳ್ಳಿ ಗಣೇಶ್, ಕುಕ್ಕರಹಳ್ಳಿ, ಜಾಹ್ನವಿ, ಪುಟ್ಟಯ್ಯ ಮುಂತಾದವರದು ಎರಡನೆಯ ತಲೆಮಾರೆಂದೂ ಕರೆಯುವುದಾದರೆ, ದು. ಸರಸ್ವತಿ, ಸುಬ್ಬು ಹೊಲೆಯಾರ್, ಎನ್ಕೆ ಮುಂತಾದವರು ಮೂರನೆಯ ತಲೆಮಾರಿಗೆ ಸೇರಿದವರು. ಈಗ ಪಿ. ಮಂಜುನಾಥ, ಅನಸೂಯಾ ಕಾಂಬಳೆ, ಹುಚ್ಚಂಗಿ ಪ್ರಸಾದ್, ರಮೇಶ್ ಅರೋಲಿ, ಹುಲಿಕುಂಟೆ ಮೂರ್ತಿ ಮುಂತಾದವರ ಮೂಲಕ ಹೊಸ ತಲೆಮಾರೂ ಕಾಣಿಸಿಕೊಂಡಿದೆ. ಈ ಮೂರು ಮತ್ತು ನಾಲ್ಕನೆಯ ತಲೆಮಾರು ಲೋಕವನ್ನು ಗ್ರಹಿಸುತ್ತಿರುವ ಮತ್ತು ಬರೆಹದಲ್ಲಿ ಕಂಡರಿಸುತ್ತಿರುವ ಪರಿ ಭಿನ್ನವಾಗಿದೆ. ಇದು ದಲಿತ ಸಾಹಿತ್ಯದ ಶಕ್ತ ಪರಂಪರೆಯನ್ನು ಕೇವಲ ಮುಂದುವರೆಸುತ್ತಿಲ್ಲ, ಅದಕ್ಕೆ ತನ್ನ ಹೊಸ ಸಂವೇದನೆಯಿಂದ ಹೊಸಮುಖಗಳನ್ನು ಜೋಡಿಸುತ್ತಿದೆ ಕೂಡ.

ಎನ್ಕೆ ಕಾವ್ಯವು ಅಂಬೇಡ್ಕರ್ ವೈಚಾರಿಕ ಎಚ್ಚರ, ಬುದ್ಧನ ತಾಯಕರುಣೆ, ಅಲ್ಲಮನ ಆನುಭಾವಿಕ ಬೆಡಗು, ಲಂಕೇಶರ ವೈಯಕ್ತಿಕ ತಳಮಳ ಮತ್ತು ಅಂತರ್ಮುಖತ್ವಗಳೆಲ್ಲವೂ ಸಂಗಮಗೊಂಡು ಹುಟ್ಟಿದ್ದು; ಇಲ್ಲಿ ದಲಿತ ಸಂವೇದನೆಯನ್ನು ಮಾನವ ಸಂವೇದನೆಯ ವಿಶಾಲಭಿತ್ತಿಯಲ್ಲಿಟ್ಟು ನೋಡುವ ಅಥವಾ ಸಾಮಾನ್ಯ ಲೋಕಾನುಭವವನ್ನು ದಲಿತ ಭಿತ್ತಿಯಲ್ಲಿಟ್ಟು ನೋಡುವ ವಿಶಿಷ್ಟ ದೃಷ್ಟಿಕೋನವಿದೆ. ಸ್ವಂತದ ಒಳಗಿನ ಖಾಸಗಿ ತಲ್ಲಣಗಳನ್ನೇ ದೊಡ್ಡದೆಂದು ಪರಿಭಾವಿಸಿ ತನ್ನ ಅಸ್ತಿತ್ವವನ್ನು ಹುಡುಕುವ ವೈಯಕ್ತಿಕತೆಯಿದೆ; ಹಾಗೆಯೇ ಕಷ್ಟಗಳಲ್ಲಿ ಹುದುಗಿದ ಎಲ್ಲರ ದುಗುಡಗಳನ್ನು ತನ್ನವೇ ಎಂದು ಪರಿಭಾವಿಸಿ ಮಿಡಿಯುವ ಸಾರ್ವತ್ರಿಕತೆಯೂ ಇದೆ. ಇಲ್ಲಿನ ಕಾವ್ಯದ ಕಸುವೆೆಂದರೆ, ರೂಪಕಗಳ ನುಡಿಗಟ್ಟು, ಭಾವನಾತ್ಮಕ ತೀವ್ರತೆ, ದಾರ್ಶನಿಕ ಜಿಗಿತ ಹಾಗೂ ಮೇರೆಯಿಲ್ಲದ ಜೀವಪ್ರೀತಿ. ಇವು ಎನ್ಕೆ ಅವರನ್ನು ಸಮಕಾಲೀನ ಕವಿಗಳಲ್ಲೇ ವಿಶಿಷ್ಟರನ್ನಾಗಿಸಿದವು. ಹೃದಯದ ಮೂಲಕವೇ ಲೋಕದ ವಿದ್ಯಮಾನಗಳನ್ನು ನೋಡುವುದು ಮತ್ತು ಪ್ರತಿಕ್ರಿಯಿಸುವುದು ಇಲ್ಲಿನ ಒಂದು ಗುಣ. ಇದರ ಸಮಸ್ಯೆಯೆಂದರೆ, ಕೊಚ್ಚಿಹೋಗುವಂತಹ ಭಾವುಕ ತೀವ್ರತೆಯಲ್ಲಿ ಬೌದ್ಧಿಕತೆಯನ್ನು ಬಿಟ್ಟುಕೊಡುವುದು. ಇದರಿಂದ ಕಾವ್ಯದೊಳಗಿನ ಬೌದ್ಧಿಕತೆ ಕೆಲಮಟ್ಟಿಗೆ ಮಂಕಾಗುವುದುಂಟು. ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಒಬಾಮಾ ಗೆದ್ದಾಗ ಆತನನ್ನು ಕಪ್ಪು ಚಂದಮಾಮನೆಂದೂ, ಕಪ್ಪುಜನರ ಬಾಳಿನ ಕತ್ತಲೆಯನ್ನು ಬೆಳಗಲು ಬಂದಿದ್ದಾನೆಂದೂ ಸಂಭ್ರಮಿಸುವ ಎನ್ಕೆ ಕವನವನ್ನು ಗಮನಿಸಬೇಕು. ಅದರಲ್ಲಿರುವ ಪ್ರಾಮಾಣಿಕತೆಯನ್ನು ಅರ್ಥಮಾಡಿಕೊಳ್ಳಬಹುದಾದುದು. ಆದರೆ ಅದು ಲೋಕವಾಸ್ತವವನ್ನು ಭಾವುಕತೆಯಲ್ಲಿ ಗ್ರಹಿಸಿದ ಫಲವೂ ಆಗಿದೆ. ದಲಿತ ಚಳುವಳಿಯ ಪತನಕ್ಕೆ ಪಡುವ ವಿಷಾದವಿರಲಿ, ಕಪ್ಪುವರ್ಣೀಯನೊಬ್ಬ ಅಧಿಕಾರಕ್ಕೆ ಬಂದನೆಂದು ಪಡುವ ಸಂಭ್ರಮವಿರಲಿ, ಭಾವಾವೇಶದಲ್ಲಿ ಚಿಂತನಶೀಲತೆಯನ್ನು ಕೈಬಿಡುವ ಕಡೆಯಲ್ಲೆಲ್ಲ ಅವರ ಬರೆಹ ಜಿಜ್ಞಾಸೆಗೆ ಎರವಾಗುತ್ತದೆ.

ಆದರೆ ಕವಿ ಭಾವುಕ ತನ್ಮಯತೆೆಯಲ್ಲಿ ಮುಳುಗಿಯೂ ಅರಿವುಗೆಡದೆ ಆಳವಾಗಿ ಧ್ಯಾನಿಸಿ ಬರೆಯುವ ಗಳಿಗೆಗಳು ಇಲ್ಲಿನ ಕಾವ್ಯದಲ್ಲಿ ಬೇಕಾದಷ್ಟಿವೆ. ಅಂತಹ ಕಡೆ ಬಾಳಿನ ವೈರುಧ್ಯಗಳನ್ನು ಸರಳವೆಂದು ತೋರುವ ರಚನೆಗಳಲ್ಲಿ ಎನ್ಕೆ ಪರಿಣಾಮಕಾರಿಯಾಗಿ ಹಿಡಿದಿಡುತ್ತಾರೆ. ”ಚಮ್ಮಾರನ ಜೋಡುಮೆಟ್ಟಿ ಕಮ್ಮಾರನ ಖಡ್ಗ ಹಿಡಿದು ಕಾಯುತಾನಲ್ಲೊ, ರಾಜ ಕಾಯುತಾನಲ್ಲೊ” ಎಂದು ಆರಂಭವಾಗುವ ಪುಟ್ಟ ಪದ್ಯವನ್ನು ಗಮನಿಸಬೇಕು. ಇಲ್ಲಿ ವರ್ಗಗಳ ನಡುವಣ ವೈರುಧ್ಯಗಳನ್ನು ವಾಚ್ಯವಾಗಿಸದೆ ಅದರ ಸಂಕೀರ್ಣತೆ ಮುಕ್ಕಾಗದಂತೆ ಹಿಡಿಯುವ ಯತ್ನ ಯಶಸ್ವಿಯಾಗಿದೆ. ತಾಯಿಯನ್ನು ಕುರಿತ ಪದ್ಯಗಳಲ್ಲೂ ಮಹಿಳೆಯೊಬ್ಬಳ ತಾಯ್ತನ, ಹೆಂಡತಿತನ, ದಲಿತತನಗಳೆಲ್ಲವೂ ಸರಳೀಕರಣಗೊಳ್ಳದಂತೆ ಅದರೊಳಗಿನ ಹಲವು ಸ್ತರದ ಹೊಯ್ದಾಟಗಳನ್ನು ಹಿಡಿಯಲಾಗಿದೆ. ಇಲ್ಲಿನ ಕಾವ್ಯದಲ್ಲಿರುವ ಹೊಸ ನುಡಿಗಟ್ಟುಗಳು ಓದುಗರ ಗ್ರಹಿಕೆಗಳನ್ನು ಭಗ್ನಗೊಳಿಸಿ, ಅವರ ಸಂವೇದನೆ ಮತ್ತು ಪ್ರಜ್ಞೆಯನ್ನು ತಟ್ಟನೆ ಹೊಸವಿಸ್ತಾರಕ್ಕೆ ಹಿಗ್ಗಿಸುವಷ್ಟು ಪ್ರಭಾವಶಾಲಿಯಾಗಿವೆ. ಸರಳವೆಂದು ತೋರುವ ‘ಅವ್ವ ನಿಂತೇಯಿದ್ದಾಳೆ’ ಕವನ ನಮ್ಮನ್ನು ಅಪ್ಪಳಿಸಿ ಆವರಿಸಿಕೊಳ್ಳುತ್ತದೆ. ”ನೀನು ನನ್ನೊಳಗೆ ಹಡೆದ ಕಡಲ ಕಣ್ಣಗಡಿಗೆಯಲ್ಲಿ ಸೇದಿ..ಸೇದಿ ಸಾಕಾಗಿರುವೆ” ಎಂದು ಕವಿತೆ ಆರಂಭವಾಗುತ್ತದೆ. ‘ಅವ್ವ ನಿಂತೇಯಿದ್ದಾಳೆ’ ‘ಬೆಳಗು’ ‘ಮಾತಿಲ್ಲದ ಮೇಲೆ’ ಮುಂತಾದ ಕವನಗಳು ಲಂಕೇಶರ ‘ಅವ್ವ’ ಕವನದಿಂದ ತಪ್ಪಿಸಿಕೊಳ್ಳಲಾಗದ ಪ್ರಭಾವದಾಚೆ ಚಲಿಸಿ ಹುಟ್ಟಿವೆ. ವಿಶೇಷೆಂದರೆ, ಇಲ್ಲಿನ ‘ಅಪ್ಪ’ ಕವನದಲ್ಲಿ ಲಂಕೇಶರ ಅವ್ವನ ನೆರಳುಗಳಿರುವುದು. ಇಲ್ಲಿನ ಬಹುತೇಕ ಕವನಗಳಲ್ಲಿ ತಾಯಿಯ ಜತೆಗೆ ಸಂಘರ್ಷ ಮಾಡುವ ವ್ಯಗ್ರ ನಾಯಕನೊಬ್ಬನಿದ್ದಾನೆ. ಈ ಕವನಗಳಲ್ಲಿ ಸಾಮಾಜಿಕ-ವೈಯಕ್ತಿಕಗಳು ಏಕೀಭವಿಸುತ್ತವೆ. ಅಲ್ಲಿ ಎನ್ಕೆ ಕಾವ್ಯ ತನ್ನ ದಾರ್ಶನಿಕ ಎತ್ತರವನ್ನೂ ಮುಟ್ಟುತ್ತದೆ.

ಎನ್ಕೆ, ಕಷ್ಟವಿಲ್ಲದೆ ಲೋಕಾಭಿರಾಮವಾಗಿ ಮಾತನಾಡುವಷ್ಟು ಸಹಜವಾಗಿ ಕವಿತೆ ಬರೆಯಬಲ್ಲ ಕವಿ. ‘ದೀಪ ಹಚ್ಚಿದಾಗ’, ‘ಏಡಿ’, ‘ಚಿತ್ರದಬೆನ್ನು’ ಮುಂತಾದವು ಸಹಜೋಕ್ತಿಯಲ್ಲಿ ಹುಟ್ಟಿದ ಅರ್ಥವತ್ತಾದ ಪ್ರಾಮಾಣಿಕತೆ ತಟ್ಟುವ ಕವಿತೆಗಳು. ಹಾಗೆಯೇ ಎನ್ಕೆ ‘ಆ ಒಂದು ಹನಿ ಮಳೆ’ ಎಂಬಂತಹ ಜಟಿಲವಾದ ಕವನವನ್ನೂ ಬರೆಯಬಲ್ಲ ಕವಿ ಕೂಡ. ಪ್ರತಿಕವನವೂ ಒಂದೊಂದು ಪ್ರಯೋಗವಾಗಿರುವಂತೆ ಇಲ್ಲಿನ ಅಭಿವ್ಯಕ್ತಿಯ ವೈವಿಧ್ಯವಿದೆ. ಪಲ್ಲವಿಯಂತೆ ಅನುರಣನಗೊಳ್ಳುವ ಒಂದು ಸಾಲು ಕವಿತೆಯಲ್ಲಿ ಮತ್ತೆಮತ್ತೆ ಬಂದು ಹೊಸ ಅರ್ಥವಂತಿಕೆ ಹುಟ್ಟಿಸುತ್ತದೆ. ‘ಕಿರುಬೆರಳಲಿ ಕಡಲನೆತ್ತಿ ಹಣೆಬೊಟ್ಟನಿಟ್ಟು ಗಿರಿಯ ಉಗುರಲೆತ್ತಿ ಕಿವಿಯೋಲೆಯಿಟ್ಟು’ ಎಂಬ ಮಹೋಪಮೆಗಳನ್ನು ಇಲ್ಲಿ ನೋಡಬಹುದು. ಇಲ್ಲಿನ ಕವನಗಳಲ್ಲಿರುವ ಲಯಗಳ ವೈವಿಧ್ಯ ಮತ್ತು ಭಾಷೆಯ ಜತೆಗಿನ ಆಟ ಸೋಜಿಗ ತರುತ್ತದೆ. ಎನ್ಕೆಯಂತೆ ಅನುಭವ ಚಿಂತನೆ ದರ್ಶನಗಳನ್ನು ರೂಪಕಗಳ ಮೂಲಕವೇ ವ್ಯಕ್ತಪಡಿಸುವ ಹಟತೊಟ್ಟಂತೆ ಬರೆಯುವ, ರೂಪಕಗಳನ್ನೇ ಕವಿತೆಯ ಭಾಷೆಯಾಗಿಸಿಕೊಂಡಿರುವ ಕವಿ ಪ್ರತಿಭೆ ವಿರಳ. ಈ ರೂಪಕ ಸೃಷ್ಟಿಗೆ ಬೇಕಾದ ಪ್ರಚಂಡ ಕಲ್ಪನಾ ಪ್ರತಿಭೆಯೂ ಇಲ್ಲಿ ಪ್ರಕಟವಾಗಿದೆ. ಆದರೆ ಈ ರೂಪಕ ವ್ಯಸನವೇ ಅನೇಕ ಕಡೆ ಕಾವ್ಯಕೆ ಕಷ್ಟವನ್ನೂ ತಂದಿಕ್ಕಿವೆ. ‘ಕತ್ತಲೆಗೆ ಕಾಯುವುದಿಲ್ಲ’ ಪ್ರತಿಮೆಗಳ ಕಗ್ಗಾಡಲ್ಲಿ ಸಿಲುಕಿರುವ ಕವನ. ವಾಸ್ತವದಾಚೆಯ ಯಾವ್ಯಾವುದೋ ಅರ್ಥಗಳಿಗೆ ಕೈಚಾಚುವ ಅನೇಕ ಕವಿತೆಗಳು ಮಹತ್ವಾಕಾಂಕ್ಷೆಯಿಂದ ಕೂಡಿದ್ದು, ಅಸ್ಪಷ್ಟತೆಯಲ್ಲಿ ಉಳಿಯುತ್ತವೆ. ‘ಒಂದು ಹನಿ ಮಳೆ’ಯಂತಹ ಅಪಾರಶಕ್ತಿ ಪ್ರಕಟವಾಗಿರುವ, ಅಪುರ್ವ ಕಲ್ಪನಾಶಕ್ತಿಯಿರುವ ಮಹತ್ವಾಕಾಂಕ್ಷೆಯ ಪದ್ಯಗಳು ಇಂತಹವು. ‘ಗುರುವಿನ ಹೆಣ’, ‘ಎರೆಹುಳದ ಬಾಯೊಳಗೆ ಕರಗುವ ಆನೆಗಳು’, ‘ಯೋಗಿಯ ಕಣ್ಣಲ್ಲಿ ಚಿಗುರುವ ಏಣಿ’ ಕವನಗಳಲ್ಲಿ ಅಲ್ಲಮನದೊ ಶಿವಪ್ರಕಾಶರದೊ ಸರಿಯಾಗಿ ಅರಗದ ಪ್ರಭಾವದ ಎಳೆಗಳಿವೆ. ಬೆಡಗಿನ ಪರಿಭಾಷೆಯು ಕೆಲವು ಕವನಗಳ ಮೇಲೆ ಅನಗತ್ಯ ಭಾರವಾಗಿ ಹೇರಿಕೊಂಡಿದೆ. ಅನಂತಮೂರ್ತಿಯವರು ಗುರುತಿಸಿರುವಂತೆ ಎನ್ಕೆ ”ಇದು ಸಾಮಾಜಿಕ, ಇದು ವೈಯಕ್ತಿಕ, ಇದು ಆಧ್ಯಾತ್ಮಿಕ ಎಂದು ವಿಂಗಡಿಸಲಾರದಂತೆ” ಬರೆದಿರುವುದು ನಿಜ. ಆದರೆ ಈ ಹಲವು ಆಯಾಮಗಳ ಏಕೀಭವಿಸುವಿಕೆಯಲ್ಲಿ ಚಿಂತನಶೀಲತೆಯ/ಬೌದ್ಧಿಕ ಎಚ್ಚರದ ಒಂದು ಅಂಶ ಮಿಸ್ಸಿಂಗ್ ಆಗಿದೆ. ಅನೇಕ ನಿರರ್ಥಕ, ಅಸ್ಪಷ್ಟ ಕವನಗಳು ಇಲ್ಲಿವೆ. ತನಗಿನ್ನೂ ಪುರ್ಣವಾಗಿ ದಕ್ಕದ ಅನುಭವ ಮತ್ತು ಭಾವವನ್ನು ಕಾವ್ಯವಾಗಿಸುವ ಯತ್ನದಲ್ಲಿ ಕವಿ ಸೋತು ರಚಿಸಿರುವ ನಿರುದ್ದಿಶ್ಯವಾದ ಅನೇಕ ಪದ್ಯಗಳು ಇಲ್ಲಿವೆ.

ಎನ್ಕೆ ಕಾವ್ಯದಲ್ಲಿ ಕೆಲವು ಚಿತ್ರಗಳು ಮತ್ತೆಮತ್ತೆ ಬರುತ್ತವೆ – ಜಾತಿಕ್ರೌರ್ಯದಲ್ಲಿ ನಲುಗಿರುವ ದಲಿತ ಸಮುದಾಯದ ಅವಸ್ಥೆಯನ್ನು ಹಿಡಿಯಲು ಕವಿ ಬಳಸುವ ಮಲೆತ ನೀರು, ಕೊಳೆತಶವ, ಸುಡುವ ಬೆಂಕಿ, ಕತ್ತರಿಸಿದ ಅಂಗಾಂಗಗಳು ಇತ್ಯಾದಿ. ಅನ್ಯಾಯ ಪ್ರಜ್ಞೆಯಿಂದ ನರಳುವ ಇಲ್ಲಿನ ಕವನಗಳ ನಾಯಕ, ಅಪಾರ ದುಗುಡ, ಅಸ್ವಸ್ಥತೆ ಮತ್ತು ವಿಷಾದಗಳಿಂದ ತುಂಬಿರುವ ರೂಪಕಗಳಲ್ಲಿ ತನ್ನಲ್ಲಿ ಹುಟ್ಟುತ್ತಿರುವ ಮೃತ್ಯುಸೆಳೆತಗಳನ್ನು ಪ್ರಕಟಿಸುತ್ತಾನೆ. ಈ ಚಿತ್ರಗಳು ದಿಗ್ಭ್ರಮೆ ಬರಿಸುವಂತೆ ಬೀಭತ್ಸವಾಗಿವೆ. ಹೊರಬರಲು ಸಾಧ್ಯವೇ ಇಲ್ಲದಂತಹ ಹತಾಶೆಯ ಉಸಿರುಗಟ್ಟಿದ ಜಗತ್ತೊಂದು ಇಲ್ಲಿ ಮೂಡುತ್ತದೆ. ಯಾಕಿಷ್ಟು ಯಾತನೆ ಮತ್ತು ನಾಶದ ಆತಂಕ, ಬಲಿಪಶು ಭಾವವೊ ಗೊತ್ತಾಗುವುದಿಲ್ಲ. ಇಲ್ಲಿನ ವೇದನೆ ಮತ್ತು ಸ್ವಮರುಕ, ಆದರ್ಶ ಮತ್ತು ಕನಸುಗಳು ಓದುಗರನ್ನು ಸುಸ್ತು ಮಾಡುತ್ತವೆ. ‘ಇದ್ದಿಲಾಗುವ ಆಲಿ’ ಎಂಬ ಕವನದಲ್ಲಿ ಈ ಬಲಿಪಶುಪ್ರಜ್ಞೆ ಅನೂಹ್ಯ ರೂಪಕಗಳಲ್ಲಿ ಘನೀಭವಿಸಿದೆ. ಇವು ಕವಿಯ ಹೈಪರ್ ಸೂಕ್ಷ್ಮತೆಯಿಂದ ಹುಟ್ಟಿರುವ ಉತ್ಪ್ರೇಕ್ಷಿತ ಚಿತ್ರಗಳೊ ಅಥವಾ ಸೂಕ್ಷ್ಮ ಸಂವೇದನೆಯ ಕವಿಯ ತಲ್ಲಣಗಳು ನಮ್ಮ ಒರಟೋದಿಗೆ ಕಾಣುತ್ತಿರುವ ಅತಿಯೊ ತಿಳಿಯದು. ಇಲ್ಲಿ ಲೋಕಕ್ರೌರ್ಯಕ್ಕೆ ತೀಕ್ಷ್ಣವಾಗಿ ಮಿಡಿಯುವ ಗುಣದಷ್ಟು ಪ್ರಮಾಣದಲ್ಲಿ ಲೋಕದ ಚೆಲುವಿಗೆ ವಿಸ್ಮಯಪಡುವ ಮತ್ತು ಮೇರೆ ಮೀರುವಂತೆ ಸಂಭ್ರಮಿಸುವ ಗುಣವು ಕಡಿಮೆಯಿರುವುದು ಮಾತ್ರ ನಿಜ. ಇದರಿಂದ ಇಲ್ಲಿನ ಕವನಗಳನ್ನು ಏಕತಾನತೆ ಮತ್ತು ನಿರಾಶೆ ಭಾವಗಳು ಮೋಡದಂತೆ ಆವರಿಸಿಕೊಂಡಿವೆ.

ಕಾವ್ಯ ಎನ್ಕೆಯ ಆತ್ಮದ ಪರಿಭಾಷೆ. ಅವರು ಆಗಾಗ್ಗೆ ಬರೆದಿರುವ ಗದ್ಯಬರೆಹವಾದರೂ ತನ್ನನೊಳಗಿನ ಮಾಹಿತಿ ಅಥವಾ ಅನುಭವಲೋಕದಿಂದಲ್ಲ, ಬದಲಿಗೆ ಲಾವಾರಸದಂತೆ ಹರಿದಿರುವ ತಳಮಳವನ್ನು ಕಾವ್ಯ ಸದೃಶ್ಯವಾಗಿ ಪ್ರಕಟಿಸಿರುವುದಕ್ಕಾಗಿ ವಿಶಿಷ್ಟವಾಗಿದೆ. ಬಸವಲಿಂಗಪ್ಪನವರ ಮೇಲೆ ಅವರು ಬರೆದಿರುವ ಜೀನವಚರಿತ್ರೆಯಾದ ‘ಕ್ರಾಂತಿ ವಸಂತ’ವು ”ಹಗಲು ಇರುಳಿನ ಬಲೆಯೊಳಗೆ ಪಕ್ಕದಲ್ಲೇ ಬೇಟೆಗಾರರ ಒಲೆ ಉರಿಯುತ್ತಿದೆ. ಈಗ ಹಾಡಲೇ ಬೇಕು ಈ ಪುಟ್ಟ ಕೊಕ್ಕಿನಲೇ ಬೇಟೆಗಾರರು ನಿದ್ರಿಸುವಂತೆ, ಈಗ ಈ ಪುಟ್ಟ ಕೊಕ್ಕನೇ ಖಡ್ಗವಾಗಿಸಬೇಕು ಬಲೆ ಹರಿದು  ಬಯಲ ಸೇರುವಂತೆ” ಎಂದು ಶುರುವಾಗುತ್ತದೆ. ಕೃತಿಯು ಕೊನೆಯಲ್ಲಿ ”ನಾನು ನಿಂತ ಹೆಣನಾತದ ನೀರಿನಿಂದ ಹಾರಿದ್ದಾಯ್ತು. ಕ್ರಾಂತಿಯ ಬೆಳಕಿನ ರೆಕ್ಕೆ ನನ್ನ ತೋಳುಗಳಲ್ಲಿ ಮೂಡಿ ಸಾವಿನಿಂದ ತಪ್ಪಿಸಿಕೊಂಡದ್ದಾಯ್ತು. ಆ ಸಾವು ಸಾವಲ್ಲ ಕೊಲೆ. ಅಂಥ ಕೊಲೆಯಿಂದ ಕಾಪಾಡಿದ ಕ್ರಾಂತಿಗೆ ಕೈಮುಗಿಯುತ್ತೇನೆ. ಈಗ ನಾನಿರುವ ಸ್ಥಳದಲ್ಲಿ ಎಷ್ಟೊಂದು ಜನರಿದ್ದಾರೆ! ಎಲ್ಲರೂ ತಮಗರಿವಿದ್ದೊ ಇಲ್ಲದೆಯೊ ಕುಲದ ಕುಲುಮೆಗೆ ಬಿದ್ದ ಕಣ್ಣು ಕಿವಿ ಮೂಗು ಎಲ್ಲವನ್ನೂ ನೀಗಿಕೊಂಡು ಹೆಳವರಾಗುತ್ತಿದ್ದಾರೆ” ಮುಂತಾದ ದಾರುಣತೆಯ ಸಾಲುಗಳಿವೆ.

ಎನ್ಕೆಯವರಲ್ಲಿ ಮತ್ತೆಮತ್ತೆ ಹದ್ದು ಗೂಗೆ ಗುಬ್ಬಿ ನವಿಲು ಮುಂತಾದ ಹಕ್ಕಿಗಳು ರೂಪಕವಾಗಿ ಬರುತ್ತವೆ. ‘ಮೌನವೇಕೆ’ ಕವನವು ಪ್ರಾಣಿರೂಪಕಗಳಿಂದಲೇ ಕೂಡಿದೆ. ಹೊಸತಲೆಮಾರಿನ ಕವಿಗಳಲ್ಲಿ ಇಷ್ಟೊಂದು ಹಕ್ಕಿ, ಹುಳಹುಪ್ಪಟೆ ಹಾಗೂ ಪ್ರಾಣಿಗಳು ಕಾವ್ಯ ಪರಿಕರವಾಗಿ ಬಂದಂತಿಲ್ಲ. ಸಾಮುದಾಯಿಕ ಪ್ರಜ್ಞೆ ಕಳೆದುಕೊಂಡ ದಲಿತ ನಾಯಕರು ಮಾಂಸದಂಗಡಿಯ ನವಿಲುಗಳಾಗುವ ರೂಪಕ ಸೃಷ್ಟಿಸಿದ ಕವಿಗೆ, ಬಲೆಗೆ ಸಿಕ್ಕ ಹಕ್ಕಿಗಳು ಸತ್ತಂತೆ ನಟನೆ ಮಾಡಿ ಇಡೀ ಬಲೆಯನ್ನೇ ಹೊತ್ತುಕೊಂಡು ಹಾರಿಹೋಗುವ ಸಾಮುದಾಯಿಕ ಕ್ರಿಯಾಶೀಲತೆ ಸೂಚಿಸುವಂತಹ ರೂಪಕದ ಅರಿವೂ ಇದೆ. ಆದರೆ ಇಲ್ಲಿನ ಕಾವ್ಯದಲ್ಲಿ ಬಲೆ ಹರಿದು ಬಯಲನ್ನು ಸೇರುವ ಆಶಯವನ್ನು ವ್ಯಕ್ತ್ತಪಡಿಸುತ್ತಿರುವುದು ಒಂಟಿಹಕ್ಕಿ. ಇದು ಏಕಾಂಗಿಯಾಗಿ ಬಾಳಿನ ದಾರುಣತೆಯನ್ನು ಎದುರಿಸುವ ಕವಿಯ ಅಸ್ತಿತ್ವವಾದಿ ಅವಸ್ಥೆಯ ರೂಪಕವೊ, ಹೊಸತಲೆಮಾರಿನ ದಲಿತರಲ್ಲಿ ಕ್ಷೀಣಗೊಂಡಿರುವ ಸಾಮುದಾಯಿಕ ಪ್ರಜ್ಞೆಯೊಳಗಿನ ನಂಬಿಕೆಯ ದ್ಯೋತಕವೊ ತಿಳಿಯುವುದಿಲ್ಲ.

ತನ್ನೆಲ್ಲ ಯಶಸ್ಸು ಹಾಗೂ ಮಿತಿಗಳೊಂದಿಗೆ ಎನ್ಕೆ ಕಾವ್ಯವು ಸಮಾಜವಾದಿ ಆಶಯಗಳಿಗೆ ಭಿನ್ನವಾದ ದಿಸೆಯಲ್ಲಿ ಬದಲಾಗುತ್ತಿರುವ ಭಾರತದ ವಾಸ್ತವವನ್ನು ಹಿಡಿಯಲು ಬೇಕಾದ ನುಡಿಗಟ್ಟಿಗಾಗಿ ಹೊಸತಲೆಮಾರಿನ ಲೇಖಕರು ನಡೆಸಿರುವ ಹೋರಾಟದ ಭಾಗವಾಗಿದೆ. ಈ ಹೋರಾಟದಲ್ಲಿ ನಮ್ಮ ಅನೇಕ ಹಿರೀಕರನ್ನು ಹಿಂದಿಕ್ಕುವ ಕಸುವನ್ನು ಸಹ ಇದು ಪ್ರಕಟಿಸಿದೆ. ‘ಕುಸುಮಬಾಲೆ’ಯಲ್ಲಿ ಚಳುವಳಿಗಾರರು ಊರಿನಲ್ಲಿ ಜಾಥಾ ಹೊರಟಾವಾಗ, ಚೆನ್ನನ ಅಪ್ಪನು ‘ಈಗ ಚೆನ್ನ ಇದ್ದಿದ್ದರೆ’ ಎಂದು ಕನವರಿಸುವಂತೆ, ಈ ಹೊತ್ತಿನ ಸನ್ನಿವೇಶಗಳಿಗೆ ಎನ್ಕೆ ಜೀವ ಹೇಗೆ ಮಿಡಿದಿರುತ್ತಿತ್ತು ಎಂದು ಆಲೋಚನೆ ಬರುತ್ತದೆ. ಅದರಲ್ಲೂ ಮನೆಯಲ್ಲಿ ಬೇಯಿಸಿರುವುದು ದನದ ಮಾಂಸವೆಂದು ಆರೋಪಿಸಿ ದೂರದ ಉತ್ತರ ಪ್ರದೇಶದಲ್ಲಿ ನಡುವಯಸ್ಸಿನ ವ್ಯಕ್ತಿಯೊಬ್ಬನನ್ನು ಕೊಂದು ಮಹಡಿಯ ಮೇಲಿಂದ ಕೆಳಕ್ಕೆ ಎಸೆದ ಘಟನೆ, ದೇಶದಲ್ಲಿ ಸಾಂಸ್ಕೃತಿಕ ಅಸಹನೆಯ ಬಗ್ಗೆ ದೊಡ್ಡದೊಂದು ಚರ್ಚೆಯನ್ನು ಹುಟ್ಟುಹಾಕಿರುವ ಈ ಹೊತ್ತಿನಲ್ಲಿ ‘ಗೋವು ತಿಂದು ಗೋವಿನಂತಾಗುವೆನು’ ಕವನ ನೆನಪಾಗುತ್ತದೆ. ಇದನ್ನು ಓದಿದ ಸಂವೇದನಶೀಲರಾದ ಯಾರಿಗೂ ಹಸುವಿನ ಬಗ್ಗೆಯೂ, ಅದರ ಮಾಂಸವನ್ನು ತಿನ್ನುವವರ ಬಗ್ಗೆಯೂ ಪ್ರೀತಿ ಅನುಕಂಪೆಯೂ, ಈ ಪಾಪದ ಪ್ರಾಣಿಯ ನೆೆಪದಲ್ಲಿ ಮನುಷ್ಯರನ್ನು ಬೇಟೆಯಾಡುತ್ತಿರುವ ವಿಚಾರಧಾರೆಯ ಬಗ್ಗೆ ಕೋಪವೂ ಉಕ್ಕುವುದು. ನಮ್ಮ ಸುತ್ತಲಿನ ವಿದ್ಯಮಾನಗಳ ಬಗ್ಗೆ ಹೊಸದಾಗಿ ಪರಿಭಾವಿಸುವಂತೆ ಸೂಕ್ಷ್ಮಮನಸ್ಸಿನ ಕವಿಯೊಬ್ಬ ಹೇಗೆ ಪ್ರೇರೇಪಿಸಬಲ್ಲ ಎಂಬುದಕ್ಕೂ ಈ ಕವನ ಸಾಕ್ಷಿಯಾಗಿದೆ.

ಇಲ್ಲಿನ ಕವನಗಳ ನಾಯಕ ಸಾವಿನ ತುಡಿತಗಳ ಬಗ್ಗೆ ಮತ್ತೆಮತ್ತೆ ಮಾತಾಡುತ್ತಾನೆ. ಒಂದುಕಡೆ ”ಬಾವಲಿ ನನ್ನದೇ ಹೆಣ ಪ್ರತಿಕ್ಷಣ ಕೊಳೆಯುತ್ತಿರಬಹುದೇ ನನ್ನ ಹೆಣಕ್ಕೆ ಯಾರೊ ತಂದಿಟ್ಟ ಹೂವಿನ ಹೊರೆಗಳೋ?” ಎಂದು ದಿಗಿಲುಗೊಳ್ಳುತ್ತಾನೆ. ತನ್ನ ಅಸ್ತಿತ್ವವನ್ನು ಆರ್ತವಾಗಿ ಹುಡುಕುವ ನಾಯಕನಿವನು. ‘ಸತ್ತವರು ಬದುಕಿರುವವರನ್ನು ಪ್ರೀತಿಸಲು ಒಂದು ಸಣ್ಣ ಕಾರಣ ಸಾಕು, ನಾವಿನ್ನು ಸಾವಿನ ಕಾರಣಗಳಿಂದ ದೂರವಾಗಬೇಕು’ ಎಂದು ಒಂದೆಡೆ ಹೇಳಿದರೆ, ‘ಅದಕ್ಕೇ ತಾಯಿ… ನಿನಗಿಂತಲೂ ಮೊದಲು ನಾನು ಸಾಯುತ್ತಿರುವೆ. ಮರೆತಾದರೂ ನನ್ನ ಹೆಣದ ಮೇಲೆ ಈ ಮಣ್ಣ ಮುಚ್ಚದಿರು’ ಎಂದು ಮತ್ತೊಂದೆಡೆ ಹೇಳುವನು. ಚಿಕ್ಕವಯಸ್ಸಿನ ಕವಿಯೊಬ್ಬ ಇಷ್ಟೊಂದು ಸಾವಿನ ಧ್ಯಾನ ಮಾಡುವುದು ವಿಚಿತ್ರವೆನಿಸುತ್ತದೆ. ತನ್ನ ಕವಿತೆಗಳ ನಾಯಕಂತೆ ಎನ್ಕೆ ಕಡೆಗೂ ತನ್ನನ್ನು ಅಕಾಲಿಕ ಸಾವಿಗೆ ಒಡ್ಡಿಕೊಂಡರು. ಈ ಕವಿಯ ಬದುಕಿನ ಕಷ್ಟದ ದಿನಗಳಲ್ಲಿ ಅನೇಕರು ಇಂಬಾಗಿ ನಿಂತು, ಅವರ ಅಮೂಲ್ಯ ಜೀವವನ್ನೂ ಜೀವನವನ್ನೂ ಉಳಿಸಲು ಯತ್ನಿಸಿದವರಲ್ಲಿ ಅನುಪಮಾ ಕೂಡ ಒಬ್ಬರು. ಅವರ ಉಮೇದಿನಿಂದ ಎನ್ಕೆ ಕವನಗಳು ಮತ್ತೆ ಒಟ್ಟಾಗಿ ಪ್ರಕಟವಾಗುತ್ತಿವೆ. ಎನ್ಕೆಯವರ ಜೀವನ ಸಂಗಾತಿಯೂ, ಅವರ ವಿಚಿತ್ರ ಪ್ರೀತಿ ಮತ್ತು ವಿಕ್ಷಿಪ್ತತೆಯನ್ನು ಕಥನವಾಗಿಸಿದ ‘ಕಿಚ್ಚಿಲ್ಲದ ಬೇಗೆ’ ಕೃತಿಯ ಲೇಖಕಿಯೂ ಆದ ಶೈಲಜ ಅವರ ಸಹನೆಯನ್ನು ನೆನೆಯುತ್ತೇನೆ. ಕನ್ನಡ ಓದುಗರು ಹಿಮಗೈಯಲ್ಲಿ ಹಿಡಿದ ಸುಡುಗೆೆಂಡದಂತಿರುವ ಎನ್ಕೆ ಕಾವ್ಯವನ್ನು ಅದರೊಳಗಿರುವ ಜೀವಪ್ರೀತಿಯ ತಣ್ಪನ್ನೂ ಕಳವಳದ ಕಾವನ್ನೂ ಅನುಭವಿಸುವರು ಎಂದು ಭಾವಿಸುತ್ತೇನೆ.

ಎನ್.ಕೆ. ಹನುಮಂತಯ್ಯ ಅವರ ಕೆಲವು ಕವನಗಳು

ಚಿತ್ರದ ಬೆನ್ನು

ಈ ಇರುವೆಯ ಮೇಲೆ
ನನ್ನ ಭಾರದ ಹೆಜ್ಜೆಯನಿಟ್ಟೆ
ತುಸು ಕಾಲದ ನಂತರ ತೆಗೆದೆ
ಇರುವೆ ಮತ್ತೆ ಚಲಿಸುತ್ತಿದೆ
ಏ ಸೂಜಿಯ ಗಾತ್ರದ
ಜೀವವೇ
ನನ್ನ ಭಾರ ಹೊರುವ ನಿನ್ನ
ಬೆನ್ನಿಗೆ ಶರಣು

ಆ ಬೇಲಿಯ ದಡದಿ
ನಿಧಾನಕ್ಕೆ ತೆವಳುತ್ತಿರುವ
ಬಸವನ ಹುಳುವೇ
ನನ್ನ ಭಾರ ಹೊರಲಾರದ
ನಿನ್ನ ಮೃದುತ್ವಕ್ಕೂ
ಶರಣು..

ಅಲ್ಲಿ ಆ ಗಿಡದಲ್ಲಿ
ನೂಲಿನ ಗಾತ್ರದ ಕಡ್ಡಿಯ ಮೇಲೆ
ಉಯ್ಯಾಲೆಯಾಡುವ ಹಕ್ಕಿಯೇ
ಕಡ್ಡಿ ಮುರಿಯದೆ ಆಡುವ ನಿನ್ನ
ತೂಕಕ್ಕೆ ಶರಣು

ಅಗ್ನಿಮಾಂಸದ ಕುಲುಮೆಯಲಿ
ನನ್ನ ಕಾಯಿಸಿ ಬಣ್ಣವ ಮಾಡಿ
ಮರಳಿ ನನ್ನ ರೂಪನೇ ಕಡೆವ
ಏ ನನ್ನಾಳದ ಅಳುವೇ
ನನ್ನ ಚಿತ್ರಕ್ಕೇಕೆ ಬೆನ್ನು ಬರೆವೆ?

ಮತ್ತೆ ಮರವಾಗುತ್ತೇನೆ

ನಿನ್ನ ನೆನಪುಗಳು
ಬೆಂಕಿಯ ಹಕ್ಕಿಗಳಾಗಿ ಹಾರಿಬರುತ್ತವೆ ಸದಾ
ನನ್ನ ಬಳಿಗೆ

ಆಗ ನಾನು
ಮರವಾಗುತ್ತೇನೆ
ಅವು
ಗೂಡು ಕಟ್ಟುತ್ತವೆ
ನಾನು
ಬೂದಿಯಾಗುತ್ತೇನೆ

ನಿನ್ನ ನೆನಪುಗಳು
ಮೋಡಗಳಾಗಿ ತೇಲಿ ಬರುತ್ತವೆ ಸದಾ
ನನ್ನ ಬಳಿಗೆ

ಮಳೆ ಸುರಿಸುತ್ತವೆ
ನಾನು ಮತ್ತೆ ಮರವಾಗಿ
ಚಿಗುರುತ್ತೇನೆ

ಗೋವು ತಿಂದು ಗೋವಿನಂತಾದವನು

ಅಸ್ಪೃಶ್ಯ!
ಹೌದು; ನಾನು ವಿದ್ಯುತ್ತಿನ ಹಾಗೆ
ನಿಮ್ಮ ತಣ್ಣನೆಯ ಸ್ಪರ್ಶಕ್ಕೆ
ಸಿಕ್ಕಲಾರೆ

ಅಸ್ಪೃಶ್ಯ!
ಹೌದು; ನಾನು ಕಡಲ ಆಳದ ಹಾಗೆ
ನಿಮ್ಮ ಸುಡುಗಣ್ಣು ಸ್ಪರ್ಶಕ್ಕೆ
ಸಿಕ್ಕಲಾರೆ

ಅಸ್ಪೃಶ್ಯ!
ಹೌದು; ನಾನು ಮೊಲೆ ಮೂಡಿದ ನೆಲ
ಜೀವ ಪ್ರೇಮದ ತೊಗಲ
ಸಂಭೋಗಿನಿ
ಹುಟ್ಟುತ್ತವೆ ನನ್ನೊಳಗೆ ಕಾಡು ಕಣಿವೆ
ನದಿ ಪರ್ವತಗಳು

ಅಸ್ಪೃಶ್ಯ!
ಹೌದು; ನಾನು ಸ್ವ
ತಂತ್ರವನು ಭೋಗಿಸುವ ನಿಮ್ಮಂಥ
ಸಲಿಂಗ ಕಾಮಿಗಳಿಗೆ
ಹೆದರಲಾರೆ
ಪಕ್ಕೆ ತಬ್ಬಿದ ಮರಿ ಕಾಯುತ್ತ
ಮರದಿಂದ ಮರಕ್ಕೆ ಹಾರುವ
ಕೋತಿಗೆ ಹೆದರುತ್ತೇನೆ

ಅಸ್ಪೃಶ್ಯ!
ಹೌದು; ನೀರು ನಾಳೆಗಳಿಲ್ಲದೆ
ಹಣ ಅಣ್ವಸ್ತ್ರಗಳ ಕುಲುಮೆಯಾಗಿರುವ
ನಿಮ್ಮ ಕಣ್ಣಿನ ಪ್ರಭೆಗೆ
ಹೆದರಲಾರೆ
ನಿಮ್ಮ ಮಲ ತಿಂದು ನಿಮ್ಮ ಮನೆ ಕಾಯುವ
ನಾಯಿಗೆ ಹೆದರುತ್ತೇನೆ
ಕೃತಕ ಕಣ್ಣಿಗೆ ಕನಸು ಕಾಣುವುದಿಲ್ಲ

ಅಸ್ಪೃಶ್ಯ!
ಹೌದು; ನಾನು ಗೋವು ತಿನ್ನುತ್ತೇನೆ
ಗೋವು ತಿಂದು ಗೋವಿನಂತಾಗಿ
ಗಿರಿ ಕಣಿವೆ ಬಯಲೊಳಗೆಲ್ಲ
ಕುಣಿಯುತ್ತೇನೆ
ನೆಲದ ಮೇಲೆಯೇ ನಿಂತು
ಬಾಲ ಎತ್ತಿ ಕಾಮನಬಿಲ್ಲಿಗೆ
ಬಡಿಯುತ್ತೇನೆ
ಮಳೆಮೋಡಗಳ ತಿವಿದು
ಸುಡುಗಾಡಿಗೆ ಕೆಡವುತ್ತೇನೆ

ಅಸ್ಪೃಶ್ಯ!
ಹೌದು; ನಾನು ಗೋವು ತಿನ್ನುತ್ತೇನೆ
ಗೋವು ತಿಂದು ಗೋವಿನಂತಾಗಿ
ರೋಮರೋಮಗಳಲ್ಲು ಕೆಚ್ಚಲನು ಹೊತ್ತು
ತಿರುಗುತ್ತೇನೆ
ಕಸದ ತೊಟ್ಟಿಯಲಿ ಬಿದ್ದ ಕೂಸುಗಳಿಗೆ
ಹಾಲು ಕುಡಿಸುತ್ತೇನೆ

ಅಸ್ಪೃಶ್ಯ!
ಹೌದು; ನಾನು ಗೋವು ತಿಂದು
ಗೋವಿನಂತಾದವನು
ನೀವು ನೀಡುವ ಮೇವು ತಿಂದು
ನಿಮ್ಮಂಥ ಮನುಷ್ಯನಾಗಲಾರೆ
ಮನುಷ್ಯರನ್ನು ತಿನ್ನಲಾರೆ

ಅವ್ವ ನಿಂತೇಯಿದ್ದಾಳೆ

ಕಿಟಕಿಯ ಕಂಬಿಗಳ ಹಿಂದೆ
ಅವ್ವ ನಿಂತಿದ್ದಾಳೆ
ಕಣ್ಣಲ್ಲಿ ನೀರು ಈಚಲು ಮರದಲ್ಲಿ
ಸೇಂಧಿ ತೊಟ್ಟಿಕ್ಕುವಂತೆ

ಅವಳ ಕಣ್ಣೀರು ಆತುಕೊಳ್ಳಲು ಹೋದೆ
ಕೈಸುಟ್ಟಿತು
ಮನೆ ತುಂಬ ಹೊಗೆಯ ಬಲೆ
ಮುರಿದ ತೀರುಗಳ ತೂರಿ ಬರುವ
ಸೂರ್ಯನಾಲಗೆ
ನಿಂತಲ್ಲೇ ಉರಿಯುವೆನು
ಯಾರಿಟ್ಟ ಕಿಚ್ಚಿಗೋ..

ಅವ್ವ ನಿಂತೇ ಇದ್ದಾಳೆ
ಕಪ್ಪು ಜಡೆ ಉದುರಿ ಒಣ ಗರಿಕೆಯಂತಾಗಿ
ಶಿಲೆಯಂತೆ
ಹತ್ತಿರ ಹೋಗಿ ಅವಳ ಕಿಟಕಿದಾಟಿದ
ನೋಟವನೇರಿ ನೋಡಿದರೆ
ಆಚೆ ಆ ಕೊಪ್ಪಲಲಿ ಅವನು ಮಲಗಿದ್ದಾನೆ
ನಿನ್ನೆ ಮದುವೆಯಾದ ಹೆಂಡಿರೊಡನೆ
ಮೊಲೆ ಚೆಂಡಿನೊಡನೆ

ಅವನೇ ನಾನು ನಿದ್ದೆಗಣ್ಣಲಿ ಎದ್ದಾಗ
ಸೇಬುಕೊಟ್ಟವನು
ಅಪ್ಪನ ಹೆಣ ಬೀದಿಯಲಿ ಸಾಗುವಾಗ
ಅಳುವ ಅವ್ವನ ತುಟಿಗೆ ನಗುವ
ಬಳಿದವನು

ಹೊಲಸ ಕೆರೆ ತೊರೆದು ವಲಸೆ ಹೋದ ಹಕ್ಕಿ ನಾನು
ಮತ್ತೆ ಬಂದಿರುವೆ ಮೈಸುಟ್ಟು
ಅವ್ವ ನಿಂತೇಯಿದ್ದಾಳೆ
ನೀರಿಲ್ಲದ ಕೆರೆಯಲ್ಲಿ ಒಣಗಿದ ಏಡಿಯಂತೆ
ನನ್ನ ನೋಡದೆ

ಮಾಂಸದಂಗಡಿಯ ಮುಂದೆ ನವಿಲು

-1-

ಕಾಡ ಜಡೆಯವಳು ಕಡಲ ಕಣ್ಣವಳು
ಸಿಟ್ಟು ಸೂರ್ಯನ ಬೊಟ್ಟು ಕಪ್ಪು ಹಣೆಯಲಿ ತೊಟ್ಟು
ಪರ್ವತ ಎದೆಯೆತ್ತಿ ಚೀರಿದಳು
ಬೆಂಕಿ ಬೆತ್ತಲೆ ತೊಗಲಿ ಬೆದೆಯ ಕಣಿವೆಯ ತೆರೆದು

ಆ ಚೀರು ಹಗಲಾಗಿ ಆ ಚೀರು
ಇರುಳಾಗಿ
ಪಶು ಪಕ್ಷಿ ಹುಳ ಹುಪ್ಪಟೆಯ
ಕೊರಳಾಗಿ
ಜೀವ ಜಾಲದ ಸೆರೆಯ ಉರಿಯ
ಉರುಳಾಗಿ
ನರಳಿಕೆಯ ನೆಲವಾಗಿ ಇರುವಿಕೆಯ
ನೆರಳಾಗಿ
ರೂಪಾಯಿತೋ..

ಅವಳ ಶಿಲೆ ತೊಡೆಯ ಕಗ್ಗತ್ತಲ
ಖಂಡದಲಿ
ಕೆಂಪು ತಿಂಗಳು ಮೂಡಿ
ಬೆಳಕೋ
ಮಳೆ ಹೊಲಸು ಹೊಳೆ

ಆ ಹೊಳೆಯ ಹುಳುವಾಗಿ
ನಾಯಿ ನರಿ ತೋಳಗಳು
ಹಾಲಕ್ಕಿ ಗೂಬೆಗಳು
ರಣಹದ್ದು ಕಾಗೆಗಳು
ಅವ್ವಾ.. ಅವ್ವಾ.. ಎಂದು

ಅವಳ ಕಂಕುಳು ಹೊಕ್ಕುಳು ಹೊಕ್ಕು
ಮಕ್ಕಳಾದವು..

ಬಯಲ ತುಳಿಯದೆ
ಒಳಗೊಳಗೇ ಗರ್ಭಕಟ್ಟಿ
ಕೆಂಪು ತಿಂಗಳ ಹರಿಸೋ ಅನಂತ ದಾಹದ
ಕಿಚ್ಚೇ
ಆರು ಆರು ಆರು
ಆಟ ಘಾಟಿನಿ ಅವಳು
ನಾರಿದಳು

ಆ ನಾರು ಹೂವಾಗಿ ಆ ನಾರು
ಹಸಿರಾಗಿ
ಹಿಪ್ಪೆ ಹೊಂಗೆ ಬೇವು ತುಂಬೆ
ಕಾತಾಳೆ ಭೂತಾಳೆ ಕಾರೆ ಕಣಗಿಲೆ
ಜಾಲಿ ಈಚಲು ಮುತ್ತುಗ ತಂಗಟೆ
ಬ್ಯಾಲ ತೊಡರೆ ಗಲಕೆ
ಬಂದರೆ
ಥರಂಥರ ಬಣ್ಣ ಘಮ್ಮೆಂದವು

ಆ ನಾರು ಹೂವಾಗಿ ಆ ನಾರು
ಹೆಸರಾಗಿ
ಕಾಡು ಇಲಿ ಕಾಡು ಹಂದಿ ಕಾಡುಕೋಣ ಕಾಡು
ಕರಡಿ ಕಾಡು ಕುದುರೆ ಕಾಡುಕೋಳಿ ಕಾಡು
ನವಿಲು
ಕಾಡು ಕಾಡು ಕಾಡು ಕಾಡೇ ಕಾಡು
ಕರಿಯ ಕಾಡಿನಿ ಅವಳು
ಹಸಿದಳು..

ಅವಳ ಹಸಿವಿನ ಬಿಸಿಗೆ
ನೆಲಕುದ್ದು ಜಲಕುದ್ದು
ಜೀವಜೀವದ ಒಡಲು ಬಡಿವ
ತಮ್ಮಟೆ ಸದ್ದು
ಆಕಾಶ ಪಾತಾಳ ತಾಳಲಾರದ ತಾಳ
ಹಸಿವೆ ಕುಣಿತ

ಅವಳ ಎದೆಯಾಳ
ಜ್ವಾಲೆಯಲಿ
ಹಾಲೆಲ್ಲ ಬತ್ತಿರಲು
ಎದೆ ತುದಿಗೆ ಜೀವ ತುಟಿ
ಬಾಕಾಗಿ ಮುತ್ತಿರಲು
ಹಸಿ ಮೈಯ ಹಸಿವೆ
ಮಹತಾಯಿ ಅತ್ತಳು..

ಹಾಲ ಬೀಜದ ಮುಗಿಲ
ಲಿಂಗ ಜಂಗಮ ಗುರುವೇ
ಸ್ವಪ್ನ ಮುಖವಾಡದಲಿ ಯಾರಿಗೂ ಕಾಣದಲೆ
ಬಂದೆ ನನ್ನೊಳಗೆ
ಆಳದಾ ಗವಿಯೊಳಗೆ ಆಲಯವ ಕಟ್ಟಿ
ನನ್ನ ದೇವತೆ ಮಾಡಿ ನೀನು
ಲಯವಾದೆ..

ಬಾ ಗುರುವೆ ಬಾ ತಂದೆ ಬಾರಯ್ಯ ಬಾ
ಪುರುಷ
ಹಾಲಿಲ್ಲ ನನ್ನೊಳಗೆ ಎಲ್ಲವೂ
ನಿನ್ನೊಳಗೆ
ಕಾದೂ ಕಾದೂ ಬೆಂದ ಕಾಯಿಲೆ
ಅವಳು ಕಿರುಚಿದಳು
ಚಿಗುರು ನಾಲಗೆಗಳು ಜ್ವಾಲೆಹಾರೆಗಳಾಗಿ
ಇರಿಯುತಿವೆ ಬಾ ಗುರುವೆ
ಹಾಲಿಲ್ಲ ನನ್ನೊಳಗೆ ಎಲ್ಲವೂ
ನಿನ್ನೊಳಗೆ
ಬರಲಿಲ್ಲ ಗುರು..

ಜೀವರಾಶಿಗಳೆಲ್ಲ ಕೆರಳಿ
ಸೇನೆಗಳಾಗಿ
ಅವಳೆದೆಯ ತೋಡಿದವು
ತಳಮುಟ್ಟಿ ನೋಡಿದವು
ಜ್ವಾಲೆ ಕಡಲೊಳು ಜಾರಿ
ಜ್ವಾಲೆಯಾದವು
ಅಯ್ಯೋ..
ಕತ್ತಲೆಗೆ ಬೆಳಕಾಗದ ಜ್ವಾಲೆ
ಆರದೆ ಉರಿಯದೆ ಇರುವ
ಜ್ವಾಲೆ..

ಚಿತೆತೊಗಲ ತಾಯಿಯ ಮೇಲೆ
ಈಗ ಬರೀ ಅಂಗಡಿ ಹೊಳೆವ ತಕ್ಕಡಿ
ಮಾಲೀಕ
ನವಿಲ ಬೇಟೆಗೆ ಹೋಗಿರುವನು

ಅವಳ ಮಗ ನಾನು
ಈ ಅಂಗಡಿಯೊಳಗೆ ನಿಂತಿದ್ದೇನೆ
ನನ್ನ ಮೈಮೇಲೂ ನವಿಲ ಗರಿ ಮೂಡುತ್ತಿವೆ

– 2 –

ಇರುವೆ ಬಾಯೊಳಗಿನ ಬಿಂಬ

ಇರುಳ ಗವಿಯೊಳಗೆ ಎಲುಬುಗಳ ಮೇಲೆ
ನಿದ್ರಿಸುವಾಗ
ಹೊರಗೆ ಬಿದ್ದ ಇಬ್ಬನಿಯ ಸದ್ದಿಗೆ
ಕಣ್ತೆರೆದಳು
ಕತ್ತಲು ಮೆತ್ತಿದ ಮೂಳೆಗಳ ಮೇಲೆ
ನಕ್ಷತ್ರ ನಕ್ಕಂತೆ

ಮಿರುಗೊ ಹನಿಗಳ ಕಂಡು ಬೆರಳು
ಸೋಕಿಸಿದಳು
ಹನಿಯೊಡೆದು ನದಿಯಾಯ್ತು

ಸುಟ್ಟು ಕರೆಗಟ್ಟಿದ ಗವಿಯ
ಶಿಲೆ ಮುಟ್ಟಿದಳು
ಬುಗ್ಗನೆ ಬಣ್ಣಗಳೆದ್ದು
ನವಿಲಾಯಿತು
ತನ್ನ ಕೊರಳ ತಾನೇ ಮಟ್ಟಿದಳು
ಪದವಾಯಿತು

ಬೆರಳ ಬೆರಗಿಗೆ ಮರುಳಾಗಿ
ಮುಟ್ಟಿದಳು ತೊಡೆಯ..

ಅವಳ ಹಸಿತೊಡೆಯ ಅಗ್ನಿ ಹುತ್ತದಿಂದ
ಸ್ವಪ್ನ ಇರುವೆಯ ಸಾಲು ಧುಮುಕಿದವು
ನೆಲಕೆ
ಪುಟ್ಟ ಬಾಯಲಿ ಅವಳ ಬಿಂಬವ ಕಚ್ಚಿ
ಹರಿದವು ದೂರಕೆ ಬಹು
ದೂರಕೆ

ಇರುವೆ ಹೆಜ್ಜೆಗಳಲ್ಲಿ
ಹೊಲ ಗದ್ದೆಗಳು ಮೂಡಿ
ವೃಕ್ಷ ಪರ್ವತ ಬೇರು
ನಭ ತಾಕಿ ಉಸಿರಾಡಿ
ಊರಾಯಿತು..
ಇರುವೆ ಬಾಯೊಳಗೆ ಜೀವದ್ರವ ತೊಟ್ಟಿಕ್ಕಿ
ಅಂಟಿತ್ತು ಬ್ರಹ್ಮಾಂಡ
ಬಿಂಬದೊಳಗೆ

ಬೆರಗು ಆರುವ ಮೊದಲೆ ಅರಸಿ ಬಂದನು
ಸೂರ್ಯ ಕಂಗಳ ಶೂರ
ಇರುವೆ ಹೆಜ್ಜೆಯ ಹೊಲಗದ್ದೆ ಮೇಲಿಟ್ಟು
ಬೆಂಕಿಗಾಲ
ಅವಳ ನಗ್ನಕ್ಕೆ ನಿಮಿರಿ ನುಗ್ಗಿದವು ಅವನ
ಬಂದೂಕು ಮರ್ಮಗಳು

ಅವಳ ಬೆರಗು ಬೆರಳನು
ಕತ್ತರಿಸಿ
ಮುಟ್ಟಿಸಿದ ಮಲಮೂತ್ರಗಳ
ರಕ್ತ ಹರಿವ ಸುರಂಗಗಳ
ಹೆರದೆಯೂ ಹೊರಗೆ ತೆಗೆದನು
ನನ್ನ ಶಿರವ..
ಅವಳ ಗವಿಯೀಗ ಶಸ್ತ್ರಾಗಾರ ಗರ್ಭ
ಶವಾಗಾರ

ಹರಿಯುತ್ತಲಿವೆ ಇರುವೆ
ಪುಟ್ಟ ಬಾಯಲ್ಲಿ ಬ್ರಹ್ಮಾಂಡವಂಟಿದ
ಅವಳ ಬಿಂಬವ ಕಚ್ಚಿ
ಬಚ್ಚಿಟ್ಟ ಅಸ್ತ್ರಗಳ ನೆರಳ ಮೇಲೆ
ಕಸದ ತೊಟ್ಟಿಯಲಿ ಕೊಳೆತ
ಅವಳ ಬೆರಳ ಮೇಲೆ
ಹರಿಯುತ್ತಲಿವೆ ಇರುವೆ
ರಕ್ತ ಮೆತ್ತಿದ ಕೊಲು ಯಂತ್ರದ
ಚಕ್ರಗಳ ಮೇಲೆ
ಖಾಲಿಯಾಗದೆ ಉರಿವ
ಸ್ಮಶಾನಗಳ ಮೇಲೆ

ಹರಿಯುತ್ತಲಿವೆ ಇರುವೆ
ಈ ಮಹಾಬೆಳಗಿನ ಮಾಂಸದಂಗಡಿಯಲ್ಲಿ ತಲೆಕೆಳಗಾಗಿ
ತೂಗುತ್ತಿರುವ ನನ್ನ ಮೇಲೆ

ಮಿಂಚು ಹುಳ ಮತ್ತು ನಾನು

ಅಂದು ರಾತ್ರಿ ನಿದ್ರೆಬಾರದೆ
ಹೊರಗೆ ಬಂದೆ
ಅಂಗಳದ ತುಂಬ
ಮಿಂಚುಹುಳದ ಸಂತೆ
ಹುಳದ ಬೆಳಕಿಗೆ
ಬೆವರಿ ಚೀರಿದೆ

ದೂರದ ಬಾಗಿಲು ತೆರೆದು
ಸಂಜೆಯನು ಲಂಗದಲಿ ಹೆತ್ತ ಮಗು
ಓಡಿಬಂತು
ಮಂಜಿನಂತೆ ನನ್ನನ್ನು
ಅಪ್ಪಿಕೊಂಡಿತು

ಕಣ್ತೆರೆದ ಊರು ಮಗುವನ್ನು ಹುಡುಕಿಬಂತು
ಕೊಡಲಿ ಕೈಗಳಿಂದ ನನ್ನನ್ನು ಕೆತ್ತಿತು
ತೊಗಲ ತಬ್ಬಿದ ಮಗು
ಜಾರಲಿಲ್ಲ
ನಾನೀಗ ಬೆಳಕಿಗೂ ಕೊಡಲಿಗೂ
ಬೆವರುವುದಿಲ್ಲ
ಮಂಜು ತೊಟ್ಟಿಕ್ಕುವುದು
ನನ್ನ ಮೈಯಲೆಲ್ಲ

~~~

ಜುಲೈ 10 : ತುಮಕೂರು : ಎನ್ಕೆ ಕವನ ಸಂಕಲನ ಬಿಡುಗಡೆ, ಎನ್.ಕೆ. : ಕವಿ ಮತ್ತು ಕವಿತೆ, ವಿಚಾರಗೋಷ್ಠಿ ಮತ್ತು ಕವಿಗೋಷ್ಠಿ

ಲಡಾಯಿ ಪ್ರಕಾಶನ, ಗದಗ
ತುಮಕೂರು ವಿಶ್ವ ವಿದ್ಯಾನಿಲಯ, ತುಮಕೂರು
ನೆಲಸಿರಿ ಸಾಂಸ್ಕೃತಿಕ ವೇದಿಕೆ, ತುಮಕೂರು
ಝೆನ್ ಟೀಮ್ ತುಮಕೂರು
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ತುಮಕೂರು ಜಿಲ್ಲೆ

 

 

NK hanumataya seminar

ಎನ್.ಕೆ. ಹನುಮಂತಯ್ಯರವರ ಕವನ ಸಂಕಲನ ಬಿಡುಗಡೆ, ಎನ್.ಕೆ. : ಕವಿ ಮತ್ತು ಕವಿತೆ,
ವಿಚಾರಗೋಷ್ಠಿ ಮತ್ತು ಕವಿಗೋಷ್ಠಿ

೧೦.೦೭.೨೦೧೬ ರವಿವಾರ ಬೆಳಗ್ಗೆ ೧೦ ಗಂಟೆ
ವಿಶ್ವೇಶ್ವರಯ್ಯ ಸಭಾಂಗಣ, ತುಮಕೂರು ವಿಶ್ವ ವಿದ್ಯಾನಿಲಯ, ತುಮಕೂರು

ಎನ್.ಕೆ. ಹನುಮಂತಯ್ಯ ಅವರ ‘ಮಾಂಸದಂಗಡಿಯ ನವಿಲು’ ಕವನ ಸಂಕಲನ ಬಿಡುಗಡೆ

ಪ್ರಸ್ತಾವನೆ : ಡಾ. ಹೆಚ್.ಎಸ್. ಅನುಪಮ, ಲೇಖಕಿ

ಪುಸ್ತಕ ಬಿಡುಗಡೆ : ಶ್ರೀ ಎಸ್.ಜಿ. ಸಿದ್ದರಾಮಯ್ಯ, ಸಾಹಿತಿಗಳು, ವಿಮರ್ಶಕರು

ಎನ್.ಕೆ. ಹನುಮಂತಯ್ಯ ಕವಿತೆ ಓದು : ಬಾ.ಹ. ರಮಾಕುಮಾರಿ,
ಅಧ್ಯಕ್ಷರು, ಜಿಲ್ಲಾ ಕ.ಸಾ.ಪ.
ಡಾ. ಅರುಂಧತಿ ಡಿ.
ಶೈಲಜಾ ನಾಗರ ಘಟ್ಟ

ಕೃತಿ ಕುರಿತು : ನಟರಾಜ್ ಬೂದಾಳು, ಸಂಸ್ಕೃತಿ ಚಿಂತಕರು
ಮುಖ್ಯ ಅತಿಥಿಗಳು : ಬಂಜಗೆರೆ ಜಯಪ್ರಕಾಶ್,
ಅಧ್ಯಕ್ಷರು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು

ಅಧ್ಯಕ್ಷತೆ: ಡಾ|| ಎ.ಎಚ್. ರಾಜಾಸಾಬ್,
ಕುಲಪತಿಗಳು, ತುಮಕೂರು ವಿ. ವಿ.

ಸಂಯೋಜನೆ : ಉಗಮ ಶ್ರೀನಿವಾಸ್

ಗೋಷ್ಠಿ – ೧ ಮಧ್ಯಾಹ್ನ ೧೨.೦೦

ನೆನಪಿನ ಬುತ್ತಿ ಬಿಚ್ಚುವವರು :
ಮಂಜುನಾಥ್ ಅದ್ದೆ
ವಡ್ಡಗೆರೆ ನಾಗರಾಜಯ್ಯ
ನಾಗಭೂಷಣ ಬಗ್ಗನಡು
ಡಾ. ಅಣ್ಣಮ್ಮ
ಹಳ್ಳಿ ಸುರೇಶ್
ಸತೀಶ್ ತಿಪಟೂರು
ಗೀತಾ ಲಕ್ಷ್ಮಿ
ಗೋಮಾರದಹಳ್ಳಿ ಮಂಜುನಾಥ್
ಆಲೂರು ದೊಡ್ಡನಿಂಗಪ್ಪ
ಜಿ. ಮಲ್ಲಿಕಾ ಬಸವರಾಜು
ಕರಿಸ್ವಾಮಿ ಕೆಂಚಣ್ಣ

ಅಧ್ಯಕ್ಷತೆ : ಎಸ್. ಗಂಗಾಧರಯ್ಯ

ಸಂಯೋಜನೆ : ಶಿವಣ್ಣ ತಿಮ್ಲಾಪುರ

ಗೋಷ್ಠಿ – ೨ ಮಧ್ಯಾಹ್ನ ೨-೩೦ ರಿಂದ ೪.೦೦

ಸಮಕಾಲೀನ ದಲಿತ ಸಾಹಿತ್ಯ

ವಿಷಯ ಮಂಡನೆ : ಡಾ. ರಾಜೇಂದ್ರ ಚೆನ್ನಿ, ವಿಮರ್ಶಕರು

ವಿಷಯ ವಿಸ್ತರಣೆ : ಕೆ.ಬಿ. ಸರಸ್ವತಿ, ಲೇಖಕಿ
ಹುಲಿಕುಂಟೆ ಮೂರ್ತಿ, ಕವಿಗಳು

ಅಧ್ಯಕ್ಷತೆ : ಮೂಡ್ನಾಕೂಡು ಚಿನ್ನಸ್ವಾಮಿ, ಸಾಹಿತಿಗಳು

ಸಂಯೋಜನೆ : ಪವನ್ ಗಂಗಾಧರ್

ಗೋಷ್ಠಿ – ೩ ಕವಿಗೋಷ್ಠಿ : ಸಂಜೆ ೪.೦೦ ರಿಂದ ೫.೩೦

ಅಧ್ಯಕ್ಷತೆ : ಕೆ.ಬಿ. ಸಿದ್ದಯ್ಯ, ಕವಿ, ಚಿಂತಕರು

ಅತಿಥಿಗಳು : ಬಿ.ಸಿ.ಶೈಲಾ ನಾಗರಾಜು
ಅಧ್ಯಕ್ಷರು, ತುಮಕೂರು ತಾಲ್ಲೂಕು ಕ.ಸಾ.ಪ.

ಕವನ ವಾಚನ :

ಕೆ.ಪಿ. ನಟರಾಜ್, ಸ್ಮಿತಾ ಮಾಕಳ್ಳಿ, ಗೀತಾ ವಸಂತ, ಉಗಮ ಶ್ರೀನಿವಾಸ್,
ದೀಪಾ ಗಿರೀಶ್, ಬಿದಲೋಟಿ ರಂಗನಾಥ್, ಬಸವರಾಜ ಹೂಗಾರ,
ಹೆಚ್. ಸಿ. ಭವ್ಯ ನವೀನ್, ನರಸಿಂಹರಾಜು, ಬಿ.ಕೆ., ರಂಗಮ್ಮ ಹೊದೇಕಲ್,
ನಾಗರಾಜ ಹರಪನಹಳ್ಳಿ, ರಾಜಕುಮಾರ ಮಡಿವಾಳರ, ರೇಣುಕಾ ಹೆಳವರ,
ದ್ಯಾವನೂರು ಮಂಜುನಾಥ, ವಾಣಿ ಸತೀಶ್, ಕೃಷ್ಣಮೂರ್ತಿ ಬಿಳಿಗೆರೆ,
ಗುರು ಪ್ರಸಾದ ಕಂಟಲಗೆರೆ, ಎಸ್.ಕೆ. ಮಂಜುನಾಥ, ಡಾ. ರವಿಕುಮಾರ ನೀಹ,
ಕಂಪಾರಹಳ್ಳಿ ಶಾಂತ, ಡಾ. ಮಿರ್ಜಾ ಬಶೀರ್, ಬಿ. ಶ್ರೀನಿವಾಸ.

ಸಂಯೋಜನೆ : ರಾಣಿ ಚಂದ್ರಶೇಖರ್

ತಮಗೆ ಆತ್ಮೀಯ ಸ್ವಾಗತ

~~

ರಹಮತ್ ತರೀಕೆರೆ ಪರಿಚಯ: ಕನ್ನಡದ ಪ್ರಸಿದ್ಡ ಸಂಸ್ಕೃತಿ ಚಿಂತಕರು ಹಾಗೂ ವಿಮರ್ಶಕರಾದ ರಹಮತ್ ತರೀಕೆರೆ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದ ಮುಖ್ಯಸ್ಥರಾಗಿ ಹಾಗೂ ಭಾಷಾಕಾಯದ ಡೀನ್ ಸೇವೆ ಸಲ್ಲಿಸಿ ಈಗ ಹಿರಿಯ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ರಹಮತ್ ತರೀಕೆರೆ ಅವರ ‘ಕತ್ತಿಯಂಚಿನ ದಾರಿ’ ಯ ಕೃತಿಗೆ ೨೦೧೦ ರಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರಕಿತು.